ಲೋಕಸಭೆ, ಮೇಲ್ಮನೆ ಚುನಾವಣೆಯಲ್ಲಿ ಎನ್‌ಡಿಎ ಗೆಲುವು: ಸಿಪಿವೈ

KannadaprabhaNewsNetwork | Published : Jun 4, 2024 12:30 AM

ಸಾರಾಂಶ

ಚನ್ನಪಟ್ಟಣ: ಬೆಂಗಳೂರು ಪದವೀಧರ ವಿಧಾನ ಪರಿಷತ್ ಕ್ಷೇತ್ರದ ಚುನಾವಣೆಯಲ್ಲಿ ಈ ಬಾರಿ ಎನ್‌ಡಿಎ ಅಭ್ಯರ್ಥಿ ಅ.ದೇವೇಗೌಡರ ಗೆಲುವ ಖಚಿತ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.

ಚನ್ನಪಟ್ಟಣ: ಬೆಂಗಳೂರು ಪದವೀಧರ ವಿಧಾನ ಪರಿಷತ್ ಕ್ಷೇತ್ರದ ಚುನಾವಣೆಯಲ್ಲಿ ಈ ಬಾರಿ ಎನ್‌ಡಿಎ ಅಭ್ಯರ್ಥಿ ಅ.ದೇವೇಗೌಡರ ಗೆಲುವ ಖಚಿತ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರು ಪದವಿಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ನಗರದ ತಾಲೂಕು ಕಚೇರಿಯ ಮತದಾನ ಕೇಂದ್ರದ ಬಳಿ ಭೇಟಿ ನೀಡಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಪ್ರಜ್ಞಾವಂತ ಮತದಾರರಾದ ಪದವೀಧರ ಒಲವು ಎನ್‌ಡಿಎ ಪರವಿದೆ. ಜೆಡಿಎಸ್-ಬಿಜೆಪಿ ಮೈತ್ರಿಯಿಂದ ನಮ್ಮ ಬಲ ಇನ್ನೂ ಹೆಚ್ಚಾಗಿದೆ. ತಾಲೂಕಿನಲ್ಲಿ ಐದು ಸಾವಿರಕ್ಕೂ ಹೆಚ್ಚು ಪದವೀಧರ ಮತದಾರರಿದ್ದು, ಪದವೀಧರ ಮತದಾರರು ಅತ್ಯುತ್ಸಾಹದಲ್ಲಿ ಮತದಾನ ಮಾಡಿದ್ದು, ಈ ಬಾರಿಯೂ ಅ.ದೇವೇಗೌಡ ಅತಿಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿದರು.

ಲೋಕಸಭೆ ಚುನಾವಣೆಯಲ್ಲೂ ಗೆಲುವು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಎನ್‌ಡಿಎ ಜಯಭೇರಿ ಬಾರಿಸಲಿದೆ. ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿ ಗದ್ದುಗೆ ಏರಲಿದ್ದಾರೆ. ರಾಜ್ಯದಲ್ಲಿ ನಾವು ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾ.ಮಂಜುನಾಥ್ ಗೆಲುವು ಖಚಿತ ಎಂದು ತಿಳಿಸಿದರು.

ರಾಜ್ಯದಲ್ಲಿ ಅಸ್ಥಿರ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರಕ್ಕೆ ಲೋಕಸಭಾ ಚುನಾವಣೆಯ ಫಲಿತಾಂಶ ಸರಿಯಾದ ಪಾಠ ಕಲಿಸಲಿದೆ. ಈಗಾಗಲೇ ದೇಶದ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಕಣ್ಮರೆಯಾಗುತ್ತಿದ್ದು, ರಾಜ್ಯದಿಂದಲೂ ಕಾಂಗ್ರೆಸ್ ಕಾಲ್ಕೀಳುವ ಕಾಲ ದೂರವಿಲ್ಲ. ಅಧಿಕಾರ ಹಾಗೂ ಹಣಬಲದಿಂದ ಜಿಲ್ಲೆಯಲ್ಲಿ ದುಂಡಾವರ್ತನೆ ತೋರುತ್ತಿದ್ದು ಡಿ.ಕೆ.ಬ್ರದರ್ಸ್‌ ಆಟಕ್ಕೆ ಈ ಚುನಾವಣೆ ಬ್ರೇಕ್ ಹಾಕಲಿದೆ. ಮುಂಬರುವ ಎಲ್ಲಾ ಚುನಾವಣೆಗಳಲ್ಲೂ ನಮ್ಮ ಮೈತ್ರಿಗೆ ಜಯ ಸಿಗುವುದು ಖಂಡಿತ ಎಂದರು.

ಇದೇ ವೇಳೆ ತಾಲೂಕಿನ ಕೋಡಂಬಳ್ಳಿ ಹಾಗೂ ಮಳೂರು ಮತಗಟ್ಟೆಗಳಿಗೂ ತೆರಳಿ ಮತದಾನದ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ವೇಳೆ ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ.ಜಯಮುತ್ತು, ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ತಾಲೂಕು ಅಧ್ಯಕ್ಷ ತೂಬಿನಕೆರೆ ರಾಜು, ನಗರ ಅಧ್ಯಕ್ಷ ಶಿವಕುಮಾರ್, ಮತ್ತಿಕೆರೆ ಚನ್ನೇಗೌಡ, ಕುಳ್ಳಪ್ಪ, ಅರಳಾಳಸಂದ್ರ ಶಿವಪ್ಪ, ಬ್ಯಾಡರಹಳ್ಳಿ ರಾಮಚಂದ್ರು, ರಾಮೇಗೌಡ ಇತರರಿದ್ದರು.

ಪೋಟೊ೩ಸಿಪಿಟಿ೧:

ಚನ್ನಪಟ್ಟಣದ ತಾಲೂಕು ಕಚೇರಿಯ ಮತಗಟ್ಟೆಗೆ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಭೇಟಿ ನೀಡಿದರು.

Share this article