ನೀಟ್‌ ಪರೀಕ್ಷೆ: ನಿಖಿಲ್‌ ಸೊನ್ನದ್‌ಗೆ ಅಖಿಲ ಭಾರತ ಮಟ್ಟದ 17ನೇ ರ್‍ಯಾಂಕ್‌, ರಾಜ್ಯಕ್ಕೆ ಪ್ರಥಮ

KannadaprabhaNewsNetwork |  
Published : Jun 16, 2025, 07:19 AM ISTUpdated : Jun 16, 2025, 10:35 AM IST
ಹೆತ್ತವರ ಜತೆ ಸಂತಸ ಹಂಚಿಕೊಳ್ಳುತ್ತಿರುವ ನಿಖಿಲ್‌ ಸೊನ್ನದ್‌ | Kannada Prabha

ಸಾರಾಂಶ

ನೀಟ್‌ ಪರೀಕ್ಷೆಯಲ್ಲಿ ಮಂಗಳೂರು ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ನಿಖಿಲ್ ಸೊನ್ನದ್ ಅಖಿಲ ಭಾರತ ಮಟ್ಟದಲ್ಲಿ 17ನೇ ರ್‍ಯಾಂಕ್‌ ಹಾಗೂ ಕರ್ನಾಟಕದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.  

 ಮಂಗಳೂರು : ಈ ಬಾರಿಯ ನೀಟ್‌ ಪರೀಕ್ಷೆಯಲ್ಲಿ ಮಂಗಳೂರು ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ನಿಖಿಲ್ ಸೊನ್ನದ್ ಅಖಿಲ ಭಾರತ ಮಟ್ಟದಲ್ಲಿ 17ನೇ ರ್‍ಯಾಂಕ್‌ ಹಾಗೂ ಕರ್ನಾಟಕದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. 

ಮೂಲತಃ ವಿಜಯಪುರದವರಾದ ನಿಖಿಲ್‌ ಸೊನ್ನದ್‌ ಅವರು ಅಲ್ಲಿನ ನ್ಯೂರೋ ಸರ್ಜನ್ ಡಾ. ಸಿದ್ದಪ್ಪ ಸೊನ್ನದ್ ಹಾಗೂ ನೇತ್ರ ತಜ್ಞೆ ಡಾ. ಮೀನಾಕ್ಷಿ ಸೊನ್ನದ್ ದಂಪತಿ ಪುತ್ರ. ನಿಖಿಲ್ ಅವರು ಈ ಬಾರಿಯ ಸಿಇಟಿ ಕೃಷಿ ವಿಭಾಗದಲ್ಲಿ 8ನೇ ರ್‍ಯಾಂಕ್ ಪಡೆದುಕೊಂಡಿದ್ದರು.

ನೀಟ್‌ ಸಾಧನೆ ಕುರಿತು ಸಂತಸ ಹಂಚಿಕೊಂಡ ನಿಖಿಲ್‌, ಕಠಿಣ ಪರಿಶ್ರಮ, ಅಧ್ಯಯನದಲ್ಲಿ ಸ್ಥಿರತೆ, ಉಪನ್ಯಾಸಕರು ಹಾಗೂ ಪೋಷಕರ ಬೆಂಬಲ, ಮಾರ್ಗದರ್ಶನದಿಂದ ಸಾಧ್ಯವಾಗಿದೆ. 17ನೇ ರ್‍ಯಾಂಕ್‌ ನಿರೀಕ್ಷೆ ಮಾಡಿರಲಿಲ್ಲ. ಸಂತೋಷ ನೀಡಿದೆ ಎಂದು ಹೇಳಿದರು.

ನಾನು ತರಗತಿಯಲ್ಲಿ ಕಲಿಸಿದ ಎಲ್ಲವನ್ನೂ ಗ್ರಹಿಸುತ್ತಿದ್ದೆ. ಅಧ್ಯಯನ ಸಮಯದಲ್ಲಿ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುತ್ತಿದ್ದೆ. ಪರಿಹರಿಸಲು ಸಾಧ್ಯವಾಗದಿದ್ದರೆ ಉಪನ್ಯಾಸಕರು ಮರುದಿನ ಮಾರ್ಗದರ್ಶನ ನೀಡುತ್ತಿದ್ದರು. ಜತೆಗೆ ಕಾಲೇಜು ನಡೆಸುವ ಅಣಕು ಪರೀಕ್ಷೆಗಳು ಪ್ರವೇಶ ಪರೀಕ್ಷೆಯಲ್ಲಿ ಕೇಳಲಾಗುವ ಪ್ರಶ್ನೆಗಳ ಪ್ರಕಾರವನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡಿವೆ ಎಂದರು.ಹೆತ್ತವರಿಬ್ಬರೂ ವೈದ್ಯರಾಗಿರುವುದರಿಂದ ಸ್ವಾಭಾವಿಕವಾಗಿ ವೈದ್ಯಕೀಯ ಕ್ಷೇತ್ರದ ಕಡೆಗೆ ಒಲವು ಹೊಂದಿದ್ದೆ. ಮನೆಯಲ್ಲಿ ನಿರಂತರವಾಗಿ ವೈದ್ಯಕೀಯ ಪರಿಭಾಷೆಯನ್ನು ಕೇಳುತ್ತಿದ್ದೆ. ದೆಹಲಿಯ ಏಮ್ಸ್‌ನಲ್ಲಿ ಎಂಬಿಬಿಎಸ್ ಓದುವುದೇ ನನ್ನ ಮುಖ್ಯ ಗುರಿಯಾಗಿದೆ ಎಂದು ನಿಖಿಲ್‌ ಸೊನ್ನದ್‌ ಹೇಳಿಕೊಂಡರು.ಬಿಡುವಿನ ವೇಳೆಯಲ್ಲಿ ಬ್ಯಾಡ್ಮಿಂಟನ್, ಚೆಸ್ ಆಡುವುದು ಮತ್ತು ಕವಿತೆಗಳನ್ನು ಬರೆಯುವುದು ನನ್ನ ಪ್ರಿಯವಾದ ಹವ್ಯಾಸ. ಚೆಸ್ ನನ್ನ ಏಕಾಗ್ರತೆಯನ್ನು ಸುಧಾರಿಸಲು ಸಹಾಯ ಮಾಡಿತು ಎಂದರು.

84ನೇ ರ್‍ಯಾಂಕ್‌ ಪಡೆದ ನಿಧಿ

ಎಕ್ಸ್‌ಪರ್ಟ್ ಪಿಯು ಕಾಲೇಜಿನ ಮತ್ತೊಬ್ಬ ಟಾಪರ್ ವಿದ್ಯಾರ್ಥಿ ನಿಧಿ ಕೆ.ಜಿ. ಅಖಿಲ ಭಾರತ ಮಟ್ಟದಲ್ಲಿ 84ನೇ ರ್‍ಯಾಂಕ್‌ ಪಡೆದಿದ್ದಾರೆ. ಕೊಡಗಿನ ಸೋಮವಾರಪೇಟೆಯವರಾದ ನಿಧಿ ಕೂಡ ದೆಹಲಿಯ ಏಮ್ಸ್ ಅಥವಾ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಓದುವ ಅಪೇಕ್ಷೆ ಇಟ್ಟುಕೊಂಡಿದ್ದಾರೆ.

ನೀಟ್ ಪರೀಕ್ಷೆ ಕಠಿಣವಾಗಿದ್ದರೂ ನನ್ನ ಅತ್ಯುತ್ತಮ ಪ್ರಯತ್ನ ಮಾಡಿದ್ದೇನೆ. ಕಳೆದ ಎರಡು ವರ್ಷಗಳಿಂದ ಅಧ್ಯಯನಕ್ಕಾಗಿ ನನ್ನನ್ನು ಅರ್ಪಿಸಿಕೊಂಡಿದ್ದೆ. 100ಕ್ಕಿಂತ ಕಡಿಮೆ ರ‍್ಯಾಂಕ್ ಪಡೆಯುವ ಗುರಿಯನ್ನು ಹೊಂದಿದ್ದೆ. 84ನೇ ರ್‍ಯಾಂಕ್‌ ದೊರೆತದ್ದು ಖುಷಿ ನೀಡಿದೆ ಎಂದರು. ಅವರು ಸಹಾಯಕ ಸಬ್-ಇನ್‌ಸ್ಪೆಕ್ಟರ್ ಕೆ.ಎಚ್. ​​ಗಣಪತಿ ಮತ್ತು ಶಾಲಾ ಶಿಕ್ಷಕಿ ಗುಣವತಿ ದಂಪತಿ ಪುತ್ರಿ.

PREV
Read more Articles on

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...