- ರಾಜ್ಯ ಸರ್ಕಾರದ ಆದೇಶ ರದ್ದುಗೊಳಿಸಿದ ಹೈಕೋರ್ಟ್
- ಈ ಹಿಂದೆ ನಾಲ್ವರ ನೇಮಕ ರದ್ದು ಮಾಡಿ ಹೊಸ ನೇಮಕ ಮಾಡಿದ್ದ ಸರ್ಕಾರ- ಇದನ್ನು ಪ್ರಶ್ನಿಸಿದ್ದ ರಾಮಚಂದ್ರಾಪುರ ಮಠ, ಶ್ರೀಗಳು, ವೇ।ಮೂ। ಹಿರೇಗಂಗೆಕನ್ನಡಪ್ರಭ ವಾರ್ತೆ ಬೆಂಗಳೂರು
ಗೋಕರ್ಣದ ಶ್ರೀಮಹಾಬಲೇಶ್ವರ ದೇವಸ್ಥಾನದ ಆಡಳಿತ ನಿರ್ವಹಣೆಗೆ ರಚಿಸಲಾಗಿದ್ದ ಮೇಲ್ವಿಚಾರಣಾ ಸಮಿತಿಯ ನಾಲ್ವರು ಸದಸ್ಯರ (ಇಬ್ಬರು ಉಪಾಧಿವಂತರು ಮತ್ತು ಇಬ್ಬರು ವಿದ್ವಾಂಸರು) ನಾಮ ನಿರ್ದೇಶನ ರದ್ದುಪಡಿಸಿ, ಅವರ ಜಾಗಕ್ಕೆ ಹೊಸ ಸದಸ್ಯರ ನಾಮ ನಿರ್ದೇಶಿಸಿದ್ದ ರಾಜ್ಯ ಸರ್ಕಾರ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಶ್ರೀ ರಾಮಚಂದ್ರಾಪುರ ಮಠ, ಮಠದ ಪೀಠಾಧಿಪತಿ ರಾಘವೇಶ್ವರ ಭಾರತಿ ಸ್ವಾಮೀಜಿ ಮತ್ತು ಸದಸ್ಯ ಸ್ಥಾನ ಕಳೆದುಕೊಂಡಿದ್ದ ವೇದಮೂರ್ತಿ ದತ್ತಾತ್ರೇಯ ನಾರಾಯಣ ಭಟ್ಟ ಹಿರೇಗಂಗೆ ಹಾಗೂ ಇತರ ಮೂವರು ಸಲ್ಲಿಸಿದ್ದ ಪ್ರತ್ಯೇಕ ತಕರಾರು ಅರ್ಜಿಗಳನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ಮೊರೆ ಹೋಗಿ ಸೂಕ್ತ ಆದೇಶ ಪಡೆಯಲು ಈ ತೀರ್ಪು ರಾಜ್ಯ ಸರ್ಕಾರಕ್ಕೆ ಯಾವುದೇ ರೀತಿ ಅಡ್ಡಿ ಬರುವುದಿಲ್ಲ ಎಂದು ನ್ಯಾಯಪೀಠ ಇದೇ ವೇಳೆ ಸ್ಪಷ್ಟ ಪಡಿಸಿದೆ.ರಾಮಚಂದ್ರಪುರದ ಮಠದ ಅಧೀನದ ಗೋಕರ್ಣದ ಮಹಾಬಲೇಶ್ವರ ದೇವಾಲಯವನ್ನು ರಾಜ್ಯ ಮುಜರಾಯಿ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯಿ ದತ್ತಿ ಕಾಯ್ದೆ ವ್ಯಾಪ್ತಿಗೆ ತರುವ ಸಂಬಂಧ ರಾಜ್ಯ ಸರ್ಕಾರ 2003ರ ಏ.30ರಂದು ಅಧಿಸೂಚನೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಗೋಕರ್ಣ ಮಹಾಬಲೇಶ್ವರ ದೇವಾಲಯವನ್ನು ಕಾಯ್ದೆ ವ್ಯಾಪ್ತಿಯಿಂದ ಹೊರಗಿಡಲು ರಾಮಚಂದ್ರಾಪುರ ಮಠ ಕೋರಿತ್ತು. 2008ರಲ್ಲಿ ಕೆಲ ದೇವಾಲಯಗಳನ್ನು ಮುಜರಾಯಿ ಇಲಾಖೆಯಿಂದ ಹೊರಗಿಟ್ಟು ಸರ್ಕಾರ ಆದೇಶಿಸಿತ್ತು. ಮಹಾಬಲೇಶ್ವರ ದೇವಾಲಯವನ್ನು ಮಠದ ಅಧೀನಕ್ಕೆ ನೀಡಲಾಗಿತ್ತು. ಅದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.============
ಸರ್ಕಾರ ಸುಪ್ರೀಂ ಅನುಮತಿ ಪಡೆದಿರಲಿಲ್ಲ:ದೇವಾಲಯದ ಮೇಲ್ವಿಚಾರಣಾ ಸಮಿತಿಯ ಸದಸ್ಯರನ್ನು ನಾಮ ನಿರ್ದೇಶನ ಮಾಡಲು ಸರ್ಕಾರಕ್ಕೆ ಅಧಿಕಾರವಿದೆ. ಆದರೆ, ಸುಪ್ರೀಂ ಕೋರ್ಟ್ ಆದೇಶದಂತೆ ಮೇಲ್ವಿಚಾರಣಾ ಸಮಿತಿ ರಚಿಸಲಾಗಿದೆ. ಸಮಿತಿ ರಚನೆ ಪ್ರಕ್ರಿಯೆ ತನ್ನ ಮುಂದಿನ ಆದೇಶಕ್ಕೆ ಬದ್ಧವಾಗಿರುತ್ತದೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಹಾಗಾಗಿ ಸಮಿತಿಯ ಸದಸ್ಯರ ಬದಲಾವಣೆ ಮಾಡುವ ಮುನ್ನ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿ ಅನುಮತಿ ಪಡೆಯಬೇಕಾಗಿತ್ತು. ಆದರೆ, ಈ ಪ್ರಕ್ರಿಯೆ ಪಾಲಿಸದೆ ರಾಜ್ಯ ಸರ್ಕಾರ ನಾಲ್ವರು ಸದಸ್ಯರ ನಾಮ ನಿರ್ದೇಶನನ ರದ್ದುಪಡಿಸಿ, ಅವರ ಜಾಗಕ್ಕೆ ಹೊಸಬರನ್ನು ನಿಯೋಜಿಸಿರುವುದು ಸರಿಯಲ್ಲ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.ಸರ್ಕಾರಗಳು ಬಂದು-ಹೋಗಬಹುದು, ಸಾಂವಿಧಾನಿಕ ನ್ಯಾಯಾಲಯಗಳು ಎಲ್ಲ ಸಮಯದಲ್ಲಿಯೂ ಕಾರ್ಯನಿರ್ವಹಿಸುತ್ತವೆ. ಸರ್ಕಾರ ಬದಲಾವಣೆಯಾಗಿದೆ ಎಂಬ ಕಾರಣದಿಂದ ಸುಪ್ರೀಂ ಕೋರ್ಟ್‌ನ ಆದೇಶ ಉಲ್ಲಂಘಿಸುವ ಪ್ರಯತ್ನ ಮಾಡಲಾಗಿದೆ. ಅಲ್ಲದೆ, ಹಿಂದಿನ ಸರ್ಕಾರ ಮಾಡಿದ ನಾಮ ನಿರ್ದೇಶನವನ್ನು ಒಂದು ಆದೇಶದ ಮೂಲಕ ಸಂಪೂರ್ಣವಾಗಿ ರದ್ದುಪಡಿಸುವ ಅಧಿಕಾರ ಹೊಸ ಸರ್ಕಾರಕ್ಕೆ ಇರುವುದಿಲ್ಲ. ಆದರೆ, ಹಿಂದಿನ ಸರ್ಕಾರ ಮಾಡಿರುವ ನಿರ್ಧಾರಗಳು ಕಾನೂನಿಗೆ ವಿರುದ್ಧವಾಗಿವೆ ಎಂಬುದು ತಿಳಿದು ಬಂದಲ್ಲಿ ಮಾತ್ರ ಬದಲಾವಣೆ ಮಾಡಬಹುದು ಎಂದು ಪೀಠ ಆದೇಶದಲ್ಲಿ ತಿಳಿಸಿದೆ.ಪ್ರಕರಣದ ವಿವರ:ರಾಮಚಂದ್ರಪುರದ ಮಠದ ಅಧೀನದ ಗೋಕರ್ಣದ ಮಹಾಬಲೇಶ್ವರ ದೇವಾಲಯವನ್ನು ರಾಜ್ಯ ಮುಜರಾಯಿ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯಿ ದತ್ತಿ ಕಾಯ್ದೆ ವ್ಯಾಪ್ತಿಗೆ ತರುವ ಸಂಬಂಧ ರಾಜ್ಯ ಸರ್ಕಾರ 2003ರ ಏ.30ರಂದು ಅಧಿಸೂಚನೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಗೋಕರ್ಣ ಮಹಾಬಲೇಶ್ವರ ದೇವಾಲಯವನ್ನು ಕಾಯ್ದೆ ವ್ಯಾಪ್ತಿಯಿಂದ ಹೊರಗಿಡಲು ರಾಮಚಂದ್ರಾಪುರ ಮಠ ಕೋರಿತ್ತು. 2008ರಲ್ಲಿ ಕೆಲ ದೇವಾಲಯಗಳನ್ನು ಮುಜರಾಯಿ ಇಲಾಖೆಯಿಂದ ಹೊರಗಿಟ್ಟು ಸರ್ಕಾರ ಆದೇಶಿಸಿತ್ತು. ಮಹಾಬಲೇಶ್ವರ ದೇವಾಲಯವನ್ನು ಮಠದ ಅಧೀನಕ್ಕೆ ನೀಡಲಾಗಿತ್ತು. ಅದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್ ವಿಭಾಗೀಯ ಪೀಠ, ಮುಜರಾಯಿ ಇಲಾಖೆಯಿಂದ ಕೆಲ ದೇವಾಲಯವನ್ನು ಹೊರಗಿಟ್ಟ ಆದೇಶವನ್ನು ರದ್ದುಪಡಿಸಿತ್ತು. ಮಹಾಬಲೇಶ್ವರ ದೇವಾಲಯದ ಆಡಳಿತ ನಿರ್ವಹಣೆಗೆ ಮೇಲ್ವಿಚಾರಣಾ ಸಮಿತಿ ರಚಿಸಿ 2018ರ ಆ.10ರಂದು ಆದೇಶಿಸಿತ್ತು. ಈ ಆದೇಶಕ್ಕೆ ತಡೆ ನೀಡಲು ವಿಭಾಗೀಯ ಪೀಠ ನಿರಾಕರಿಸಿದ್ದರಿಂದ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಹೈಕೋರ್ಟ್ ಮಧ್ಯಂತರ ಆದೇಶವನ್ನು ಸುಪ್ರಿಂ ಕೋರ್ಟ್ ಮುಂದುವರಿಸಿತ್ತು. 2021ರ ಏ.19ರಂದು ಸಣ್ಣ ಬದಲಾವಣೆಯೊಂದಿಗೆ ಮೇಲ್ವಿಚಾರಣಾ ಸಮಿತಿ ಕಾರ್ಯ ನಿರ್ವಹಣೆಗೆ ಅನುಮತಿ ನೀಡಿತಲ್ಲದೇ ಅದು ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ತಿಳಿಸಿತ್ತು.ಅದರಂತೆ ರಾಜ್ಯ ಸರ್ಕಾರ 2021ರ ಮೇ 4ರಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಎನ್. ಕೃಷ್ಣ ಅವರ ಅಧ್ಯಕ್ಷತೆಯಲ್ಲಿ 8 ಮಂದಿಯ ಸದಸ್ಯರ ಮೇಲ್ವಿಚಾರಣಾ ಸಮಿತಿ ರಚಿಸಿತ್ತು. ಉಪಾಧಿವಂತರಾದ ದತ್ತಾತ್ರೇಯ ನಾರಾಯಣ ಭಟ್ಟ ಹಿರೇಗಂಗೆ, ಮಹಾಬಲ ಉಪಾಧ್ಯ, ವಿದ್ವಾಂಸರಾದ ಮುರಳೀಧರ ಪ್ರಭು, ಪರಮೇಶ್ವರ ಸುಬ್ರಹ್ಮಣ್ಯ ಅವರನ್ನು ಸಮಿತಿಗೆ ಸದಸ್ಯರಾಗಿ ನಾಮ ನಿರ್ದೇಶಿಸಲಾಗಿತ್ತು. ಆದರೆ, ಈ ನಾಲ್ವರ ನಾಮನಿದೇಶನವನ್ನು ರದ್ದುಪಡಿಸಿ 2023ರ ಮೇ 22ರಂದು ಸರ್ಕಾರ ಆದೇಶಿಸಿತ್ತು. ಜೊತೆಗೆ, ಸಮಿತಿ ಸದಸ್ಯರಾಗಿ ಉಪಾಧಿವಂತರಾದ ಗಣಪತಿ ಶಿವರಾಮ ಹಿರೇಭಟ್ಟ, ಸುಬ್ರಹ್ಮಣ್ಯ ಚಂದ್ರಶೇಖರ್, ವಿದ್ವಾಂಸರಾದ ಪರಮೇಶ್ವರ ಸುಬ್ರಮಣ್ಯ ಮತ್ತು ಮಹೇಶ್ ಗಣೇಶ್ ಹಿರೇಗಂಗೆ ಅವರನ್ನು ನಾಮನಿರ್ದೇಶಿಸಿ 2023ರ ಜು.12ರಂದು ಸರ್ಕಾರ ತಿದ್ದುಪಡಿ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಲಾಗಿತ್ತು.