ಡಿಎಚ್‌ಒ ಹೇಳಿಕೆ, ಸಂಕಲ್ಪ ಯೋಜನೆ ಉದ್ಘಾಟನೆ, ಸಂವಾದ
ಕನ್ನಡಪ್ರಭ ವಾರ್ತೆ ಕೊಪ್ಪಳಜನರಲ್ಲಿ ತಿಳಿವಳಿಕೆ ಕೊರತೆಯಿಂದ ನವಜಾತ ಶಿಶುಗಳ ಮರಣ ಪ್ರಮಾಣ ಎರಡಂಕಿ ಇದ್ದು, ಅವರಿಗೆ ನಿರಂತರವಾಗಿ ಆರೋಗ್ಯ ಶಿಕ್ಷಣ ನೀಡುವಲ್ಲಿ ಇಲಾಖೆ ಮತ್ತು ಸಂಘ-ಸಂಸ್ಥೆಗಳ ಪಾತ್ರ ಪ್ರಮುಖವಾಗಿದೆ ಎಂದು ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ. ಲಿಂಗರಾಜ ಹೇಳಿದ್ದಾರೆ.
ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್ ದೆಹಲಿ, ಬೆಂಗಳೂರಿನ ಸೇಂಟ್ ಜಾನ್ಸ್ ರೀಸರ್ಚ್ ಇನ್‌ಸ್ಟಿಟ್ಯೂಟ್ ಹಾಗೂ ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಗರದ ನೌಕರರ ಭವನದಲ್ಲಿ ನಡೆದ ಎಂಎನ್‌ಸಿಎಚ್ ಸಂಕಲ್ಪ ಯೋಜನೆ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭಾರತದ ೧೦ ಜಿಲ್ಲೆಗಳಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣವನ್ನು ಒಂದಂಕಿಗೆ ತರುವ ನಿಟ್ಟಿನಲ್ಲಿ ಸಂಕಲ್ಪ ಯೋಜನೆ ಪ್ರಾರಂಭವಾಗಿದ್ದು, ಇದರಲ್ಲಿ ಕೊಪ್ಪಳ ಜಿಲ್ಲೆಯೂ ಒಂದಾಗಿದೆ. ಪ್ರತಿಯೊಂದು ಗರ್ಭಿಣಿಗೆ ಅತ್ಯುತ್ತಮವಾದ ತಾಯ್ತನ ದೊರಕಬೇಕು. ಮಗು ಜನಿಸಿದಾಗ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿರಬೇಕು. ಸಮುದಾಯದಲ್ಲಿ ಸುಗಮ ಸೇವೆ ನೀಡಲು ಆಶಾ ಕಾರ್ಯಕರ್ತೆಯರ ಪಾತ್ರ ಮುಖ್ಯವಾಗಿದೆ. ೧.೮ ತೂಕ ಇರುವ ನವಜಾತ ಶಿಶುವಿಗೆ ಹೆರಿಗೆಯಾದ ಆಸ್ಪತ್ರೆಯಲ್ಲಿಯೇ ಆರೈಕೆ ಸೇವೆ ನೀಡಲು ಸಾಧ್ಯವಿದೆ. ವಿಶೇಷ ಆರೈಕೆ ಸೇವೆ, ಕಾಂಗರೂ ಮದರ್ ಕೇರ್ ಹಾಗೂ ಆರೋಗ್ಯ ಶಿಕ್ಷಣದಿಂದ ಮಗು ಬೇಗನೇ ಚೇತರಿಕೆ ಕಾಣಲು ಸಾಧ್ಯವಿದೆ ಎಂದರು.ಆರ್‌ಸಿಎಚ್ ಅಧಿಕಾರಿ ಡಾ. ಪ್ರಕಾಶ ಮಾತನಾಡಿ, ಕಳೆದ ವರ್ಷ ಜಿಲ್ಲೆಯಲ್ಲಿ ೪೭೪ ನವಜಾತ ಶಿಶುಗಳು ಮರಣ ಹೊಂದಿದ್ದು, ಎಲ್ಲರೂ ಸೇರಿ ಕಾರ್ಯನಿರ್ವಹಿಸಿ ಶಿಶು ಮರಣ ಪ್ರಮಾಣವನ್ನು ತಗ್ಗಿಸಬೇಕಾಗಿದೆ ಎಂದರು.
ಸೇಂಟ್ ಜಾನ್ಸ್ ರೀಸರ್ಚ್ ಇನ್‌ಸ್ಟಿಟ್ಯೂಟ್‌ನ ಡಾ. ಸುಮನ್ ಮಾತನಾಡಿದರು. ಕೆಎಚ್‌ಪಿಟಿ ಜಿಲ್ಲಾ ವ್ಯವಸ್ಥಾಪಕ ಮಂಜುನಾಥ ದೊಡ್ಡವಾಡ ಹಾಗೂ ಕೆಎಚ್‌ಪಿಟಿ ಮತ್ತು ಸೇಂಟ್ ಜಾನ್ಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಸಿಬ್ಬಂದಿ ಭಾಗವಹಿಸಿದ್ದರು.