ಹುಬ್ಬಳ್ಳಿ:
ವ್ಯಾಜ್ಯ ಇತ್ಯರ್ಥಕ್ಕೆ ಪರ್ಯಾಯವಾಗಿ ಸಂಧಾನ ಮಾರ್ಗ ಬಳಸಿದರೆ ಸೌಹಾರ್ದ, ಶಾಂತಿಯುತ ವಾತಾವರಣ ನಿರ್ಮಾಣಕ್ಕೆ ಸಹಕಾರಿಯಾಗಲಿದೆ. ಇದರಿಂದ ಜನರಿಗೆ ಸಮಯ ಹಾಗೂ ಹಣ ಉಳಿತಾಯವಾಗುವ ಮೂಲಕ ಸರಳವಾಗಿ ನ್ಯಾಯ ಸಿಗುತ್ತದೆ ಎಂದು ಮುಂಬೈನ ಸೆಕ್ಯುರಿಟೀಸ್ ಮೇಲ್ಮನವಿ ನ್ಯಾಯ ಮಂಡಳಿ ಅಧ್ಯಕ್ಷ, ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಪಿ.ಎಸ್. ದಿನೇಶಕುಮಾರ ಹೇಳಿದರು.ಅವರು ಇಲ್ಲಿನ ವಿದ್ಯಾನಗರದಲ್ಲಿರುವ ಗುರುಸಿದ್ದಪ್ಪ ಕೋತಂಬ್ರಿ ಕಾನೂನು ಮಹಾವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ರಾಷ್ಟ್ರಮಟ್ಟದ ಎರಡನೇ ಸಂಧಾನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಕಾನೂನು ವಿದ್ಯಾರ್ಥಿಗಳು ಸಂಧಾನದ ಮೂಲಕ ವ್ಯಾಜ್ಯ ಇರ್ಥಪಡಿಸಲು ಬೇಕಾದ ಕೌಶಲ ಬೆಳೆಸಿಕೊಳ್ಳಬೇಕು. ಆಗ ಮಾತ್ರ ವೃತ್ತಿಯಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಈ ಕುರಿತು ಪ್ರತಿಯೊಬ್ಬ ಕಾನೂನು ವಿದ್ಯಾರ್ಥಿ ಅರಿವು ಹೊಂದಿರಬೇಕು ಎಂದ ಅವರು, ಈ ಹಿಂದೆ ದೇಶದಲ್ಲಿ ಪ್ರತಿವರ್ಷ 3 ಕೋಟಿ ಪ್ರಕರಣಗಳು ದಾಖಲಾಗುತ್ತಿದ್ದವು. ಈಗ ಅವು 5 ಕೋಟಿ ತಲುಪಿವೆ. ಇಷ್ಟು ಪ್ರಕರಣಗಳ ವಿಚಾರಣೆ ನಡೆದು ತೀರ್ಪು ಹೊರಬರಬೇಕಾದರೆ ಸಹಜವಾಗಿ ವಿಳಂಬವಾಗುತ್ತದೆ. ಅಲ್ಲದೆ, ನ್ಯಾಯಮೂರ್ತಿಗಳ ಮೇಲೆ ಒತ್ತಡ ಉಂಟಾಗುತ್ತದೆ ಎಂದರು.ಸಹ ಪ್ರಾಧ್ಯಾಪಕ ಬಾಬುಗೌಡ ಪಾಟೀಲ ಮಾತನಾಡಿ, ಹೆಚ್ಚು ಆಸಕ್ತಿ, ಶ್ರದ್ಧೆಯಿಂದ ಸಂಧಾನ ಪ್ರಕ್ರಿಯೆ ನಡೆಸಿದರೆ ಉತ್ತಮ ಫಲಿತಾಂಶ ಬರುತ್ತದೆ. ಈ ವಿಷಯದಲ್ಲಿ ಭಾವನಾತ್ಮಕ ಅಂಶಗಳಿಗಿಂತ ವಾಸ್ತವ ಸಂಗತಿಗಳ ಮೇಲೆ ಹೆಚ್ಚು ಗಮನ ಹರಿಸಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ. ಜೆ.ಎಂ. ಮಲ್ಲಿಕಾರ್ಜುನಯ್ಯ ಮಾತನಾಡಿ, ಸಮಾಜದಲ್ಲಿ ವ್ಯಾಜ್ಯಗಳನ್ನು ಸಂಪೂರ್ಣವಾಗಿ ಕಡಿಮೆ ಮಾಡಲು ಸಾಧ್ಯವಿಲ್ಲ. ವಕೀಲರು ಸಮಾಜದ ಎಂಜಿನಿಯರ್ ಇದ್ದ೦ತೆ. ವಿದ್ಯಾರ್ಥಿಗಳು ವಕೀಲಿ ವೃತ್ತಿಗೆ ಹೋದಾಗ ಮಾನವೀಯತೆ ಮರೆಯಬಾರದು ಎ೦ದರು.ಧಾರವಾಡ ಹೈಕೋರ್ಟ್ ಪೀಠದ ವಕೀಲ ಗಂಗಾಧರ ಹೊಸಕೇರಿ ಮಾತನಾಡಿದರು. ಪ್ರಾ೦ಶುಪಾಲರಾದ ಜ್ಜಾನೇಶ್ವರ ಚೌರಿ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಶಾರದಾ ಜಿ. ಪಾಟೀಲ ವ೦ದಿಸಿದರು. ಶನಿವಾರ ಮತ್ತು ಭಾನುವಾರ ನಡೆಯುವ ಈ ಸ್ಪರ್ಧೆಯಲ್ಲಿ ಮಹಾರಾಷ್ಟ್ರ, ಗೋವಾ ಸೇರಿದಂತೆ ರಾಜ್ಯದ ಬೆಂಗಳೂರು, ಉಡುಪಿ, ವಿಜಯಪುರ, ಮೈಸೂರು, ಬೆಳಗಾವಿ, ಕಾನೂನು ಕಾಲೇಜುಗಳ 24 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿವೆ. ಭಾನುವಾರ ಸಮಾರೋಪ, ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ.