ನರವೈಜ್ಞಾನಿಕ ಅಸ್ವಸ್ಥತೆಗೆ ಸಹಾನುಭೂತಿ ಅಗತ್ಯ: ಪಲ್ಲವಿ ಅಡಿಗ

KannadaprabhaNewsNetwork | Published : Feb 18, 2024 1:34 AM

ಸಾರಾಂಶ

ನರವೈಜ್ಞಾನಿಕ ಅಸ್ವಸ್ಥತೆಗಳ ಪ್ರಕರಣಗಳನ್ನು ಸಮಂಜಸವಾಗಿ ಪರಿಶೀಲಿಸಿ, ವ್ಯಕ್ತಿಯ ನಡವಳಿಕೆಗಳಲ್ಲಿನ ಬದಲಾವಣೆಯನ್ನು ಗುರುತಿಸಿ, ಪುನರ್ವಸತಿ ತಂಡದೊಂದಿಗೆ ಸರಿಯಾದ ಸಮಾಲೋಚನೆಗೆ ಶಿಫಾರಸು ಮಾಡಬೇಕು ಎಂದು ವಿಜಯಪುರದ ರಾಜಪಾಲ್‌ ಆರೋಗ್ಯಕೇಂದ್ರದ ಮನಃಶಾಸ್ತ್ರಜ್ಞೆ ಪಲ್ಲವಿ ಅಡಿಗ ಹೇಳಿದರು.

ಕನ್ನಡಪ್ರಭ ವಾರ್ತೆ ತುಮಕೂರು

ನರವೈಜ್ಞಾನಿಕ ಅಸ್ವಸ್ಥತೆಗಳ ಪ್ರಕರಣಗಳನ್ನು ಸಮಂಜಸವಾಗಿ ಪರಿಶೀಲಿಸಿ, ವ್ಯಕ್ತಿಯ ನಡವಳಿಕೆಗಳಲ್ಲಿನ ಬದಲಾವಣೆಯನ್ನು ಗುರುತಿಸಿ, ಪುನರ್ವಸತಿ ತಂಡದೊಂದಿಗೆ ಸರಿಯಾದ ಸಮಾಲೋಚನೆಗೆ ಶಿಫಾರಸು ಮಾಡಬೇಕು ಎಂದು ವಿಜಯಪುರದ ರಾಜಪಾಲ್‌ ಆರೋಗ್ಯಕೇಂದ್ರದ ಮನಃಶಾಸ್ತ್ರಜ್ಞೆ ಪಲ್ಲವಿ ಅಡಿಗ ಹೇಳಿದರು.

ತುಮಕೂರು ವಿವಿ ಸ್ನಾತಕೋತ್ತರ ಮನೋವಿಜ್ಞಾನ ಅಧ್ಯಯನ ಮತ್ತು ಸಂಶೋಧನ ವಿಭಾಗವು ಶನಿವಾರ ಆಯೋಜಿಸಿದ್ದ ‘ನರವೈಜ್ಞಾನಿಕ ಅಸ್ವಸ್ಥತೆಗಳು - ಮಕ್ಕಳ ಮತ್ತು ಹಿರಿಯ ನಾಗರಿಕರ ಪ್ರಕರಣಗಳು’ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.

ನರವೈಜ್ಞಾನಿಕ ಅಸ್ವಸ್ಥತೆಗೆ ಒಳಗಾಗಿರುವ ರೋಗಿಯ ಮೇಲೆ ಅನುಕಂಪದ ಬದಲು ಸಹಾನುಭೂತಿ ಇರಬೇಕು. ವೈಯಕ್ತಿಕ ಸಂಪರ್ಕವಿಟ್ಟುಕೊಂಡು ಅಸ್ವಸ್ಥತೆಯನ್ನು ವಿಶ್ಲೇಷಿಸಬಾರದು. ವೃತ್ತಿಪರರಾಗಿ ಯಾವುದೇ ಮನೋರೋಗವನ್ನು ಕಾಣುವುದು ಸೂಕ್ತ. ವ್ಯಕ್ತಿಯ ನಡವಳಿಕೆಯಿಂದ, ಸಮಾಲೋಚನೆಯಿಂದ ಪ್ರಾಥಮಿಕವಾಗಿ ಅಸ್ವಸ್ಥತೆಯ ಲಕ್ಷಣಗಳನ್ನು ಗುರುತಿಸಬಹುದು. ರಕ್ತ ಪರೀಕ್ಷೆ, ಎಂಆರ್‌ಐ ಸ್ಕ್ಯಾನಿಂಗ್ ಮುಖೇನ ನರವೈಜ್ಞಾನಿಕ ಅಸ್ವಸ್ಥತೆಯನ್ನು ದೃಢೀಕರಿಸಬಹುದು ಎಂದರು.

ಪುನರ್ವಸತಿ ಕೇಂದ್ರ ಮನೋರೋಗಿಯನ್ನು ಗುಣಪಡಿಸುವ ಹಂತವಾಗಿ ಕಾರ್ಯನಿರ್ವಹಿಸುತ್ತದೆ. ನರವೈಜ್ಞಾನಿಕ ಅಸ್ವಸ್ಥತೆಗೆ ಫಿಸಿಯೋಥೆರಪಿಯೊಂದಿಗೆ ಆಪ್ತ ಸಮಾಲೋಚನೆಯ ಅಗತ್ಯ ಹೆಚ್ಚಿದೆ. ನರ ವೈಜ್ಞಾನಿಕ ಅಸ್ವಸ್ಥತೆಯು ಮುಖ್ಯವಾಗಿ ಮೆದುಳಿಗೆ ಸಂಬಂಧಿಸಿದ್ದರಿಂದ ಅರಿವು, ಭಾವನೆ, ಪ್ರಜ್ಞೆಯ ಮೇಲೆ ಆಗುವ ಸೂಕ್ಷ್ಮ ಪರಿಣಾಮಗಳನ್ನು ಮನಃಶಾಸ್ತ್ರಜ್ಞರು ಸಮಾಲೋಚಿಸಿ, ದೈನಂದಿನ ಜೀವನವನ್ನು ಮರಳಿ ಪಡೆಯಲು ಸಹಾಯ ಮಾಡಬೇಕು ಎಂದು ತಿಳಿಸಿದರು.

ನರವೈಜ್ಞಾನಿಕ ಅಸ್ವಸ್ಥತೆಗೆ ಒಳಗಾಗುವ ಮಕ್ಕಳು ಮತ್ತು ಹಿರಿಯ ನಾಗರಿಕರಲ್ಲಿ ಕಂಡುಬರುವ ನಡವಳಿಕೆಯ ವ್ಯತ್ಯಾಸಗಳನ್ನು, ಅಗತ್ಯವಿರುವ ಆಪ್ತಸಮಾಲೋಚನೆಯ ದಾಟಿಯನ್ನು, ನೀಡಬೇಕಾದ ಔಷಧಿಯ ಪ್ರಮಾಣವನ್ನು ವಿಶ್ಲೇಷಿಸಿ ನೀಡಬೇಕು ಎಂದರು.

ವಿವಿ ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು ಮಾತನಾಡಿ, ಕಲಿಕೆಯ ಯುಗದಲ್ಲಿ ನಾವಿದ್ದೇವೆ. ಸಂಶೋಧನಾಧಾರಿತ ಕಲಿಕೆಯಿಂದ ವಿಷಯದ ಆಳ, ಪ್ರಾಮುಖ್ಯತೆಯನ್ನು ಸಮಾಜಕ್ಕೆ ಪರಿಣಾಮಕಾರಿಯಾಗಿ ತಿಳಿಸಬಹುದು. ಒತ್ತಡದ ಯುಗದಲ್ಲಿ ಸೇವಿಸುವ ಗಾಳಿ, ಓದುವ ಪುಸಕ್ತ ಪತ್ರಿಕೆಗಳಲ್ಲಿನ ವಿಷಯಗಳು, ಚರ್ಚಿಸುವ ವಿಷಯ, ಮೊಬೈಲ್ ಬಳಕೆ, ಕುಟುಂಬದೊಂದಿಗಿನ ಸಂಬಂಧ, ಆಪ್ತರೊಂದಿಗಿನ ಒಡನಾಟ, ಈ ಎಲ್ಲವೂ ಮೆದುಳಿನ ಮೇಲೆ ಪರಿಣಾಮ ಬೀರುತ್ತವೆ. ಸಕಾರಾತ್ಮಕ ಅಂಶಗಳನ್ನು ತೆಗೆದುಕೊಂಡಾಗ ಯಾವುದೇ ಅಸ್ವಸ್ಥತೆಗೆ ಒಳಗಾಗುವುದಿಲ್ಲ ಎಂದರು.

ವಿಜಯಪುರದ ರಾಜಪಾಲ್‌ ಆರೋಗ್ಯ ಕೇಂದ್ರದ ನಿರ್ದೇಶಕ ಸಿ.ಎಚ್. ರಾಜೇಶ್, ವಿವಿ ಸ್ನಾತಕೋತ್ತರ ಮನೋವಿಜ್ಞಾನ ಅಧ್ಯಯನ ಮತ್ತು ಸಂಶೋಧನ ವಿಭಾಗದ ಸಂಯೋಜಕ ಪ್ರೊ.ಕೆ.ಜಿ. ಪರಶುರಾಮ, ಉಪನ್ಯಾಸಕರಾದ ಬಿ.ಎನ್. ಅಂಕ್ಲೇಶ್, ಯು. ಕಾವ್ಯಾ, ವಿ. ಗಾಯತ್ರಿ, ಪಿ.ಎಲ್. ವಿನಾಯಕ್ ಉಪಸ್ಥಿತರಿದ್ದರು.

Share this article