ಕನ್ನಡಪ್ರಭ ವಾರ್ತೆ ಮೈಸೂರು
ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಮೈವಿವಿ ಜೆನೆಟಿಕ್ಸ್ ಮತ್ತು ಜಿನೋಮಿಕ್ಸ್ ಅಧ್ಯಯನ ವಿಭಾಗವು ಸೋಮವಾರ ಏರ್ಪಡಿಸಿದ್ದ ಡಾ. ಸುಕನ್ಯಾ ಸೂನಗಹಳ್ಳಿ ಅವರು ಸಂಪಾದಿಸಿರುವ ಡಾ.ಸಿ.ಎನ್.ಮಂಜುನಾಥ್ ಅವರ ಅಭಿನಂದನಾ ಗ್ರಂಥ ‘ಆಧುನಿಕ ಧನ್ವಂತರಿ’, ಮೈವಿವಿಯ ಜೆನೆಟಿಕ್ಸ್ ಮತ್ತು ಜಿನೋಮಿಕ್ಸ್ ಅಧ್ಯಯನ ವಿಭಾಗದ ಅಧ್ಯಕ್ಷೆ ಡಾ. ಸುತ್ತೂರು ಎಸ್. ಮಾಲಿನಿ ಬರೆದ ಪುರುಷರ ಲೈಂಗಿಕ ಆರೋಗ್ಯ, ಮಹಿಳೆಯ ಲೈಂಗಿಕ ಆರೋಗ್ಯ’ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಸರ್ಕಾರಗಳು ಅಗತ್ಯವಿರುವ ಕಾಲೇಜು, ಆಸ್ಪತ್ರೆಯನ್ನು ನೂರಾರು ಕೋಟಿ ರು. ವೆಚ್ಚ ಮಾಡಿ ನಿರ್ಮಿಸುತ್ತದೆ. ನೋಡಲು ಸುಂದರವಾಗಿರುತ್ತದೆ. ಆದರೆ ಆಸ್ಪತ್ರೆಗಳಲ್ಲಿ ನುರಿತ ತಜ್ಞ ವೈದ್ಯರೇ ಇರುವುದಿಲ್ಲ. ಅಗತ್ಯ ಸಿಬ್ಬಂದಿ ಕೊರತೆ ಇರುತ್ತದೆ. ಕಾಲೇಜುಗಳಲ್ಲಿ ಬೋಧಕರೇ ಇರುವುದಿಲ್ಲ. ಆದ್ದರಿಂದ ಅಭಿವೃದ್ಧಿ ಆಗುತ್ತಿಲ್ಲ. ನಮ್ಮ ಆಡಳಿತ ಯಂತ್ರ ಎಡವುತ್ತಿರುವುದು ಇಲ್ಲೇ ಎಂದರು.ಒಂದು ಕಟ್ಟಡ ನಿರ್ಮಾಣದ ವೇಳೆಯೇ ಅದಕ್ಕೆ ತಕ್ಕನಾದ ಹುದ್ದೆಗಳನ್ನು ಸೃಜಸಿ, ನೇಮಕಾತಿ ಮಾಡಿಕೊಂಡು, ಸಮರ್ಪಕವಾಗಿ ನಿರ್ವಹಿಸುವಂತೆ ಆಗಬೇಕು. ನೇಮಕಾತಿ ವಿಷಯದಲ್ಲಿ ಸಚಿವ ಸಂಪುಟದ ತೀರ್ಮಾನವನ್ನು ಆ ಇಲಾಖೆಯ ಕೇಸ್ ವರ್ಕರ್ ಷರಾ ಬರೆದು ಸರಿಯಲ್ಲ ಎನ್ನುತ್ತಾನೆ. ಇಂತಹ ಸಮಸ್ಯೆಯಿಂದ ನೇಕಮಾತಿ ಆಗುತ್ತಿಲ್ಲ ಎಂದರು.
ಸಚಿವರು, ಜನಪ್ರತಿನಿಧಿಗಳ ಮನೆಯಲ್ಲಿ ಆಡುಗೆ ಮಾಡುವವರು, ಕಾರಿನ ಚಾಲಕರು, ಮಸಾಜ್ ಮಾಡುವವರು ಅಧಿಕಾರಿಗಳನ್ನು ಬದಲಾಯಿಸುವ ಮಟ್ಟಕ್ಕೆ ಬೆಳೆದಿದ್ದಾರೆ. ಸಚಿವರು, ಜನಪ್ರತಿನಿಧಿಗಳು ಕೂಡ ಅವರ ಮಾತು ಕೇಳುತ್ತಾರೆ ಎಂದರೇ ವ್ಯವಸ್ಥೆ ಯಾವ ರೀತಿ ಇದೆ ಎಂಬುದು ತಿಳಿಯುತ್ತದೆ ಎಂದು ಅವರು ಖೇದ ವ್ಯಕ್ತಪಡಿಸಿದರು.
ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರಲ್ಲಿ ಶೇ. 55ರಷ್ಟು ಮಹಿಳಾ ವೈದ್ಯರೇ ಇದ್ದಾರೆ. ಅವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಅವರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ, ಊಟದ ಹಾಲ್, ಸುರಕ್ಷಿತ ಶೌಚಾಲಯ ಇರಬೇಕು. ಕೋಲ್ಕತ್ತಾ ಪರಿಸ್ಥಿತಿ ನೋಡಿದರೆ ಆಸ್ಪತ್ರೆಗೂ ಗನ್ ಮ್ಯಾನ್ನೇಮಿಸಬೇಕಾಗಬಹುದು ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರ ಅನುದಾನವನ್ನು ಹೆಚ್ಚಾಗಿ ನೀಡಬೇಕು. ಪ್ರಸ್ತುತ ನಮ್ಮ ದೇಶದ ಜಿಡಿಪಿಯಲ್ಲಿ ಶೇ.2ರಷ್ಟನ್ನು ಮಾತ್ರ ಆರೋಗ್ಯ ಮತ್ತು ಶಿಕ್ಷಣಕ್ಕೆ ನೀಡಲಾಗುತ್ತಿದೆ. ಶೇ. 5ರಷ್ಟನ್ನು ನೀಡಬೇಕು. ಆಗ ವ್ಯವಸ್ಥೆ ಉತ್ತಮವಾಗುತ್ತದೆ. ಬ್ರಿಟೀಷರ ಕಾಲದ ಕಾಯ್ದೆಯನ್ನು ಕಾಲಕ್ಕೆ ತಕ್ಕಂತೆ ಬದಲಿಸಬೇಕು.