ಹೊಸ ವರ್ಷಾಚರಣೆ: ಮಡಿಕೇರಿಗೆ ಆಗಮಿಸಿದ ಪ್ರವಾಸಿಗರ ದಂಡು

KannadaprabhaNewsNetwork |  
Published : Jan 01, 2024, 01:15 AM IST
ಸ | Kannada Prabha

ಸಾರಾಂಶ

ಕೊಡಗಿನಲ್ಲಿ ಹೊಸವರ್ಷಾಚರಣೆ ಸಡಗರದಿಂದ ನಡೆಯಿತು. ಕೇಕ್ ಕತ್ತರಿಸಿ, ಡಿಜೆಗೆ ಡಾನ್ಸ್ ಮಾಡಿ ಸಂಭ್ರಮ , ರಾಜಾಸೀಟ್‌ನಲ್ಲಿ ವರ್ಷದ ಕೊನೆಯ ಸೂರ್ಯಾಸ್ತಮಾನವನ್ನು ಜನಸಾಗರ ಕಣ್ತುಂಬಿಕೊಂಡಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಹೊಸ ವರ್ಷಾಚರಣೆಯ ಹಿನ್ನೆಲೆ ಮಂಜಿನ ನಗರಿ ಮಡಿಕೇರಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು, ರಾತ್ರಿ 12 ಗಂಟೆಗೆ ಸಡಗರ ಸಂಭ್ರಮದಿಂದ ಕೇಕ್ ಕತ್ತರಿಸಿ ಹೊಸವರ್ಷವನ್ನು ಸ್ವಾಗತಿಸಿದರು. ಡಿಜೆಗೆ ಡಾನ್ಸ್ ಮಾಡುತ್ತಾ, ಫೈರ್ ಕ್ಯಾಂಪ್ ನಡುವೆ ರಾತ್ರಿಯಿಡಿ ವರ್ಷಾಚರಣೆಯಲ್ಲಿ ಮಸ್ತ್ ಮಜಾ ಮಾಡಿದರು.

ಭಾನುವಾರ ಸಂಜೆ ರಾಜಾಸೀಟ್‌ನಲ್ಲಿ ಕಿಕ್ಕಿರಿದು ನೆರೆದಿದ್ದ ಪ್ರವಾಸಿಗರು ವರ್ಷದ ಕೊನೆಯ ಸೂರ್ಯಾಸ್ತಮಾನ ಕಣ್ತುಂಬಿಕೊಂಡು ಸೂರ್ಯ ಅಸ್ತಂಗತವಾಗುತ್ತಿದ್ದಂತೆ ಕೈ ಬೀಸಿ 2023ಕ್ಕೆ ಗುಡ್ ಬೈ ಹೇಳಿದರು.

ರಾತ್ರಿಯಿಡಿ ಹೋಂ ಸ್ಟೇ, ರೆಸಾರ್ಟ್, ರೆಸ್ಟೋರೆಂಟ್‌ಗಳಲ್ಲಿ ಸಂಭ್ರಮಿಸುತ್ತಾ ವರ್ಷಾಚರಣೆಯಲ್ಲಿ ಮುಳುಗೆದ್ದರು.

ಜಿಲ್ಲೆಯ ಬಹುತೇಕ ಹೋಂಸ್ಟೇ, ರೆಸಾರ್ಟ್, ರೆಸ್ಟೋರೆಂಟ್‌ಗಳಲ್ಲಿ ವರ್ಷಾಚರಣೆ ಪ್ರಯುಕ್ತ ‘ಮದ್ಯ’ರಾತ್ರಿ ಪಾರ್ಟಿ ಆಯೋಜಿಸಲಾಗಿತ್ತು. ಪ್ರವಾಸಿಗರು, ಸ್ಥಳೀಯರು ಪಾಲ್ಗೊಂಡು ಮೋಜು ಮಸ್ತಿ ಮಾಡಿದರಲ್ಲದೇ ರಾತ್ರಿ 12 ಗಂಟೆಗೆ ಕೇಕ್ ಕತ್ತರಿಸಿ ಸಡಗರ, ಸಂಭ್ರಮದಿಂದ 2023ಕ್ಕೆ ಗುಡ್ ಬೈ ಹೇಳಿ 2024 ಹೊಸ ವರ್ಷವನ್ನು ಸ್ವಾಗತಿಸಿದರು. ಕ್ಯಾಂಪ್ ಫೈರ್, ಬೋನೋ ಫೈರ್ ಹಾಕಿ ಕುಣಿದು ಕುಪ್ಪಳಿಸಿದರು.

ಕಳೆದೆರಡು ದಿನಗಳಿಂದಲೇ ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ ಇದರಿಂದ ಮಡಿಕೇರಿಯಲ್ಲಿ ವಾಹನ ದಟ್ಟಣೆ ಕಂಡುಬಂದಿದ್ದು, ಸಂಚಾರಕ್ಕೆ ಚಾಲಕರು, ಪಾದಚಾರಿಗಳು ಪರದಾಡುವಂತಾಗಿದೆ.

ಪ್ರವಾಸಿ ತಾಣಗಳಲ್ಲಿ ಕಿಕ್ಕಿರಿದ ಜನ: ಭಾನುವಾರವೇ ಜಿಲ್ಲೆಗೆ ಆಗಮಿಸಿ ವಾಸ್ತವ್ಯ ಹೂಡಿದ್ದ ಪ್ರವಾಸಿಗರು ಜಿಲ್ಲೆಯ ನಾನಾ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಸಂಭ್ರಮಿಸಿದರು.

ಇದರಿಂದಾಗಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ರಾಜಾಸೀಟ್, ಕಾವೇರಿ ನಿಸರ್ಗಧಾಮ, ದುಬಾರೆಯಲ್ಲಿ ಸೇರಿದಂತೆ ಜಿಲ್ಲೆಯ ವಿವಧೆಡೆ ಜನ ಸಾಗರವೇ ಕಂಡುಬಂತು.

ಪ್ರಮುಖವಾಗಿ ದುಬಾರೆಯಲ್ಲಿ ರಾಪ್ಟಿಂಗ್‌, ಬೋಟಿಂಗ್‌ನಂತಹ ಸಾಹಸ ಕ್ರೀಡೆಗಳಲ್ಲಿ ತೊಡಗಿಸಿಕೊಂಡರು. ಆನೆ ಶಿಬಿರದಲ್ಲಿ ಆನೆ ಸಫಾರಿ ಮಾಡಿ ನಂತರ ಕಾವೇರಿ ನದಿಯಲ್ಲಿ ನೀರಿನಾಟವಾಡಿ ಸಂಭ್ರಮಿಸಿದರು.

ವಿಶೇಷ ಪೂಜೆ: ಜಿಲ್ಲೆಗೆ ಆಗಮಿಸಿರುವ ಪ್ರವಾಸಿಗರು ಹಾಗೂ ಸ್ಥಳೀಯರು ನಗರದ ಓಂಕಾರೇಶ್ವರ ದೇವಾಲಯ, ಕಂಚಿ ಕಾಮಾಕ್ಷಿ ದೇಗುಲ, ಕುಂದುರುಮೊಟ್ಟೆ ಮಾರಿಯಮ್ಮ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹೊಸ ವರ್ಷವನ್ನು ಬರಮಾಡಿಕೊಂಡರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ