ಕರ್ನಾಟಕ ಏಕೀಕರಣದಲ್ಲಿ ನಿಜಲಿಂಗಪ್ಪ ಪಾತ್ರ ಮಹತ್ವದ್ದು

KannadaprabhaNewsNetwork | Published : Dec 3, 2024 12:32 AM

ಸಾರಾಂಶ

ಕರ್ನಾಟಕ ಏಕೀಕರಣದಲ್ಲಿ ರಾಷ್ಟ್ರ ನಾಯಕ ಎಸ್.ನಿಜಲಿಂಗಪ್ಪ ಅವರ ಪಾತ್ರವೂ ಗಣನೀಯವೂ, ಮಹತ್ವವೂ ಆಗಿದೆ ಎಂದು ಹಿರಿಯ ಪತ್ರಕರ್ತ ಡಾ. ಎಚ್.ಬಿ. ಮಂಜುನಾಥ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಕನ್ನಡ ರಾಜ್ಯೋತ್ಸವದಲ್ಲಿ ಹಿರಿಯ ಪತ್ರಕರ್ತ ಡಾ. ಎಚ್.ಬಿ. ಮಂಜುನಾಥ ಅಭಿಮತ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಕರ್ನಾಟಕ ಏಕೀಕರಣದಲ್ಲಿ ರಾಷ್ಟ್ರ ನಾಯಕ ಎಸ್.ನಿಜಲಿಂಗಪ್ಪ ಅವರ ಪಾತ್ರವೂ ಗಣನೀಯವೂ, ಮಹತ್ವವೂ ಆಗಿದೆ ಎಂದು ಹಿರಿಯ ಪತ್ರಕರ್ತ ಡಾ. ಎಚ್.ಬಿ. ಮಂಜುನಾಥ ಹೇಳಿದರು.

ನಗರದ ನಿಜಲಿಂಗಪ್ಪ ಬಡಾವಣೆಯ ಕ್ಷೇಮಾಭಿವೃದ್ಧಿ ಸಮಿತಿ ವತಿಯಿಂದ ಶನಿವಾರ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಏರ್ಪಾಡಾಗಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಕನ್ನಡ ಕುಲಪುರೋಹಿತ ಆಲೂರು ವೆಂಕಟರಾಯರು, ಹುಯಿಲಗೋಳ ನಾರಾಯಣರಾಯರು, ಕಾಯ್ಕಿಣಿ ಶಾಮರಾಯರು, ರಂಗೋಕಟ್ಟಿ ವೆಂಕಟರಾಯರು ಮುಂತಾದವರು ಹುಟ್ಟುಹಾಕಿದ ಕರ್ನಾಟಕ ಏಕೀಕರಣ ಚಳವಳಿ ಮುಂದುವರಿದಿತ್ತು. ಆದರೂ 1953ರ ಸೆ.14ರಂದು ತಮ್ಮ ನೇತೃತ್ವದಲ್ಲಿ ನಿಯೋಗದೊಂದಿಗೆ ಆಗಿನ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಅವರನ್ನು ಭೇಟಿ ಮಾಡಿದ ನಿಜಲಿಂಗಪ್ಪ ಅವರು ರಾಜ್ಯ ಪುನರ್ ವಿಂಗಡಣೆ ಹಾಗೂ ಏಕೀಕರಣದ ಮಹತ್ವವನ್ನು ಪರಿಣಾಮಕಾರಿಯಾಗಿ ವಿವರಿಸಿದ್ದರು ಎಂದರು.

ಆ ಹೊತ್ತಿಗಾಗಲೇ ಧಾರ್ ಸಮಿತಿಯು ರಾಜ್ಯ ಪುನರ್ ವಿಂಗಡಣೆಗೆ ಪೂರಕವಾಗಿ ವರದಿ ನೀಡಿದ್ದರೂ ಪರಿಣಾಮ ಬೀರಲಿಲ್ಲ. 1953ರಲ್ಲಿ ಬಂದ ಖೇಳ್ಕರ್ ಸಮಿತಿ ಹಾಗೂ ವಾಂಛೂ ಸಮಿತಿ ವರದಿಗಳೂ ಪೂರಕ ಅಭಿಪ್ರಾಯವನ್ನೇ ಕೊಟ್ಟವು. 1955 ರಲ್ಲಿ ಬಂದ ಶೇಷಾದ್ರಿ ಸಮಿತಿ ವರದಿಯು ಮತ್ತಷ್ಟು ಪರಿಣಾಮ ಬೀರಿ ಸರ್ದಾರ್ ಪಟೇಲರು ಮುತುವರ್ಜಿ ವಹಿಸಿದ್ದರಿಂದ 1956 ರಾಜ್ಯ ಏಕೀಕರಣಗೊಂಡಿತು ಎಂದು ತಿಳಿಸಿದರು.

ಕನ್ನಡ ಭಾಷೆಯು ವಿಶ್ವದ ಸುಂದರ ಹಾಗೂ ಸುಲಲಿತ ಭಾಷೆಗಳಲ್ಲಿ ಒಂದಾಗಿದೆ. ಕನ್ನಡದ ಸಂಸ್ಕೃತಿ ಸಹ ಮೌಲ್ಯಯುತವಾಗಿದೆ. ಇದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಸಂಕಲ್ಪ ಮಾಡುವುದೇ ರಾಜ್ಯೋತ್ಸವದ ಆಚರಣೆ ಉದ್ದೇಶ ಎಂದರು.

ಕ್ಷೇಮಾಭಿವೃದ್ಧಿ ಸಮಿತಿ ನೂತನ ಅಧ್ಯಕ್ಷ ಕೆ.ಎಸ್.ರಮೇಶ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಉಪಾಧ್ಯಕ್ಷ ಡಿ.ಸುನೀಲ್ ಕುಮಾರ್ ಸ್ವಾಗತಿಸಿ, ಸಮಿತಿ ನಿರ್ದೇಶಕ ಶ್ರೀನಿವಾಸ ದಾಸಕರಿಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾರತೀ ವೀರೇಶ ಕಾರ್ಯಕ್ರಮ ನಿರೂಪಿಸಿದರು. ಸಮಿತಿ ಪ್ರಧಾನ ಕಾರ್ಯದರ್ಶಿ ಡಿ.ಎಸ್. ಸಿದ್ದಣ್ಣ ಸಮಿತಿ ಧ್ಯೇಯೋದ್ದೇಶಗಳನ್ನು ಹೇಳಿದರು.

ಈ ಸಂದರ್ಭ ಕನ್ನಡ ಹೋರಾಟಗಾರರಾದ ಬಂಕಾಪುರ ಚನ್ನಬಸಪ್ಪ ಹಾಗೂ ನಾಗೇಂದ್ರ ಬಂಡೀಕರ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕೀಲುಮೂಳೆ ತಜ್ಞ ಡಾ.ರಮೇಶ್ ಪೂಜಾರ್ ಹಾಗೂ ಸ್ತ್ರೀರೋಗ ತಜ್ಞ ಡಾ. ಎಂ.ಎಸ್. ಹಿರೇಮಠ, ಕ್ಷೇಮಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಆರ್.ಕೆ. ರುದ್ರಪ್ಪ, ಖಜಾಂಚಿ ಆರ್.ವಿ. ರತ್ನಾಕರ್, ಕಾರ್ಯದರ್ಶಿ ಡಿ.ಎಸ್. ಸಾಗರ್, ನಿರ್ದೇಶಕರಾದ ಎ.ಜಿ.ವೀರೇಶ್ , ಎಚ್.ಸಿ. ತೀರ್ಥರಾಜ್, ಕೆ.ಎಚ್. ಶ್ರೀಕರ, ಡಿ ವಿ. ಜಯರುದ್ರಪ್ಪ, ಮೆಹಬೂಬ್ ಬಾಷಾ, ಎಂ.ಜಿ. ನಾರಾಯಣ ಸ್ವಾಮಿ ಕಾರ್ಯನಿರ್ವಾಹಕ ಮಂಡಳಿಯ ಉದಯಕುಮಾರ್, ದಯಾಳು, ಜಯಪ್ರಕಾಶ್, ಅನಿಲ್ ಭಾರಂಗಳ್, ಆರ್.ಚಂದ್ರಶೇಖರ ಮುಂತಾದವರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ನೃತ್ಯ, ಕಿರುಭಾಷಣಗಳು, ಭಾರತಿ ವಾದ್ಯವೃಂದದಿಂದ ರಸಮಂಜರಿ ಕಾರ್ಯಕ್ರಮ ನೆರವೇರಿತು.

- - - -1ಕೆಡಿವಿಜಿ33.ಜೆಪಿಜಿ:

ದಾವಣಗೆರೆಯ ಎಸ್.ನಿಜಲಿಂಗಪ್ಪ ಬಡಾವಣೆ ಕ್ಷೇಮಾಭಿವೃದ್ಧಿ ಸಮಿತಿ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನೆರವೇರಿತು.

Share this article