ಮಕ್ಕಳ ಮೊಬೈಲ್‌ ಬಳಕೆ ಮೇಲೆ ನಿಯಂತ್ರಣ ಹೇರುವ ಅಗತ್ಯ: ಡಾ.ರಾಜಶ್ರೀ

KannadaprabhaNewsNetwork | Published : Oct 10, 2024 2:21 AM

ಸಾರಾಂಶ

ಬದಲಾದ ಜೀವನ ಶೈಲಿ, ಸಾಮಾಜಿಕ ಸಂರಚನೆಯಿಂದಾಗಿ ಶಾಲಾ ಮಕ್ಕಳಲ್ಲಿ ಮೊಬೈಲ್‌ ಬಳಕೆ, ಸ್ಕ್ರೀನ್‌ ಟೈಮಿಂಗ್‌ ಅವಧಿ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತ

ಕನ್ನಡಪ್ರಭ ವಾರ್ತೆ ಕಲಬುರಗಿ

ಕಣ್ಣು ಆಮೂಲ್ಯ ಅಂಗ, ದೇಹದ ಕಿಟಕಿ ಎಂದೇ ಕರೆಯಲಾಗುವ ಕಣ್ಣುಗಳ ಸಂರಕ್ಷಣೆ ಮುಖ್ಯ. ಅದರಲ್ಲೂ ಶಾಲಾ ಮಕ್ಕಳ ಕಣ್ಣುಗಳ ಸಂರಕ್ಷಣೆಗೆ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಮಕ್ಕಳನ್ನು ಮೊಬೈಲ್‌ನಿಂದ, ಸ್ಕ್ರೀನ್‌ ಟೈಮ್‌ನಿಂದ ದೂರ ಇಡಬೇಕಾಗಿದೆ ಎಂದು ಇಲ್ಲಿನ ಸಿದ್ರಾಮೇಶ್ವರ ಕಣ್ಣಿನ ಆಸ್ಪತ್ರೆ ನೇತ್ರ ತಜ್ಞರಾದ ಡಾ. ರಾಜಶ್ರೀ ರೆಡ್ಡಿ ಹಾಗೂ ವಿಶ್ವನಾಥ ರೆಡ್ಡಿ ಹೇಳಿದ್ದಾರೆ.

ಅ.10ರಂದು ಆಚರಿಸಲ್ಪಡುತ್ತಿರುವ ವಿಶ್ವ ದೃಷ್ಟಿ ದಿನಾಚರಣೆಯಂಗವಾಗಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಲೆಯಲ್ಲಿ ಮಕ್ಕಳು ಶೈಕ್ಷಣಿಕವಾಗಿ ಹಿನ್ನೆಡೆ ಎದುರಿಸುತ್ತಿದ್ದಾರಂಬ ಸಣ್ಣ ಶಂಕೆ ಬಂದರೂ ತಕ್ಷಣ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಿರೆಂದು ಸಲಹೆ ನೀಡಿದ ಅವರು, ಮಯೋಪಿಯಾ ದೋಷ ನಿವಾರಣೆಯಾದಲ್ಲಿ ಮಕ್ಕಳ ಸರ್ವಾಂಗೀಣ ಬೆಳ‍ಣಿಗೆ ಸಮಸ್ಯೆ ನಿವಾರಣೆಯಾದಂತೆ ಎಂದರು.

ಅತಿಯಾದ ಮೊಬೈಲ್ ಬಳಕೆ ಮತ್ತು ಟಿವಿ ವೀಕ್ಷಣೆ ಜೊತೆಗೆ ಅಪಾಯಕಾರಿ ವಸ್ತುಗಳೊಂದಿಗೆ ಆಡುವ ಸಂದರ್ಭದಲ್ಲಿ ಉಂಟಾಗುವ ಕಣ್ಣಿನ ಗಾಯದಿಂದಾಗಿ ಮಕ್ಕಳು ಕಣ್ಣಿನ ಸಮಸ್ಯೆಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದರು.

ಮಕ್ಕಳೇ, ನಿಮ್ಮ ಕಣ್ಣುಗಳನ್ನು ಪ್ರೀತಿಸಿ ಎಂಬುದು ವಿಶ್ವ ದೃಷ್ಟಿ ದಿನದ ಧ್ಯೇಯವಾಕ್ಯವಾಗಿದೆ. ಸಿದ್ದರಾಮೇಶ್ವರ ಕಣ್ಣಿನ ಆಸ್ಪತ್ರೆ ವತಿಯಿಂದ 1993ರಿಂದ ಇಲ್ಲಿಯವರೆಗೆ ಸುಮಾರು 10 ಸಾವಿರ ಮಕ್ಕಳಿಗೆ ಕಣ್ಣುಗಳ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗಿದೆ. ಅದರಲ್ಲೂ ಮುಖ್ಯವಾಗಿ ಮಕ್ಕಳನ್ನು ಬಾಧಿಸುವ ಪೀಡಿಯಾಟ್ರಿಕ್ ರಿಫ್ರಾಕ್ಶನ್, ಪೀಡಿಯಾಟ್ರಿಕ್ ಕ್ಯಾಟರಾಕ್ಟ್, ಮೆಳ್ಳುಗಣ್ಣು ಮತ್ತು ಸ್ಟ್ರಾಬಿಸ್ಮಸ್ ಕಾರ್ನಿಯಲ್ ಗಾಯಗಳಿಗೆ ಹೆಚ್ಚಾಗಿ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗುತ್ತಿದೆ. ಹಾಗಾಗಿ, ಪೋಷಕರು ತಮ್ಮ ಮಕ್ಕಳ ಕಣ್ಣುಗಳ ರಕ್ಷಣೆಗೆ ಆದ್ಯತೆ ನೀಡಬೇಕೆಂದು ಮನವಿ ಮಾಡಿದರು.

ಸೇಡಂ ತಾಲೂಕಿನ 10 ಹಳ್ಳಿಗಳಲ್ಲಿ ನೇತ್ರ ಶಿಬಿರ:

ಸಕಾರಾತ್ಮಕ ಜೀವನಶೈಲಿ ಅಳವಡಿಸಿಕೊಳ್ಳುವ ಮೂಲಕ ಕಣ್ಣುಗಳ ರಕ್ಷಣೆ ಮಾಡಿಕೊಳ್ಳಲು ಸಾಧ್ಯವಿದೆ ಎಂದ ನೇತ್ರ ತಜ್ಞೆ ಡಾ.ರಾಜಶ್ರೀ ರೆಡ್ಡಿ, ಅ.10ರ ವಿಶ್ವ ದೃಷ್ಟಿ ದಿನದ ಹಿನ್ನೆಲೆ ಆಸ್ಪತ್ರೆ ವತಿಯಿಂದ ಸೇಡಂ ತಾಲೂಕಿನ ಆಯ್ದ 10 ಗ್ರಾಮಗಳಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ. ಈಗಾಗಲೇ ಅ.1ರಿಂದ ಶಿಬಿರಗಳು ನಡೆಯುತ್ತಿದ್ದು, ಪ್ರಸಕ್ತ ತಿಂಗಳ 31ರವರೆಗೆ ಶಿಬಿರಗಳು ನಡೆಯಲಿವೆ. ದೃಷ್ಟಿದೋಷ ಇರುವ ಶಿಬಿರಾರ್ಥಿಗಳಿಗೆ ಉಚಿತವಾಗಿ ಆಸ್ಪತ್ರೆ ವತಿಂದ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗುತ್ತಿದ್ದು, ಜೊತೆಗೆ ಕಣ್ಣುಗಳ ರಕ್ಷಣೆಯ ಮಾರ್ಗೋಪಾಯಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಸಿದ್ದರಾಮೇಶ್ವರ ಕಣ್ಣಿನ ಆಸ್ಪತ್ರೆಯಲ್ಲಿ ಲಭ್ಯವಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದ ಅವರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆ ಮಾಡಿದ ದಾಖಲೆ ಸಿದ್ದರಾಮೇಶ್ವರ ಕಣ್ಣಿನ ಆಸ್ಪತ್ರೆಗಿದೆ. ಶಸ್ತ್ರಚಿಕಿತ್ಸೆ ವೇಳೆ ಈ ಮೊದಲಿನಂದ ಅರಿವಳಿಕೆ ಇಂಜೆಕ್ಷನ್ ಅಗತ್ಯವಿಲ್ಲ ಎಂದರು.

ಆಸ್ಪತ್ರೆಯಲ್ಲಿ ರೆಟಿನಾ ರೋಗಿಗಳಿಗೆ ತಪಾಸಣೆ, ಚಿಕಿತ್ಸೆ ಇದೆ. ಬೆಂಗಳೂರು ಹೊರತುಪಡಿಸಿ ರಾಜ್ಯದಲ್ಲೇ ಮೊದಲ ಬಾರಿಗೆ ಕಲಬುರಗಿಯಲ್ಲೇ ಅರ್ಗನ್‌ ಬಯೋಮೀಟರ್‌ ಯಂತ್ರ ಬಳಸುತ್ತಿದ್ದೇವೆ. ವಿಟ್ರೆಕ್ಟೊಮಿ ಹಾಗೂ ಆರ್.ಡಿ. ಶಸ್ತ್ರಚಿಕಿತ್ಸೆಗಾಗಿ ಅಲ್‍ಕಾನ್ ಕಾನ್ಸ್‍ಟೆಲೇಷನ್ ಎಂಬ ಅತ್ಯಾಧುನಿಕ ಉಪಕರಣ ಬಳಸಲಾಗುತ್ತಿದ್ದು, ಮಧುಮೇಹದಿಂದ ಬರುವ ರೆಟಿನೋಪಥಿಗೆ ಪಿಆರ್.ಪಿ ಲೇಸರ್, ಆರ್.ಪಿ.ಒ ಸ್ಕ್ರೀನಿಂಗ್ ಮತ್ತು ಫೋಕಲ್ ಲೇಸರ್ ಬಳಸಲಾಗುತ್ತಿದೆ. ಅತ್ಯಾಧುನಿಕ ಲ್ಯಾಸಿಕ್ ಶಸ್ತ್ರಚಿಕಿತ್ಸೆಯಿಂದಾಗಿ ಸರ್ಜರಿ ಬಳಿಕ ಕನ್ನಡಕ ಧರಿಸಬೇಕಾದ ಅನಿವಾರ್ಯತೆ ಇರುವುದಿಲ್ಲ ಎಂದರು.

ನೇತ್ರತಜ್ಞ ರಾದ ಡಾ.ವಿಶ್ವನಾಥರೆಡ್ಡಿ, ಡಾ. ಸಿದ್ದಲಿಂಗ ರೆಡ್ಡಿ, ಡಾ.ನೀತಾರೆಡ್ಡಿ, ಎಸ್.ಎಸ್.ಹಿರೇಮಠ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಮುಂದಿನ ವರ್ಷದಿಂದ ಡಿಎನ್‍ಬಿ ಕೋರ್ಸ್

ಜನರು ಕಣ್ಣುಗಳ ರಕ್ಷಣೆಗೆ ಹೆಚ್ಚು ಒತ್ತು ನೀಡುವುದರ ಜೊತೆಗೆ ಆ ನಿಟ್ಟಿನಲ್ಲಿ ಹೆಚ್ಚು ಜಾಗೃತಿ ಮೂಡಿಸುವಲ್ಲಿ ಸಿದ್ದರಾಮೇಶ್ವರ ಕಣ್ಣಿನ ಆಸ್ಪತ್ರೆಯಿಂದ ಮುಂದಿನ ಶೈಕ್ಷಣಿಕ ವರ್ಷದಿಂದ ನೇತ್ರಗಳಿಗೆ ಸಂಬಂಧಿಸಿದಂತೆ ಮೂರು ವರ್ಷಗಳ ಡಿಎನ್‍ಬಿ ಕೋರ್ಸ್ ಆರಂಭಿಸಲಾಗುತ್ತಿದೆ ಎಂದು ಆಸ್ಪತ್ರೆ ಮುಖ್ಯಸ್ಥ ಡಾ.ಸಿದ್ಧಲಿಂಗ ವಿಶ್ವನಾಥರೆಡ್ಡಿ ತಿಳಿಸಿದರು. ಈಗಾಗಲೇ ಈ ನಿಟ್ಟಿನಲ್ಲಿ ಅಗತ್ಯ ಪರವಾನಗಿ ಪಡೆಯಲಾಗಿದ್ದು ಅಗತ್ಯ ಸೌಕರ್ಯಗಳ ಅಳವಡಿಕೆ ಪೂರ್ಣಗೊಂಡ ಕೂಡಲೇ ಮುಂದಿನ ಶೈಕ್ಷಣಿಕ ವರ್ಷದಿಂದ ಡಿಎನ್‍ಬಿ ಕೋರ್ಸ್ ಹಾಗೂ ಫೆಲೋಶಿಪ್ ನೀಡಲಾಗುವುದು ಎಂದರು.

Share this article