ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ದೇಶದಲ್ಲಿಂದು 5 ಕೋಟಿ ಕೇಸುಗಳು ನ್ಯಾಯಾಲಯದಲ್ಲಿವೆ. ಉತ್ತರ ಭಾರತದಲ್ಲಿ ಕ್ರಿಮಿನಲ್ ಕೇಸುಗಳೇ ಹೆಚ್ಚಾಗಿವೆ. ದಕ್ಷಿಣ ಭಾರತದಲ್ಲಿ ಸಿವಿಲ್ ವ್ಯಾಜ್ಯಗಳೇ ಅಧಿಕ. ಇದು ಸಮಾಜದ ಸ್ವಾಸ್ಥ್ಯ ಕೆಡಿಸಿದಂತೆ. ಇದರಿಂದಾಗಿ ಜನ ಸಾಮಾನ್ಯರ ಮೌನ ರೋಧನದ ಬಗ್ಗೆ ನ್ಯಾಯಾಂಗ ವ್ಯವಸ್ಥೆ ಸ್ಪಂದಿಸುವ ನಿಟ್ಟಿನಲ್ಲಿ ಅಗತ್ಯ ಬದಲಾವಣೆಯ ಚಿಂತನೆ ನಡೆಯಬೇಕಾಗಿದೆ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ, ಆಂಧ್ರಪ್ರದೇಶ ರಾಜ್ಯಪಾಲ ಎಸ್. ಅಬ್ದುಲ್ ನಜೀರ್ ಹೇಳಿದರು.ಅವರು ಶನಿವಾರ ಶಿರ್ತಾಡಿಯಲ್ಲಿ ನೂತನವಾಗಿ ಆರಂಭಗೊಂಡ ಭುವನಜ್ಯೋತಿ ಕಾನೂನು ಕಾಲೇಜನ್ನು ಉದ್ಘಾಟಿಸಿ ಮಾತನಾಡಿದರು.ಪ್ರತಿಯೊಬ್ಬರೂ ಕಾನೂನನ್ನು ಸರಿಯಾಗಿ ಪಾಲಿಸಬೇಕು. ಕಾನೂನು ಪರಿಪಾಲನೆ ನಮ್ಮ ಮನೆಯಿಂದಲೇ ಪ್ರಾರಂಭವಾಗಬೇಕು ಎಂದು ಅವರು ಹೇಳಿದರು. ಹೈಕೋರ್ಟ್ ನ್ಯಾಯಾಧೀಶ ಜಸ್ಟಿಸ್ ಕೃಷ್ಣ ಎಸ್. ದೀಕ್ಷಿತ್ ಮಾತನಾಡಿ ಎಲ್ಲ ಮಾರ್ಗಗಳಿಗಿಂತ ಜ್ಞಾನ ಮಾರ್ಗವೇ ಶ್ರೇಷ್ಠ. ನಮ್ಮ ದೇಶವು ಜ್ಞಾನಪ್ರಿಯ ರಾಷ್ಟ್ರವೇ ಹೊರತು ಯುದ್ಧಪ್ರಿಯ ದೇಶವಲ್ಲ. ಜ್ಞಾನಿಗಳು ರಚಿಸಿದ ನಮ್ಮ ಸಂವಿಧಾನ ಬಲಿಷ್ಠವಾಗಿದೆ. ಜ್ಞಾನ ನಮ್ಮ ಬದುಕನ್ನು ರೂಪಿಸುತ್ತದೆ. ಜ್ಞಾನದಿಂದ ಸಮಾಜ, ದೇಶವನ್ನು ಕಟ್ಟಬಹುದು ಎಂದರು.
ಜಿಲ್ಲಾ ನ್ಯಾಯಾಧೀಶ ರವೀಂದ್ರ ಎಂ. ಜೋಶಿ ಮಾತನಾಡಿ ದ.ಕ ಜಿಲ್ಲೆ ಶಿಕ್ಷಣ ಕ್ಷೇತ್ರದಲ್ಲಿ ಅಗಾಧವಾಗಿ ಬೆಳೆದಿದ್ದು ರಾಜ್ಯದ ಜನರು ಶಿಕ್ಷಣಕ್ಕಾಗಿ ಈ ಜಿಲ್ಲೆಯತ್ತ ಮುಖ ಮಾಡಿದ್ದಾರೆ. ಈ ಶಿಕ್ಷಣ ಸಂಸ್ಥೆಯ ಮೂಲಕ ಉತ್ತಮ ಕಾನೂನು ತಜ್ಞರು ಹೊರ ಬರಲಿ ಎಂದರು.ಕರ್ನಾಟಕ ಕಾನೂನು ಕಾಲೇಜಿನ ಉಪಕುಲಪತಿ ಡಾ.ಸಿ. ಬಸವರಾಜು ಮಾತನಾಡಿ, ಕಾನೂನು ಶಿಕ್ಷಣದ ಪ್ರಯೋಜನ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಿಗುವಂತಾಗಬೇಕು. ಕಾನೂನು ವಿವಿ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದು ಕಾನೂನು ಅರಿವು ನೆರವು ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಸ್ಪಂದನ ಕಾನೂನು ವಿದ್ಯಾರ್ಥಿಗಳಿಗೆ ಕಡ್ಡಾಯ ಮಾಡಲಾಗಿದೆ ಎಂದವರು ಹೇಳಿದರು.
ಭುವನಜ್ಯೋತಿ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷ ರಾಘವೇಂದ್ರ ಪ್ರಭು, ಪ್ರಾಂಶುಪಾಲ ಡಾ. ಪ್ರದೀಪ್ ಎಂ.ಡಿ. ಉಪಸ್ಥಿತರಿದ್ದರು. ಟ್ರಸ್ಟ್‌ನ ಕಾರ್ಯದರ್ಶಿ ಪ್ರಶಾಂತ್ ಡಿಸೋಜ ಸ್ವಾಗತಿಸಿದರು. ಕೋಶಾಧಿಕಾರಿ ಲತಾ ಎ., ಶರಣಪ್ಪ ಬಾವಿ ಅತಿಥಿಗಳನ್ನು ಗೌರವಿಸಿದರು. ಸಂಚಾಲಕ ಪ್ರಶಾಂತ್ ಎನ್ . ವಂದಿಸಿದರು. ಸುಬ್ರಹ್ಮಣ್ಯ ಕುಮಾರ್ ಎ. ಕಾರ್ಯಕ್ರಮ ನಿರೂಪಿಸಿದರು.