ಸಂಡೂರು: ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ತಾಲೂಕಿನಲ್ಲಿ ಗಣಿ ಪ್ರದೇಶದಲ್ಲಿ ರಸ್ತೆ, ಕನ್ವೆಯರ್ ಬೆಲ್ಟ್, ಬೈಪಾಸ್ ಮುಂತಾದ ಮೂಲ ಸೌಕರ್ಯಗಳು ಅಭಿವೃದ್ಧಿಯಾಗುವವರೆಗೆ ಈಗಿರುವ ಅದಿರು ಉತ್ಪಾದನೆ ಪ್ರಮಾಣ ಹೆಚ್ಚಿಸದಿರುವುದು, ಅದಿರು ಲಾರಿಗಳ ವೇಗದ ನಿಯಂತ್ರಣ ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಚರ್ಚಿಸಲಾಯಿತು.
ಸಂಸದ ತುಕಾರಾಂ ಪ್ರಸ್ತುತ ತಾಲೂಕಿನಲ್ಲಿ ಅದಿರು ಉತ್ಪಾದನೆ ಪ್ರಮಾಣ ವಾರ್ಷಿಕ ೩೩ ಮಿಲಿಯನ್ ಟನ್ ಇದೆ. ಈ ಹಿಂದೆ ಅದಿರಿನ ಉತ್ಪಾದನೆ ಪ್ರಮಾಣ ವಾರ್ಷಿಕ ೨೨ ಮಿಲಿಯನ್ ಟನ್ ಇದ್ದಾಗಿನ ರಸ್ತೆ, ಕನ್ವೆಯರ್, ರೈಲ್ವೆ ಲೈನ್, ಬೈಪಾಸ್‌ಗಳೇ ಈಗಲೂ ಇವೆ. ಈಗಿನ ಅದಿರು ಉತ್ಪಾದನೆ ಪ್ರಮಾಣಕ್ಕೆ ತಕ್ಕಂತೆ ಗಣಿಭಾಗದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಯಾಗುವವರೆಗೆ ಯಾವುದೇ ಗಣಿ ಕಂಪನಿಗಳಿಗೆ ಅದಿರಿನ ಪ್ರಮಾಣ ಹೆಚ್ಚಿಸಲು ಅವಕಾಶ ಕೊಡದಿರುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕರಿಗೆ ಸ್ಥಳದಿಂದಲೇ ಕರೆ ಮಾಡಿ ತಿಳಿಸಿದರಲ್ಲದೆ, ಈ ಕುರಿತು ನಿರ್ದೇಶಕರಿಗೆ ಪತ್ರ ಬರೆಯಲು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಚಂದ್ರಶೇಖರ್ ಅವರಿಗೆ ಸೂಚಿಸಿದರು.ಮೂರು ವರ್ಷದಲ್ಲಿ ಅದಿರು ಲಾರಿಗಳಿಗೆ ೧೨೬ ಜನರ ಬಲಿ:
ಅದಿರು ಲಾರಿಗಳಿಗೆ ಸಿಲುಕಿ ಉಂಟಾದ ಸಾವು-ನೋವು ಕುರಿತು ಮಾಹಿತಿ ನೀಡಿದ ಸರ್ಕಲ್ ಇನ್‌ಸ್ಪೆಕ್ಟರ್ ಮಹೇಶ್‌ಗೌಡ, ಸಂಡೂರು ಪೊಲೀಸ್ ಸರ್ಕಲ್ ವ್ಯಾಪ್ತಿಯಲ್ಲಿ ೨೦೨೨ರಿಂದ ಇಲ್ಲಿವರೆಗೆ ಅದಿರು ಲಾರಿಗಳಿಗೆ ಸಿಲುಕಿ ೧೨೬ ಜನರು ಮೃತಪಟ್ಟಿದ್ದರೆ, ೩೩೦ ಜನರು ಗಾಯಗೊಂಡಿದ್ದಾರೆ. ಇದರಲ್ಲಿ ಪ್ರಸಕ್ತ ಸಾಲಿನಲ್ಲಿ ಜನವರಿಯಿಂದ ಇಲ್ಲಿಯವರೆಗೆ ೨೭ ಜನರು ಮೃತಪಟ್ಟಿದ್ದರೆ, ೮೪ ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದರು.ವಿಷಯ ತಿಳಿದು ಆತಂಕ ವ್ಯಕ್ತಪಡಿಸಿದ ಸಂಸದರು, ತಾಲೂಕಿನಲ್ಲಿ ೪-೫ ಸಾವಿರ ಲಾರಿಗಳು ಪ್ರತಿನಿತ್ಯ ಸಂಚರಿಸುತ್ತಿವೆ. ನಾವು ಆಡಳಿತ ನಡೆಸುತ್ತಿರುವುದು ಜನರಿಗಾಗಿ. ಆದರೆ, ಜನತೆ ಇಲ್ಲಿನ ರಸ್ತೆಗಳಲ್ಲಿ ಸಂಚರಿಸಲು ಭಯ ಪಡುವಂತಾಗಿದೆ. ಹೀಗಾಗಿ ಅದಿರು ಲಾರಿಗಳ ವೇಗವನ್ನು ೪೦ ಕಿ.ಮೀ.ಗೆ ನಿಯಂತ್ರಿಸಬೇಕು. ನಿಯಮ ಪಾಲಿಸದವರಿಗೆ ದಂಡ ಹಾಕಿ ಎಂದು ಪೊಲೀಸರು, ಆರ್‌ಟಿಒ ಅಧಿಕಾರಿಗಳಿಗೆ ಸೂಚಿಸಿದರು.
ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ, ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಸಂಸ್ಥೆಗಳಿಗೆ ತಾಲೂಕಿನ ಅರಣ್ಯದಲ್ಲಿ ಹೊಸದಾಗಿ ಗಣಿಗಾರಿಕೆಗೆ ಅವಕಾಶ ನೀಡುವ ಬದಲಾಗಿ ಸಿ ಕೆಟಗರಿ ಗಣಿಗಳಲ್ಲಿಯೇ ಗಣಿಗಾರಿಕೆಗೆ ಅವಕಾಶ ಕಲ್ಪಿಸುವುದು ಒಳಿತು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಆರ್. ಅಕ್ಕಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಪ್ರಗತಿಯನ್ನು ಪರಿಶೀಲಿಸಲಾಯಿತು.
ಜಿಪಂ ಉಪ ಕಾರ್ಯದರ್ಶಿ ಗಿರಿಜಾಶಂಕರ, ಡಿವೈಎಸ್‌ಪಿ ಪ್ರಸಾದ್ ಗೋಖಲೆ, ತಹಶೀಲ್ದಾರ್ ಜಿ.ಅನಿಲ್‌ಕುಮಾರ್, ತಾಪಂ ಇಒ ಎಚ್. ಷಡಾಕ್ಷರಯ್ಯ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.