ಕನ್ನಡಪ್ರಭ ವಾರ್ತೆ ಉಳ್ಳಾಲ
ಮಂಗಳೂರು ವಿಶ್ವವಿದ್ಯಾನಿಲಯ, ಕನಕದಾಸ ಸಂಶೋಧನ ಕೇಂದ್ರ, ಮಂಗಳಗಂಗೋತ್ರಿಯು ಕನಕ ಜಯಂತಿ ಪ್ರಯುಕ್ತ ಮಂಗಳೂರು ವಿವಿಯ ಮಂಗಳ ಸಭಾಂಗಣದಲ್ಲಿ ಗುರುವಾರ ನಡೆದ 2024-25ನೇ ಸಾಲಿನ ‘ಕನಕ ಕೀರ್ತನ ಗಂಗೋತ್ರಿ’ ಶೈಕ್ಷಣಿಕ ಸಂಸ್ಥೆಗಳ ಹಾಗೂ ಸಾರ್ವಜನಿಕರ ಸಾಮುದಾಯಿಕ ಪಾಲ್ಗೊಳ್ಳುವಿಕೆಯ ಕನಕದಾಸರ ಕೀರ್ತನೆಗಳ ಸಮೂಹ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂತರಂಗದಲ್ಲಿ ಹರಿಯ ಕಾಣದವ ಹುಟ್ಟುಕುರುಡನು. ಭಗವಂತ ಅಂತರಂಗದಲ್ಲಿದ್ದಾನೆ ಅದನ್ನು ಅರಿತುಕೊಂಡು ಪೂಜೆ, ಆರಾಧನೆ, ಉಪಾಸನೆ ಮಾಡಬೇಕು ಹಾಗೂ ಭಗವಂತನನ್ನು ಪ್ರೀತಿಯಿಂದ, ಅನುಸಂಧಾನದ ಮೂಲಕ ಒಲಿಸಿಕೊಳ್ಳಬೇಕು ಎಂಬುದು ಕನಕದಾಸರ ಆಶಯವಾಗಿತ್ತು ಎಂದರು.ಭಕ್ತಿ ಚಳುವಳಿ ದೇಶದಲ್ಲಿ ಸಂಚಲನ ಉಂಟುಮಾಡಿತ್ತು. ಭಾರತೀಯ ಭಕ್ತಿ ಸಾಹಿತ್ಯಕ್ಕೆ ಅದರ ಕೊಡುಗೆ ಅಪಾರ. ಆಧ್ಯಾತ್ಮದ ಚಿಂತನೆ, ಸಾಹಿತ್ಯದ ಆಕರಗಳ ಮೂಲಕ ಹರಿದಾಸ ಸಾಹಿತ್ಯ ಪರಂಪರೆಯು ಸಂಗೀತ ರಚನೆಯೊಂದಿಗೆ ಜನಮನ ತಲುಪುವಲ್ಲಿ ಯಶಸ್ವಿಯಾಯಿತು ಎಂದರು.ಕುಲಸಚಿವರಾದ ಕೆ. ರಾಜು ಮೊಗವೀರ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಸಂಗೀತಕ್ಕೆ ವಿಶಿಷ್ಟವಾದ ಸ್ಥಾನವಿದೆ. ಕನಕದಾಸರು ಕಲಿ, ಕವಿ ಹಾಗೂ ಸಂತರೂ ಆಗಿದ್ದಾರೆ. ವಿಜಯನಗರ ಸಾಮ್ರಾಜ್ಯದ ಉಚ್ಛ್ರಾಯ ಮತ್ತು ಅವನತಿ ಕಾಲದಲ್ಲಿ ಬದುಕಿದ್ದ ಕನಕನ ಸಾಹಿತ್ಯವನ್ನು ಚಾರಿತ್ರಿಕ ಹಿನ್ನೆಲೆಯಿಂದ ಪರಿಶೀಲಿಸಬೇಕಿದೆ ಎಂದರು.
ಧರ್ಮನಿಧಿ ಯೋಗಪೀಠ, ಮಾನವಪ್ರಜ್ಞೆ ಮತ್ತು ಯೋಗ ವಿಜ್ಞಾನ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ವಿಶ್ವಮಂಗಳ ಪದವಿಪೂರ್ವ ಕಾಲೇಜು, ಕೊಣಾಜೆ ಇವರ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಉದ್ಘಾಟನಾ ಸಮಾರಂಭದ ಬಳಿಕ ವಿವಿ ಮಟ್ಟದ ಅಂತರ್ ಜಿಲ್ಲಾ ‘ಕನಕ ಕೀರ್ತನ ಗಂಗೋತ್ರಿ’ ಕನಕದಾಸರ ಕೀರ್ತನೆಗಳ ಗಾಯನ ಕಾರ್ಯಕ್ರಮ ನಡೆಯಿತು. ಪ್ರೌಢಶಾಲೆ, ಪದವಿಪೂರ್ವ, ಪದವಿ, ಸ್ನಾತಕೋತ್ತರ ಪದವಿ, ಅಧ್ಯಾಪಕ, ಅಧ್ಯಾಪಕೇತರ ಮತ್ತು ಸಾರ್ವಜನಿಕ ಮಟ್ಟದಲ್ಲಿ ನಡೆದ ಗಾಯನ ಕಾರ್ಯಕ್ರಮದಲ್ಲಿ ಒಟ್ಟು 173 ಗಾಯಕರು ಭಾಗವಹಿಸಿದ್ದರು.