ಬೇಡಿಕೆ ನಿರ್ಲಕ್ಷ್ಯ: ಸಾರಿಗೆ ಇಲಾಖೆಗೆ ಮುತ್ತಿಗೆ

KannadaprabhaNewsNetwork |  
Published : Jul 05, 2024, 01:49 AM IST
RTO 23 | Kannada Prabha

ಸಾರಾಂಶ

ಎಲೆಕ್ಟ್ರಿಕ್‌ ಬೈಕ್‌ ಟ್ಯಾಕ್ಸಿ ಸೇವೆ ಸ್ಥಗಿತ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನೂರಾರು ಚಾಲಕರು ಶಾಂತಿನಗರದ ಸಾರಿಗೆ ಇಲಾಖೆ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಎಲೆಕ್ಟ್ರಿಕ್‌ ಬೈಕ್‌ ಟ್ಯಾಕ್ಸಿ ಸೇವೆ ಸ್ಥಗಿತ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನೂರಾರು ಚಾಲಕರು ಶಾಂತಿನಗರದ ಸಾರಿಗೆ ಇಲಾಖೆ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ನಂತರ ಬೇಡಿಕೆಗಳ ಈಡೇರಿಕೆಗೆ ಕ್ರಮ ಕೈಗೊಳ್ಳುವ ಕುರಿತು ಸಾರಿಗೆ ಇಲಾಖೆ ಅಧಿಕಾರಿಗಳು ಭರವಸೆ ನೀಡಿದ ನಂತರ ಚಾಲಕರು ತಮ್ಮ ಪ್ರತಿಭಟನೆ ಹಿಂಪಡೆದರು.

ಸಾರಿಗೆ ಇಲಾಖೆ ಕಚೇರಿ ಎದುರು ಚಾಲಕರು ಪ್ರತಿಭಟನೆ ನಡೆಸಿ, ಇಲಾಖೆ ಆಯುಕ್ತರು ತಮ್ಮ ಬಳಿ ಬಂದು ಮನವಿ ಸ್ವೀಕರಿಸಬೇಕು ಹಾಗೂ ಅದನ್ನು ಈಡೇರಿಸುವ ಕುರಿತು ಲಿಖಿತ ಆದೇಶ ನೀಡುವಂತೆ ಸಾರಿಗೆ ಸಂಘಟನೆಗಳ ಮುಖಂಡರು ಆಗ್ರಹಿಸಿದರು. ಆದರೆ, ಯಾವುದೇ ಅಧಿಕಾರಿಯೂ ಪ್ರತಿಭಟನಾ ಸ್ಥಳಕ್ಕೆ ಆಗಮಿಸದ ಕಾರಣ ಒಮ್ಮೆಲೇ ಚಾಲಕರು ಕಚೇರಿ ಒಳಗೆ ನುಗ್ಗುವ ಪ್ರಯತ್ನ ಮಾಡಿದರು. ಅದಕ್ಕೆ ಅಲ್ಲಿದ್ದ ಪೊಲೀಸರು ಅವಕಾಶ ನೀಡಲಿಲ್ಲ. ಕೊನೆಗೆ ನೂರಾರು ಚಾಲಕರು ಒಮ್ಮೆಲೇ ಕಚೇರಿ ಒಳಗೆ ನುಗ್ಗಿದರು. ಇದರಿಂದ ಚಾಲಕರು ಮತ್ತು ಪೊಲೀಸರ ನಡುವೆ ತಳ್ಳಾಟ ನೂಕಾಟ ನಡೆಯಿತು.

ವಿಧಿಯಿಲ್ಲದೆ ಸಭೆ ನಡೆಸಿದ ಅಧಿಕಾರಿಗಳು

ಮೊದಲಿಗೆ ಸಾರಿಗೆ ಇಲಾಖೆ ಅಧಿಕಾರಿಗಳು ಚಾಲಕರೊಂದಿಗೆ ಮಾತನಾಡಲು ಸಿದ್ಧವಿರಲಿಲ್ಲ. ಕೊನೆಗೆ ಚಾಲಕರು ಕಚೇರಿಗೆ ನುಗ್ಗಿದ ಕಾರಣ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದೆ ಎಂದು ತಿಳಿದು, ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಪ್ರಮುಖರೊಂದಿಗೆ ಅಪರ ಸಾರಿಗೆ ಆಯುಕ್ತ ಮಲ್ಲಿಕಾರ್ಜುನ್‌ ಸೇರಿದಂತೆ ಇತರ ಅಧಿಕಾರಿಗಳು ಸಭೆ ನಡೆಸಿದರು. ಈ ವೇಳೆ ಎಲೆಕ್ಟ್ರಿಕ್ ಬೈಕ್‌ ಟ್ಯಾಕ್ಸಿ ಹಾಗೂ ವೈಟ್‌ಬೋರ್ಡ್‌ ಬೈಕ್‌ ಟ್ಯಾಕ್ಸಿಗಳ ವಿರುದ್ಧ ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸುವ ಭರವಸೆ ನೀಡಿದರು. ಉಳಿದ ಬೇಡಿಕೆಗಳನ್ನು ಚರ್ಚೆ ನಡೆಸಿ ಈಡೇರಿಸುವುದಾಗಿ ತಿಳಿಸಿದರು. ಹೀಗಾಗಿ ಚಾಲಕರು ತಮ್ಮ ಪ್ರತಿಭಟನೆಯನ್ನು ಹಿಂಪಡೆದರು.

ಇಂದಿನಿಂದ ಕಾರ್ಯಾಚರಣೆ ಆರಂಭ

ಚಾಲಕರ ಪ್ರತಿಭಟನೆ ಹಾಗೂ ಸಭೆ ನಂತರ ಎಲೆಕ್ಟ್ರಿಕ್‌ ಬೈಕ್‌ ಟ್ಯಾಕ್ಸಿ ಹಾಗೂ ವೈಟ್ ಬೋರ್ಡ್‌ ಟ್ಯಾಕ್ಸಿಗಳ ವಿರುದ್ಧ ಶುಕ್ರವಾರದಿಂದ ಕಾರ್ಯಾಚರಣೆಗೆ ಸಾರಿಗೆ ಇಲಾಖೆ ಆದೇಶಿಸಿದೆ. ಬೆಂಗಳೂರು ನಗರ ವ್ಯಾಪ್ತಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲು ಸೂಚಿಸಲಾಗಿದೆ. ಒಟ್ಟು 11 ಕಡೆಗಳಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಅದನ್ನು ಶುಕ್ರವಾರಕ್ಕೆ ಸೀಮಿತಗೊಳಿಸಲು ಮುಂದಿನ ಆದೇಶದವರೆಗೆ ಕಾರ್ಯಾಚರಣೆ ಮುಂದುವರಿಸುವಂತೆಯೂ ಸಾರಿಗೆ ಇಲಾಖೆ ಆಯುಕ್ತರ ಕಚೇರಿಯಿಂದ ಆದೇಶಿಸಲಾಗಿದೆ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...