ನವೋದಯ ಸ್ವಸಹಾಯ ಸಂಘಗಳು ಸಾಮಾಜಿಕಬದ್ಧತೆಗೆ ಶಕ್ತಿ ತುಂಬಿದೆ: ಡಾ. ಎಂ. ಎನ್. ಆರ್‌

KannadaprabhaNewsNetwork | Published : Apr 6, 2024 12:51 AM

ಸಾರಾಂಶ

ಅಧ್ಯಕ್ಷರಾಗಿ ಪುನರಾಯ್ಕೆಗೊಂಡ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರನ್ನು ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ ತಮ್ಮ ನಿಯೋಗದ ಜೊತೆ ಸನ್ಮಾನಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಗ್ರಾಮೀಣ ಜನರ ಬದುಕಿನಲ್ಲಿ ಆರ್ಥಿಕ ಸ್ವಾವಲಂಬನೆಯ ಕನಸು ಮೂಡಿಸಿರುವ ನವೋದಯ ಸ್ವಸಹಾಯ ಸಂಘಗಳು ಸಾಮಾಜಿಕ ಬದ್ಧತೆಗೆ ಶಕ್ತಿ ತುಂಬಿದೆ. ಸಮಾಜದಲ್ಲಿ ಮುಂದಾಳುತನ, ಸಂಘಟನೆ, ಜನಜಾಗೃತಿ ಹಾಗೂ ಪ್ರಜಾಪ್ರಭುತ್ವದ ತಳಹದಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನವೋದಯ ಸ್ವ ಸಹಾಯ ಸಂಘಗಳು ಗ್ರಾಮೀಣ ಜನರ ಬದುಕಿಗೆ ಆರ್ಥಿಕ ಶಕ್ತಿಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಹೇಳಿದ್ದಾರೆ.ಅವರು ಶುಕ್ರವಾರ ಎಸ್‌ಸಿಡಿಸಿಸಿ ಬ್ಯಾಂಕ್‌ಗೆ ನವೋದಯ ಸ್ವಸಹಾಯ ಸಂಘಗಳ ಕುರಿತು ಹಾಗೂ ಮೈಕ್ರೋ ಕ್ರೆಡಿಟ್ ಸಾಲದ ಬಗ್ಗೆ ವಿಶೇಷ ಅಧ್ಯಯನ ನಡೆಸಲು ಆಗಮಿಸಿದ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯೋಗಕ್ಕೆ ಮಾಹಿತಿ ನೀಡಿ ಮಾತನಾಡಿದರು.

ನಿಯೋಗದ ನೇತೖತ್ವ ವಹಿಸಿದ ಬಳ್ಳಾರಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಕೆ. ತಿಪ್ಪೇಸ್ವಾಮಿ ಅವರು ಬಳ್ಳಾರಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿ ಮೈಕ್ರೋ ಕ್ರೆಡಿಟ್ ವಿಭಾಗದ ಮುಖಾಂತರ ಮೈಕ್ರೋ ಫೈನಾನ್ಸ್ ಯೋಜನೆಯನ್ನು ರೂಪಿಸಿ ಅರ್ಹ ಸದಸ್ಯರಿಗೆ ಸಾಲ ನೀಡುವ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ. ಈ ಯೋಜನೆಯನ್ನು ಎಸ್‌ಸಿಡಿಸಿಸಿ ಬ್ಯಾಂಕ್ ಈಗಾಗಲೇ ಸಮರ್ಪಕವಾಗಿ ಅನುಷ್ಟಾನಕ್ಕೆ ತಂದು ಯಶಸ್ವಿ ಆಗಿರುವುದರಿಂದ ಇಲ್ಲಿಗೆ ಭೇಟಿ ನೀಡಿ ಅಧ್ಯಯನ ನಡೆಸಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಅಧ್ಯಕ್ಷರಾಗಿ ಪುನರಾಯ್ಕೆಗೊಂಡ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರನ್ನು ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ ತಮ್ಮ ನಿಯೋಗದ ಜೊತೆ ಸನ್ಮಾನಿಸಿದರು.

ನಿಯೋಗದಲ್ಲಿ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಉಪ ಪ್ರಧಾನ ವ್ಯವಸ್ಥಾಪಕ ಎಂ. ಕೊಟ್ರೇಶಪ್ಪ, ಕೆ. ಎಂ. ಸಿದ್ದಲಿಂಗಸ್ವಾಮಿ, ವ್ಯವಸ್ಥಾಪಕ ಸುನೀಲ್ ಅಣ್ಣಿ, ರಾಘವೇಂದ್ರ ಕಾಮತ್ ಮತ್ತಿತರರಿದ್ದರು.

ಎಸ್‌ಸಿಡಿಸಿಸಿ ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋಪಾಲಕೖಷ್ಣ ಭಟ್, ನವೋದಯ ಗ್ರಾಮ ವಿಕಾಸ ಚಾರಿಟೇಬಲ್‌ ಟ್ರಸ್ಟ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಶೆಟ್ಟಿ ಇದ್ದರು.

Share this article