ಉತ್ತರ ಕರ್ನಾಟಕದ ಏಕೈಕ ರೇಷ್ಮೆ ಮಾರಾಟ ಮಾರುಕಟ್ಟೆ ನಿರ್ಲಕ್ಷ್ಯ

KannadaprabhaNewsNetwork | Published : Jan 20, 2024 2:02 AM

ಸಾರಾಂಶ

ಗದಗ ಸೇರಿದಂತೆ ಉತ್ತರ ಕರ್ನಾಟಕ ವ್ಯಾಪ್ತಿಯ ನಾಲ್ಕೈದು ಜಿಲ್ಲೆಗಳಲ್ಲಿ ರೇಷ್ಮೆ ಕೃಷಿ ವಿಸ್ತಾರಗೊಳ್ಳುತ್ತಿದೆ. ಆದರೆ ರೈತರು ಮಾರಾಟ ಮಾಡಲು ರಾಮನಗರ ಮಾರುಕಟ್ಟೆ ಆಶ್ರಯಿಸಬೇಕಿದೆ. ಶಿರಹಟ್ಟಿ ರೇಷ್ಮೆ ಮಾರುಕಟ್ಟೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದರಿಂದ ರೈತರಿಗೆ ಉಪಯೋಗವಾಗುತ್ತಿಲ್ಲ.

ಶಿವಕುಮಾರ ಕುಷ್ಟಗಿ

ಕನ್ನಡಪ್ರಭ ವಾರ್ತೆ ಗದಗ

ಗದಗ ಸೇರಿದಂತೆ ಉತ್ತರ ಕರ್ನಾಟಕ ವ್ಯಾಪ್ತಿಯ ನಾಲ್ಕೈದು ಜಿಲ್ಲೆಗಳಲ್ಲಿ ರೇಷ್ಮೆ ಕೃಷಿ ವಿಸ್ತಾರಗೊಳ್ಳುತ್ತಿದೆ. ಆದರೆ ರೈತರು ಮಾರಾಟ ಮಾಡಲು ರಾಮನಗರ ಮಾರುಕಟ್ಟೆ ಆಶ್ರಯಿಸಬೇಕಿದೆ. ಶಿರಹಟ್ಟಿ ರೇಷ್ಮೆ ಮಾರುಕಟ್ಟೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದರಿಂದ ರೈತರಿಗೆ ಉಪಯೋಗವಾಗುತ್ತಿಲ್ಲ.

ಜಿಲ್ಲೆಯ ಶಿರಹಟ್ಟಿ ತಾಲೂಕು ರೇಷ್ಮೆ ಕೃಷಿಯಲ್ಲಿ ಮೊದಲ ಸ್ಥಾನದಲ್ಲಿದೆ. 305 ರೈತರು 246 ಹೆಕ್ಟೇರ್‌ ಪ್ರದೇಶದಲ್ಲಿ ರೇಷ್ಮೆ ಕೃಷಿ ಮಾಡುತ್ತಿದ್ದಾರೆ. ಮುಂಡರಗಿಯಲ್ಲಿ 152 ಹೆಕ್ಟೇರ್‌ ಪ್ರದೇಶದಲ್ಲಿ 183 ರೈತರು, ಗಜೇಂದ್ರಗಡದಲ್ಲಿ 149 ಹೆಕ್ಟೇರ್ ಪ್ರದೇಶದಲ್ಲಿ 197 ರೈತರು, ಗದಗದಲ್ಲಿ 95 ಹೆ. ಪ್ರದೇಶದಲ್ಲಿ 122 ರೈತರು, ಲಕ್ಷ್ಮೇಶ್ವರದಲ್ಲಿ 74 ಹೆ. ಪ್ರದೇಶದಲ್ಲಿ 74 ರೈತರು, ರೋಣದ 23 ಹೆ. ಪ್ರದೇಶದಲ್ಲಿ 36 ರೈತರು ಹಾಗೂ ನರಗುಂದ ಭಾಗದಲ್ಲಿ 3 ಹೆಕ್ಟೇರ್ ಪ್ರದೇಶದಲ್ಲಿ 5 ರೈತರು ಸೇರಿ ಜಿಲ್ಲೆಯಲ್ಲಿ 738 ಹೆಕ್ಟೇರ್ ಪ್ರದೇಶದಲ್ಲಿ 922ಕ್ಕೂ ಹೆಚ್ಚು ರೈತರು ರೇಷ್ಮೆ ಉತ್ಪಾದನೆ ಮಾಡುತ್ತಿದ್ದಾರೆ.ಉತ್ಪಾದನೆಯಲ್ಲಿ ಹೆಚ್ಚಳ: ಜಿಲ್ಲೆಯಲ್ಲಿ ರೇಷ್ಮೆ ಕೃಷಿಗೆ ಹೆಚ್ಚಿನ ರೈತರು ಒಲವು ತೋರುತ್ತಿದ್ದು, 2013-14ರಲ್ಲಿ 103.5 ಮೆ. ಟನ್, 2014-15 ರಲ್ಲಿ 129.8 ಮೆ. ಟನ್, 2015-16ರಲ್ಲಿ 165.6 ಮೆ. ಟನ್, 2016-17ರಲ್ಲಿ 147.60 ಮೆ. ಟನ್, 2017-18ರಲ್ಲಿ 152.8 ಮೆ. ಟನ್, 2019-20, 2020-21ರಲ್ಲಿ ಸರಾಸರಿ 180ರಿಂದ 200 ಮೆ. ಟನ್ ಉತ್ಪಾದನೆಯಾಗುವ ಮೂಲಕ ಹೆಚ್ಚಳ ಕಂಡಿತ್ತು. 2021-22ರಲ್ಲಿ 280 ಮೆ. ಟನ್, 2022-23ರಲ್ಲಿ 315 ಮೆ. ಟನ್ ದಾಟಿದ್ದು, ಕಳೆದ 10 ವರ್ಷದಲ್ಲಿ ಜಿಲ್ಲೆಯ ಉತ್ಪಾದನೆ ಏರುಗತಿಯಲ್ಲಿಯೇ ಇದೆ.ಉ.ಕ ಏಕೈಕ ಪ್ರಸಿದ್ಧ ಮಾರುಕಟ್ಟೆ: ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿ ಇರುವ ರೇಷ್ಮೆಗೂಡು ಮಾರಾಟ ಕೇಂದ್ರಕ್ಕೆ ಗದಗ, ಕೊಪ್ಪಳ, ಬಾಗಲಕೋಟೆ, ಧಾರವಾಡ, ಹಾವೇರಿ ಸೇರಿದಂತೆ ಉಕ ಭಾಗದ ಬಹುತೇಕ ಜಿಲ್ಲೆಗಳ ರೇಷ್ಮೆ ಉತ್ಪಾದಕರು ಆಗಮಿಸುತ್ತಿದ್ದರು. ಆನಂತರ ಮಾರುಕಟ್ಟೆಯಲ್ಲಿನ ಮೂಲಸೌಕರ್ಯಗಳ ಕೊರತೆಯಿಂದಾಗಿ ಹಂತ ಹಂತವಾಗಿ ಮಾರಾಟ ಹಾಗೂ ಖರೀದಿ ಪ್ರಕ್ರಿಯೆ ಕ್ಷೀಣಿಸತೊಡಗಿತು. ಈ ಮಾರುಕಟ್ಟೆಯ ಬಗ್ಗೆ ಸರ್ಕಾರ ತೋರುತ್ತಿರುವ ನಿರ್ಲಕ್ಷ್ಯವೇ ಇದಕ್ಕೆ ಪ್ರಮುಖ ಕಾರಣವಾಗಿದೆ.

ಆಧುನಿಕತೆ ಇಲ್ಲ: ಉ.ಕ. ಭಾಗದಲ್ಲಿ ರೇಷ್ಮೆ ವಹಿವಾಟಿಗೆ ಪ್ರಸಿದ್ಧಿ ಪಡೆದಿದ್ದ ಶಿರಹಟ್ಟಿ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯು ಆಧುನಿಕಗೊಂಡಿಲ್ಲ. ಈಗಲೂ 30 ವರ್ಷಗಳ ಹಳೆಯ ಕಾಟೇಜ್ ಬೇಸಿನ್ ರೀಲಿಂಗ್ ಮಷಿನ್ ಬಳಕೆ ಮಾಡಲಾಗುತ್ತಿದೆ. ಹಳೆಯ ಕಾಟೇಜ್ ಬೇಸಿನ್ ರೀಲಿಂಗ್ ಮಷಿನ್ ಬಳಕೆಯಿಂದ ರೇಷ್ಮೆ ನೂಲು ತೆಗೆಯುವುದು ನಿಧಾನವಾಗುತ್ತದೆ. ನೂಲು ಸರಿಯಾಗಿ ಬರುವುದಿಲ್ಲ. ಇದರಿಂದಾಗಿ ರೇಷ್ಮೆ ನೂಲಿನ ದರ ಕಡಿಮೆಯಾಗುತ್ತಿದೆ. ರೇಷ್ಮೆ ಗೂಡು ಖರೀದಿದಾರರು ಕಡಿಮೆ ದರಕ್ಕೆ ಬಿಡ್ ಮಾಡುತ್ತಾರೆ. ಇದರಿಂದಾಗಿ ಶಿರಹಟ್ಟಿ ಮಾರುಕಟ್ಟೆಯಲ್ಲಿ ದರ ಕುಸಿತಗೊಳ್ಳುವ ಭೀತಿಯಿಂದ ಜಿಲ್ಲೆಯ ಬಹುತೇಕ ರೇಷ್ಮೆ ಕೃಷಿಕರು ರಾಮನಗರಕ್ಕೆ ತೆರಳುತ್ತಿದ್ದಾರೆ. ಹೊಸ ತಂತ್ರಜ್ಞಾನವಾಗಿರುವ ಆಟೋಮ್ಯಾಟಿಕ್ ರೀಲಿಂಗ್ ಮಷಿನ್ (ಎಆರ್‌ಎಂ) ಅಳವಡಿಸಿದರೆ ಈ ಸಮಸ್ಯೆಗೆ ಪರಿಹಾರ ದೊರೆಯುತ್ತದೆ.ತೀರಾ ಹಳೆಯ ಕಟ್ಟಡ: ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆ ಹಾಗೂ ಸಾಮೂಹಿಕ ರೇಷ್ಮೆ ನೂಲು ಬಿಚ್ಚುವ ಸಂಕೀರ್ಣವು ಹಳೆಯ ಕಟ್ಟಡವಾಗಿದ್ದು, ಮಳೆ ಬಂದರೆ ಸೋರುತ್ತಿದೆ. ಅಂದು ಉತ್ತರ ಕರ್ನಾಟಕ ಪ್ರಸಿದ್ಧ ರೇಷ್ಮೆ ಮಾರುಕಟ್ಟೆಯಾಗಿದ್ದ ಶಿರಹಟ್ಟಿ ಮಾರುಕಟ್ಟೆ ಈಗ ಹಂತಕ್ಕೆ ಬಂದು ನಿಂತಿದೆ.ಶಿರಹಟ್ಟಿ ಪಟ್ಟಣದ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಯಲ್ಲಿ 15ಕ್ಕೂ ಹೆಚ್ಚಿನ ಜನರು ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ಒಬ್ಬರೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿಬ್ಬಂದಿ ಹಾಗೂ ಮಾರುಕಟ್ಟೆಯಲ್ಲಿನ ಮೂಲ ಸೌಕರ್ಯಗಳ ಕೊರತೆಯಿಂದ ಹೆಚ್ಚಿನ ರೇಷ್ಮೆ ಖರೀದಿದಾರರು ಇಲ್ಲಿಗೆ ಬರುತ್ತಿಲ್ಲ. ಇದರಿಂದಾಗಿ ರೈತರು ಅನಿವಾರ್ಯವಾಗಿ ದೂರದ ರಾಮನಗರ ಮಾರುಕಟ್ಟೆಯನ್ನೇ ಅವಲಂಬಿಸುವಂತಾಗಿದೆ ಎಂದು ವಿವಿಧ ತಾಲೂಕುಗಳ ರೇಷ್ಮೆ ಬೆಳೆಗಾರರಾದ ಸಿದ್ಧಪ್ಪ ನಿಂಗೋಜಿ, ಮಹಾಂತೇಶ ಹಡಗಲಿ ಹೇಳಿದರು.

Share this article