ನಿರಂಜನರ ಬರಹ ಬ್ರಿಟಿಷರಗಷ್ಟೇ ಅಲ್ಲ ಅಧಿಕಾರಶಾಹಿಗಳಿಗೂ ಬಿಸಿತುಪ್ಪವಾಗಿತ್ತು: ಪ್ರಿಯಾ ಕೆರ್ವಾಶೆ

KannadaprabhaNewsNetwork | Published : Dec 22, 2024 1:34 AM

ಸಾರಾಂಶ

‘ನೂರು ವರ್ಷದ ಹೊಸ್ತಿಲಲ್ಲಿರುವ ಸಾಹಿತಿಗಳ ಬಗ್ಗೆ ಮಾತನಾಡುವಾಗ ಸಾಹಿತ್ಯಕ್ಕೆ ಅವರ ಕೊಡುಗೆ ಹಾಗೂ ಅವರು ಇಂದಿಗೆ ಹೇಗೆ ಆದರ್ಶರಾಗುತ್ತಾರೆ ಎಂಬುದನ್ನು ಗಮನದಲ್ಲಿಡುವುದು ಬಹಳ ಮುಖ್ಯ. ಇಂಥ ಗೋಷ್ಗಿಗಳು ಹಿರಿಯ ಬರಹಗಾರರ ಅನನ್ಯತೆಯನ್ನು ಜನಸಾಮಾನ್ಯರಿಗೆ ಮನದಟ್ಟುಮಾಡಿಸುತ್ತವೆ’.

ಚಿಕ್ಕದೇವರಾಜ ಒಡೆಯರ್ ವೇದಿಕೆ, ಮಂಡ್ಯ

‘ಬಡವರ ಬಳಿ ಚಂದಾ ಎತ್ತಿ ಅದ್ದೂರಿಯಲ್ಲದ, ಅಚ್ಚುಕಟ್ಟಾದ ಪ್ರಗತಿಪಂಥ ಸಮ್ಮೇಳನ ಮಾಡಿ, ಆಗ ತಮ್ಮದೇ ಸಮ್ಮೇಳನ ಎಂದು ಆ ಜನ ಸಾಹಿತ್ಯವಾಹಿನಿಯೊಳಗೆ ಬರುತ್ತಾರೆ ಎಂದವರು ನಿರಂಜನರು. ತುರ್ತು ಪರಿಸ್ಥಿತಿ ಸಂದರ್ಭ ಅವರ ‘ಎಣ್ಣೆ ಚಿಮಿಣಿ ಎಣ್ಣೆ’ ಕೃತಿಯ ಪುನರ್‌ಮುದ್ರಣಕ್ಕೆ ಮುಂದಾದಾಗ ಸರ್ಕಾರ ನಿಷೇಧ ಹೇರಿತ್ತು. ಬ್ರಿಟಿಷರ ಜೊತೆಗೆ ಅಧಿಕಾರಶಾಹಿಗಳಲ್ಲೂ ನಡುಕ ಹುಟ್ಟಿಸಿದವರು ಸಾಹಿತಿ ನಿರಂಜನ’ ಎಂದು ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಹೆಗ್ಗಳಿಗೆ ಅಭಿಪ್ರಾಯಪಟ್ಟಿದ್ದಾರೆ.

ಮಂಡ್ಯದಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ‘ಶತಮಾನೋತ್ಸವ ವರ್ಷದ ಕನ್ನಡ ಸಾಹಿತಿಗಳು’ ಎಂಬ ಗೋಷ್ಠಿಯಲ್ಲಿ ಶನಿವಾರ ನಿರಂಜನರ ಬದುಕು, ಬರಹದ ಕುರಿತಾಗಿ ಮಾತನಾಡಿದರು.

‘ನೀವೆಲ್ಲ ಬರೀ ಪ್ರೇಮಕವಿತೆ ಬರೆಯುತ್ತಿದ್ದರೆ ನಿರಂಜನ ಅವರು ಪ್ರೇಮ ವಿವಾಹವನ್ನೇ ಆಗಿದ್ದಾರೆ ಎಂದು ಹಿರಿಯ ಸಾಹಿತಿಯೊಬ್ಬರು ವಾರಿಗೆಯ ಸಾಹಿತಿಗಳ ಬಳಿ ಹೇಳಿ ನಗುತ್ತಿದ್ದರು. ವೈದ್ಯೆಯಾಗಿದ್ದ ಅನುಪಮ ಇವರ ಆಕರ್ಷಕ ವ್ಯಕ್ತಿತ್ವಕ್ಕೆ ಮಾರುಹೋಗಿ ಇವರ ಜೀವನ ಸಂಗಾತಿಯೇ ಆದರು. ಈ ದಂಪತಿ ಸಾಹಿತ್ಯ ಕ್ರೇತ್ರಕ್ಕೆ ಅಗಾಧ ಕೊಡುಗೆ ನೀಡಿದ್ದಾರೆ. ಪತ್ರಿಕೆಗಳ ಆರಂಭಕಾಲದ ಅಂಕಣಕಾರರೂ ಆಗಿದ್ದರು. ಇವರ ಪ್ರೇಮಪತ್ರದ ಅಂಕಣಗಳು ಜನಪ್ರಿಯವಾಗಿದ್ದವು. ಏಕಕಾಲಕ್ಕೆ ಎದೆಯೊಳಗೆ ಪ್ರೇಮ ಮತ್ತು ಅವ್ಯವಸ್ಥೆ ಬಗೆಗಿನ ಬೆಂಕಿಯಂಥ ಸಿಟ್ಟನ್ನಿಟ್ಟುಕೊಂಡಿದ್ದ ಇವರು ಅಪರೂಪದ ಸಾಹಿತಿ’ ಎಂದರು.

ಡಾ ಎಲ್. ಎಸ್. ಶೇಷಗಿರಿ ರಾವ್ ಬಗ್ಗೆ ಮಾತನಾಡಿದ ಹಿರಿಯ ಲೇಖಕಿ ವನಮಾಲ ವಿಶ್ವನಾಥ್, ‘ಶೇಷಗಿರಿರಾಯರು ಕಾಲದ ಆ ಹೊತ್ತಿನ ಅಗತ್ಯ ಮನಗಂಡು ಅದಕ್ಕೆ ಪೂರಕವಾಗಿ ಸಾಹಿತ್ಯಿಕ ರಚನೆಗೆ ಮುಂದಾದವರು. ಅವರ ಸಾಹಿತ್ಯ ಆಳಕ್ಕಿಂತಲೂ ವಿಸ್ತಾರವಾಗಿ ಹಬ್ಬಿತ್ತು. ಹೊಸಗನ್ನಡದ ವಿಮರ್ಶಾ ಕ್ಷೇತ್ರಕ್ಕೆ ಅವರು ಭದ್ರ ಬುನಾದಿ ಹಾಕಿದರು. ಅವರ ವಿಮರ್ಶೆಯು ಕೃತಿಯ ಕುರಿತ ಸಮಗ್ರ ಪರಿಚಯವನ್ನೂ ಮಾಡಿಕೊಟ್ಟು ಓದುಗರನ್ನು ಸೆಳೆಯುತ್ತಿತ್ತು’ ಎಂದರು.

ಶ್ಯಾಮಸುಂದರ ಬಿದಿರಕುಂದಿ ಅವರು ಜಿ. ಎಸ್. ಅಮೂರ ಅವರ ಬಗ್ಗೆ ಮಾತನಾಡಿ, ‘ಅಮೂರರು ಬೇಂದ್ರೆ, ಮಾಸ್ತಿ, ಅನಂತಮೂರ್ತಿ, ಕಾರ್ನಾಡ ಸೇರಿ ಹಲವು ಸಾಹಿತಿಗಳ ಬಗ್ಗೆ ಅಮೂಲಾಗ್ರ ಅಧ್ಯಯನ ಮಾಡಿ ಕೃತಿ ಬರೆದವರು. ಕೊನೆಗೆ ಬರೆದ ಆತ್ಮಚರಿತ್ರೆ ನೀರ ಮೇಲಣ ಗುಳ್ಳೆಯಲ್ಲಿ ತಮ್ಮನ್ನೇ ನೀರಗುಳ್ಳೆಗೆ ಹೋಲಿಸಿಕೊಳ್ಳುತ್ತ, ನೀರಿನ ಗುಳ್ಳೆಯ ಆಯುಸ್ಸು ಕ್ಷೀಣ. ಆದರೆ ಇರುವಷ್ಟು ಕಾಲ ಅದು ಬೆಳಕು ಮತ್ತು ಬಣ್ಣವನ್ನು ಹೊರಸೂಸುತ್ತಿರುತ್ತದೆ’ ಎಂದಿದ್ದಾರೆ.

ಈ ಸಂದರ್ಭ ಸಂಗೀತ ನಿರ್ದೇಶಕ ವಿಜಯ ಭಾಸ್ಕರ್ ಅವರ ಬದುಕಿನ ಒಳನೋಟಗಳನ್ನು ಎಸ್. ಆರ್. ರಾಮಕೃಷ್ಣ ನೀಡಿದರು.

ಹಿರಿಯ ಸಾಹಿತಿ ಶಾಂತರಸರ ಬಾಲ್ಯವನ್ನು ಡಾ. ಅಕ್ಬರ್ ಕಾಲಿಮಿರ್ಚಿ ತೆರೆದಿಟ್ಟರೆ ಪ್ರೊ.ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಕು.ಶಿ. ಹರಿದಾಸ ಭಟ್ಟರ ಬಗ್ಗೆ ವಿಷಯ ಮಂಡನೆ ಮಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ವಿದ್ವಾಂಸ ಮಲ್ಲೇಪುರಂ ಜಿ ವೆಂಕಟೇಶ್, ‘ನೂರು ವರ್ಷದ ಹೊಸ್ತಿಲಲ್ಲಿರುವ ಸಾಹಿತಿಗಳ ಬಗ್ಗೆ ಮಾತನಾಡುವಾಗ ಸಾಹಿತ್ಯಕ್ಕೆ ಅವರ ಕೊಡುಗೆ ಹಾಗೂ ಅವರು ಇಂದಿಗೆ ಹೇಗೆ ಆದರ್ಶರಾಗುತ್ತಾರೆ ಎಂಬುದನ್ನು ಗಮನದಲ್ಲಿಡುವುದು ಬಹಳ ಮುಖ್ಯ. ಇಂಥ ಗೋಷ್ಗಿಗಳು ಹಿರಿಯ ಬರಹಗಾರರ ಅನನ್ಯತೆಯನ್ನು ಜನಸಾಮಾನ್ಯರಿಗೆ ಮನದಟ್ಟುಮಾಡಿಸುತ್ತವೆ’ ಎಂದರು.

‘ನೀವೆಲ್ಲ ಬರೀ ಪ್ರೇಮಕವಿತೆ ಬರೆಯುತ್ತಿದ್ದರೆ ನಿರಂಜನ ಅವರು ಪ್ರೇಮ ವಿವಾಹವನ್ನೇ ಆಗಿದ್ದಾರೆ ಎಂದು ಹಿರಿಯ ಸಾಹಿತಿಯೊಬ್ಬರು ವಾರಿಗೆಯ ಸಾಹಿತಿಗಳ ಬಳಿ ಹೇಳಿ ನಗುತ್ತಿದ್ದರು. ವೈದ್ಯೆಯಾಗಿದ್ದ ಅನುಪಮ ಇವರ ಆಕರ್ಷಕ ವ್ಯಕ್ತಿತ್ವಕ್ಕೆ ಮಾರುಹೋಗಿ ಇವರ ಜೀವನ ಸಂಗಾತಿಯೇ ಆದರು. ಈ ದಂಪತಿ ಸಾಹಿತ್ಯ ಕ್ರೇತ್ರಕ್ಕೆ ಅಗಾಧ ಕೊಡುಗೆ ನೀಡಿದ್ದಾರೆ.

- ಪ್ರಿಯಾ ಕೆರ್ವಾಶೆ

Share this article