ಬಳ್ಳಾರಿ: ಕೇಂದ್ರದ ಎನ್‌ಡಿಎ ಸರ್ಕಾರ ಸಾಮಾಜಿಕ ಸೌಹಾರ್ದತೆಗೆ ಅಪಾಯಕಾರಿಯಾಗಿದ್ದು, ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಆರೋಪಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರೈತರ ಹಿತ ಕಾಯುವ ಬದಲು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಗೆ ಕಾನೂನು ತರುವಂತೆ ಚಳವಳಿ ನಡೆಸುತ್ತಿರುವವರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ರೈತ ಚಳವಳಿ ಬಗ್ಗು ಬಡಿಯಲು ಟಿಯರ್ ಗ್ಯಾಸ್ ಬಳಸುವುದು, ಮುಳ್ಳುತಂತಿ ಬೇಲಿ ಹಾಕುವ ಕೃತ್ಯಕ್ಕೆ ಕೈ ಹಾಕಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಬಳಿಕ ನ್ಯಾಯಾಂಗ ವ್ಯವಸ್ಥೆ ಸಹ ದುರ್ಬಲಗೊಂಡಿದೆ. 1977ರಲ್ಲಿ ಇಂದಿರಾಗಾಂಧಿ ಅವರು ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿದ್ದರು. ಇದೀಗ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದ್ದು, ಸಂವಿಧಾನ ವಿರೋಧಿಯಾಗಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರ್ಕಾರಕ್ಕೆ ಬುದ್ಧಿ ಕಲಿಸಬೇಕಾಗಿದೆ. ಎನ್‌ಡಿಎ ಮೈತ್ರಿಕೂಟವನ್ನು ಸೋಲಿಸಿ, ಪ್ರತಿಪಕ್ಷದ ಸ್ಥಾನದಲ್ಲಿ ಕೂಡಿಸಬೇಕಾಗಿದೆ. ಸಾರ್ವಜನಿಕರು ಸೇರಿದಂತೆ ಸಾಮಾಜಿಕ ಹೋರಾಟಗಾರರು ರೈತ ಹೋರಾಟದ ಬೆಂಬಲಕ್ಕೆ ನಿಲ್ಲಬೇಕಿದೆ ಎಂದರು.ಕೇಂದ್ರ ಸರ್ಕಾರ ಸಂವಿಧಾನಾತ್ಮಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಚಂಡೀಗಢದಲ್ಲಿ ನಡೆದ ಮೇಯರ್ ಚುನಾವಣೆಯಲ್ಲಿ ಚುನಾವಣೆ ಅಧಿಕಾರಿಯೇ ಉದ್ದೇಶ ಪೂರ್ವಕವಾಗಿಯೇ ಎಂಟು ಮತಪತ್ರಗಳನ್ನು ವಿರೂಪಗೊಳಿಸಿರುವುದು ಬೆಳಕಿಗೆ ಬಂದಿದೆ. ಕೊನೆಗೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಿ, ಮರು ಎಣಿಕೆ ನಡೆಸಿ, ಚುನಾವಣೆ ಅಧಿಕಾರಿ ಮಾಡಿದ ಕೃತ್ಯವನ್ನು ಬಯಲು ಮಾಡಿದೆ.
ಎಲೆಕ್ಟ್ರೋಲ್ ಬಾಂಡ್ ವಿಚಾರದಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ. ಇದರಲ್ಲಿ ಸಿಂಹಪಾಲು ಬಿಜೆಪಿಯವರಿಗೆ ಹೋಗಿದೆ. ಕಪ್ಪು ಹಣವನ್ನು ಬಿಳಿ ಮಾಡಲು ಅನುಕೂಲ ಕಲ್ಪಿಸಿಕೊಡುವ ದಿಸೆಯಲ್ಲಿ ಕೇಂದ್ರ ಸರ್ಕಾರ 2017ರಲ್ಲಿ ಜಾರಿಗೊಳಿಸಿದ್ದ ಎಲೆಕ್ಟ್ರೋಲ್ ಬಾಂಡ್‌ಗಳನ್ನುಅಸಂವಿಧಾನಿಕ ಎಂದು ಸರ್ವೋಚ್ಛ ನ್ಯಾಯಾಲಯ ನೀಡಿರುವ ಚಾರಿತ್ರಿಕ ತೀರ್ಪುನ್ನು ಸ್ವಾಗತಿಸುವುದಾಗಿ ಹೇಳಿದರು.ಚುನಾವಣೆ ಆಯೋಗವನ್ನು ದುರ್ಬಳಕೆ ಮಾಡಿಕೊಳ್ಳುವ ಹುನ್ನಾರ ಕೇಂದ್ರದ ಎನ್‌ಡಿಎ ಸರ್ಕಾರ ಮಾಡುತ್ತಿದೆ. 2023ರ ಡಿ. 28ರಂದು ಅತ್ಯಂತ ಅವೈಜ್ಞಾನಿಕ ಹಾಗೂ ಅಸಂವಿಧಾನಿಕವಾದ ನಿಲುವು ತೆಗೆದುಕೊಂಡಿದೆ. ಚುನಾವಣೆ ಆಯೋಗದಲ್ಲಿ ಓರ್ವ ಸದಸ್ಯರಾಗಿದ್ದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯನ್ನು ತೆಗೆದು ಹಾಕಿ ಸಂಪುಟ ಸದಸ್ಯ ಮಂತ್ರಿಯೊಬ್ಬರನ್ನು ಅದರ ಸದಸ್ಯರನ್ನಾಗಿ ಮಾಡಲಾಗಿದೆ. ಈ ಮೂಲಕ ಚುನಾವಣೆ ಆಯೋಗದ ಸ್ವಾತಂತ್ರ್ಯ- ಸ್ವಾಯತ್ತತೆಯನ್ನು ಕೊನೆಗೊಳಿಸಲಾಗಿದೆ. ಚುನಾವಣೆ ಆಯೋಗವನ್ನು ಕೈಗೊಂಬೆ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಇಂತಹ ಅವಿವೇಕತನದ ನಿಲುವಿಗೆ ಬಂದಿದೆ ಎಂದು ಹಿರೇಮಠ ಕಿಡಿಕಾರಿದರು.
ಈ ಹಿಂದೆ ಮೈನಿಂಗ್ ಹಗರಣದಲ್ಲಿ ಜೈಲಿಗೆ ಹೋದವರಿಗೆ ಕಾಂಗ್ರೆಸ್ ಟಿಕೆಟ್ ನೀಡಿ ಗೆಲ್ಲಿಸಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಎಸ್.ಆರ್. ಹಿರೇಮಠ, ಗಣಿ ಅಕ್ರಮ ವಿರೋಧಿಸಿ ಸಿದ್ದರಾಮಯ್ಯನವರು ಬಳ್ಳಾರಿಯವರೆಗೆ ಪಾದಯಾತ್ರೆ ಮಾಡಿದರು. ಈಗ ಅದೇ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಜೈಲಿಗೆ ಹೋಗಿ ಬಂದವರಿದ್ದಾರೆ ಎಂದರಲ್ಲದೆ, ಸಿದ್ದರಾಮಯ್ಯ ಹಾಗೂ ಅವರ ಹೋರಾಟ ಈ ಮೊದಲಿನಂತಿಲ್ಲ. ಚುನಾವಣೆಯಲ್ಲಿ ಗೆಲ್ಲಬೇಕು. ಅಧಿಕಾರಕ್ಕೆ ಬರಬೇಕು. ಅಷ್ಟೇ ಮಾನದಂಡವಾಗಿದೆ ಎಂದು ವಿಷಾದಿಸಿದರು.ಗಣಿ ಪರಿಸರ ಪುನಶ್ಚೇತನ ನಿಗಮ (ಕೆಎಂಇಆರ್‌ಸಿ) ಹಾಗೂ ಜಿಲ್ಲಾ ಖನಿಜ ನಿಧಿ (ಡಿಎಂಎಫ್) ಹಣವನ್ನು ಬೇಕಾಬಿಟ್ಟಿಯಾಗಿ ಬಳಸಲು ಬಿಡುವುದಿಲ್ಲ. ಈ ಹಣದ ಮೇಲೆ ಅನೇಕರು ಕಣ್ಣಿಟ್ಟಿದ್ದಾರೆ. ಹಣ ಬಳಕೆ ಮಾಡಲು ನಿಯಮಗಳಿವೆ. ಪರಿಸರ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ತಂಡ ರಚನೆಯಾಗಬೇಕು. ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಉಪಾಧ್ಯಕ್ಷ, ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ನಾಲ್ಕು ಸಚಿವರು ತಂಡದಲ್ಲಿರಬೇಕು. ಯಾವ ಕಾರಣಕ್ಕಾಗಿ ಹಣ ಬಳಕೆ ಮಾಡಬೇಕು ಎಂಬುದನ್ನು ಸ್ಪಷ್ಟವಾಗಿ ಅರಿತು, ಮುಂದುವರಿಯಬೇಕಾಗುತ್ತದೆ ಎಂದರು.
ಮಲ್ಲಿಕಾರ್ಜುನ ರೆಡ್ಡಿ ಚಾಗನೂರು, ಶ್ರೀಶೈಲ ಆಲ್ದಳ್ಳಿ ಸುದ್ದಿಗೋಷ್ಠಿಯಲ್ಲಿದ್ದರು.