ಬೆಸ್ಕಾಂ ಸಾಲು-ಸಾಲು ತಾಂತ್ರಿಕ ಸಮಸ್ಯೆಗಳಿಂದ ಕಳೆದ 15 ದಿನಗಳಿಂದ ನೂತನ ವಿದ್ಯುತ್ ಸಂಪರ್ಕ, ಮೀಟರ್ ಬದಲಾವಣೆ, ವಿದ್ಯುತ್ ಕಂಬ ಹಾಗೂ ಟ್ರಾನ್ಸ್‌ಫಾರ್ಮರ್ ಬದಲಾವಣೆ ಸೇರಿದಂತೆ ಎಲ್ಲಾ ರೀತಿಯ ಕೆಲಸಗಳಿಗೆ ಅನುಮೋದನೆ ಸ್ಥಗಿತಗೊಂಡಿದೆ.
ಶ್ರೀಕಾಂತ್ ಎನ್.ಗೌಡಸಂದ್ರ
ಬೆಂಗಳೂರು : ಬೆಸ್ಕಾಂ ಸಂಸ್ಥೆಯು ಯಾವುದೇ ಪೂರ್ವ ಸಿದ್ಧತೆಯಿಲ್ಲದೆ ತನ್ನ ನಿರ್ವಹಣಾ ತಂತ್ರಾಂಶವನ್ನು ವ್ಯಾಮ್ಸ್‌ನಿಂದ ಇಎಎಂ ವ್ಯವಸ್ಥೆಗೆ ಬದಲಿಸಿದೆ. ಪರಿಣಾಮ ಉಂಟಾಗಿರುವ ಸಾಲು-ಸಾಲು ತಾಂತ್ರಿಕ ಸಮಸ್ಯೆಗಳಿಂದ ಕಳೆದ 15 ದಿನಗಳಿಂದ ನೂತನ ವಿದ್ಯುತ್ ಸಂಪರ್ಕ, ಮೀಟರ್ ಬದಲಾವಣೆ, ವಿದ್ಯುತ್ ಕಂಬ ಹಾಗೂ ಟ್ರಾನ್ಸ್‌ಫಾರ್ಮರ್ ಬದಲಾವಣೆ ಸೇರಿದಂತೆ ಎಲ್ಲಾ ರೀತಿಯ ಕೆಲಸಗಳಿಗೆ ಅನುಮೋದನೆ ಸ್ಥಗಿತಗೊಂಡಿದೆ.
-ಹೊಸ ಸಂಪರ್ಕ ಪಡೆದವರಿಗೆ ಗ್ರಾಹಕರ ಸಂಖ್ಯೆ ಹಾಗೂ ಆರ್.ಆರ್. ಸಂಖ್ಯೆ ಸೃಜಿಸಲೂ ಸಹ ಆಗುತ್ತಿಲ್ಲ. ಇದರಿಂದ ನೂತನವಾಗಿ ಸಂಪರ್ಕ ಪಡೆದವರಿಗೆ ಮೀಟರ್ ಅಳವಡಿಕೆ ಮಾಡಿದ್ದರೂ ಬಿಲ್ಲಿಂಗ್ ಮಾಡಲಾಗದ ಸ್ಥಿತಿ ಎದುರಾಗಿದೆ.
ಬೆಸ್ಕಾಂ ಸಂಸ್ಥೆಯು ತನ್ನ ಎಲ್ಲಾ ರೀತಿಯ ಆನ್‌ಲೈನ್ ಕಾರ್ಯನಿರ್ವಹಣೆಗೆ ವರ್ಕ್ ಅಸೆಸ್ ಮ್ಯಾನೇಜ್‌ಮೆಂಟ್ ಸಿಸ್ಟಂ (ವ್ಯಾಮ್ಸ್) ಅಡಿ ಕೆಲಸ ಮಾಡುತ್ತಿತ್ತು. ಹದಿನೈದು ದಿನಗಳ ಬಳಿಕ ಏಕಾಏಕಿ ಎಂಟರ್‌ಪ್ರೈಸ್ ಅಸೆಟ್ ಮ್ಯಾನೇಜ್‌ಮೆಂಟ್ (ಐಎಎಂ) ಎಂಬ ಹೊಸ ತಂತ್ರಾಂಶಕ್ಕೆ ಬದಲಿಸಿದೆ.
ಈ ಹೊಸ ತಂತ್ರಾಂಶದಡಿ ಸಾರ್ವಜನಿಕರು, ಅನುಮತಿ ಪಡೆದ ಗುತ್ತಿಗೆದಾರರು ಯಾವುದೇ ಕೆಲಸಕ್ಕೆ ಅರ್ಜಿ ಸಲ್ಲಿಸಿದರೂ ಸಹಾಯಕ ಎಂಜಿನಿಯರ್‌ಗಳು ಹಾಗೂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ಅನುಮೋದನೆ ನೀಡಲು ಆಗುತ್ತಿಲ್ಲ.
ಮಳೆಯಿಂದಾಗಿ ಬಿದ್ದಿರುವ ವಿದ್ಯುತ್ ಕಂಬ ಸರಿಪಡಿಸಲು, ವಿದ್ಯುತ್ ಕಂಬ್ ಸ್ಥಳಾಂತರಿಸಲು ಸಹ ಅನುಮೋದನೆ ದೊರೆಯದೆ ಒದ್ದಾಡುತ್ತಿದ್ದೇವೆ ಎಂದು ಸಾರ್ವಜನಿಕರು ಬೆಸ್ಕಾಂ ಎಂಜಿನಿಯರ್‌ಗಳ ಮೇಲೆ ಮುಗಿ ಬಿದ್ದಿದ್ದಾರೆ. ಪ್ರತಿ ಬೆಸ್ಕಾಂ ಉಪ ವಿಭಾಗದಲ್ಲೂ ಇಂತಹ ಕನಿಷ್ಠ 150 ಅರ್ಜಿಗಳು ಬಾಕಿ ಉಳಿದಿವೆ. ನಿತ್ಯವೂ ಸಾರ್ವಜನಿಕರು ಬೆಸ್ಕಾಂ ಉಪ ವಿಭಾಗದ ಕಚೇರಿ ಅಲೆಯುವಂತಾಗಿದೆ ಎಂದು ಬೆಸ್ಕಾಂ ಎಂಜಿನಿಯರ್‌ಗಳು ದೂರಿದ್ದಾರೆ.
ಏನೇನು ಸಮಸ್ಯೆಗಳು ಸೃಷ್ಟಿಯಾಗಿವೆ?ಬೆಸ್ಕಾಂ ವ್ಯಾಪ್ತಿಯಲ್ಲಿ ನೂತನ ಸಂಪರ್ಕ ಪಡೆಯಲು ಬೆಸ್ಕಾಂ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಈ ವೇಳೆ ಐಡಿ ಒಂದು ಕ್ರಿಯೇಟ್ ಆಗುತ್ತದೆ. ಹೊಸ ತಂತ್ರಾಂಶದಲ್ಲಿ ಮೊದಲ ಐಡಿ ಕ್ರಿಯೇಟ್ ಆಗಿದ ನಂತರ ಐಡಿ ಕ್ರಿಯೇಟ್ ಆಗುತ್ತಿಲ್ಲ. ಹೀಗಾಗಿ ಆರ್.ಆರ್. ಸಂಖ್ಯೆ ಸೃಜಿಸಲು ಆಗುತ್ತಿಲ್ಲ. ಆರ್.ಆರ್.ಸಂಖ್ಯೆ ಇಲ್ಲದ ಕಾರಣ ಮಾಸಿಕ ವಿದ್ಯುತ್ ಬಳಕೆ ಶುಲ್ಕದ ಬಿಲ್ ಕೂಡ ವಿತರಿಸಲಾಗುತ್ತಿಲ್ಲ.
ಇನ್ನು ವಿದ್ಯುತ್ ಕಂಬ ಬದಲಾವಣೆ, ವಿದ್ಯುತ್ ಪರಿವರ್ತಕ ಬದಲಾವಣೆ, ಸಾಮಾನ್ಯ ಕೇಬಲ್‌ನಿಂದ ಯುಜಿ ಕೇಬಲ್, ಎಬಿಸಿ ಕೇಬಲ್‌ಗೆ ಬದಲಾವಣೆ ಸೇರಿದಂತೆ ಯಾವುದೇ ಕೆಲಸ ಆಗುತ್ತಿಲ್ಲ.
ಎಂವಿಆರ್ (ಮೀಟ್ ನಾಟ್ ರೆಕಾರ್ಡಿಂಗ್) ಸಮಸ್ಯೆ ಇದ್ದಾಗ ಹೊಸ ಮೀಟರ್ ಅಳವಡಿಕೆ ಮಾಡಬೇಕು. ಆದರೆ, ಹೊಸ ಮೀಟರ್ ಅಳವಡಿಕೆಗೂ ಅಪ್ರೂವಲ್ ಸಿಗುತ್ತಿಲ್ಲ.
ಮಂಜೂರಾತಿ ಲೋಡ್‌ಗಿಂತ ಹೆಚ್ಚುವರಿ ಲೋಡ್ ಪಡೆಯಲು ಅರ್ಜಿ ಸಲ್ಲಿಸಿದವರು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಅನುಮೋದನೆ ನೀಡಬೇಕು. ಆದರೆ ಅರ್ಜಿಯು ಕಾರ್ಯನಿರ್ವಾಹಕ ಎಂಜಿನಿಯರ್‌ಗೆ (ಇಇ) ಬಳಿ ಹೋಗುತ್ತಿದೆ. ಹೀಗಾಗಿ ಪರಿಶೀಲನೆ ಮಾಡಲಾಗದೆ ಹೆಚ್ಚುವರಿ ಲೋಡ್ ಮಂಜೂರು ಮಾಡಲಾಗುತ್ತಿಲ್ಲ.
ಮೀಟರ್ ನೋಂದಣಿಗೆ ‘ಎರರ್ ಅಕರ್ ವೈಲ್ ಸೇವಿಂಗ್ ಡಾಟಾ’ ಎಂದು ಬರುತ್ತಿದೆ. ಸ್ಥಳ ಪರಿಶೀಲನೆ ಆಯ್ಕೆಗೆ ವಿಧಾನಸಭೆ ಅಥವಾ ಲೋಕಸಭೆ ಕ್ಷೇತ್ರದ ಹೆಸರು ಕ್ಲಿಕ್ ಮಾಡಬೇಕು. ಆದರೆ ತಂತ್ರಾಂಶದಲ್ಲಿ ಕ್ಷೇತ್ರಗಳ ಹೆಸರುಗಳೇ ಇಲ್ಲ ಎಂದು ಎಂಜಿನಿಯರ್‌ಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
15 ದಿನಗಳಿಂದ ಬಹುತೇಕ ಸ್ಥಬ್ಧ
ಜತೆಗೆ ಬೆಸ್ಕಾಂ ಜತೆ ಎಂಪ್ಯಾನಲ್ ಆಗಿರುವ ಅನುಮತಿ ಪಡೆದ ಗುತ್ತಿಗೆದಾರರು ಬಹುಮಹಡಿ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಕಟ್ಟಡಗಳ ವಿಸ್ತೀರ್ಣ ಮತ್ತಿತರ ಮಾಹಿತಿ ನಮೂದು ಆಗುತ್ತಿಲ್ಲ. ದರಪಟ್ಟಿ (ಆರ್‌ಸಿ) ಅಡಿ ನಡೆಸಬೇಕಿದ್ದ ಸಹಜ ನಿರ್ವಹಣಾ ಕೆಲಸಗಳಿಗೂ ಅನುಮೋದನೆ ದೊರೆಯುತ್ತಿಲ್ಲ. ತಂತ್ರಾಂಶದಲ್ಲಿ ಕಾರ್ಮಿಕರ ವೆಚ್ಚ ತೋರಿಸುತ್ತಿಲ್ಲ, ಸಲಕರಣೆ ವೆಚ್ಚ ಶೂನ್ಯ ಎಂದು ತೋರಿಸುತ್ತಿದೆ ಹೀಗಾಗಿ ಅಂದಾಜು ವೆಚ್ಚ ಸಿದ್ಧಪಡಿಸಲಾಗುತ್ತಿಲ್ಲ.
ಹೀಗಾಗಿ ಬೆಸ್ಕಾಂ ಕೆಲಸಗಳು ಕಳೆದು ಹದಿನೈದು ದಿನದಿಂದ ಭಾಗಶಃ ಸ್ಥಬ್ಧವಾಗಿವೆ. ವಿದ್ಯುತ್ ಶುಲ್ಕ ಪಾವತಿ ವ್ಯವಸ್ಥೆ ಹೊರತುಪಡಿಸಿ ಉಳಿದ ಆನ್‌ಲೈನ್ ಸೇವೆಗಳಲ್ಲಿ ಬಹುತೇಕ ಸಮಸ್ಯೆ ಉಂಟಾಗಿದೆ ಎಂದು ಬೆಸ್ಕಾಂ ಎಂಜಿನಿಯರ್‌ಗಳು ದೂರಿದ್ದಾರೆ. ಜತೆಗೆ ಈ ಬಗ್ಗೆ ಬೆಸ್ಕಾಂ ತಾಂತ್ರಿಕ ನಿರ್ದೇಶಕರಿಗೂ ಮನವಿ ಪತ್ರ ಸಲ್ಲಿಸಿದ್ದಾರೆ.
ಬೆಸ್ಕಾಂ ನಿರ್ಲಕ್ಷ್ಯದಿಂದ ಸಮಸ್ಯೆ
ಇಡೀ ವ್ಯವಸ್ಥೆ ಮೇಲೆ ಪರಿಣಾಮ ಬೀರುವ ಯಾವುದೇ ಹೊಸ ವ್ಯವಸ್ಥೆ ತರುವಾಗ ಮೊದಲಿಗೆ ಒಂದು ಉಪ ವಿಭಾಗದಲ್ಲಿ ಪ್ರಾಯೋಗಿಕ ಯೋಜನೆ (ಪೈಲಟ್) ಯೋಜನೆ ಮಾಡಲಾಗುತ್ತದೆ. ಆದರೆ ಬೆಸ್ಕಾಂ ವ್ಯಾಪ್ತಿಯಲ್ಲಿ ವ್ಯಾಮ್ಸ್ ಬದಲು ಇಎಎಂನ್ನು ಎಂಜಿನಿಯರ್‌ಗಳಿಗೆ ಒಂದು ದಿನ ಡೆಮೋ ನೀಡಿ ಬದಲಿಸಲಾಯಿತು. ಬಳಿಕ ಕಾರ್ಯನಿರ್ವಹಣೆ ಶುರುವಾದಂತೆ ಒಂದೊಂದೇ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ಇದೀಗ ಎಂಜಿನಿಯರ್‌ಗಳು ಕಾರ್ಯನಿರ್ವಹಿಸಲಾಗದ ಸ್ಥಿತಿಗೆ ತಲುಪಿದೆ. ಇದು 15 ದಿನವಾದರೂ ಬಗೆಹರಿದಿಲ್ಲ.
ವ್ಯಾಮ್ಸ್ ಸಂಬಂಧಿಸಿದಂತೆ ಸಮಸ್ಯೆ ಉಂಟಾಗಿದೆ. ಇದನ್ನು ಬಗೆಹರಿಸಲು ನಮ್ಮ ಐಟಿ ವಿಭಾಗ ತೀವ್ರ ಪ್ರಯತ್ನ ಮಾಡುತ್ತಿದೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ. ಸಾರ್ವಜನಿಕರು ಸಹಕರಿಸಬೇಕು.
-ಎಚ್.ಜೆ.ರಮೇಶ್, ತಾಂತ್ರಿಕ ನಿರ್ದೇಶಕ, ಬೆಸ್ಕಾಂ.