ಲಕ್ಷ್ಮೇಶ್ವರ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅಧಿಕಾರಿಗಳು ಹೆಚ್ಚು ಜಾಗೃತೆ ವಹಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಹೇಳಿದರು.
ಕಿಸಾನ್ ಸಂಘದ ಅಧ್ಯಕ್ಷ ಟಾಕಪ್ಪ ಸಾತಪೂತೆ ಮಾತನಾಡಿ, ಬ್ಯಾಂಕ್ ಅಧಿಕಾರಿಗಳು ರೈತರ ಖಾತೆಗೆ ಜಮೆಯಾಗುತ್ತಿರುವ ಸರ್ಕಾರದ ಪರಿಹಾರದ ಹಣವನ್ನು ರೈತರಿಗೆ ನೀಡದೆ ಸತಾಯಿಸುತ್ತಿದ್ದಾರೆ. ಅವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಲಕ್ಷ್ಮೇಶ್ವರ ತಾಲೂಕು ಘೋಷಣೆಯಾಗಿ 6-7 ವರ್ಷಗಳಾಗಿದ್ದರೂ ತಾಲೂಕಿನ ಪ್ರಮುಖ ಕಚೇರಿಗಳು ಇನ್ನೂ ಆರಂಭವಾಗಿಲ್ಲ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗಿದೆ. ಶೀಘ್ರದಲ್ಲಿ ಎಲ್ಲ ಕಚೇರಿಗಳನ್ನು ಆರಂಭಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.ಆಶ್ರಯ ನಿವೇಶನ ಹಂಚಿಕೆಯಲ್ಲಿನ ನಡೆದಿರುವ ಗೋಲ್‌ಮಾಲ್ ಸರಿಪಡಿಸಿ ಅರ್ಹರಿಗೆ ನಿವೇಶನ ಲಭಿಸುವಂತೆ ಮಾಡಬೇಕು ಎಂದು ವಿವಿಧ ಸಂಘಟನೆಯ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ಸೋಮೇಶ್ವರ ನೂಲಿನ ಗಿರಿಣಿಯ ಬಂದ್ ಆಗಿದ್ದು, ರೈತರಿಂದ ಕಡಿಮೆ ಬೆಲೆಯಲ್ಲಿ ಫಲವತ್ತಾದ ಜಮೀನನ್ನು ಖರೀದಿಸಲಾಗಿದೆ. ಅದನ್ನು ಅನ್ಯಕಾರ್ಯಗಳಿಗೆ ಬಳಸಲಾಗುತ್ತಿದೆ. ಆದ್ದರಿಂದ ನಮ್ಮ ಜಮೀನು ನಮಗೆ ಮರಳಿಸಬೇಕು ಎಂದು ಉಮಚಗಿ ಕುಟುಂಬದ ಸದಸ್ಯರು ಹಾಗೂ ವಿವಿಧ ರೈತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ವೃದ್ಧಾಪ್ಯ ವೇತನ, ಪಡಿತರ ಚೀಟಿ, ವಿದ್ಯುತ್ ಸಮಸ್ಯೆ, ಸಾರಿಗೆ ವ್ಯವಸ್ಥೆ, ಕಿತ್ತು ಹೋಗಿರುವ ರಸ್ತೆಗಳ ಕುರಿತು ದೂರು ಸಲ್ಲಿಕೆಯಾಗಿದೆ. ಗೃಹಲಕ್ಷ್ಮೀ ಯೋಜನೆಯಲ್ಲಿ ಆಗಿರುವ ಲೋಪ ಸರಿಪಡಿಸಿ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಿಸಬೇಕು. ಒಳಚರಂಡಿ ಯೋಜನೆಯಲ್ಲಿನ ಆಗಿರುವ ಲೋಪದೋಷ ಸರಿಪಡಿಸುವುದು, ಕೈಮಗ್ಗ ನೇಕಾರರಿಗೆ ಆಗುತ್ತಿರುವ ತೊಂದರೆ ತಪ್ಪಿಸಿ ನೇಕಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಶಿಗ್ಲಿಯ ನೇಕಾರರು ಮನವಿ ಸಲ್ಲಿಸಿದರು.ಜನತಾ ದರ್ಶನದಲ್ಲಿ ಒಟ್ಟು 78 ಅರ್ಜಿಗಳು ಬಂದಿದ್ದು, ಅದರಲ್ಲಿ ಕೆಲವು ಸ್ಥಳೀಯ ಮಟ್ಟದಲ್ಲಿ ಪರಿಹಾರ ಕಂಡರೆ ಕೆಲವು ಸರ್ಕಾರದ ಮಟ್ಟದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ತೆಗೆದುಕೊಳ್ಳುವ ತೀರ್ಮಾನದಿಂದ ಬಗೆಹರಿಯುತ್ತವೆ. ಸರ್ಕಾರಕ್ಕೆ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ಅರ್ಜಿ ವಿಲೇವಾರಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.