ಬೆಂಗಳೂರು : ಪ್ರಕರಣವೊಂದರ ಸಂಬಂಧ ಜಪ್ತಿ ಮಾಡಿದ್ದ ₹72 ಲಕ್ಷ ದುರುಪಯೋಗಪಡಿಸಿಕೊಂಡ ಹಿನ್ನೆಲೆಯಲ್ಲಿ ಬಿಡದಿ ಪೊಲೀಸ್ ಠಾಣಾ ಇನ್‌ಸ್ಪೆಕ್ಟರ್ ಜಿ.ಕೆ.ಶಂಕರ್ ನಾಯಕ್ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ಹೈಕೊರ್ಟ್ ನಿರಾಕರಿಸಿದೆ.
ಫೋರ್ಜರಿ, ಸರ್ಕಾರಿ ಸೇವಕನಾಗಿ ನಂಬಿಕೆ ದ್ರೋಹ ಎಸಗಿದ ಅಪರಾಧ ಮತ್ತು ಭಷ್ಟಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ತಮ್ಮ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಶಂಕರ್ ನಾಯಕ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ವಜಾಗೊಳಿಸಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಆದೇಶಿಸಿದೆ.
ಪ್ರಕರಣದ ಸಾಕ್ಷ್ಯಾಧಾರ ಪರಿಶೀಲಿಸಿದರೆ, ಅರ್ಜಿದಾರರು ವಶಪಡಿಸಿಕೊಂಡಿದ್ದ ₹72 ಲಕ್ಷವನ್ನು ಸರ್ಕಾರದ ಖಜಾನೆಗೆ ಪಾವತಿಸಿಲ್ಲ. 2022ರ ಫೆ.26ರಿಂದ ಸುಮಾರು ನಾಲ್ಕು ತಿಂಗಳು ಸಂಪೂರ್ಣ ಮೊತ್ತ ಅರ್ಜಿದಾರರು ತಮ್ಮ ವಶದಲ್ಲಿಟ್ಟುಕೊಂಡಿದ್ದರು. ಹಣ ವಶಪಡಿಸಿಕೊಂಡಾಗ ಮತ್ತು ಅದನ್ನು ಹಿಂದಿರುಗಿಸುವಾಗ ನೋಟುಗಳು ಬದಲಾವಣೆಯಾಗಿದೆ. ಇದರಿಂದ ಅರ್ಜಿದಾರರ ವಿರುದ್ಧದ ಆರೋಪಗಳಿಗೆ ಮತ್ತಷ್ಟು ಪುಷ್ಠಿ ಸಿಗುತ್ತದೆ. ಆದ್ದರಿಂದ ಪ್ರಕರಣ ಸಂಬಂಧ ಕನಿಷ್ಠ ತನಿಖೆ ನಡೆಯುವ ಅಗತ್ಯವಿದ್ದು, ಅರ್ಜಿದಾರರ ವಿರುದ್ಧದ ಎಫ್‌ಐಆರ್ ರದ್ದುಪಡಿಸಲು ಸಾಧ್ಯವಿಲ್ಲ ಎಂದು ಆದೇಶದಲ್ಲಿ ಪೀಠ ತಿಳಿಸಿದೆ.ಪ್ರಕರಣವೇನು?:
ಶಂಕರ್ ನಾಯಕ್ 2021ರ ಅ.11ರಂದು ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಇನ್‌ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾಗ ವಂಚನೆ ಮತ್ತು ಕಚೇರಿಯಲ್ಲಿ ಕಳವು ಆರೋಪ ಸಂಬಂಧ ಸಂತೋಷ್ ಕುಮಾರ್ ಎಂಬಾತನ ವಿರುದ್ಧ ದೂರು ದಾಖಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಯಿಂದ ₹72 ಲಕ್ಷವನ್ನು ಶಂಕರ್ ನಾಯಕ್ ವಶಪಡಿಸಿಕೊಂಡಿದ್ದರು. ಪ್ರಕರಣವನ್ನು ಕೆಂಗೇರಿ ಗೇಟ್ ಉಪ ವಿಭಾಗದ ಪೊಲೀಸ್ ಸಹಾಯಕ ಆಯುಕ್ತರಿಗೆ ವರ್ಗಾಯಿಸಲಾಗಿತ್ತು. ಈ ನಡುವೆ ಶಂಕರ್ ನಾಯಕ್ ಆನೇಕಲ್ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದರು.
ಇದಾದ ನಾಲ್ಕು ತಿಂಗಳ ನಂತರ ಜಪ್ತಿ ಮಾಡಿದ ಸಂಪೂರ್ಣ ಮೊತ್ತವನ್ನು ಆದಾಯ ತೆರಿಗೆ ಇಲಾಖೆಗೆ ವರ್ಗಾಯಿಸುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶಿಸಿತ್ತು. ಈ ಆದೇಶದ ಬಳಿಕ ಒಂದು ದಿನ ಶಂಕರ್ ನಾಯಕ್, ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ಬಂದು ಚೀಲವೊಂದನ್ನು ಇಟ್ಟು ಹೋಗಿದ್ದರು. ಅದರಲ್ಲಿ ₹72 ಲಕ್ಷ ಮೊತ್ತದ 100, 200, 300, ಮತ್ತು 2000 ಮುಖಬೆಲೆಯ ನೋಟುಗಳಿದ್ದವು. ಈ ನೋಟುಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಮುದ್ರೆ ಮತ್ತು ಹೊದಿಕೆಯುಳ್ಳ ಎರಡು ಬಂಡಲ್ಗಳಿದ್ದವು.
ಈ ಕುರಿತು ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳು ನಡೆಸಿದ ಆಂತರಿಕ ವಿಚಾರಣೆಯಲ್ಲಿ ವಶಪಡಿಸಿಕೊಂಡ ಹಣವನ್ನು ಶಂಕರ್ ನಾಯಕ್ ಅವರು ಸರ್ಕಾರದ ಖಜಾನೆಗೆ ಪಾವತಿಸಿರಲಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿತ್ತು. ಇದರಿಂದ ಅವರ ವಿರುದ್ಧ ಕ್ರಿಮಿಲ್ ಪ್ರಕರಣ ದಾಖಲಿಸಲಾಗಿತ್ತು.