ರಬಣ್ಣಕಲ್ ಕೆರೆಗೆ ನೀರು ತುಂಬುವಲ್ಲಿ ನಿರ್ಲಕ್ಷ್ಯ

KannadaprabhaNewsNetwork | Published : Mar 18, 2024 1:46 AM

ಸಾರಾಂಶ

ಆತಂಕದಲ್ಲಿ ಮಾನ್ವಿ ಜನತೆ, ತುಂಗಭದ್ರಾ ಜಲಾಶಯದಿಂದ ಬಿಟ್ಟಿದ್ದ ನೀರನ್ನು ಕುಡಿಯುವ ಕೆರೆಗಳಿಗೆ ತುಂಬುವಲ್ಲಿ ತಾಲೂಕಾಡಳಿತ ನಿರ್ಲಕ್ಷ್ಯ ವಹಿಸಿದ್ದು, ಇದರಿಂದಾಗಿ ಬರುವ ದಿನಗಳಲ್ಲಿ ನೀರಿನ ಸಮಸ್ಯೆ ಉಂಟಾಗುವ ಆತಂಕ ಜನರಲ್ಲಿ ಎದುರಾಗಿದೆ.

ಕನ್ನಡಪ್ರಭ ವಾರ್ತೆ ಮಾನ್ವಿಚದ ನಿರ್ಲಕ್ಷ್ಯದಿಂದಾಗಿ ಪಟ್ಟಣ ಸಮೀಪದ ರಬಣ್ಣಕಲ್ ಕೆರೆ ತುಂಬಿಸಲು ಸಾಧ್ಯವಾಗಿಲ್ಲ. ಇದರಿಂದಾಗಿ ಬರುವ ದಿನಗಳಲ್ಲಿ ನೀರಿನ ಸಮಸ್ಯೆ ಉಂಟಾಗುವ ಆತಂಕ ಜನರಲ್ಲಿ ಎದುರಾಗಿದೆ.

ಮಳೆ ಕೊರತೆ, ತೀವ್ರ ಬರ ಹಿನ್ನೆಲೆಯಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಕೆರೆಯಲ್ಲಿನ ನೀರು ನೆಲ ಕಂಡಿದ್ದು ನೀರಿನ ಸಂಗ್ರಹ ದಿನೇ ದಿನೇ ಕಡಿಮೆಯಾಗುತ್ತ ಬರುತ್ತಿರುವುದು ಪಟ್ಟಣದ ನಿವಾಸಿಗಳಲ್ಲಿ ಆತಂಕ ಮೂಡಿಸುತ್ತಿದೆ.

27 ವಾರ್ಡ್ಗಳ ವ್ಯಾಪ್ತಿಯ 50 ಸಾವಿರ ಜನಸಂಖ್ಯೆಯ ಪಟ್ಟಣದಲ್ಲಿ ಈಗಾಗಲೇ ಪುರಸಭೆಯಿಂದ 4 ದಿನಗಳಿಗೆ ಒಮ್ಮೆ ನೀರನ್ನು ಬಿಡಲಾಗುತ್ತಿದ್ದು, ಇದೀಗ ಕೆರೆಯಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿರುವುದು ಭವಿಷ್ಯದಲ್ಲಿ ಪರಿಸ್ಥಿತಿಯನ್ನು ಇನ್ನಷ್ಟು ಜಟಿಲಗೊಳಿಸುವ ಲಕ್ಷಣಗಳು ಕಂಡುಬರುತ್ತಿವೆ.

ಇತ್ತೀಚ್ಚಿಗೆ ತುಂಗಭದ್ರಾ ಜಲಾಶಯದಿಂದ ಕುಡಿಯುವ ನೀರಿನ ಕೆರೆಗಳನ್ನು ತುಂಬಿಸುವ ಮೂಲಕ ಬೇಸಿಗೆಯಲ್ಲಿ ನೀರಿನ ಅಭಾವವನ್ನು ನಿವಾರಿಸುವ ನಿಟ್ಟಿನಲ್ಲಿ ಗಣೆಕಲ್ ಜಲಾಶಯ ಹಾಗೂ ತಾಲೂಕಿನ ಕುಡಿಯುವ ನೀರಿನ ಕೆರೆಗಳನ್ನು ತುಂಬಿಸುವುದಕ್ಕಾಗಿಯೇ 3 ದಿನಗಳ ಕಾಲ 1200 ಕ್ಯುಸೆಕ್ ನೀರನ್ನು ಬಿಟ್ಟಿದ್ದರು. ಆದರೂ ಕೂಡ ತಾಲೂಕು ಆಡಳಿತ ಹಾಗೂ ಪುರಸಭೆ ವತಿಯಿಂದ ಕೇವಲ ಕೆರೆಯಲ್ಲಿ ಒಂದು ಅಡಿಯಷ್ಟು ಮಾತ್ರ ನೀರನ್ನು ತುಂಬಿಸಲು ಸಾಧ್ಯವಾಗಿದ್ದು 9 ಮೀಟರ್ ಸಾಮಾರ್ಥ್ಯದ ಕೆರೆಯಲ್ಲಿ ಕೇವಲ 5 ಮೀ.ನಷ್ಟು ಮಾತ್ರ ನೀರು ಸಂಗ್ರಹವಾಗಿದ್ದು ಇನ್ನೂ 4 ಮೀಟರ್ ನೀರಿನ ಸಂಗ್ರಹ ಕೊರತೆ ಇದೆ. ಕೆರೆಯಲ್ಲಿನ ನೀರು ಒಂದು ತಿಂಗಳು ಮಾತ್ರ ಸಾಕಾಗಲಿದೆ. ತಾಲೂಕಿನ ಕಾತರಕಿ ತುಂಗಭದ್ರಾ ನದಿಯಲ್ಲಿನ ಜಾಕ್‌ವೆಲ್ ಮೂಲಕವು ಕೂಡ ಪಟ್ಟಣಕ್ಕೆ ನೀರು ಪೂರೈಸಲಾಗುತ್ತಿದ್ದು, ನದಿಯಲ್ಲಿನ ನೀರು ಕೂಡ ಸಂಪೂರ್ಣವಾಗಿ ಭತ್ತಿರುವುದರಿಂದ ಮುಂದಿನ ದಿನಗಳಲ್ಲಿ ಬೇಸಿಗೆಯಲ್ಲಿ ನೀರಿನ ಕೊರತೆ ಕಾಡಲಿದೆ. ಜನಪ್ರತಿನಿಧಿಗಳು ಹಾಗೂ ಆಡಳಿತ ಯಂತ್ರ ಸಂಪೂರ್ಣವಾಗಿ ಲೋಕಸಭೆ ಚುನಾವಣೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಜನರಿಗೆ ನೀರನ್ನು ನೀಡುವವರು ಯಾರು ಎಂದು ಪ್ರಶ್ನಿಸುವಂತಾಗಿದೆ. ಆದ್ದರಿಂದ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಆಸಕ್ತಿ ವಹಿಸಿ ಕುಡಿಯುವ ನೀರಿನ ಕೆರೆಯನ್ನು ತುಂಬಿಸಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

Share this article