ಕೊಪ್ಪಳ: ಜಿಲ್ಲೆಯಲ್ಲಿ ಯಾವುದೇ ಅರ್ಹ ಮಗು ಪೊಲಿಯೊ ಲಸಿಕೆಯಿಂದ ವಂಚಿತವಾಗದಂತೆ ಅಗತ್ಯ ಕ್ರಮ ವಹಿಸಿ, ಪೋಲಿಯೋ ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಿ ಎಂದು ಜಿಲ್ಲಾಧಿಕಾರಿ ನಳಿನ್ ಅತುಲ್ ಹೇಳಿದರು.ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ‘ಪಲ್ಸ್ ಪೊಲಿಯೊ ಟಾಸ್ಕ್ ಫೋರ್ಸ್ ಸಮಿತಿ ಸಭೆ''''ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪಲ್ಸ್ ಪೊಲಿಯೊ ಕಾರ್ಯಕ್ರಮದಡಿ ಜಿಲ್ಲೆಯಾದ್ಯಂತ ಪಲ್ಸ್ ಪೊಲಿಯೊ ಲಸಿಕಾಕರಣ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಮಾ.3ರಿಂದ ನಾಲ್ಕು ದಿನಗಳ ಕಾಲ ನಡೆಯಲಿರುವ ಪೋಲಿಯೊ ಲಸಿಕಾ ಅಭಿಯಾನದಲ್ಲಿ ಗುರುತಿಸಲಾದ ಅರ್ಹ ವಯೋಮಾನದ ಎಲ್ಲ ಮಕ್ಕಳಿಗೂ ಲಸಿಕೆ ನೀಡಬೇಕು. ಯಾವುದೇ ಮಗು ಲಸಿಕೆಯಿಂದ ವಂಚಿತವಾಗಬಾರದು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ನಗರಸಭೆ, ಪುರಸಭೆ, ತಾಪಂ ಇಒ ಸಾರ್ವಜನಿಕರಲ್ಲಿ ಪಲ್ಸ್ ಪೊಲಿಯೊ ಕುರಿತು ಜಾಗೃತಿ ಮೂಡಿಸುವ ಕಾರ್ಯ ಚಟುವಟಿಕೆಗಳನ್ನು ನಡೆಸಬೇಕು ಎಂದು ಸೂಚಿಸಿದರು.ಜಿಲ್ಲೆಯಲ್ಲಿ ಲಸಿಕಾಕರಣಕ್ಕೆ 0.5 ವರ್ಷದೊಳಗಿನ 1,76,083 ಮಕ್ಕಳನ್ನು ಗುರುತಿಸಲಾಗಿದೆ. 898 ಲಸಿಕಾಬೂತ್, 15 ಸಂಚಾರಿ ಬೂತ್‌ಗಳನ್ನು ನಿರ್ಮಿಸಲಾಗಿದೆ. ಮಾ.3ರಂದು ಲಸಿಕಾ ಬೂತ್‌ಗಳಲ್ಲಿ ಲಸಿಕೆ ಹಾಕಲಾಗುತ್ತದೆ. ನಂತರದ ಮೂರು ದಿನಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಮನೆ ಮನೆಗೆ ತೆರಳಿ ಲಸಿಕೆ ಹಾಕಿರುವ ಬಗ್ಗೆ ಮಾಹಿತಿ ಪಡೆದು, ಲಸಿಕೆಯಿಂದ ಹೊರಗುಳಿದ ಮಗುವಿಗೆ ಲಸಿಕೆ ಹಾಕಲಾಗುತ್ತದೆ. ಮಾ.3ರಂದು ಎಲ್ಲ ಅಂಗನವಾಡಿ ಕೇಂದ್ರಗಳು ಹಾಗೂ ಗುರುತಿಸಲಾದ ಶಾಲಾ ಕೊಠಡಿಗಳು ಜಿಲ್ಲೆಯಾದ್ಯಂತ ತೆರೆದಿರುತ್ತದೆ. ಸಾರ್ವಜನಿಕರು ತಮ್ಮ ಹತ್ತಿರದ ಲಸಿಕಾ ಕೇಂದ್ರಗಳಿಗೆ ತೆರಳಿ ಮಕ್ಕಳಿಗೆ ಹಾಗೂ ಅರ್ಹರಿಗೆ ಲಸಿಕೆ ಹಾಕಿಸಬೇಕು ಎಂದು ಮನವಿ ಮಾಡಿದರು.ನಗರ, ತಾಲೂಕು, ಗ್ರಾಮ ಮಟ್ಟದಲ್ಲಿ ಪೋಲಿಯೊ ಲಸಿಕೆ ಹಾಕುವ ದಿನ ಅಂಗನವಾಡಿ ಕೇಂದ್ರಗಳನ್ನು ತೆರೆದು ಲಸಿಕೆ ಹಾಕಿಸಬೇಕು. ಶಾಲಾ ಕೊಠಡಿಗಳು ತೆರೆದು ಕನಿಷ್ಠ ಇಬ್ಬರು ನಿಯೋಜಿತ ಶಿಕ್ಷಕರನ್ನು ಹಾಗೂ ಪ್ರೌಢಶಾಲೆ, ಕಿರಿಯ ಮಹಾವಿದ್ಯಾಲಯ ಮತ್ತು ಪ್ರಥಮ ದರ್ಜೆ ಕಾಲೇಜುಗಳಿರುವ ಕಡೆ ಎನ್.ಎಸ್.ಎಸ್ ಮತ್ತು ಎನ್.ಸಿ.ಸಿ ವಿದ್ಯಾರ್ಥಿಗಳನ್ನು ನಿಯೋಜಿಸಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಬೇಕು. ಎಲ್ಲ ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕರು, ತಾಲ್ಲೂಕು ಮಟ್ಟದ ಅನುಷ್ಠಾನ ಸಮಿತಿಯ ಸದಸ್ಯರಾದ ಸಿಡಿಪಿಒಗಳು ಸೇರಿದಂತೆ ಎಲ್ಲ ಸ್ತ್ರೀ ಶಕ್ತಿ ಪದಾಧಿಕಾರಿಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಲಸಿಕೆಯ ಬಗ್ಗೆ ಜಾಗೃತಿ ಮೂಡಿಸಬೇಕು. ನವಜಾತ ಶಿಶುವಿಗೂ ಪೋಷಕರು ಲಸಿಕೆ ಹಾಕಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಲಿಂಗರಾಜು ಟಿ., ಬಳ್ಳಾರಿಯ ಎಸ್‌ಎಂಒ ಡಾ.ಶ್ರೀಧರ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಪ್ರಕಾಶ, ತಹಶೀಲ್ದಾರ ವಿಠ್ಠಲ್ ಚೌಗಲ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಡಿಪಿಒಗಳು, ಇತರರು ಉಪಸ್ಥಿತರಿದ್ದರು.