ಕನ್ನಡಪ್ರಭ ವಾರ್ತೆ ಉಳ್ಳಾಲ
ವಿಜ್ಞಾನ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಲ್ಲಿ ಅನೇಕ ಆವಿಷ್ಕಾರ ಮಾಡಿ ರಾಷ್ಟ್ರೀಯ ಹಾಗೂ ಅಂತರಾಷ್ಟೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಯನ್ನು ಈಗಾಗಲೇ ಪಡೆದುಕೊಂಡಿರುವ ಸಿಂಧೂರ ರಾಜ ಉಳ್ಳಾಲ ಭಾರತದಲ್ಲಿ ಮಕ್ಕಳಿಗಾಗಿ ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪಡೆದಿದ್ದಾರೆ. ಸಿಂಧೂರ ರಾಜ ಉಳ್ಳಾಲ ಗುರುವಾರ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಂವಾದದಲ್ಲಿ ಭಾಗವಹಿಸಿದ್ದಾರೆ.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಆಶ್ರಯದಲ್ಲಿ ದೇಶದ ೧೭ಮಂದಿ (೧೦ ವಿದ್ಯಾರ್ಥಿಗಳು, ೭ ವಿದ್ಯಾರ್ಥಿನಿಯರು) ಸಾಧಕ ವಿದ್ಯಾರ್ಥಿಗಳಲ್ಲಿ ಕರ್ನಾಟಕದಿಂದ ಗೌರವ ಪಡೆದಿರುವ ಏಕೈಕ ವಿದ್ಯಾರ್ಥಿನಿ ಸಿಂದೂರ ರಾಜ, ಪಾರ್ಕಿನ್‌ಸನ್ ಬಾಧಿತರಿಗೆ ಸಹಾಯಕವಾಗುವ ಚಮಚ ಸಂಶೋಧನೆ ಮತ್ತು ಅಟಲ್ ಟಿಂಕರಿಂಗ್ ಲ್ಯಾಬ್‌ನಲ್ಲಿ ಮಾಡಿರುವ ಸಾಧನೆ ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈಕೆ, ಪಾರ್ಕಿನ್‌ಸನ್ ರೋಗಕ್ಕೆ ಸಂಬಂಧಿಸಿದಂತೆ ಅಲರ್ಟ್ ಮಾಡುವ ಶೂ, ಕೈಯಿಲ್ಲದವರಿಗೆ ಸಹಾಯ ಮಾಡುವ ಪ್ರಾಸ್ಪೆಟಿಕ್ ಆರ್ಮ್ ಸಂಶೋಧನೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ವಾಸವಾಗಿರುವ ಇವರು ಸಾಫ್ಟ್‌ವೇರ್ ಎಂಜಿನಿಯರ್ ರಾಜಾ ದಯಾಳ್-ಶಿಬಾನಿ ಉಳ್ಳಾಲ್ ದಂಪತಿ ಪುತ್ರಿ. ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಉಳ್ಳಾಲದ ಭಾರತ್ ಆಂಗ್ಲ ಮಾಧ್ಯಮ ಶಾಲೆ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಬೆಂಗಳೂರಿನಲ್ಲಿರುವ ನ್ಯೂ ಹೊರೈಜಾನ್ ಪಬ್ಲಿಕ್ ಸ್ಕೂಲ್‌ನಲ್ಲಿ ಪಡೆದು ಪ್ರಸ್ತುತ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಪ್ರಥಮ ಪಿಯು ವಿಜ್ಞಾನ ವಿದ್ಯಾರ್ಥಿನಿ.ಸಿಂಧೂರ ರಾಜ ಅವರು ವೈಜ್ಞಾನಿಕ ಸಾಧನೆಗಾಗಿ ೨೦೨೪ರ ಮೇ ತಿಂಗಳಿನಿಂದ ನ್ಯೂಯಾರ್ಕ್ ನಗರದಲ್ಲಿ ನಡೆದ ಸಮಾವೇಶದಲ್ಲಿ ಅಮೆರಿಕದ ವರ್ಲ್ಡ್ ಸೈನ್ಸ್ ಸ್ಕಾಲರ್ ಪದವಿ ಪುರಸ್ಕೃತರಾಗಿದ್ದರು.
ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಇಗ್ನೈಟೆಡ್ ಮೈಂಡ್ ಪ್ರಶಸ್ತಿ ೨೦೨೪ ಪಡೆದಿದ್ದಾರೆ ಮತ್ತು ಎಟಿಎಲ್ ಮ್ಯಾರಥಾನ್‌ನಲ್ಲಿ ಪ್ರಶಸ್ತಿ ಗಿಟ್ಟಿಸಿ ಕೊಂಡಿದ್ದಾರೆ.ಇವರು ಮೋಟ್ವಾನಿ-ಜಡೇಜಾ ಫೌಂಡೇಶನ್ ಪ್ರಾಯೋಜಕತ್ವ ದಲ್ಲಿ ಆಗಸ್ಟ್ ತಿಂಗಳಲ್ಲಿ ಮೆಕ್ಸಿಕೋಗೆ ಪ್ರವಾಸ ಮಾಡಿ ಫ್ಯಾಬ್ ೨೪ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಮಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಯ ಬಿಟ್ಸ್ ಅಂಡ್ ಅಟಾಮ್ಸ್ ಕೇಂದ್ರ ಮತ್ತು ಫ್ಯಾಬ್ ಫೌಂಡೇಶನ್ ಆಯೋಜಿತ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.ಇದಲ್ಲದೆ ಸಿಂಧೂರ ರಾಜ ನಾಸಾ ಜೊತೆ ಸೇರಿ ಒಜಿ೧೫-೨೦೨೩ ಎಂಬ ಹೆಸರಿನ ಅಸ್ಟೀರಾಯ್ಡ್ ಕಂಡುಹಿಡಿದಿದ್ದಾರೆ, ಮೈನರ್ ಪ್ಲಾನೆಟ್ ಸೆಂಟರ್ ಮೂಲಕ ಈ ಸಾಧನೆ ಮಾಡಿದ್ದಾರೆ. ಸಿಎಸ್‌ಐಆರ್-ಜಿಗ್ಯಾಸಾ ಕಾರ್ಯಕ್ರಮದ ಭಾಗವಾಗಿ, ಅವರು ಸಿಎಸ್‌ಐಆರ್-ಫೋರ್ಥ್ ಪ್ಯಾರಡೈಮ್ ಇನ್ಸ್ಟಿಟ್ಯೂಟ್‌ನಲ್ಲಿ ಪಾರ್ಕಿನ್ಸನ್ ರೋಗದ ಸಮಗ್ರ ಅಧ್ಯಯನ ನಡೆಸುತ್ತಿದ್ದಾರೆ. ಇಂತಹ ಅದ್ಭುತ ಸಾಧನೆಗಳ ಮುಖಾಂತರ ಇವರು ಅವರು ಭಾರತದ ವಿಜ್ಞಾನ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ.
ಕೊರೋನಾ ಸಂದರ್ಭ ಅರಳಿದ ಪ್ರತಿಭೆ:ಕಲಿಕೆಯಲ್ಲಿ ಅಗ್ರಸ್ಥಾನದಲ್ಲಿದ್ದ ಸಿಂದೂರರಾಜ ಕೋರೋನಾ ಪೂರ್ವದಲ್ಲಿ ಕರಾಟೆ, ಡ್ರಾಯಿಂಗ್‌ನಲ್ಲಿ ತೊಡಗಿಸಿಕೊಂಡಿದ್ದರು. ಕೋರೋನಾ ಸಂದರ್ಭದಲ್ಲಿ ೬ನೇ ತರಗತಿಯಲ್ಲಿದ್ದ ಈಕೆ ಉಳ್ಳಾಲದಲ್ಲಿರುವ ತಾಯಿ ಮನೆಗೆ ಬಂದಿದ್ದು, ಇಲ್ಲೇ ಹೆತ್ತವರು ಕೊಟ್ಟಿದ್ದ ಲ್ಯಾಪ್‌ಟಾಪ್‌ನಲ್ಲಿ ವೈಜ್ಞಾನಿಕ ವಿಚಾರಗಳ ಕುರಿತು ಆಸಕ್ತಿಯಿಂದ ಯೂಟ್ಯೂಬ್‌ನಲ್ಲಿ ಮಾಹಿತಿ ಪಡೆದಳು. ಆರಂಭದಲ್ಲಿ ಕೊರೊನಾ ಸಂಬಂಧಿಸಿದ ನ್ಯೂಮೋನಿಯಾ ವಿಚಾರದಲ್ಲಿ ಸಂಶೋಧನೆ ಆರಂಬಿಸಿ ಬಳಿಕ ಬ್ರೈನ್ ಏಜ್‌ಗೆ ಸಂಬಂಧಿಸಿದಂತೆ ಸಂಶೋಧನೆಯಲ್ಲಿ ತೊಡಗಿಸಿಕೊಂಡಳು. ಇವಳ ಆಸಕ್ತಿ ಕಂಡು ಬೆಂಗಳೂರಿನ ರಾಮಯ್ಯ ಆಸ್ಪತ್ರೆಯ ತಜ್ಞ ವೈದ್ಯ ಡಾ. ನಂದಕುಮಾರ್ ಅವರಿಂದ ಮಾರ್ಗದರ್ಶನ ಪಡೆದು ಕಳೆದ ನಾಲ್ಕು ವರ್ಷದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಾಧನೆ ನಡೆಸಿದ್ದಾಳೆ.
.................ವೈಜ್ಞಾನಿಕ ಸಂಶೋಧನೆಯೊಂದಿಗೆ ಗ್ರಾಮೀಣ ಭಾರತ ಮತ್ತು ಕರ್ನಾಟಕದ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಆರೋಗ್ಯ ಸಂಬಂಧಿಸಿದ ಸಮಸ್ಯೆಗಳ ಸಂಶೋಧನೆಗೆ ಒತ್ತು ನೀಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ದೇಶಕ್ಕೆ ಗೌರವರ ತರುವ ಕಾರ್ಯ ಮಾಡುತ್ತೇನೆ.-ಸಿಂಧೂರ ರಾಜ, ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪುರಸ್ಕೃತೆ.