ಡೆಂಘೀ ತಡೆಯುವಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ

KannadaprabhaNewsNetwork | Published : Jul 9, 2024 12:48 AM

ಸಾರಾಂಶ

ಡೆಂಘಿ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಕಿಡಿಕಾರಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಡೆಂಘಿ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಕಿಡಿಕಾರಿದ್ದಾರೆ.

ಸೋಮವಾರ ಓಕಳಿಪುರಂ ಚರ್ಚ್‌ ಬಳಿಯ ಕೊಳಗೇರಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಡೆಂಘೀ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿದ್ದು, ಸರ್ಕಾರವಾಗಲಿ, ಬಿಬಿಎಂಪಿ ಆಗಲಿ ಸೊಳ್ಳೆ ನಿಯಂತ್ರಣಕ್ಕೆ ಗಮನ ನೀಡುತ್ತಿಲ್ಲ. ಎಲ್ಲೆಡೆ ಡೆಂಘೀ ಸೇರಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿದೆ. ಇದನ್ನು ತಡೆಯಲು ಸರ್ಕಾರ ಮತ್ತು ಬಿಬಿಎಂಪಿ ನಿರ್ಲಕ್ಷ್ಯ ವಹಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ಕ್ರಮ ಕೈಗೊಂಡಿಲ್ಲ:

ಡೆಂಘೀ ಪರೀಕ್ಷೆ ನಡೆಸುವ ಸಂಬಂಧ ಸರಿಯಾದ ಪ್ರಯೋಗಾಲಯಗಳನ್ನು ಸ್ಥಾಪಿಸಿಲ್ಲ. ಬಿಬಿಎಂಪಿ ನೀಡಿರುವ ಕರಪತ್ರದಲ್ಲಿ ಎಲ್ಲಿ ಪರೀಕ್ಷೆ ನಡೆಸಬಹುದು ಎಂಬುದರ ಕುರಿತು ಮಾಹಿತಿಯೇ ಇಲ್ಲ. ಎಲ್ಲಿಯೂ ಸರಿಯಾದ ಪರೀಕ್ಷೆಗಳು ನಡೆಯುತ್ತಿಲ್ಲ. ಸಾಂಕ್ರಾಮಿಕ ರೋಗಗಳಿಂದ ಜನರು ಮೃತಪಡುತ್ತಿದ್ದಾರೆ. ಆದರೆ ಮುಖ್ಯಮಂತ್ರಿಗಳು ಸಮರ್ಪಕವಾಗಿ ಸಭೆಗಳನ್ನು ನಡೆಸಿಲ್ಲ. ಕೋವಿಡ್‌ ವೇಳೆ ಬಿಜೆಪಿ ಸರ್ಕಾರ ಎಲ್ಲಾ ರೀತಿಯ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಯಿತು. ಈಗ ಡೆಂಘೀ ಹರಡುವಿಕೆ ತಪ್ಪಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದರು. ಬಿಬಿಎಂಪಿ ಮುಖ್ಯ ಆಯುಕ್ತರಿಗೂ ಡೆಂಘೀ ಬಂದಿದ್ದರೂ ಸರ್ಕಾರ ಗಮನವಹಿಸುತ್ತಿಲ್ಲ. ಸೊಳ್ಳೆ ನಿಯಂತ್ರಣಕ್ಕೆ ಬೇಕಾದ ಔಷಧಿ ಸರಿಯಾಗಿ ಬಳಕೆಯಾಗುತ್ತಿಲ್ಲ. ಜ್ವರ ನಿಯಂತ್ರಣಕ್ಕೆ ಕ್ಲಿನಿಕ್‌ಗಳನ್ನು ಆರಂಭಿಸಿಲ್ಲ. ಜನತೆಗೆ ಮುನ್ನಚ್ಚರಿಕೆ ವಹಿಸುವ ಕ್ರಮಗಳ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ಮೂಡಾ ಸೊಳ್ಳೆ ಕಚ್ಚಿಸಿಕೊಂಡ ಸಿಎಂ: ನಾಲ್ಕು ತಿಂಗಳ ಕಾಲ ಮಳೆಗಾಲದಲ್ಲಿ ಡೆಂಘಿ ಮತ್ತಿತರ ಕಾಯಿಲೆ ಹೆಚ್ಚಾಗಿರುತ್ತದೆ. ಮುಖ್ಯಮಂತ್ರಿಗಳು ಮೂಡಾ ಸೊಳ್ಳೆ ಕಚ್ಚಿಸಿಕೊಂಡಿದ್ದಾರೆ. ವಾಲ್ಮೀಕಿ ನಿಗಮದ ಹಗರಣ ಅವರನ್ನು ಬಾಧಿಸುತ್ತಿದೆ. ಡೆಂಘಿ ಸೊಳ್ಳೆ ಯಾರಿಗೆ ಕಚ್ಚಿದರೆ ನನಗೇನು ಎಂಬ ರೀತಿಯಲ್ಲಿ ಮುಖ್ಯಮಂತ್ರಿಗಳು ವರ್ತಿಸುತ್ತಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸೊಳ್ಳೆ ನಿಯಂತ್ರಣದತ್ತ ಗಮನ ಕೊಡುತ್ತಿಲ್ಲ. ಕಾಂಗ್ರೆಸ್‌ ಸರ್ಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದು ಕಿಡಿಕಾರಿದರು.

Share this article