ಹಡಗಲಿಗೆ ಬಂತು ನಿರ್ಮಲ ತುಂಗಭದ್ರಾ ಅಭಿಯಾನ ಪಾದಯಾತ್ರೆ

KannadaprabhaNewsNetwork |  
Published : Dec 25, 2024, 12:50 AM IST
ಹೂವಿನಹಡಗಲಿಯಲ್ಲಿ ನಿರ್ಮಲ ತುಂಗಭದ್ರ ಅಭಿಯಾನವು ಮಾಜಿ ಶಾಸಕ ಮಹಿಮಾ ಜೆ.ಪಟೇಲ್‌ ನೇತೃತ್ವದಲ್ಲಿ ಪಟ್ಟಣಕ್ಕೆ ಆಗಮಿಸಿತ್ತು. | Kannada Prabha

ಸಾರಾಂಶ

ಪಶ್ಚಿಮ ಘಟ್ಟದ ಸಸ್ಯ ಸಂಕುಲಗಳ ನಡುವೆ ಹರಿದು ಬರುವ ಈ ತುಂಗಭದ್ರೆ ನದಿ ನೀರು ಅಮೃತಕ್ಕೆ ಸಮಾನವಾಗಿರುವುದು ವೈಜ್ಞಾನಿಕ ಸತ್ಯವಾಗಿದೆ.

ಹೂವಿನಹಡಗಲಿ: ತುಂಗಭದ್ರಾ ನದಿ ನೀರಿನ ಶುದ್ಧತೆ ಕಾಪಾಡುವ ಜತೆಗೆ ತ್ಯಾಜ್ಯ ಮುಕ್ತ ಮಾಡಲು, ನವದೆಹಲಿಯ ರಾಷ್ಟ್ರೀಯ ಸ್ವಾಭಿಮಾನ ಆಂದೋಲನವು ಶೃಂಗೇರಿಯಿಂದ ಕಿಷ್ಕಿಂಧೆವರೆಗೆ ನಿರ್ಮಲ ತುಂಗಭದ್ರಾ ಅಭಿಯಾನದ ಪಾದಯಾತ್ರೆಯು ಮಂಗಳವಾರ ಪಟ್ಟಣಕ್ಕೆ ಆಗಮಿಸಿತು.

ಮಾಜಿ ಶಾಸಕ ಮಹಿಮಾ ಜಿ.ಪಟೇಲ್‌ ನೇತೃತ್ವದಲ್ಲಿ ನಡೆಯುತ್ತಿರುವ ಈ ಅಭಿಯಾನದ ಪಾದಯಾತ್ರೆಯು ತಾಲೂಕಿನ ಹರವಿ, ಕುರುವತ್ತಿ, ಲಿಂಗನಾಯಕನಹಳ್ಳಿ, ಮೈಲಾರ, ಹೊಳಲು, ಬೂದನೂರು, ಗಿರಿಯಾಪುರ ಮಠ, ಹಿರೇಹಡಗಲಿ, ಹೂವಿನಹಡಗಲಿ, ಇಟ್ಟಗಿ ಗ್ರಾಮಗಳ ವ್ಯಾಪ್ತಿಯಲ್ಲಿ ಪಾದಯಾತ್ರೆ ಸಂಚರಿಸುವ ಮೂಲಕ ತುಂಗಭದ್ರಾ ನದಿ ಸ್ವಚ್ಛತೆ ಕಾಪಾಡುವುದು ಹಾಗೂ ತ್ಯಾಜ್ಯ ಮುಕ್ತ ಮಾಡುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಯಿತು.

ಮಾಜಿ ಶಾಸಕ ಮಹಿಮಾ ಜೆ.ಪಟೇಲ್‌ ಮಾತನಾಡಿ, ಅಪರೂಪದ ಔಷಧಿಯ ಗುಣಗಳನ್ನು ಹೊಂದಿರುವ ಪಶ್ಚಿಮ ಘಟ್ಟದ ಸಸ್ಯ ಸಂಕುಲಗಳ ನಡುವೆ ಹರಿದು ಬರುವ ಈ ತುಂಗಭದ್ರೆ ನದಿ ನೀರು ಅಮೃತಕ್ಕೆ ಸಮಾನವಾಗಿರುವುದು ವೈಜ್ಞಾನಿಕ ಸತ್ಯವಾಗಿದೆ. ಆ ಕಾರಣಕ್ಕಾಗಿ ಗಂಗಾಸ್ನಾನ-ತುಂಗಾಪಾನ ಎಂದು ಮಾತು ಜನಜನಿತವಾಗಿದೆ ಎಂದು ಹೇಳಿದರು.

ಪರಿಶುದ್ಧ ತುಂಗಭದ್ರ ನದಿಗೆ ಕೃಷಿಯ ಅವೈಜ್ಞಾನಿಕ ಅತಿ ಹೆಚ್ಚು ರಸಗೊಬ್ಬರ, ಕೀಟನಾಶಕಗಳ ಬಳಕೆಯ ನೀರು ನದಿಗೆ ಸೇರುತ್ತಿದೆ. ಜತೆಗೆ ಕೈಗಾರಿಕೆಯ ತ್ಯಾಜ್ಯ ಹಾಗೂ ಜನ ವಸತಿಯ ಕಲುಷಿತ ಚರಂಡಿ ನೀರು, ಪ್ಲಾಸ್ಟಿಕ್‌ ತ್ಯಾಜ್ಯ ನೇರವಾಗಿ ನದಿಗೆ ಹರಿಸುತ್ತಿರುವುದರಿಂದ ಜಲಮೂಲ ಕಲುಷಿತಗೊಳ್ಳುತ್ತಿದೆ. ಈ ನೀರು ಕುಡಿಯಲು ಯೋಗ್ಯವಲ್ಲದ ದುಸ್ಥಿತಿಗೆ ಬಂದಿದೆ. ಸಾರ್ವಜನಿಕರಿಗೆ ಜಲಜಾಗೃತಿ ಮೂಡಿಸಿ ತುಂಗಭದ್ರೆಯ ಪಾವಿತ್ರ್ಯತೆ ಕಾಪಾಡುವುದು ಪಾದಯಾತ್ರೆಯ ಮುಖ್ಯ ಉದ್ದೇಶ ಎಂದರು.

ಪಶ್ಚಿಮ ಘಟ್ಟ ಪರಿಸರ, ನೀರು, ಕೃಷಿ, ಆರ್ಥಿಕ ಹಾಗೂ ಸಾಮಾಜಿಕ ಅಧ್ಯಾಯನವನ್ನು ವೈಜ್ಞಾನಿಕವಾಗಿ ನಡೆಸಲು ಅನುಕೂಲವಾಗುವಂತೆ, ಪಶ್ಛಿಮ ಘಟ್ಟ ಅಧ್ಯನ ಕೇಂದ್ರ ಸ್ಥಾಪಿಸುವ ಅಗತ್ಯವಿದೆ ಎಂದ ಅವರು, ಈಚಿಗೆ ನದಿ ಪಾತ್ರಗಳಲ್ಲಿ ಅವ್ಯಾಹತವಾಗಿ ಮರಳು ಗಣಿಗಾರಿಕೆ ನಡೆಯುತ್ತಿದೆ. ಇದರಿಂದ ನೀರು ಶುದ್ಧೀಕರಣವಾಗುತ್ತಿಲ್ಲ. ವಿಷ ತ್ಯಾಜ್ಯ ನದಿಗೆ ಸೇರುತ್ತಿದೆ. ಮನುಷ್ಯ ಹಾಗೂ ಜಲಚರಗಳ ಜೀವಕ್ಕೆ ಕುತ್ತು ಬಂದಿದೆ. ಯುವ ಸಮುದಾಯ ಎಚ್ಚೆತ್ತುಕೊಂಡು ನದಿಯ ಪಾವಿತ್ರ್ಯ ಕಾಪಾಡುವ ಕೆಲಸಕ್ಕೆ ಕೈ ಜೋಡಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಅಗತ್ಯವಿದೆ ಎಂದು ಮನವಿ ಮಾಡಿದರು.

ಆಂದೋಲನದ ಸಂಚಾಲಕ ಮಾಧವ್, ಬಸವರಾಜ ಪಾಟೀಲ್, ಪುನೀತ್‌ ದೊಡ್ಮನಿ, ಶಾಲಾ ಶಿಕ್ಷಕರು ಹಾಗೂ ನೂರಾರು ವಿದ್ಯಾರ್ಥಿಗಳು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ