ಬಜೆಟ್‌ನಲ್ಲಿ ಸಿಂಧನೂರಿಗೆ ಬಿಡಿಗಾಸಿಲ್ಲ: ನಾಡಗೌಡ ಟೀಕೆ

KannadaprabhaNewsNetwork | Published : Feb 18, 2024 1:33 AM

ಸಾರಾಂಶ

ಜಿಲ್ಲೆಯ ಬಹುತೇಕ ತಾಲೂಕುಗಳಿಗೆ ಸರ್ಕಾರ ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ಹಣ ಘೋಷಣೆ ಮಾಡಿದೆ. ಆದರೆ ಸಿಂಧನೂರು ತಾಲೂಕಿಗೆ ಬಿಡಿಗಾಸನ್ನು ನೀಡಿಲ್ಲ.

ಸಿಂಧನೂರು: ಜಿಲ್ಲೆಯ ಬಹುತೇಕ ತಾಲೂಕುಗಳಿಗೆ ಸರ್ಕಾರ ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ಹಣ ಘೋಷಣೆ ಮಾಡಿದೆ. ಆದರೆ ಸಿಂಧನೂರು ತಾಲೂಕಿಗೆ ಬಿಡಿಗಾಸನ್ನು ನೀಡಿಲ್ಲ. ಇದಕ್ಕೆ ಶಾಸಕ ಹಂಪನಗೌಡ ಬಾದರ್ಲಿ ಅವರ ನಿರ್ಲಕ್ಷ್ಯ್ಯ ಕಾರಣ ಎಂದು ಮಾಜಿ ಸಚಿವ ವೆಂಕಟರಾವ್ ನಾಡಗೌಡ ಟೀಕಿಸಿದರು.

ಪತ್ರಿಕಾ ಭವನದಲ್ಲಿ ಶನಿವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ರಾಯಚೂರು ಜಿಲ್ಲೆಯಲ್ಲಿ ಎಲ್ಲ ಶಾಸಕರು ತಮ್ಮ ಕ್ಷೇತ್ರದ ಪ್ರಮುಖ ಕೆಲಸಗಳನ್ನು ಬಜೆಟ್‌ನಲ್ಲಿ ಸೇರ್ಪಡೆ ಮಾಡಿದ್ದಾರೆ. ಆದರೆ ಸಿಂಧನೂರು ತಾಲೂಕಿನ ಒಂದು ಕೆಲಸಗಳು ಸಹ ಬಜೆಟ್‌ನಲ್ಲಿ ಸೇರ್ಪಡೆಯಾಗದಿರುವುದಕ್ಕೆ ಶಾಸಕ ಹಂಪನಗೌಡ ಬಾದರ್ಲಿ ಅವರ ದಿವ್ಯ ನಿರ್ಲಕ್ಷ್ಯವೇ ಕಾರಣವಾಗಿದೆ. ಬಜೆಟ್‌ನಲ್ಲಿ ಜಿಲ್ಲೆ ವಿವಿಧ ತಾಲೂಕಿಗೆ ಹಣ ನೀಡಲಾಗಿದೆ. ಆದರೆ ಸಿಂಧನೂರು ತಾಲೂಕಿಗೆ ಬಿಡಿ ಕಾಸನ್ನು ಕೊಟ್ಟಿಲ್ಲ ಎಂದು ಆಪಾದಿಸಿದರು.

ನವಲಿ ಜಲಾಶಯ ವಿಷಯ ಪ್ರಸ್ತಾಪವಾಗಿರುವುದಕ್ಕೆ ಹಂಪನಗೌಡರ ಪಾತ್ರವೇನು ಇಲ್ಲ. ಹಿಂದಿನ ಸರ್ಕಾರವೇ ಡಿಪಿಆರ್ ತಯಾರಿಸಿದ್ದಲ್ಲದೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್‌ನಲ್ಲಿ 1000 ಕೋಟಿ ರು. ಮೀಸಲಿಟ್ಟಿದ್ದರು. ಈ ಕುರಿತು ನೆರೆ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿತ್ತು. ಅವರು ಸಹ ಸಕರಾತ್ಮಕವಾಗಿ ಸ್ಪಂದಿಸಿದ್ದರು ಎಂದು ನೆನಪಿಸಿದರು.

ರೈತರು ಬೆಳೆದ ಜೋಳ ಕೈಗೆ ಬಂದು ಒಂದು ತಿಂಗಳು ಗತಿಸಿದವು. ಇನ್ನು ಖರೀದಿ ಕೇಂದ್ರ ಆರಂಭವಾಗಿಲ್ಲ. ಈಗ ಸದನ ನಡೆಯುತ್ತಿದ್ದು, ಶಾಸಕರು ಸರ್ಕಾರದ ಮೇಲೆ ಒತ್ತಡ ತಂದು ತಕ್ಷಣ ಖರೀದಿ ಕೇಂದ್ರ ಪ್ರಾರಂಭಿಸಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಅವರು ಎಚ್ಚರಿಸಿದರು.

ದೇವದುರ್ಗದಲ್ಲಿ ಪೊಲೀಸರು ಮತ್ತು ಶಾಸಕಿ ಕರಿಯಮ್ಮ ಅವರ ನಡುವೆ ನಡೆದಿರುವ ಸಂಘರ್ಷಕ್ಕೆ ಎರಡು ಕಡೆಯವರು ಸಮ-ಸಮವಾಗಿಯೆ ಕಾರಣರಾಗಿದ್ದಾರೆ. ಪೊಲೀಸರು ಆರೋಪಿಸುವ ವ್ಯಕ್ತಿಯ ಮನೆಯ ಮುಂದೆ ನಿಲ್ಲಿಸಲಾಗಿದ್ದ ಟ್ರಾಕ್ಟರ್ ತೆಗೆದುಕೊಂಡು ಹೋಗಿ ಅವನ ಮೇಲೆ ಹಲ್ಲೆ ಮಾಡಿರುವುದಕ್ಕೆ ಒಬ್ಬ ಶಾಸಕಿಯಾಗಿ ಘಟನೆ ಕುರಿತು ಪ್ರತಿಭಟಿಸುವುದರಲ್ಲಿ ತಪ್ಪೆನಿದೆ ಎಂದು ವೆಂಕಟರಾವ್ ನಾಡಗೌಡ ಪ್ರಶ್ನಿಸಿದರು.

ವಿಡಿಯೋದಲ್ಲಿ ಶಾಸಕಿಯ ಪುತ್ರ ಹಲ್ಲೆ ಮಾಡಿರುವ ಬಗ್ಗೆ ಕಾಣಿಸುವುದಿಲ್ಲ. ಏನೆ ಆದರೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪರಿಸ್ಥಿತಿಯನ್ನು ತಿಳಿಗೊಳಿಸಬೇಕು ಎಂದು ಸಲಹೆ ನೀಡಿದರು.

ನಗರಸಭೆ ಸದಸ್ಯರಾದ ಚಂದ್ರಶೇಖರ ಮೈಲಾರ, ಎಸ್.ಪಿ.ಟೈಲರ್, ದಾಸರಿ ಸತ್ಯನಾರಾಯಣ, ಮುಖಂಡರಾದ ಅಶೋಕಗೌಡ ಗದ್ರಟಗಿ, ಯಂಕೋಬ ಕಲ್ಲೂರು, ಸಣ್ಣವೀರಭದ್ರಪ್ಪ, ನಿರುಪಾದಿ ಸುಕಾಲಪೇಟೆ, ಆಶೀಫ್ ಇದ್ದರು.

Share this article