- ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಮತ---
ಕನ್ನಡಪ್ರಭ ವಾರ್ತೆ ಮೈಸೂರುರಾಜರ ಕಾಲದಲ್ಲಿ ಮೈಸೂರು ಸಿಲ್ಕ್, ಮೈಸೂರು ಪಾಕ್ ಸೇರಿದಂತೆ ಒಟ್ಟು 25 ರಿಂದ 30 ಉತ್ಪನ್ನಗಳನ್ನು ''''ಮೈಸೂರು'''' ಹೆಸರಿನಲ್ಲಿ ಬ್ರಾಂಡೆಡ್ ಮಾಡಲಾಗಿದ್ದು, ಈ ಹೆಸರು ಗುಣಮಟ್ಟಕ್ಕೆ ಹೆಸರುವಾಸಿಯಾಗಿ ಇಂದಿಗೂ ಪ್ರಸ್ತುತವಾಗಿರುವುದು ಹೆಮ್ಮೆಯ ವಿಷಯ ಎಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟರು.
ಮೈಸೂರು-ಮಾನಂದವಾಡಿ ರಸ್ತೆಯಲ್ಲಿರುವ ಎನ್.ಐಇ ಕಾಲೇಜಿನ ಡೈಮಂಡ್ ಜುಬಿಲಿ ಕ್ರೀಡಾ ಸಂಕೀರ್ಣದಲ್ಲಿ ಎನ್.ಐಇ, ಎಐಸಿಟಿಇ, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ, ಕೇಂದ್ರ ಶಿಕ್ಷಣ ಸಚಿವಾಲಯ ಹಾಗೂ ಆವಿಷ್ಕಾರ ಕೋಶ ಸಹಯೋಗದೊಂದಿಗೆ ಆಯೋಜಿಸಿದ್ದ ಉದ್ಯಮ ಶೀಲತೆ, ನಾವೀನ್ಯತೆ, ವಿನ್ಯಾಸ ಹಾಗೂ ಬೂಟ್ ಕ್ಯಾಂಪ್ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಮಾತನಾಡಿದರು.ಮೈಸೂರು ಸಿಲ್ಕ್ ಸ್ಥಾಪನೆಯಾಗಿ ನೂರು ವರ್ಷ ಕಳೆದಿವೆ. ಇಲ್ಲಿ ಉತ್ಪಾದನೆಗೊಳ್ಳುವ ಉತ್ಪನ್ನಗಳ ಗುಣಮಟ್ಟದಿಂದ ಇಂದಿಗೂ ದೇಶ-ವಿದೇಶದ ಗ್ರಾಹಕರನ್ನು ಸೆಳೆಯುತ್ತಿದೆ. ಇಂತಹ ಬ್ರ್ಯಾಂಡೆಡ್ ಉತ್ಪನ್ನ ಗಳನ್ನು ಸೃಷ್ಟಿಸಿದರೆ, ದೀರ್ಘ ಕಾಲದ ಉದ್ಯೋಗಾವಕಾಶ, ಉತ್ಪಾದಕತೆಯ ಜೊತೆಗೆ ನಮ್ಮ ದೇಶದ ಹೆಸರು ಹೆಸರು ವಾಸಿಯಾಗುತ್ತದೆ. ಮೈಸೂರು ಪ್ರಾಂತ್ಯಕ್ಕೆ ಸೀಮಿತವಾಗಿ ಯೋಚಿಸುವುದಾದರೆ, ಮೈಸೂರಿನ ಹೆಸರನ್ನು ಬ್ರಾಂಡೆಡ್ ಮಾಡಲು ನಮ್ಮ ಪೂರ್ವಿಕರು ಅಂದಿನ ಜಾಗತಿಕ ಮಾರುಕಟ್ಟೆಯಲ್ಲಿನ ತಲ್ಲಣಗಳನ್ನು ಯೋಚಿಸಿಯೇ ಈ ತೀರ್ಮಾನ ಮಾಡಿರಬಹುದು ಎಂದು ಹೇಳಿದರು.
ಮೈಸೂರು ಪ್ರಾಂತ್ಯದ ಹೆಸರನ್ನು ಜಗತ್ತಿನ ಮೂಲೆಮೂಲೆಗೆ ಪರಿಚಯಿಸಲು ನಮ್ಮ ಪೂರ್ವಿಕರು ಹಾಗೂ ಸರ್.ಎಂ. ವಿಶ್ವೇಶ್ವರಯ್ಯರ ಪಾತ್ರ ಹಿರಿದು. ರಾಜರ ಆಳ್ವಿಕೆ ಕೊನೆಗೊಂಡು ಪ್ರಜಾಪ್ರಭುತ್ವ ಆಳ್ವಿಕೆಬಂದ ಮೇಲೆ ತಾಂತ್ರಿಕತೆ, ಕೈಗಾರಿಕೆ ಹಾಗೂ ಇತರೆ ವಿಷಯಗಳಲ್ಲಿ ಸಾಕಷ್ಟು ಆವಿಷ್ಕಾರಗಳ ಆಗಿವೆ. ಅದೇ ರೀತಿ 1973 ರಲ್ಲಿ ಮೈಸೂರು ರಾಜ್ಯದ ಹೆಸರು ''''ಕರ್ನಾಟಕ'''' ಎಂದು ಬದಲಾದ ನಂತರ ಸ್ಥಳೀಯ ಉತ್ಪನ್ನಗಳು ''''ಕರ್ನಾಟಕ'''' ಹೆಸರಿನಲ್ಲಿ ಬ್ರಾಂಡೆಡ್ ಆಗಬೇಕು. ಇದರತ್ತ ಇಂದಿನ ಯುವ ಪೀಳಿಗೆ ಯೋಚಿಸಬೇಕು. ಅಲ್ಲದೆ, ಬ್ರಾಂಡೆಡ್‌ಗಳನ್ನು ಸೃಷ್ಟಿಸುವುದರ ಹಿಂದೆ ದೇಶಿ ಉತ್ಪನ್ನಗಳ ಮಾರಾಟ ಹಾಗೂ ಮಾರುಕಟ್ಟೆಯ ಗುಣಮಟ್ಟವನ್ನು ಕಾಪಾಡಲು ಅನುಕೂಲವಾಗುತ್ತದೆ ಎಂದರು.
ಮೊದಲನೇ ವಿಶ್ವ ಯುದ್ಧದಲ್ಲಿ ಮೈಸೂರು ಯೋಧರ ಪಾತ್ರ ಪ್ರಮುಖವಾಗಿದೆ. ಈ ಅಂಶವನ್ನು ಇತಿಹಾಸದಲ್ಲಿ ಕಾಣಬಹುದು. ಏಕೆಂದರೆ, ತಂತ್ರಜ್ಞಾನ ಬೆಳೆದಂತೆ, ಯುದ್ಧ ಶೈಲಿಯಲ್ಲೂ ಬದಲಾ ಗಿದೆ. ಹಾಗಾಗಿ ಭಾರತದ ರಕ್ಷಣಾ ಕ್ಷೇತ್ರ ಪ್ರಸ್ತುತ ಸನ್ನಿವೇಶಕ್ಕೆ ತಕ್ಕಂತೆ ಆಧುನೀಕರಣಗೊಳಿಸಲು ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಜತೆಗೆ ಪ್ರಪಂಚದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ, ಹವಮಾನ ಬದಲಾವಣೆ, ಸೈಬ್ರರ್ ಭದ್ರತೆ ಹಾಗೂ ಇಂಧನ ಕ್ಷೇತ್ರದ ಸ್ವಾವಲಂಬನೆ ಕುರಿತು ಹೆಚ್ಚಿನ ಆದ್ಯತೆ ಚರ್ಚೆಯಾಗುತ್ತಿದೆ. ಇದರ ಬಗ್ಗೆ ಯುವ ಪೀಳಿಗೆಗೆ ಚಿಂತಿಸಬೇಕು ಎಂದು ಸಲಹೆ ನೀಡಿದರು.ವಾಧ್ವನಿ ಫೌಂಡೇಶನ್ ನ ವಿಷ್ಣುಪ್ರಿಯ, ಎನ್.ಐಇ ಕಾಲೇಜಿನ ಕಾರ್ಯದರ್ಶಿ ಎಸ್.ಬಿ. ಉದಯ್ ಶಂಕರ್, ಉಪಪ್ರಾಂಶುಪಾಲ ಪ್ರೊ.ಎಂ.ಎಸ್. ಗಣೇಶ್ ಪ್ರಸಾದ್, ಡಾ. ರೋಹಿಣಿ ನಾಗಪ್ರಸಾದ್, ಡಾ. ಪೂಜಾ ರಾವತ್, ಡಾ.ಸಿ.ಕೆ. ವನಮಾಲ ಇದ್ದರು.