ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ
ಹೋಬಳಿ ಕೇಂದ್ರದಲ್ಲಿರುವ ಪುರವರ್ಗ ಹಿರೇಮಠದ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಅಸ್ತಿತ್ವಕ್ಕೆ ಬಂದಿರುವ ನೂತನ ಪುರ ವರ್ಗ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಮಾಜಮುಖಿ ಕೆಲಸಗಳಿಗೆ ನೆರವಾಗಲು ತಮ್ಮ 1 ತಿಂಗಳ ವೇತನವನ್ನು ನೀಡುವುದಾಗಿ ಶಾಸಕ ಸಿ ಎನ್ ಬಾಲಕೃಷ್ಣ ಘೋಷಿಸಿದರು.ಗ್ರಾಮದ ಪೇಟೆ ಬೀದಿ ವೀರಶೈವ ಭವನ ಮುಂಭಾಗ ನಡೆದ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿಯವರ 50ನೇ ವರ್ಷದ ಜನ್ಮ ವರ್ಧಂತಿ ಮಹೋತ್ಸವ ಮತ್ತು ನೂತನ ನುಗ್ಗೇಹಳ್ಳಿ ಪುರ ವರ್ಗ ಹಿರೇಮಠ ಚಾರಿಟಬಲ್ ಟ್ರಸ್ಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನೂತನ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮುಂಬರುವ ದಿನಗಳಲ್ಲಿ ಶಿಕ್ಷಣ ಆರೋಗ್ಯ ಕೃಷಿ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಹೆಚ್ಚಿನ ನೆರವು ನೀಡಲಿ ಪೂಜ್ಯ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನೂತನ ಟ್ರಸ್ಟ್ ಅಸ್ತಿತ್ವಕ್ಕೆ ಬಂದಿದೆ ಶ್ರೀಗಳು ಯಾವುದೇ ಜಾತಿ ಧರ್ಮ ಭೇದವಿಲ್ಲದೆ ಎಲ್ಲರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದಾರೆ. ಅವರ ಸೇವೆ ಅನನ್ಯ ನುಗ್ಗೇಹಳ್ಳಿ ಏತ ನೀರಾವರಿ ಯೋಜನೆ ಬೇಗ ಪೂರ್ಣಗೊಳಿಸಿ ಕೆರೆಗಳಿಗೆ ನೀರು ಕೊಡಿ ಎಂದು ಶ್ರೀಗಳು ಒತ್ತಾಯಿಸುತ್ತಿದ್ದರು ಅವರ ಮಾತಿನಂತೆ ಯೋಜನೆ ಪೂರ್ಣಗೊಳಿಸಿ ಕಳೆದ 3 ವರ್ಷಗಳಿಂದ ಈ ಭಾಗದ ಕೆರೆಗಳಿಗೆ ಹರಿಸಲಾಗುತ್ತಿದೆ. ಕಳೆದ ವರ್ಷ ಬರಗಾಲದಿಂದ ಹೇಮಾವತಿ ಡ್ಯಾಮ್ ಸಂಪೂರ್ಣ ತುಂಬದೇ ಇರುವುದರಿಂದ ನುಗ್ಗೇಹಳ್ಳಿ ಕೆರೆಗೆ ನೀರು ಹರಿಸಲಾಗಲಿಲ್ಲ. ಈ ವರ್ಷ ಡ್ಯಾಮ್‌ನಿಂದ ನಾಳೆಗಳಿಗೆ ನೀರು ಹರಿಸಿದ ಪ್ರಾರಂಭದಲ್ಲೇ ಕೆರೆಗೆ ನೀರು ಹರಿಸಲಾಗುತ್ತದೆ ಎಂದರು.ಶ್ರೀ ಮಠದ ಭಕ್ತರು ಶ್ರೀಗಳ 50 ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸುತ್ತಿರುವುದು ಹೆಚ್ಚು ಸಂತಸ ತರಿಸಿದೆ ಎಂದರು. ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಮಠದ ಭಕ್ತರ ಹಲವು ವರ್ಷಗಳ ಒತ್ತಾಯದಂತೆ ನೂತನ ಚಾರಿಟೇಬಲ್ ಟ್ರಸ್ಟ್ ಅಸ್ತಿತ್ವಕ್ಕೆ ತರಲಾಗಿದ್ದು ಎಲ್ಲರೂ ಹೆಚ್ಚಿನ ಸಹಕಾರ ನೀಡಿದರೆ ಸಮಾಜಮುಖಿ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡಬಹುದು. ನೂತನ ಟ್ರಸ್ಟ್ ವತಿಯಿಂದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ನೋಟ್‌ಬುಕ್ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸಾಂಕೇತಿಕವಾಗಿ ಕಾರ್ಯಕ್ರಮದಲ್ಲಿ ಮಕ್ಕಳಿಗೆ ನೋಟ್‌ಬುಕ್ ವಿಚಾರಿಸಲಾಗಿದೆ ಮುಂಬರುವ ದಿನಗಳಲ್ಲಿ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಡಾ. ಮಹೇಶ್ವರ ಶ್ರೀಗಳ 50ನೇ ವರ್ಷದ ಹುಟ್ಟುಹಬ್ಬ ಅಂಗವಾಗಿ ಮಕ್ಕಳಿಗೆ ಅಕ್ಷರಭ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ತಗಡೂರು ಶಿವಾನಂದ್ ಮಾತನಾಡಿದರು. ವಿದುಷಿ ಭರತನಾಟ್ಯ ಕಲಾವಿದೆ ಸ್ವಾತಿ ಪಿ ಭಾರದ್ವಾಜ್ ಅವರ ನಾಟ್ಯಶಾಲೆಯ ಮಕ್ಕಳು ಭರತನಾಟ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅಂಬಲ ದೇವರ ಮಠದ ಶ್ರೀಗಳು ವಹಿಸಿದ್ದರು.ಕಾರ್ಯಕ್ರಮದಲ್ಲಿ ಪಿಎಸ್ಐ ನವೀನ್ ಕುಮಾರ್, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ವಿಜಯಲಕ್ಷ್ಮಿ ಜಗದೀಶ್, ನೂತನ ಟ್ರಸ್ಟ್ ಗೌರವಾಧ್ಯಕ್ಷ ಪ್ರಸನ್ನ ಕುಮಾರ್, ಹೋಬಳಿ ವೀರಶೈವ ಸಮಾಜದ ಉಪಾಧ್ಯಕ್ಷ ಕೃಪಾ ಶಂಕರ್, ಮುಖಂಡರಾದ ದೊರೆಸ್ವಾಮಿ, ತೋಟಿ ನಾಗರಾಜ್, ಪುಟ್ಟಸ್ವಾಮಿ, ಪಟೇಲ್ ಕುಮಾರ್, ಎನ್ಎಸ್ ಮಂಜುನಾಥ್, ಚಂದ್ರು, ಪುರ ಶಿವಶಂಕರ್, ಬಸವರಾಜ್, ಎನ್ ಆರ್ ರುದ್ರಸ್ವಾಮಿ, ಉಮೇಶ್, ಎನ್‌ಕೆ ಪ್ರಭುಸ್ವಾಮಿ, ಎಂ ಎಸ್ ಸುರೇಶ್, ತೋಟಿ ಮಂಜು, ಪ್ರಸನ್ನ ಕೇಶವಾಚಾರ್, ಸೇರಿದಂತೆ ನೂತನ ಚಾರಿಟೇಬಲ್ ಟ್ರಸ್ಟ್ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.