ಮಾತೃಭಾಷಾ ಶಿಕ್ಷಣ ನಿರ್ಲಕ್ಷ್ಯವೇ ಕನ್ನಡ ಸೊರಗಲು ಕಾರಣ

KannadaprabhaNewsNetwork | Published : Nov 30, 2023 1:15 AM

ಸಾರಾಂಶ

ಸಮಾರಂಭ ಉದ್ಘಾಟಿಸಿದ ಸಾಹಿತಿ, ವಿಮರ್ಶಕ ಡಾ. ರಾಜೇಂದ್ರ ಚೆನ್ನಿ ಮಾತನಾಡಿ, ಎಲ್ಲ ಸಾಹಿತ್ಯದ ಸಂಪ್ರದಾಯಗಳಲ್ಲಿ ಒಬ್ಬ ಶ್ರೇಷ್ಠ ಬರಹಗಾರ ಜನಿಸಿ, ದೇಶ- ಭಾಷೆ ಮತ್ತು ಚರಿತ್ರೆಯನ್ನು ಕಟ್ಟಿಕೊಡಬಲ್ಲ ಸಾಹಿತಿಗಳು ಹುಟ್ಟುವುದು ಅಪರೂಪ. ಅಂಥವರಲ್ಲಿ ಈ ನೆಲದಲ್ಲಿ ಜನಿಸಿರುವ ಜಗದ ಕವಿಯೆಂದೇ ಪ್ರಸಿದ್ಧರಾಗಿರುವ ಕುವೆಂಪು ಒಬ್ಬರು. ಕನ್ನಡ ಸಾಹಿತ್ಯಕ್ಕೆ ವಿಶ್ವದರ್ಜೆಯನ್ನು ತಂದು ಕೊಟ್ಟಿರುವ ಅವರ ಮಲೆಗಳಲ್ಲಿ ಮದುಮಗಳು ವಿಶ್ವದ 5 ಅತ್ಯುತ್ತಮ ಕಾದಂಬರಿಗಳಲ್ಲಿ ಒಂದಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ ಕನ್ನಡ ಭಾಷೆ ಸೊರಗುವುದಕ್ಕೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಶೌಚಾಲಯ ಸೇರಿದಂತೆ ಇರಬೇಕಾದ ಸೌಲಭ್ಯಗಳ ಕೊರತೆ ಮತ್ತು ಶಿಕ್ಷಣ ನೀತಿಯಲ್ಲಿರುವ ಲೋಪಗಳೇ ಮುಖ್ಯ ಕಾರಣವಾಗಿದೆ. ಇದರೊಂದಿಗೆ ಕನ್ನಡ ನೆಲದಲ್ಲಿ ಬದುಕುತ್ತಿರುವ ಬಹುಸಂಖ್ಯಾತರೂ ಸೇರಿದಂತೆ ಅಲ್ಪಸಂಖ್ಯಾತರು ಮಾತೃಭಾಷಾ ಶಿಕ್ಷಣಕ್ಕೆ ಒಲವು ತೋರದಿರುವುದು ಕನ್ನಡ ಮಾಧ್ಯಮದ ಶಿಕ್ಷಣಕ್ಕೆ ಕುತ್ತು ಬಂದಿದೆ ಎಂದು ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ, ಸಾಹಿತಿ ಎಂ. ನವೀನ್‌ಕುಮಾರ್ ಅಭಿಪ್ರಾಯಪಟ್ಟರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಬುಧವಾರ ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದ ಡಾ. ಯು.ಆರ್. ಅನಂತಮೂರ್ತಿ ವೇದಿಕೆಯಲ್ಲಿ ನಡೆದ ಒಂದು ದಿನದ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ದುರಂತಕ್ಕೆ ಆಂಗ್ಲಭಾಷಾ ಮಾಧ್ಯಮದ ಬಗ್ಗೆ ಪೋಷಕರ ಒಲವಿನಿಂದ ಇಂದಿನ ಆಧುನಿಕತೆ ಹಾಗೂ ಪರಭಾಷಾ ವ್ಯಾಮೋಹಕ್ಕೆ ಒಳಗಾಗುತ್ತಿರುವುದು ವಿಷಾದನೀಯ ಸಂಗತಿ ಎಂದರು.

ಕೇವಲ ಇಂಗ್ಲೀಷ್ ಮಾತ್ರ ಅನ್ನ ಕೊಡುವ ಭಾಷೆಯಲ್ಲ ಎಂಬುದನ್ನು ಡಾ. ಸಿ.ಎನ್.ರಾವ್‍ರಂತಹ ವಿಜ್ಞಾನಿಗಳು ಇದನ್ನು ಸಾಧಿಸಿದ್ದಾರೆ. ಕನ್ನಡವನ್ನು ಆಧುನಿಕ ತಂತ್ರಜ್ಞಾನಕ್ಕೆ ಅಳವಡಿಸುವ ಕೆಲಸ ಪರಿಣಾಮಕಾರಿಯಾಗಿ ಆಗಬೇಕಿದೆ. ತಜ್ಞರ ಅಭಿಪ್ರಾಯದಂತೆ ಮಕ್ಕಳು ಮಾನಸಿಕ ವಿಕಾಸವನ್ನು ಪಡೆಯಲು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿಯೇ ಕಲಿಯಬೇಕು ಎಂದರು.

ಮಲೆನಾಡಿನಲ್ಲಿ 50-60ರ ದಶಕದಲ್ಲಿದ್ದ ಕಾಡು ಬರಿದಾಗುತ್ತಿದೆ. ಹೀಗಾಗಿ ಆನೆ, ಹುಲಿ, ಚಿರತೆ ಮುಂತಾದ ಕಾಡುಪ್ರಾಣಿಗಳು ಜನವಸತಿ ಪ್ರದೇಶದ ಕಡೆ ದಾಳಿ ಮಾಡುವಂತಾಗಿದೆ. ಮಳೆ ಪ್ರಮಾಣವೂ ವರ್ಷದಿಂದ ವರ್ಷಕ್ಕೆ ಕುಂಠಿತಗೊಳ್ಳುತ್ತಿದೆ. ಬಗರ್‌ಹುಕುಂ ಕಾಯ್ದೆಯಂತೂ ಅರಣ್ಯ ನಾಶಕ್ಕೆ ಕಾರಣವಾಗಿದೆ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ‘ವೃಕ್ಷ ಕಡಿದವನು ಭಿಕ್ಷೆ ಬೇಡುತ್ತಾನೆ” ಎಂಬ ಗಾದೆಮಾತಿನಂತೆ ಮಲೆನಾಡಿನ ಪರಿಸ್ಥಿತಿಯನ್ನು ಊಹಿಸಲೂ ಅಸಾಧ್ಯ ಎಂದೂ ಆತಂಕ ವ್ಯಕ್ತಪಡಿಸಿದರು.

ಸಮಾರಂಭ ಉದ್ಘಾಟಿಸಿದ ಸಾಹಿತಿ, ವಿಮರ್ಶಕ ಡಾ. ರಾಜೇಂದ್ರ ಚೆನ್ನಿ ಮಾತನಾಡಿ, ಎಲ್ಲ ಸಾಹಿತ್ಯದ ಸಂಪ್ರದಾಯಗಳಲ್ಲಿ ಒಬ್ಬ ಶ್ರೇಷ್ಠ ಬರಹಗಾರ ಜನಿಸಿ, ದೇಶ- ಭಾಷೆ ಮತ್ತು ಚರಿತ್ರೆಯನ್ನು ಕಟ್ಟಿಕೊಡಬಲ್ಲ ಸಾಹಿತಿಗಳು ಹುಟ್ಟುವುದು ಅಪರೂಪ. ಅಂಥವರಲ್ಲಿ ಈ ನೆಲದಲ್ಲಿ ಜನಿಸಿರುವ ಜಗದ ಕವಿಯೆಂದೇ ಪ್ರಸಿದ್ಧರಾಗಿರುವ ಕುವೆಂಪು ಒಬ್ಬರು. ಕನ್ನಡ ಸಾಹಿತ್ಯಕ್ಕೆ ವಿಶ್ವದರ್ಜೆಯನ್ನು ತಂದು ಕೊಟ್ಟಿರುವ ಅವರ ಮಲೆಗಳಲ್ಲಿ ಮದುಮಗಳು ವಿಶ್ವದ 5 ಅತ್ಯುತ್ತಮ ಕಾದಂಬರಿಗಳಲ್ಲಿ ಒಂದಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಸಾಹಿತ್ಯ ಮನುಷ್ಯನ ಹೃದಯಲ್ಲಿರುವ ಕಲ್ಮಶವನ್ನು ಹೊರಹಾಕಿ ಕಲೆ ಸಾಂಸ್ಕೃತಿಕ ಚಿಂತನೆಯ ಜೊತೆಗೆ ಮಾನವೀಯ ಮೌಲ್ಯಗಳನ್ನು ಮೂಡಿಸುವಂತಾಗಬೇಕು. ಆಧುನಿಕತೆಯ ಕಾಲಘಟ್ಟದಲ್ಲಿ ಮನುಷತ್ವ ಮರೆಯಾಗಿ ಹಿಂಸಾಚಾರ ವೈಭವೀಕರಿಸುತ್ತಿದ್ದು, ಇದನ್ನು ಸರಿಪಡಿಸುವ ಕಾರ್ಯ ಸಾಹಿತ್ಯದಿಂದ ಆಗಬೇಕಿದೆ ಎಂದರು.

ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಶರತ್ ಕಲ್ಕೋಡ್ ಕನ್ನಡ ಧ್ವಜವನ್ನು ಸರ್ವಾಧ್ಯಕ್ಷರಾದ ಎಂ. ನವೀನ್ ಕುಮಾರ್‌ ಅವರಿಗೆ ಹಸ್ತಾಂತರಿಸಿದರು. ವೇದಿಕೆಯಲ್ಲಿ ಪಪಂ ಅಧ್ಯಕ್ಷೆ ಗೀತಾ ರಮೇಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಡಿ.ಮಂಜುನಾಥ್, ತಾಲೂಕು ಕಸಾಪ ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಆಡಿನಸರ ಸತೀಶ್, ತಹಸಿಲ್ದಾರ್ ಜಕ್ಕನಗೌಡರ್, ತಾಪಂ ಇಓ ಎಂ. ಶೈಲಾ, ಬಿಇಒ ವೈ. ಗಣೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಟಿ.ಸತೀಶ್, ಶಾಲಾ ಶಿಕ್ಷಕರ ಸಂಘಧ ಅಧ್ಯಕ್ಷ ಮಹಾಬಲೇಶ್ವರ ಹೆಗ್ಡೆ, ಗ್ರಾಪಂ ಒಕ್ಕೂಟ ಅಧ್ಯಕ್ಷ ಅನಿಲ್, ಪತ್ರಕರ್ತರ ಸಂಘದ ಅಧ್ಯಕ್ಷ ಮೋಹನ್, ಕೌಲಾನಿ ಧರ್ಮಯ್ಯ, ಕೆ.ನಾಗರಾಜ ಶೆಟ್ಟಿ ಇದ್ದರು.

ಬಾಳೇಬೈಲುನಲ್ಲಿರುವ ಕನ್ನಡ ಭವನದಿಂದ ಸರ್ವಾಧ್ಯಕ್ಷರಾದ ಎಂ. ನವೀನ್‍ಕುಮಾರ್ ಅವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಸಾಹಿತಿ ಡಾ. ಜೆ.ಕೆ. ರಮೇಶ್ ಅಧ್ಯಕ್ಷತೆಯಲ್ಲಿ ಪ್ರಸಕ್ತ ಕಾಲಘಟ್ಟದ ಆತಂಕಗಳು, ಸಾಹಿತಿ ಉಮಾದೇವಿ ಅಧ್ಯಕ್ಷತೆಯಲ್ಲಿ ಮಳೆಕಾಡು ಸಂಸ್ಕೃತಿ ಮತ್ತು ಡಾ. ಬಿ.ಎಂ. ಜಯಶೀಲ ಅಧ್ಯಕ್ಷತೆಯಲ್ಲಿ ಸಮ್ಮೇಳನಾಧ್ಯಕ್ಷರ ಬದುಕ ಬರಹಗೋಷ್ಠಿ, ಲೇಖಕ ಎನ್.ರವಿಕುಮಾರ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಸಾಹಿತ್ಯ ಸಮ್ಮೇಳನದ ಅಂಗವಾಗಿ ಏರ್ಪಡಿಸಿದ್ದ ಖ್ಯಾತ ಛಾಯಾಗ್ರಾಹಕ ಮಂಡಗದ್ದೆ ನಟರಾಜ್ ಹಾಗೂ ವಿನಾಯಕ ಗುಜ್ಜಾರ್ ಛಾಯಾಚಿತ್ರಗಳು ಗಮನ ಸೆಳೆಯುವಂತಿತ್ತು.

ಸಂಜೆ ನಡೆದ ಸಮಾರೋಪದಲ್ಲಿ ಶಿವಮೊಗ್ಗ ಕಮಲಾ ನೆಹರು ಕಾಲೇಜಿನ ಪ್ರಾಚಾರ್ಯ ಡಾ. ಎಚ್.ಎಸ್. ನಾಗಭೂಷಣ ಸಮಾರೋಪ ಭಾಷಣ ಮಾಡಿದರು. ಸಾಧಕರಿಗೆ ಸನ್ಮಾನ ಮಾಡಲಾಯಿತು. ಶಾಸಕ ಆರಗ ಜ್ಞಾನೇಂದ್ರ, ಮಾಜಿ ಶಾಸಕ ಕಿಮ್ಮನೆ ರತ್ನಾಕರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಮಾಮ್ಕೋಸ್ ಉಪಾಧ್ಯಕ್ಷ ಹುಲ್ಕುಳಿ ಮಹೇಶ್, ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಇದ್ದರು.

- - - -29ಟಿಟಿಎಚ್‌02: ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಶರತ್ ಕಲ್ಕೋಡ್ ಕನ್ನಡ ಧ್ವಜವನ್ನು ಸರ್ವಾಧ್ಯಕ್ಷರಾದ ಎಂ. ನವೀನ್ ಕುಮಾರ್‍ರಿಗೆ ಹಸ್ತಾಂತರಿಸಿದರು.

Share this article