108 ಆಂಬುಲೆನ್ಸ್‌ ಮೇಲ್ದರ್ಜೆಗೇರಿಸಲು ಹೊಸ ಟೆಂಡರ್‌: ದಿನೇಶ್‌ ಗುಂಡೂರಾವ್‌

KannadaprabhaNewsNetwork |  
Published : Jul 07, 2024, 01:28 AM ISTUpdated : Jul 07, 2024, 12:21 PM IST
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್  | Kannada Prabha

ಸಾರಾಂಶ

ಅತ್ಯಾಧುನಿಕ ಸೌಲಭ್ಯಗಳೊಂದಿಗೆ ೧೦೮ ತುರ್ತು ವಾಹನಗಳನ್ನು ಮೇಲ್ದರ್ಜೆಗೇರಿಸಲು ಹೊಸ ಟೆಂಡರ್ ಕರೆಯಲಾಗುವುದು ಎಂದು ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

  ಉಪ್ಪಿನಂಗಡಿ : ಅನಾರೋಗ್ಯಪೀಡಿತರಿಗೆ ತ್ವರಿತ ಚಿಕಿತ್ಸೆ ಸಿಗುವಂತಾಗಲು ಸರ್ಕಾರ ಉಚಿತ ಸೇವೆಗಾಗಿ ನೀಡಿರುವ ೧೦೮ ಆಂಬುಲೆನ್ಸ್‌ನಲ್ಲಿ ಹಲವು ಲೋಪಗಳಿದ್ದು, ಅದನ್ನು ಇನ್ನಷ್ಟು ಆಧುನೀಕರಣಗೊಳಿಸಲಾಗುವುದು. ಸಂಚಾರದಲ್ಲಿರುವಾಗಲೇ ತುರ್ತು ಸಂದರ್ಭದಲ್ಲಿ ವೈದ್ಯರೊಂದಿಗೆ ನೇರ ವಿಡಿಯೋ ಕಾನ್ಫರೆನ್ಸ್‌ ಕಾಲ್‌ ಮೂಲಕ ಮಾತಾಡಿ ಚಿಕಿತ್ಸೆ ನೀಡುವ ಸೌಲಭ್ಯವನ್ನು ಆಂಬುಲೆನ್ಸ್‌ನಲ್ಲಿ ಅಳವಡಿಸಲಾಗುವುದು ಎಂದು ರಾಜ್ಯ ಆರೋಗ್ಯ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ಶನಿವಾರ ರಾತ್ರಿ ಉಪ್ಪಿನಂಗಡಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು, ಮಾಧ್ಯಮಗಳೊಂದಿಗೆ ಮಾತನಾಡಿದರು. ಅತ್ಯಾಧುನಿಕ ಸೌಲಭ್ಯಗಳೊಂದಿಗೆ 108 ತುರ್ತು ವಾಹನಗಳನ್ನು ಮೇಲ್ದರ್ಜೆಗೇರಿಸಲು ಹೊಸ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದರು.

೧೦೮ ಆಂಬುಲೆನ್ಸ್‌ನವರಿಗೆ ಈ ತಿಂಗಳೂ ಸೇರಿದಂತೆ ಆರು ತಿಂಗಳಿನಿಂದ ಸಂಬಳ ಪಾವತಿಯಾಗಿಲ್ಲ ಎಂಬ ದೂರು ಬಂದಿದ್ದು, ಸರ್ಕಾರ ಸಂಬಳ ಪಾವತಿಗೆ ಸಂಬಂಧಪಟ್ಟ ಏಜೆನ್ಸಿಗೆ ಹಣವನ್ನು ಪಾವತಿಸಿದೆ. ಏಜೆನ್ಸಿಯು ಸಿಬ್ಬಂದಿಗೆ ಸಂಬಳ ಪಾವತಿಸದಕ್ಕೆ ಸರ್ಕಾರ ಹೊಣೆಯಲ್ಲ. ಆದಾಗ್ಯೂ ೧೦೮ ಆಂಬುಲೆನ್ಸ್ ಸಿಬ್ಬಂದಿಯ ಹಿತ ಕಾಯಲು ಮುಂದಿನ ವಾರ ಸಭೆ ಕರೆಯಲಾಗಿದೆ ಎಂದರು.

ಉಪ್ಪಿನಂಗಡಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಂಬಂಧಿಸಿ ಎಕ್ಸ್‌- ರೇ ಟೆಕ್ನಿಷಿಯನ್ ಸಹಿತ ಅಗತ್ಯವುಳ್ಳ ಹುದ್ದೆಗಳಿಗೆ ತಕ್ಷಣಕ್ಕೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲು ಸಚಿವುರ ಸೂಚಿಸಿದರು.

ಸಿಬ್ಬಂದಿ ಭರ್ತಿಗೆ ಕ್ರಮ: ಈ ಹಿಂದಿನ ಸರ್ಕಾರ ಯಾವುದೇ ಉದ್ಯೋಗ ನೇಮಕಾತಿಯನ್ನು ಮಾಡಿಲ್ಲ. ಆದ್ದರಿಂದ ಹುದ್ದೆಗಳು ಖಾಲಿ ಇವೆ. ನಮ್ಮ ಸರ್ಕಾರ ೭೫೦ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು. ಉಳಿದ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುವುದು. ಉಪ್ಪಿನಂಗಡಿಯ ಆರೋಗ್ಯ ಕೇಂದ್ರಕ್ಕೆ ಅನಸ್ತೇಶಿಯಾ ವೈದ್ಯರು ಅಗತ್ಯವಾಗಿ ಬೇಕಾಗಿದ್ದು, ಗುತ್ತಿಗೆ ಆಧಾರದಲ್ಲಿ ಅವರ ನೇಮಕಾತಿಗೂ ಕ್ರಮ ಕೈಗೊಳ್ಳಲಾಗುವುದು ಎಂದರು.ಈ ಸಂದರ್ಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮುಖಂಡರಾದ ಪದ್ಮರಾಜ್, ಡಾ. ರಾಜಾರಾಮ ಕೆ.ಬಿ., ಜಿಲ್ಲಾ ಆರೋಗ್ಯಾಧಿಕಾರಿ, ತಾಲೂಕು ಆರೋಗ್ಯಾಧಿಕಾರಿ, ಸಹಾಯಕ ಕಮಿಷನರ್ ಮೊದಲಾದವರು ಉಪಸ್ಥಿತರಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮದಲ್ಲಿ ಕಳೇಬರ ಸಿಗದಿದ್ರೆ ಮುಸುಕುಧಾರಿ ಲೋಪವಲ್ಲ
ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ 35 ಬೀದಿ ನಾಯಿಗಳ ಬಂಧನ