ಶಿವಮೊಗ್ಗ: ಮೋದಿ, ಅಮಿತ್ ಶಾ ಅಲ್ಲ, ದೇವರು ಬಂದು ಹೇಳಿದರೂ ನಾನು ಸ್ಪರ್ಧೆ ಮಾಡೇ ಮಾಡುತ್ತೇನೆ. ನನ್ನ ಬೆಂಬಲಿಗರಿಗೆ ಯಾವುದೇ ಕಾರಣಕ್ಕೂ ನಿರಾಸೆ ಮಾಡಲ್ಲ. ಯಾರು ಎಷ್ಟೇ ಅಪಪ್ರಚಾರ ಮಾಡಿದರೂ ಬೆಂಬಗರ ಬಲದಿಂದ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂದು ಸ್ವತಂತ್ರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈಶ್ವರಪ್ಪ ಸ್ಪರ್ಧೆ ಮಾಡಲ್ಲ, ಅವರು ನಾಮಪತ್ರ ಸಲ್ಲಿಸಲ್ಲ ಎನ್ನುತ್ತಿದ್ದವರಿಗೆ ಈಗಾಗಲೇ ಈ ಕ್ಷೇತ್ರದ ಜನ ಉತ್ತರ ಕೊಟ್ಟಿದ್ದಾರೆ. ನಾಮಪತ್ರ ಸಲ್ಲಿಕೆ ದಿನ ಇಲ್ಲಿಗೆ ಬರಲು ಕಾರ್ಯಕರ್ತರು ಬಸ್‌ಗಳನ್ನು ಬುಕ್ ಮಾಡಿದರೆ ಮಾಲೀಕರ ಮೇಲೆ ಒತ್ತಡ ಹಾಕಿ ಬಸ್‌ಗಳು ಬಾರದಂತೆ ನೋಡಿಕೊಂಡಿದ್ದಾರೆ. ಆದರೂ, ಟ್ಯಾಕ್ಸಿ, ಟ್ರ್ಯಾಕ್ಟರ್, ಬೈಕ್‌ಗಳಲ್ಲಿ ಸಾವಿರಾರು ಸಂಖ್ಯೆಯ ಜನ ಬಂದಿದ್ದರು. ಅವರ ಋಣ ತೀರಿಸಲು ಆಗಲ್ಲ ಎಂದರು.
ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಯುವಕರು, ನಾರಿಯರು, ರೈತರು ಸಾವಿರಾರು ಸಂಖ್ಯೆಯಲ್ಲಿ ಸೇರಿ ಈಶ್ವರಪ್ಪ ಜೊತೆಗೆ ಇದ್ದೇವೆ ಎಂದು ತೋರಿಸಿದ್ದಾರೆ. ಇಷ್ಟಾದರೂ ಈಶ್ವರಪ್ಪ ಅವರಿಗೆ ಈಗಲೂ ಕಾಲ ಮಿಂಚಿಲ್ಲ. ನಾಮಪತ್ರ ವಾಪಸ್ ತೆಗೆದುಕೊಳ್ಳುತ್ತಾರೆ. ಹಿರಿಯರು ಮಾತನಾಡುತ್ತಾರೆ ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಈ ರೀತಿಯ ಯಾವ ಅಪಪ್ರಚಾರಕ್ಕೂ ಈಶ್ವರಪ್ಪ ಬಗ್ಗಲ್ಲ ಎಂದು ಕಿಡಿಕಾರಿದರು.
ಈಶ್ವರಪ್ಪ ಗೆದ್ದ ನಂತರ ಅಭಿವೃದ್ಧಿ ಮಾಡುತ್ತಾರೆ ಎಂದು ಕ್ಷೇತ್ರದ ಜನರಿಗೆ ಗೊತ್ತಿದೆ. ನಾನು ಸಹ ಗೆದ್ದ ನಂತರ ಮೋದಿ ಯೋಜನೆಗಳನ್ನು ತಂದು ಅಭಿವೃದ್ಧಿ ಮಾಡುತ್ತೇನೆ. ಜಿಲ್ಲೆಯಲ್ಲಿ ಅನೇಕ ಸಮಸ್ಯೆಗಳಿವೆ. ಅವುಗಳ ಬಗ್ಗೆ ಗೆದ್ದ ಬಳಿಕ ಹೋರಾಟ ಮಾಡುತ್ತೇನೆ. ಮುಂದೆ ವಿಐಎಸ್ಎಲ್ ಆರಂಭ ಮಾಡದಿದ್ದರೆ ಮತ ಕೊಡಬೇಡಿ ಎಂದು ಹೇಳಿ ಕೊನೆಗೆ ಏನು ಮಾಡಿದ್ದಾರೆ ಎಂಬುದು ಗೊತ್ತಿದೆ. ಹೀಗಾಗಿ ನಾನೇ ಎಲ್ಲವನ್ನು ಸರಿ ಮಾಡುತ್ತೇನೆ ಎನ್ನುತ್ತಿಲ್ಲ. ಹೋರಾಟಗಾರರನ್ನು ಕರೆಸಿಕೊಂಡು ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಹಾಗೂ ವಿಐಎಸ್ಎಲ್ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ, ಅವರನ್ನು ದೆಹಲಿಗೆ ಕರೆದುಕೊಂಡು ಹೋಗಿ ಸಂಬಂಧಿಸಿದ ಅಧಿಕಾರಿ, ಮಂತ್ರಿಗಳನ್ನು ಭೇಟಿ ಮಾಡಿಸಿ ಸಮಸ್ಯೆ ಬಗೆ ಹರಿಸುವಲ್ಲಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈಶ್ವರಪ್ಪ ಸ್ಪರ್ಧೆ ಮಾಡುತ್ತಿದ್ದಾರೆ. ಅವರ ಚಿನ್ಹೆ ಬಿಜೆಪಿ ಚಿನ್ಹೆ ಎಂದು ಜನರು ಭಾವಿಸಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ. ನಾಳೆಯಿಂದಲೇ ಕಾರ್ಯಕರ್ತರು ಕ್ಷೇತ್ರದ 280 ಬೂತ್‌ಗಳ ಮನೆ ಮನೆಗೆ ಹೋಗಿ ಯಾಕೆ ಈಶ್ವರಪ್ಪ ಸ್ಪರ್ಧೆ ಮಾಡುತ್ತಿದ್ದಾರೆ ಎಂಬ ಬಗ್ಗೆ ಕರಪತ್ರ ನೀಡಿ ಜನರಿಗೆ ಮನದಟ್ಟು ಮಾಡಿಕೊಡುವ ಕೆಲಸ ಮಾಡಲಿದ್ದಾರೆ. ಏ.22ರಂದು ಚುನಾವಣೆಯ ಚಿನ್ಹೆ ಬರಲಿದೆ. ಆಗ ಈಶ್ವರಪ್ಪ ಅವರದು ಚಿನ್ಹೆ ಇದು, ಬಿಜೆಪಿ ಚಿನ್ಹೆ ಅಲ್ಲ ಎಂದು ಮತದಾರರಿಗೆ ಮನವರಿಕೆ ಮಾಡಲಾಗುವುದು ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಮಾಜಿ ಮೇಯರ್ ಸುವರ್ಣ ಶಂಕರ್, ಲತಾ ಗಣೇಶ್, ಲಕ್ಷ್ಮಿ ಶಂಕರ್ ನಾಯಕ್, ವಿಶ್ವಾಸ್, ಆರತಿ ಆ.ಮ.ಪ್ರಕಾಶ್, ಮಹಲಿಂಗಯ್ಯ ಶಾಸ್ತ್ರಿ, ಬಿಜೆಪಿ ಭದ್ರಾವತಿ ಘಟಕದ ಅಧ್ಯಕ್ಷ ಪ್ರಭಾಕರ್, ಆಂಜನೇಯ ಸೇರಿದಂತೆ ಹಲವು ಉಪಸ್ಥಿತರಿದ್ದರು.
ನಮ್ಮದೇ ಬಿಜೆಪಿ ಎ ಟೀಂ: ಸಚಿವ ಮಧುಗೆ ಟಾಂಗ್: ಈಶ್ವರಪ್ಪ ಅವರದು ಬಿಜೆಪಿ ಬಿ ಟೀಂ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ನಾನು ಸಾಯುವವರೆಗೆ ಬಿಜೆಪಿ ಎ ಟೀಂ. ನಮ್ಮದೇ ಒರ್ಜಿನಲ್ ಬಿಜೆಪಿ ಟೀಂ. ಅವರದೇ ಬಿ ಟೀಂ ಇದು ಮಧು ಬಂಗಾರಪ್ಪಗೆ ಗೊತ್ತಾಗಿಲ್ಲ ಅಷ್ಟೇ. ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಡಮ್ಮಿ ಕ್ಯಾಂಡಿಡೇಟ್ ಹಾಕಿಸಿಕೊಂಡು ಬಂದಿದ್ದಾರೆ. ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದು ಮಧು ಬಂಗಾರಪ್ಪ ಹೇಳಲಿ ಎಂದು ಟಾಂಗ್ ನೀಡಿದರು.
ಹೊಂದಾಣಿಕೆಯಿಂದಾಗಿ ಅನೇಕ ಕಾಂಗ್ರೆಸ್ ನಾಯಕರ ಬೆಂಬಲ ನನಗೆ ಸಿಕ್ಕಿದೆ. ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ ಎನ್ನುವ ಕಾರಣಕ್ಕೆ ರಾಜ್ಯದ ಜನ ನನ್ನ ಗುರುತು ಹಿಡಿಯುತ್ತಿದ್ದಾರೆ. ನೀವು ಅಧಿಕಾರಕ್ಕಾಗಿ ಯಾವ್ಯಾವ ಪಕ್ಷಗಳಿಗೆ ಹೋಗಿದ್ದೀರಾ. ನಿಮ್ಮದು ಯಾವ ಟೀಂ ಎಂದು ಪ್ರಶ್ನಿಸಿದ ಅವರು, ಯಾರಿಗೋ ಟೀಕೆ ಮಾಡುವಂತೆ ನನ್ನ ಟೀಕೆ ಮಾಡಬೇಡಿ ಎಂದು ತಿರುಗೇಟು ನೀಡಿದರು.
ಹಾವು, ಚೇಳುಗಳ ಟೀಕೆಗೆಲ್ಲ ತಲೆಕಡೆಸಿಕೊಳ್ಳಬೇಡಿ ಎಂದು ಸಂಸದ ಹೇಳಿದ್ದಾರೆ. ಆದರೆ, ನಮ್ಮ ಬಳಿ ಯಾವ ಹಾವು, ಚೇಳುಗಳಿಲ್ಲ. ಮೆರವಣಿಗೆಯಲ್ಲಿ ಇದ್ದವರೆಲ್ಲಾ ಹಿಂದೂ ಹುಲಿಗಳು. ಇವರು ಯಾವುದೇ ಕಾರಣಕ್ಕೂ ಬಗ್ಗಲ್ಲ, ಜಗ್ಗಲ್ಲ ಎಂದು ಕುಟುಕಿದರು.