ಪಾಲಿಸ್ಟರ್‌ ಧ್ವಜ ಕೇಳುವವರಿಲ್ಲ

KannadaprabhaNewsNetwork |  
Published : Aug 15, 2024, 01:59 AM IST
136 | Kannada Prabha

ಸಾರಾಂಶ

ಕಳೆದ 3-4 ದಿನಗಳಿಂದ ಅನ್ಯ ರಾಜ್ಯಗಳಿಂದ ರಾಜ್ಯಕ್ಕೆ ರೈಲಿನ ಮೂಲಕ 25 ಲಕ್ಷಕ್ಕೂ ಅಧಿಕ ಪಾಲಿಸ್ಟರ್‌ ರಾಷ್ಟ್ರಧ್ವಜಗಳು ಆಗಮಿಸಿವೆ. ಆದರೆ, ಕಳೆದ ಬಾರಿಯಂತೆ ಭರ್ಜರಿ ವ್ಯಾಪಾರವೇ ಇಲ್ಲದಂತಾಗಿದೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ:

ಕಳೆದ ಎರಡ್ಮೂರು ವರ್ಷಗಳಿಂದ ರಾಜ್ಯಾದ್ಯಂತ ಅಬ್ಬರಿಸಿದ್ದ ಪಾಲಿಸ್ಟರ್‌ ತ್ರಿವರ್ಣ ಧ್ವಜಗಳನ್ನು ಈ ಬಾರಿ ಕೇಳುವವರೇ ಇಲ್ಲ. ಪ್ರತಿ ವರ್ಷದಂತೆ ಭರ್ಜರಿ ವ್ಯಾಪಾರವಾಗುತ್ತದೆ ಎಂದು ಹೆಚ್ಚಿನ ಪ್ರಮಾಣದಲ್ಲಿ ಧ್ವಜ ಮಾರಾಟಕ್ಕೆ ಬಂದ ವ್ಯಾಪಾರಸ್ಥರು ಈಗ ಸಂಕಷ್ಟ ಅನುಭವಿಸುವಂತಾಗಿದೆ.

ರಾಜ್ಯಕ್ಕೆ ಬಿಹಾರ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ನಾನಾ ರಾಜ್ಯಗಳಿಂದ ಕರ್ನಾಟಕದ 20ಕ್ಕೂ ಅಧಿಕ ಜಿಲ್ಲೆಗಳಿಗೆ 10 ಸಾವಿರಕ್ಕೂ ಅಧಿಕ ಮಾರಾಟಗಾರರು ಬಂದಿಳಿದಿದ್ದು, ನಿರೀಕ್ಷಿತ ಪ್ರಮಾಣದ ಅರ್ಧದಷ್ಟು ಧ್ವಜಗಳು ಮಾರಾಟವಾಗುತ್ತಿಲ್ಲ.

ಎಲ್ಲೆಲ್ಲಿ ಮಾರಾಟ?

ಬಿಹಾರ, ಆಂಧ್ರಪ್ರದೇಶ, ತಮಿಳುನಾಡಿನಿಂದ ಆಗಮಿಸಿರುವ ಇವರು ಬೆಂಗಳೂರು, ದಾವಣಗೆರೆ, ವಿಜಯಪುರ, ಬಾಗಲಕೋಟೆ, ಬಳ್ಳಾರಿ, ಧಾರವಾಡ, ಬೆಳಗಾವಿ, ಬಾಗಲಕೋಟೆ, ಕೊಪ್ಪಳ, ಗದಗ, ಹಾವೇರಿ, ವಿಜಯನಗರ, ಬೀದರ ಸೇರಿದಂತೆ 20ಕ್ಕೂ ಅಧಿಕ ಜಿಲ್ಲೆಗಳಲ್ಲಿನ ನಗರ ಪ್ರದೇಶಗಳಲ್ಲಿ ಪ್ರಮುಖ ವೃತ್ತಗಳಲ್ಲಿ, ಪುಟ್‌ಪಾತ್‌, ಬಸ್‌ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ಪ್ರಮುಖ ಜನನಿಬಿಡ ಪ್ರದೇಶ, ಬೀದಿ ಬೀದಿಗಳಲ್ಲಿ ಮಾರಾಟ ಮಾಡುತ್ತಾರೆ.

25 ಲಕ್ಷಕ್ಕೂ ಅಧಿಕ ಧ್ವಜ:

ಕಳೆದ 3-4 ದಿನಗಳಿಂದ ಅನ್ಯ ರಾಜ್ಯಗಳಿಂದ ರಾಜ್ಯಕ್ಕೆ ರೈಲಿನ ಮೂಲಕ 25 ಲಕ್ಷಕ್ಕೂ ಅಧಿಕ ಪಾಲಿಸ್ಟರ್‌ ರಾಷ್ಟ್ರಧ್ವಜಗಳು ಆಗಮಿಸಿವೆ. ಆದರೆ, ಕಳೆದ ಬಾರಿಯಂತೆ ಭರ್ಜರಿ ವ್ಯಾಪಾರವೇ ಇಲ್ಲದಂತಾಗಿದೆ. ₹ 50ರಿಂದ ₹600ರ ವರೆಗೆ ವಿವಿಧ ಬಗೆಯ ಅಳತೆಯ ಪಾಲಿಸ್ಟರ್‌ನಿಂದ ತಯಾರಿಸಿದ ತ್ರಿವರ್ಣ ಧ್ವಜ ಮಾರಾಟ ಮಾಡಲಾಗುತ್ತಿದೆ. ಮಾರಾಟಗಾರರು ತ್ರಿವರ್ಣಧ್ವಜ ಹಿಡಿದು ಖರೀದಿಸುವಂತೆ ಅಂಗಲಾಚಿದರೂ ಸಹ ಕೊಳ್ಳುವವರೇ ಇಲ್ಲದಂತಾಗಿದೆ.

ಖಾದಿಗೆ ಬೇಡಿಕೆ:ಕಳೆದ ಬಾರಿಗಿಂತಲೂ ಈ ಬಾರಿ ಖಾದಿಯಿಂದ ತಯಾರಾದ ತ್ರಿವರ್ಣ ಧ್ವಜಗಳಿಗೆ ಕೊಂಚ ಬೇಡಿಕೆ ಹೆಚ್ಚಾಗಿದೆ. ಕಳೆದ ಬಾರಿ ಪಾಲಿಸ್ಟರ್‌ ಧ್ವಜಗಳ ಹಾವಳಿಯಿಂದಾಗಿ ಖಾದಿಗೆ ಕೊಂಚ ಹೊಡೆತ ಬಿದ್ದಿತ್ತು. ಆದರೆ, ಈ ಬಾರಿ ಪಾಲಿಸ್ಟರ್‌ ಧ್ವಜಗಳು ರಾಜ್ಯದಲ್ಲಿ ಲಗ್ಗೆಯಿಟ್ಟರೂ ಜನತೆ ಖಾದಿ ಕೇಂದ್ರಗಳಿಗೆ ತೆರಳಿ ಖಾದಿಯಿಂದ ತಯಾರಿಸಲಾದ ತ್ರಿವರ್ಣಧ್ವಜ ಖರೀದಿಸುವವರ ಸಂಖ್ಯೆ ಕೊಂಚ ಹೆಚ್ಚಳವಾಗಿದೆ ಎಂದು ನ್ಯೂ ಖಾದಿ ಭಂಡಾರದ ಸಂಜೋತ್‌ ದೇಶಪಾಂಡೆ ಕನ್ನಡಪ್ರಭಕ್ಕೆ ತಿಳಿಸಿದರು.

ಕಾಣಿಸದ ಹರ್‌ ಘರ್‌ ತಿರಂಗಾ?

ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದ ಹರ್‌ ಘರ್‌ ತಿರಂಗಾ ಜಾಗೃತಿ ಮೂಡಿಸುವಲ್ಲಿ ರಾಜ್ಯದ ಹಲವು ಜಿಲ್ಲೆಗಳು ವಿಫಲವಾದಂತೆ ಕಾಣುತ್ತಿವೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾಗಶಃ ಎಲ್ಲಿಯೂ ಮನೆಗಳ ಮೇಲೆ ತ್ರಿವರ್ಣಧ್ವಜ ಕಾಣಸಿಗುತ್ತಿಲ್ಲ. ಎಲ್ಲಿಯೋ ಅಲ್ಲೊಂದು, ಇಲ್ಲೊಂದು ಎಂಬಂತೆ ಮನೆಗಳ ಮೇಲೆ ತಿರಂಗಾ ಕಾಣಸಿಗುತ್ತಿದೆ. ಇದರಿಂದಾಗಿಯೂ ಈ ಬಾರಿ ಧ್ವಜ ಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. ಹಾಗಾಗಿ ಧ್ವಜ ಖರೀದಿಸುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂಬುದು ಹಲವು ನಾಗರಿಕರ ಅನಿಸಿಕೆ.ಪ್ರತಿವರ್ಷದಂತೆ ಈ ವರ್ಷವೂ ಹೆಚ್ಚಿನ ಮಾರಾಟದ ನಿರೀಕ್ಷೆಯನ್ನಿಟ್ಟುಕೊಂಡು ಬಂದಿದ್ದೆವು. ಕಳೆದ ಎರಡ್ಮೂರು ದಿನಗಳಿಂದ ನಿರೀಕ್ಷಿತ ಮಾರಾಟವಿಲ್ಲದೇ ತೊಂದರೆ ಅನುಭವಿಸುವಂತಾಗಿದೆ. ಈ ಬಾರಿ ಧ್ವಜ ಖರೀದಿಗೆ ಹಾಕಿದ ಹಣವೂ ಬಾರದಂತಾಗಿದೆ ಎಂದು ಬಿಹಾರದಿಂದ ಧ್ವಜ ಮಾರಾಟಕ್ಕೆ ಬಂದ ರೂಪಚಂದ್‌ ಸಾಳ್ವೆ, ನಿರೂಪಮಾ ಸಾಳ್ವೆ ಹೇಳಿದರು.ಅಪ್ಪಟ ಖಾದಿಯಿಂದ ತಯಾರಿಸಲಾದ ತ್ರಿವರ್ಣಧ್ವಜ ಖರೀದಿಸಬೇಕು. ಇದರಿಂದ ಖಾದಿ ಉದ್ಯಮಕ್ಕೂ ಕೈಜೋಡಿಸಿದಂತಾಗುತ್ತದೆ. ಪಾಲಿಸ್ಟರ್‌ ಧ್ವಜ ಖರೀದಿಸದೇ ಎಲ್ಲರೂ ಖಾದಿಯಿಂದ ತಯಾರಿಸಲಾದ ತ್ರಿವರ್ಣ ಧ್ವಜ ಖರೀದಿಸಿ ಎಂದು ಸಾರ್ವಜನಿಕರು ಕರೆ ನೀಡಿದರು.

PREV

Recommended Stories

ಗೃಹಲಕ್ಷ್ಮೀಯರ ಬಾಕಿ ಹಣ ಬಿಡುಗಡೆಗೆ ಲಕ್ಷ್ಮೀ ತಥಾಸ್ತು : ಸುಳ್ಳಲ್ಲೇ 7 ಗಂಟೆ ರೈಲು ಓಡಿಸಿದ್ರು
ರೈಲಲ್ಲಿ ವಿದ್ಯಾರ್ಥಿಗಳೊಂದಿಗೆ ಮೋದಿ ಸಂವಾದ