ಬಿಬಿಎಂಪಿ ತಂದಿರುವ ಹೊಸ ಜಾಹೀರಾತು ನೀತಿ ವಂಚಕರಿಗೆ ಅನುಕೂಲ ಅಷ್ಟೇ: ಎನ್ನಾರ್‌ ರಮೇಶ್‌

KannadaprabhaNewsNetwork |  
Published : Aug 04, 2024, 01:19 AM ISTUpdated : Aug 04, 2024, 11:00 AM IST
District President NR Ramesh

ಸಾರಾಂಶ

ಬಿಬಿಎಂಪಿ ತಂದಿರುವ ಹೊಸ ಜಾಹೀರಾತು ನೀತಿಯಿಂದ ಕೇವಲ ಏಜೆನ್ಸಿಗಳಿಗೆ ಅನುಕೂಲ ಆಗುತ್ತದೆ ಅಷ್ಟೇ. ಬಿಬಿಎಂಪಿಗೆ ಲಾಭ ಆಗುವುದಿಲ್ಲ ಎಂದು ಬಿಜೆಪಿ ಮುಖಂಡ ಎನ್‌.ಆರ್.ರಮೇಶ್‌ ಹೇಳಿದ್ದಾರೆ.

  ಬೆಂಗಳೂರು :  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಯಾವುದೇ ಆದಾಯವೂ ಇಲ್ಲದ ಮತ್ತು ವಂಚಕ ಜಾಹೀರಾತು ಏಜೆನ್ಸಿಗಳಿಗೆ ಅನುಕೂಲವಾಗುವ ಹೊಸ ಜಾಹೀರಾತು ನೀತಿಯನ್ನು ತಕ್ಷಣ ಸರ್ಕಾರ ಕೈಬಿಡಬೇಕು ಎಂದು ಬಿಜೆಪಿ ನಾಯಕ ಎನ್‌.ಆರ್‌.ರಮೇಶ್‌ ಆಗ್ರಹಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಪಾಲಿಕೆ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರಿಗೆ ಪತ್ರ ಬರೆದಿದ್ದಾರೆ. ನೂತನ ಜಾಹೀರಾತಿನಿಂದ ಪ್ರಭಾವಶಾಲೀ ರಾಜಕಾರಣಿಗಳು, ಅಧಿಕಾರಿಗಳಿಗೆ ಹತ್ತಾರು ಕೋಟಿ ರು. ಅಕ್ರಮ ಸಂಪಾದನೆಗೆ ದಾರಿ ಮಾಡಿಕೊಡುವ ದುರುದ್ದೇಶವಾಗಿದೆ ಎಂದು ಆರೋಪಿಸಿದ್ದಾರೆ.

ಬೆಂಗಳೂರು ನಗರದ ಮುಖ್ಯ ರಸ್ತೆಗಳಲ್ಲಿ ಮತ್ತು ವಾಣಿಜ್ಯ ಸ್ಥಳಗಳಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸಲು ಅನುಮತಿ ನೀಡುವ ನಿರ್ಣಯವನ್ನು ಕೈಗೊಳ್ಳುವ ಅಧಿಕಾರವನ್ನುಪಾಲಿಕೆ ನೀಡಲಾಗಿದೆ. ಈ ನೀತಿಯಿಂದ ಪಾಲಿಕೆಗೆ ನಿರೀಕ್ಷಿಸಿದಷ್ಟು ಆದಾಯ ಬರುವುದಿಲ್ಲ. ರಸ್ತೆ ಬದಿಯಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸುವುದರಿಂದ ಪ್ರತೀ ನಿತ್ಯ ಹತ್ತಾರು ಅಪಘಾತಗಳು ಸಂಭವಿಸುವ ಅವಕಾಶಗಳೇ ಅಧಿಕವಾಗಿರುತ್ತದೆ. ಈ ಬಗ್ಗೆ ಬೆಂಗಳೂರು ಸಂಚಾರಿ ಪೋಲೀಸರ ಅಭಿಪ್ರಾಯವನ್ನೂ ಸಹ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಕಡೆಗಣಿಸಿದೆ ಎಂದು ದೂರಿದ್ದಾರೆ.

ಜಾಹೀರಾತು ಏಜೆನ್ಸಿಗಳ ವಂಚಕರಿಂದ ಪಾಲಿಕೆಗೆ ಸಂದಾಯವಾಗಬೇಕಿರುವ ಒಟ್ಟು 646 ಕೋಟಿ ರು. ನಷ್ಟು ಬೃಹತ್ ಮೊತ್ತದ ಜಾಹೀರಾತು ಶುಲ್ಕವನ್ನು ವಸೂಲಿ ಮಾಡುವ ಕಾರ್ಯಕ್ಕೆ ಮುಂದಾಗಬೇಕು. ಅದರ ಬದಲು ನೂರಾರು ವಂಚಕ ಜಾಹೀರಾತು ಏಜೆನ್ಸಿಗಳಿಂದ ನೂರಾರು ಕೋಟಿ ರು. ಅನ್ನು ಕಿಕ್‌ಬ್ಯಾಕ್‌ ರೂಪದಲ್ಲಿ ಪಡೆದು, ನ್ಯಾಯಾಲಯಗಳ ಆದೇಶಗಳನ್ನು, ಹಿಂದಿನ ಸರ್ಕಾರಿ ಆದೇಶಗಳನ್ನು ಮತ್ತು ಪಾಲಿಕೆಯ ಸರ್ವಾನುಮತದ ನಿರ್ಣಯಗಳನ್ನು ಕಡೆಗಣಿಸಲಾಗುತ್ತಿದೆ. ಅಲ್ಲದೇ, ಉದ್ಯಾನನಗರಿಯ ಅಂದವನ್ನು ಹಾಳುಗೆಡಹುವ ಮತ್ತು ಪ್ರತೀ ನಿತ್ಯ ಹತ್ತಾರು ಅಪಘಾತಗಳಿಗೆ ಕಾರಣವಾಗುವ ನಿರ್ಣಯವನ್ನು ಕೈಗೊಂಡಿರುವುದು ಅತ್ಯಂತ ಸ್ಪಷ್ಟವಾಗಿರುತ್ತದೆ ಎಂದು ಆರೋಪಿಸಿದ್ದಾರೆ.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ