ಗುರುಮಠಕಲ್-ಹುಬ್ಬಳ್ಳಿಗೆ ನೂತನ ಬಸ್ ಸಂಚಾರಕ್ಕೆ ಚಾಲನೆ

KannadaprabhaNewsNetwork | Published : Mar 17, 2024 1:45 AM

ಸಾರಾಂಶ

ಗುರುಮಠಕಲ್ ಪಟ್ಟಣದಿಂದ ಹುಬ್ಬಳ್ಳಿ ನಗರಕ್ಕೆ ವಿಜಯಪುರ ಮಾರ್ಗವಾಗಿ ನೂತನ ಬಸ್ ಸಂಚಾರಕ್ಕೆ ಶಾಸಕ ಶರಣಗೌಡ ಕಂದಕೂರು ಅವರು ಹಸಿರು ನಿಶಾನೆ ತೋರಿಸಿದರು.

ಕನ್ನಡಪ್ರಭ ವಾರ್ತೆ ಗುರುಮಠಕಲ್

ತಾಲೂಕಿನ ಗುರುಮಠಕಲ್ ಕೆಕೆಆರ್ಟಿಸಿ ಬಸ್ ಘಟಕದಿಂದ ಪಟ್ಟಣದಿಂದ ಹುಬ್ಬಳ್ಳಿ ನಗರಕ್ಕೆ ವಿಜಯಪುರ ಮಾರ್ಗವಾಗಿ ನೂತನ ಬಸ್ ಸಂಚಾರಕ್ಕೆ ಶಾಸಕ ಶರಣಗೌಡ ಕಂದಕೂರ ಹಸಿರು ನಿಶಾನೆ ತೋರಿಸಿದರು.

ಪಟ್ಟಣದ ಬಸ್ ನಿಲ್ದಾಣದಿಂದ ಹುಬ್ಬಳ್ಳಿ ನಗರಕ್ಕೆ ತೆರಳುವ ಬಸ್‌ಗೆ ಪೂಜೆ ಸಲ್ಲಿಸಿ, ಹಸಿರು ಧ್ವಜ ತೋರಿದ ನಂತರ ಶಾಸಕ ಶರಣಗೌಡ ಕಂದಕೂರು, ಬಸ್ ಮಾರ್ಗದ ಚಾಲನೆ ನೀಡಿ ಮಾತನಾಡಿದರು. ಈ ಭಾಗದಿಂದ ವಿದ್ಯಾರ್ಥಿಗಳು ಉನ್ನತ ವ್ಯಾಸಂಗದ ಕೋಚಿಂಗ್ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ತೆರಳಲು ಅನುಕೂಲವಾಗಲಿದೆ. ಇದರ ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದರು.

ಘಟಕ ವ್ಯವಸ್ಥಾಪಕ ಪ್ರವೀಣ ಯರಗೇರಾ ಮಾತನಾಡಿ, ಗುರುಮಠಕಲ್‌ದಿಂದ ನಿತ್ಯ 8.45ಕ್ಕೆ ಹೊರಟು ಗುರುಮಠಕಲ್-ಹುಬ್ಬಳ್ಳಿ ಬಸ್ ಪಟ್ಟಣದಿಂದ ಹೊರಟು ಯಾದಗಿರಿ ನಗರ, ಶಹಾಪುರ ನಗರ, ಮುಧೋಳ, ರಾಮದುರ್ಗಾ, ಸವದತ್ತಿ, ಧಾರವಾಡದ ಮಾರ್ಗವಾಗಿ ಹುಬ್ಬಳ್ಳಿ ತಲುಪಲಿದೆ. ಹುಬ್ಬಳ್ಳಿಯಿಂದ ಮರುದಿನ ಬೆಳಿಗ್ಗೆ 6ಕ್ಕೆ ಹೊರಟು ಸಂಜೆ 5:30ಕ್ಕೆ ಹಿಂದಿರುಗಲಿದೆ ಎಂದುರು. ಇದರಿಂದ ನಮ್ಮ ಭಾಗದ ಜನತೆಗೆ ಅನುಕೂಲವಾಗಲಿದೆ ಎಂದು ಬಸ್ ಘಟಕದ ಅಧಿಕಾರಿಗಳು ಹೇಳಿದರು.

ಪುರಸಭೆ ಮುಖ್ಯಾಧಿಕಾರಿ ಸಾಯಿಬಣ್ಣ ಪೂಜಾರಿ, ಪುರಸಭೆ ಮಾಜಿ ಅಧ್ಯಕ್ಷ ಪಾಪಣ್ಣ ಮನ್ನೆ, ಮುಖಂಡರಾದ ಜಿ. ತಮ್ಮಣ್ಣ, ಕಿಷ್ಟರೆಡ್ಡಿ ಪೊಲೀಸ್ ಪಾಟೀಲ್, ಶರಣು ಆವಂಟಿ, ಬಸಣ್ಣ ದೇವರಳ್ಳಿ, ಸಿರಾಜ್ ಚಿಂತಕುಂಟಿ, ರಘುನಾಥ ರೆಡ್ಡಿ ಗವಿನೋಳ, ಅಂಬದಾಸ್ ಜಿತ್ರೆ, ಸಂಚಾರ ನಿರೀಕ್ಷಕ ಶರಣಪ್ಪ ಹೂಗಾರ, ಸಹಾಯಕ ಸಂಚಾರ ನಿರೀಕ್ಷಕ ಚಂದ್ರಾರೆಡ್ಡಿ, ರಮೇಶ್ ಹೂಗಾರ ಸೇರಿದಂತೆ ಸಾರಿಗೆ ಸಂಸ್ಥೆಯ ಸಿಬ್ಬಂದಿ ಮುಖಂಡರು ಇತರರಿದ್ದರು.

ಕಳೆದ 15 ದಿನಗಳಿಂದ ಮತಕ್ಷೇತ್ರದಲ್ಲಿ ಬಿಡುವಿಲ್ಲದೆ ಸಂಚಾರಿಸುತ್ತ ಒಟ್ಟು ₹131 ಕೋಟಿ ಕ್ಕಿಂತ ಹೆಚ್ಚಿನ ಅನುದಾನ ತಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇನೆ. ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿ ಜನರ ಋಣವನ್ನು ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ.

ಶರಣಗೌಡ ಕಂದಕೂರು, ಶಾಸಕ, ಗುರುಮಠಕಲ್.

Share this article