‘ನೈಸ್‌’ ರಸ್ತೆ ನಿರ್ಮಾಣ ಮುಂದುವರೆಸಬೇಕೇ? ಅಥವಾ ಬೇಡವೇ? ಎಂಬ ಬಗ್ಗೆ ಶಿಫಾರಸು ಮಾಡಲು ಸಂಪುಟ ಉಪಸಮಿತಿ

KannadaprabhaNewsNetwork | Updated : Apr 12 2025, 07:25 AM IST

ಸಾರಾಂಶ

 ನೈಸ್ ಸಂಸ್ಥೆಯ ಕಾರ್ಯನಿರ್ವಹಣೆ ಬಗ್ಗೆ ಚರ್ಚಿಸಿ ರಸ್ತೆ ನಿರ್ಮಾಣ ಮುಂದುವರೆಸಬೇಕೇ? ಅಥವಾ ಬೇಡವೇ? ಎಂಬ ಬಗ್ಗೆ ಶಿಫಾರಸು ಮಾಡಲು ಸಚಿವ ಸಂಪುಟ ಉಪಸಮಿತಿ ರಚನೆಗೆ ಶುಕ್ರವಾರ ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

 ಬೆಂಗಳೂರು :  ಬೆಂಗಳೂರು-ಮೈಸೂರು ನಡುವೆ 111 ಕಿ.ಮೀ. ಎಕ್ಸ್‌ಪ್ರೆಸ್‌ ವೇ ನಿರ್ಮಾಣ ಸೇರಿ ವಿವಿಧ ಯೋಜನೆ ಒಳಗೊಂಡಿರುವ ‘ಬೆಂಗಳೂರು-ಮೈಸೂರು ಮೂಲಸೌಲಭ್ಯ ಕಾರಿಡಾರ್‌ ಯೋಜನೆ’ (ಬಿಎಂಐಸಿಪಿ) ಅನುಷ್ಠಾನಗೊಳಿಸುತ್ತಿರುವ ನೈಸ್ ಸಂಸ್ಥೆಯ ಕಾರ್ಯನಿರ್ವಹಣೆ ಬಗ್ಗೆ ಚರ್ಚಿಸಿ ರಸ್ತೆ ನಿರ್ಮಾಣ ಮುಂದುವರೆಸಬೇಕೇ? ಅಥವಾ ಬೇಡವೇ? ಎಂಬ ಬಗ್ಗೆ ಶಿಫಾರಸು ಮಾಡಲು ಸಚಿವ ಸಂಪುಟ ಉಪಸಮಿತಿ ರಚನೆಗೆ ಶುಕ್ರವಾರ ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

1997ರಲ್ಲಿ ನೈಸ್‌ ಕಂಪನಿ ಮೂಲಕ ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್‌ ಯೋಜನೆ ಮಾಡಲು ತೀರ್ಮಾನಿಸಲಾಗಿತ್ತು. ಇದರಡಿ 111 ಕಿ.ಮೀ. ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇ, 41 ಕಿ.ಮೀ. ಪೆರಿಫೆರಲ್‌ ರಸ್ತೆ, 9.8 ಕಿ.ಮೀ. ಲಿಂಕ್‌ ರಸ್ತೆ ಹಾಗೂ ಎಕ್ಸ್‌ಪ್ರೆಸ್‌ ವೇಯಲ್ಲಿ 5 ಟೌನ್‌ಶಿಪ್‌ ನಿರ್ಮಾಣ ಮಾಡಲು ಉದ್ದೇಶಿಸಲಾಗಿತ್ತು.

ಆದರೆ, ನೈಸ್‌ ಬಗ್ಗೆ ತುಂಬಾ ದೂರುಗಳು ಬಂದಿದ್ದು ಭೂವ್ಯಾಜ್ಯಗಳ ಸಂಬಂಧ 374 ಪ್ರಕರಣ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇವೆ. ಹೀಗಾಗಿ ಸುಪ್ರೀಂ ಕೋರ್ಟ್‌, ಹೈಕೋರ್ಟ್‌ಗಳ ತೀರ್ಪುಗಳನ್ನು ಪರಿಶೀಲಿಸಿ ಯೋಜನೆ ಬಗ್ಗೆ ಮುಂದಿನ ತೀರ್ಮಾನ ಕೈಗೊಳ್ಳುವ ಕುರಿತು ಶಿಫಾರಸು ಮಾಡಲು ಸಚಿವ ಸಂಪುಟ ಉಪ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ. ಉಪಸಮಿತಿ ಅಧ್ಯಕ್ಷರನ್ನು ನೇಮಿಸುವ ಅಧಿಕಾರವನ್ನು ಮುಖ್ಯಮಂತ್ರಿಗಳಿಗೆ ನೀಡಲಾಗಿದೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಎಚ್.ಕೆ.ಪಾಟೀಲ್‌, ಬಿಎಂಐಸಿಇ ಯೋಜನೆಗೆ ಸಂಬಂಧಿಸಿ ಕೆಐಎಡಿಬಿ ಕಾಯ್ದೆಯಂತೆ 25,616 ಎಕರೆ ಅನುಸೂಚಿತ ಪ್ರದೇಶವನ್ನು ಕೈಗಾರಿಕಾ ಪ್ರದೇಶವೆಂದು ಘೋಷಿಸಲಾಗಿದೆ. ಖಾಸಗಿಯವರ 18,058 ಎಕರೆ ಜಮೀನಿಗೆ ಪ್ರಾಥಮಿಕ ಅಧಿಸೂಚನೆಯಾಗಿದ್ದು, 4809 ಎಕರೆಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. 13,249 ಎಕರೆ ಜಮೀನಿಗೆ ಇನ್ನೂ ಅಂತಿಮ ಅಧಿಸೂಚನೆ ಹೊರಡಿಸಿಲ್ಲ. ಈವರೆಗೆ ನೈಸ್‌ ಸಂಸ್ಥೆಗೆ 2191 ಎಕರೆ ಖಾಸಗಿ ಜಮೀನು ಮತ್ತು 5000 ಎಕರೆ ಸರ್ಕಾರಿ ಜಮೀನನ್ನು ಹಸ್ತಾಂತರ ಮಾಡಲಾಗಿದ್ದು, 2 ಎಕರೆ ಸರ್ಕಾರಿ ಜಮೀನು ಸೇರಿ 1,699 ಎಕರೆ ಜಮೀನಿಗೆ ಕೆಐಎಡಿಬಿಯಿಂದ ನೈಸ್‌ ಸಂಸ್ಥೆಗೆ ಶುದ್ಧ ಕ್ರಯಪತ್ರ ಮಾಡಲಾಗಿದೆ ಎಂದು ಹೇಳಿದರು.

374 ಪ್ರಕರಣ ಕೋರ್ಟಲ್ಲಿ ಬಾಕಿ:

ಆದರೆ ನೈಸ್ ವಿಚಾರವಾಗಿ ಹೈಕೋರ್ಟ್‌, ಸುಪ್ರೀಂ ಕೋರ್ಟ್‌ನಲ್ಲೂ ಹಲವು ವರ್ಷಗಳಿಂದ ವಿಚಾರಣೆ ನಡೆಯುತ್ತಲೇ ಇದೆ. ಸಿವಿಲ್‌ ನ್ಯಾಯಾಲಯದಲ್ಲಿ 189 ಪ್ರಕರಣ, ಹೈಕೋರ್ಟ್‌ನಲ್ಲಿ 164 ಪ್ರಕರಣ, ಸುಪ್ರೀಂ ಕೋರ್ಟ್‌ನಲ್ಲಿ 21 ಪ್ರಕರಣ ಸೇರಿ ಒಟ್ಟು 374 ಭೂ-ವ್ಯಾಜ್ಯ ಪ್ರಕರಣ ಬಾಕಿ ಇವೆ. ಈ ಹಿನ್ನೆಲೆಯಲ್ಲಿ ನೈಸ್‌ ಕಂಪನಿ ಕಾರ್ಯನಿರ್ವಹಣೆ ಬಗ್ಗೆ ಪರಿಶೀಲಿಸಿ ರಸ್ತೆ ನಿರ್ಮಾಣ ಆಗಬೇಕೇ? ಬೇಡವೇ ಎಂಬ ಬಗ್ಗೆ ಶಿಫಾರಸು ಮಾಡಲು ಸಂಪುಟ ಉಪ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ ಎಂದು ಎಚ್.ಕೆ.ಪಾಟೀಲ್‌ ವಿವರಿಸಿದರು.

ಇನ್ನು ಜಮೀನು ವಿಚಾರದಲ್ಲಿ ಯೋಜನೆಗೆ ಅಗತ್ಯವಿರುವುದಕ್ಕಿಂತ ಹೆಚ್ಚು ನೀಡಿದ್ದಾರೆಯೇ ಅಥವಾ ಕಡಿಮೆ ನೀಡಿದ್ದಾರೆಯೇ ? ಎಂಬುದು ಸೇರಿ ಹಲವಾರು ತಾಂತ್ರಿಕ ಹಾಗೂ ಕಾನೂನಾತ್ಮಕ ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಇದನ್ನು ಒಂದೇ ಸಭೆಯಲ್ಲಿ ತೀರ್ಮಾನಿಸಲು ಸಾಧ್ಯವಿಲ್ಲ. ಹೀಗಾಗಿ ಈ ಹಿಂದೆ ಟಿ.ಬಿ. ಜಯಚಂದ್ರ ನೇತೃತ್ವದಲ್ಲಿ ರಚಿಸಿದ್ದ ಸದನ ಸಮಿತಿ ವರದಿ, ಸಾರ್ವಜನಿಕ ಲೆಕ್ಕಪತ್ರ ಸಮಿತಿ ವರದಿ, ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ತೀರ್ಮಾನಗಳು ಹಾಗೂ ನ್ಯಾಯಾಲಯಕ್ಕೆ ರಾಜ್ಯ ಸರ್ಕಾರ ಸಲ್ಲಿಸಿರುವ 100ಕ್ಕೂ ಹೆಚ್ಚು ಪ್ರಮಾಣಪತ್ರ ಎಲ್ಲವನ್ನೂ ಪರಿಶೀಲಿಸಿ ಸೂಕ್ತ ಶಿಫಾರಸು ಮಾಡಲು ಉಪಸಮಿತಿಗೆ ಸೂಚಿಸಲಾಗಿದೆ ಎಂದರು.

Share this article