ರಾಜ್ಯದಲ್ಲಿ ಪ್ರಸಕ್ತ ಬೇಸಿಗೆಯಲ್ಲಿ ಗರಿಷ್ಠ ವಿದ್ಯುತ್‌ ಬಳಕೆ ಸಾಧ್ಯತೆ : ಬೇಸಿಗೆಗೆ ಲೋಡ್‌ ಶೆಡ್ಡಿಂಗ್‌ ಇಲ್ಲ- ಜಾರ್ಜ್‌

KannadaprabhaNewsNetwork |  
Published : Mar 01, 2025, 01:04 AM ISTUpdated : Mar 01, 2025, 10:43 AM IST
KJ George

ಸಾರಾಂಶ

 ಬೇಸಿಗೆಯಲ್ಲಿ ಗರಿಷ್ಠ ವಿದ್ಯುತ್‌ ಬಳಕೆ 19,000 ದಿಂದ 19,500 ಮೆ.ವ್ಯಾಟ್‌ಗೆ ಹೆಚ್ಚಳ ಆಗುವ ಸಾಧ್ಯತೆಯಿದೆ. ಹೀಗಾಗಿ ವಿದ್ಯುತ್ ಬೇಡಿಕೆಯನ್ನು ಈಡೇರಿಸಲು ಇಂಧನ ಇಲಾಖೆ ವಿವಿಧ ಕ್ರಮ ಕೈಗೊಂಡಿದ್ದು, ಯಾವುದೇ ಕಾರಣಕ್ಕೂ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

  ಬೆಂಗಳೂರು : ರಾಜ್ಯದಲ್ಲಿ ಪ್ರಸಕ್ತ ಬೇಸಿಗೆಯಲ್ಲಿ ಗರಿಷ್ಠ ವಿದ್ಯುತ್‌ ಬಳಕೆ 19,000 ದಿಂದ 19,500 ಮೆ.ವ್ಯಾಟ್‌ಗೆ ಹೆಚ್ಚಳ ಆಗುವ ಸಾಧ್ಯತೆಯಿದೆ. ಹೀಗಾಗಿ ವಿದ್ಯುತ್ ಬೇಡಿಕೆಯನ್ನು ಈಡೇರಿಸಲು ಇಂಧನ ಇಲಾಖೆ ವಿವಿಧ ಕ್ರಮ ಕೈಗೊಂಡಿದ್ದು, ಯಾವುದೇ ಕಾರಣಕ್ಕೂ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

ಬೇಸಿಗೆಯಲ್ಲಿ ವಿದ್ಯುತ್ ಪೂರೈಕೆ ಸಂಬಂಧ ಎಸ್ಕಾಂಗಳ ಮುಖ್ಯಸ್ಥರು ಹಾಗೂ ಇಂಧನ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಸಿಗೆಯಲ್ಲಿ ರೈತರ ಕೃಷಿ ಪಂಪ್ ಸೆಟ್‌ಗಳಿಗೆ ದಿನ 7 ಗಂಟೆ ಮತ್ತು ನಿರಂತರ ವಿದ್ಯುತ್‌ಗೆ 24 ಗಂಟೆ ವಿದ್ಯುತ್‌, ಇತರೆ ಉದ್ದೇಶಗಳಿಗೆ ಎಂದಿನಂತೆ ವಿದ್ಯುತ್‌ ಪೂರೈಸಲಾಗುವುದು. ಇದಕ್ಕೆ ಎಲ್ಲ ಸಿದ್ಧತಾ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದರು.

ಕಳೆದ ವರ್ಷದ ಫೆ.27ರಂದು ಗರಿಷ್ಠ ವಿದ್ಯುತ್‌ ಬೇಡಿಕೆ 16,500 ಮೆ.ವ್ಯಾಟ್ ಇತ್ತು. ಆದರೆ ಈ ವರ್ಷದ ಫೆ.27 ರಂದು 18,230 ಮೆ.ವ್ಯಾಟ್‌ಗೆ ತಲುಪಿದೆ. ಮುಂದಿನ ಮೂರು ತಿಂಗಳಲ್ಲಿ ಅತಿ ಹೆಚ್ಚು 19,000 ದಿಂದ 19,500 ಮೆ.ವ್ಯಾಟ್‌ವರೆಗೆ ಬೇಡಿಕೆ ಹೆಚ್ಚಾಗುವ ನಿರೀಕ್ಷೆ ಇದೆ. ಇದನ್ನು ಸರಿದೂಗಿಸಲು 1 ಸಾವಿರ ಮೆ.ವ್ಯಾಟ್‌ ವಿದ್ಯುತ್‌ ಖರೀದಿಗೆ ನಿರ್ಧರಿಸಿದ್ದು, ಉತ್ತರ ಪ್ರದೇಶ ಹಾಗೂ ಪಂಜಾಬ್‌ನಿಂದ ವಿದ್ಯುತ್ ಸಾಲ (ಬ್ಯಾಂಕಿಂಗ್‌) ಪಡೆಯಲು ತೀರ್ಮಾನಿಸಲಾಗಿದೆ. ಜಲವಿದ್ಯುತ್‌ ಸ್ಥಾವರಗಳಲ್ಲಿ ಇರುವ ನೀರನ್ನು ಸದ್ಯಕ್ಕೆ ಬಳಸಿಕೊಳ್ಳುವುದಿಲ್ಲ ಎಂದರು.

ಇಂಧನ ಭದ್ರತೆಗೆ ಬ್ಯಾಟರಿ ಸ್ಟೋರೇಜ್:

ರಾಜ್ಯದಲ್ಲಿ ಹೆಚ್ಚು ವಿದ್ಯುತ್‌ ಉತ್ಪಾದನೆಯಿದ್ದರೂ ಸಂಗ್ರಹಣೆಗೆ ಅವಕಾಶ ಇಲ್ಲ. ಸೌರಶಕ್ತಿ ಘಟಕದಲ್ಲಿ ವಿದ್ಯುತ್‌ ಉತ್ಪಾದನೆ ಇದ್ದರೂ ಹಗಲಿನಲ್ಲಿ ಮಾತ್ರ ಬಳಕೆ ಮಾಡಿಕೊಳ್ಳಬೇಕು. ಹೀಗಾಗಿ ಪಾವಗಡದಲ್ಲಿ 1000 ಮೆ.ವ್ಯಾ. ಸಾಮರ್ಥ್ಯದ ಬ್ಯಾಟರಿ ಸ್ಟೋರೇಜ್ ಯೋಜನೆ ಮಾಡಲಾಗುವುದು. ಶರಾವತಿ ಪಂಪ್ಡ್‌ ಸ್ಟೋರೇಜ್‌ನಲ್ಲಿ ವಿದ್ಯುತ್‌ ಬಳಕೆ ಮಾಡಿದ ನೀರಿನ ಪುನರ್‌ ಬಳಕೆ ಮೂಲಕ 2000 ಮೆ.ವ್ಯಾ. ಹಾಗೂ ವಾರಾಹಿ ಪಂಪ್ಡ್‌ ಸ್ಟೋರೇಜ್‌ ಮೂಲಕ 1600 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಮಾಡಲಾಗುವುದು ಎಂದರು.

ವಿದ್ಯುತ್‌ ಉತ್ಪಾದನೆ ವಿವರ

ಫೆಬ್ರವರಿ 27ರ ಮಾಹಿತಿ ಪ್ರಕಾರ, ಕೆಪಿಸಿಎಲ್‌ನ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ 3,300 ಮೆ.ವ್ಯಾ., ಜಲ ವಿದ್ಯುತ್ ಘಟಕಗಳಲ್ಲಿ 2000 ಮೆ.ವ್ಯಾ. ವಿದ್ಯುತ್ ಉತ್ಪಾದನೆಯಾಗಿದೆ. ಯುಪಿಸಿಎಲ್ ನಿಂದ 1,260 ಮೆ.ವ್ಯಾ., ಸೌರಶಕ್ತಿ ಮೂಲಕ 6,655 ಮೆ.ವ್ಯಾ., ಪವನ ವಿದ್ಯುತ್‌ ಮೂಲಕ 1940 ಮೆ.ವ್ಯಾ. ಉತ್ಪಾದನೆ, ಸಿಜಿಎಸ್ (ಸೆಂಟ್ರಲ್ ಜೆನರೇಟಿಂಗ್ ಸ್ಟೇಷನ್ಸ್)ನಿಂದ 6,183 ಮೆ.ವ್ಯಾ. ವಿದ್ಯುತ್, ಕೇಂದ್ರ ಗ್ರಿಡ್‌ನಿಂದ 600 ಮೆಗಾವ್ಯಾಟ್ ಪಡೆಯಲಾಗಿದೆ. ಪಂಜಾಬ್ ಮತ್ತು ಉತ್ತರಪ್ರದೇಶದಿಂದ ವಿನಿಮಯ ಆಧಾರದ ಮೇಲೆ 700 ಮೆಗಾ ವ್ಯಾಟ್ ವಿದ್ಯುತ್ ಪಡೆಯಲಾಗಿದೆ.

ಶನಿವಾರದಿಂದ (ಮಾ. 1) ಕೂಡ್ಗಿಯಿಂದ ಹೆಚ್ಚುವರಿಯಾಗಿ 310 ಮೆಗಾವ್ಯಾಟ್, ವಿನಿಮಯ ಆಧಾರದ ಮೇಲೆ ಉತ್ತರ ಪ್ರದೇಶದಿಂದ ದಿನಕ್ಕೆ 100ರಿಂದ 1,275 ಮೆ.ವ್ಯಾ. ಮತ್ತು ಪಂಜಾಬ್‌ನಿಂದ 300 ಮೆ.ವ್ಯಾ. ವಿದ್ಯುತ್ ತೆಗೆದುಕೊಳ್ಳಲಾಗುವುದು.

ಓವರ್‌ ಲೋಡ್‌ ಸಮಸ್ಯೆ ಬಗೆಹರಿಸಲು ಕ್ರಮ:

ಕೆಪಿಟಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಪಂಕಜ್‌ಕುಮಾರ್‌ ಪಾಂಡೆ ಮಾತನಾಡಿ, ರಾಜ್ಯದ ಕೆಲವು ಸಬ್ ಸ್ಟೇಷನ್ ಗಳ ವ್ಯಾಪ್ತಿಯಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿ ಓವರ್ ಲೋಡ್ ಆಗುತ್ತಿದೆ. ಇನ್ನು ಕೆಲವು ಉಪ ಕೇಂದ್ರಗಳ ವ್ಯಾಪ್ತಿಯಲ್ಲಿ ಬೇಡಿಕೆಗಿಂತ ಹೆಚ್ಚು ವಿದ್ಯುತ್ ಲಭ್ಯವಿದ್ದು, ಅಂಡರ್ ಲೋಡ್ ಆಗುತ್ತಿದೆ. ಈ ಸಮಸ್ಯೆ ತಪ್ಪಿಸಲು ಅಂಡರ್ ಲೋಡ್ ಇರುವ ಉಪಕೇಂದ್ರಗಳಿಂದ ಓವರ್ ಲೋಡ್ ಇರುವ ಉಪಕೇಂದ್ರಗಳಿಗೆ ವಿದ್ಯುತ್ ಒದಗಿಸಲು ಲಿಂಕ್ ಲೈನ್ ವ್ಯವಸ್ಥೆಗೆ ಆದ್ಯತೆ ನೀಡಲಾಗುತ್ತಿದೆ. ಜತೆಗೆ ಪ್ರಸರಣ, ವಿತರಣೆ ಸಮಸ್ಯೆ ತಪ್ಪಿಸಲು 100 ಹೊಸ ಸಬ್‌ ಸ್ಟೇಷನ್‌ ಸ್ಥಾಪಿಸಲಾಗುವುದು ಎಂದರು.

ಕ್ರೆಡಲ್‌ ಅಧ್ಯಕ್ಷ ಟಿ.ಡಿ ರಾಜೇಗೌಡ, ಪಿಸಿಕೆಎಲ್‌ ವ್ಯವಸ್ಥಾಪಕ ನಿರ್ದೇಶಕ ಲೋಖಂಡೆ ಸ್ನೇಹಲ್‌ ಸುಧಾಕರ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್‌. ಶಿವಶಂಕರ್‌ ಹಾಜರಿದ್ದರು.

*1,000 ಮೆ.ವ್ಯಾ ವಿದ್ಯುತ್ ಖರೀದಿ:ವಿದ್ಯುತ್‌ ಕೊರತೆ ನೀಗಿಸಲು ಕೇಂದ್ರ ವಿದ್ಯುತ್‌ ಎಕ್ಸ್‌ಚೇಂಜ್‌ನಿಂದ ಪ್ರತಿ ಯುನಿಟ್‌ಗೆ 6.5 ರು.ಗಳಂತೆ ಮಾ.1 ರಿಂದ ಜೂನ್‌ ಮೊದಲ ವಾರದವರೆಗೆ 1,000 ಮೆ.ವ್ಯಾಟ್‌ ವಿದ್ಯುತ್‌ ಖರೀದಿ ಮಾಡಲಾಗುವುದು.

ಕೋಟ್-

ಕಳೆದ ವರ್ಷಕ್ಕೆ ಹೋಲಿಸಿದರೆ ವಿದ್ಯುತ್ ಬೇಡಿಕೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಕಳೆದ ವರ್ಷಕ್ಕಿಂತ 2,000 ಮೆ.ವ್ಯಾಟ್‌ ಬೇಡಿಕೆ ಹೆಚ್ಚಾಗಿದ್ದು, ಸಮರ್ಪಕವಾಗಿ ಪೂರೈಸಲು ಸಿದ್ಧತೆ ಮಾಡಲಾಗಿದೆ. ಜೂನ್ ಮೊದಲ ವಾರದವರೆಗೆ ಯಾವುದೇ ಸಮಸ್ಯೆ ಇಲ್ಲದಂತೆ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ.

- ಗೌರವ್ ಗುಪ್ತ, ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಬುದ್ಧ ಭಾರತ ನಿರ್ಮಾಣ ಕನಸು ಕಂಡವರು ಅಂಬೇಡ್ಕರ್‌: ಪ್ರೊ. ವಿಶ್ವನಾಥ
ಅಕ್ಷಯ ಪಾತ್ರೆಗೆ ಆಧುನಿಕ ತಂತ್ರಜ್ಞಾನದ ಯಂತ್ರ