ರಸ್ತೆಯಲ್ಲಿಲ್ಲ ಸ್ಪೀಡ್ ಬ್ರೇಕರ್‌, ಅಪಘಾತಗಳಿಗೆ ಲೆಕ್ಕವಿಲ್ಲ

KannadaprabhaNewsNetwork | Published : Jul 7, 2024 1:18 AM

ಸಾರಾಂಶ

ಗುಳೇದಗುಡ್ಡ ಸಮೀಪದ ಕೋಟೆಕಲ್ ಗ್ರಾಮದ ಹತ್ತಿರ ಸಂಕೇಶ್ವರ-ಕೂಡಲಸಂಗಮ ರಾಜ್ಯ ಹೆದ್ದಾರಿಯಲ್ಲಿ ನಿತ್ಯವೂ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೂಡಲೇ ಅಗತ್ಯ ಸ್ಥಳಗಳಲ್ಲಿ ಹಂಪ್ಸ್ ಗಳ್ನು ಹಾಕಿ, ಅಪಘಾತ ತಡೆಯಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸಿ.ಎಂ. ಜೋಷಿ

ಕನ್ನಡಪ್ರಭವಾರ್ತೆ ಗುಳೇದಗುಡ್ಡಸಮೀಪದ ಕೋಟೆಕಲ್ ಗ್ರಾಮದ ಹತ್ತಿರ ಸಂಕೇಶ್ವರ-ಕೂಡಲಸಂಗಮ ರಾಜ್ಯ ಹೆದ್ದಾರಿಯಲ್ಲಿ ನಿತ್ಯವೂ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೂಡಲೇ ಅಗತ್ಯ ಸ್ಥಳಗಳಲ್ಲಿ ಹಂಪ್ಸ್ ಗಳ್ನು ಹಾಕಿ, ಅಪಘಾತ ತಡೆಯಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸಂಕೇಶ್ವರ-ಕೂಡಲಸಂಗಮ ರಾಜ್ಯ ಹೆದ್ದಾರಿಯ ಕೋಟೆಕಲ್ ಗ್ರಾಮದ ಹೊರವಲಯದಲ್ಲಿ ರೋಡ್‌ ಬ್ರೇಕರ್‌ಗಳನ್ನೇ ಹಾಕಿಲ್ಲ. ನಿತ್ಯವೂ ವಾಹನ ಸವಾರರು ಬೇಕಾಬಿಟ್ಟಿಯಾಗಿ ವಾಹನ ಚಲಾಯಿಸುತ್ತಿರುವುದರಿಂದ ಸ್ಥಳೀಯ ನಿವಾಸಿಗಳು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವ ಸ್ಥಿತಿ ಇದೆ.

ಪ್ರತಿನಿತ್ಯ ಕೋಟೆಕಲ್ಲ ಗ್ರಾಮದ ಮೂಲಕವೇ ಇಳಕಲ್ಲ, ಹುಬ್ಬಳ್ಳಿ, ಬಾದಾಮಿ, ಬಾಗಲಕೋಟೆ, ಧಾರವಾಡ, ರಾಮದುರ್ಗ ಸೇರಿದಂತೆ ಹಲವು ನಗರಗಳಿಗೆ ಹೋಗಬೇಕು. ನಿತ್ಯವೂ ಅಸಂಖ್ಯ ವಾಹನಗಳು ಸಂಚರಿಸುತ್ತವೆ. ಆದರೆ, ಅವುಗಳ ಸ್ಪೀಡ್ ಗೆ ಕಡಿವಾಣ ಇಲ್ಲದಂತಾಗಿದೆ. ಇದರಿಂದ ಕಳೆದ 10 ದಿನಗಳಲ್ಲಿ ಸುಮಾರು 5-6 ವಾಹನಗಳು ಅಪಘಾತಗಳಾಗಿವೆ ಎಂಬ ಆರೋಪ ಕೇಳಿಬರುತ್ತಿದೆ.

ರಾಜ್ಯ ಹೆದ್ದಾರಿ ಪಕ್ಕದಲ್ಲಿಯೇ ಕೋಟೆಕಲ್ ಗ್ರಾಮದ ಗಂಗಾನಗರ ಓಣಿಗೆ ಸಂಪರ್ಕ ಕೊಡುವ ರಸ್ತೆಯಿದೆ. ಬಾದಾಮಿ, ಬಾಗಲಕೋಟೆ ಕಡೆಯಿಂದ ಬರುವ ವಾಹನಗಳು ವೇಗವಾಗಿ ಬರುತ್ತವೆ. ಗಂಗಾನಗರ ಓಣಿ ಜನರು ರಸ್ತೆ ದಾಟುವುದೆಂದರೆ ಪ್ರಾಣಸಂಕಟ. ಪದೇ ಪದೆ ಈ ಸ್ಥಳದಲ್ಲಿ ಅಪಘಾತಗಳು ನಡೆಯುತ್ತಲೇ ಇವೆ. ಹೀಗಾದರೆ ಜನರ ಜೀವಕ್ಕೆ ಯಾರು ಹೊಣೆ ? ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸುವಂತೆ ಸ್ಥಳೀಯರ ಒತ್ತಾಯಿಸಿದ್ದಾರೆ.

ಯುವಕರು ತಮ್ಮ ವಾಹನಗಳಿಂದ ಕರ್ಕಶ ಶಬ್ಧ ಮಾಡಿಕೊಂಡು ವಾಹನ ಚಾಲನೆ ಮಾಡುತ್ತಿದ್ದಾರೆ. ಕೋಟೆಕಲ್ ಗ್ರಾಮದಿಂದ ಗುಳೇದಗುಡ್ಡವರೆಗೆ ಅತಿ ವೇಗವಾಗಿ ಬೈಕ್ ಚಾಲನೆ ಮಾಡುತ್ತಾರೆ. ಅವರಿಗೆ ಕೇಳುವವರು ಯಾರೂ ಇಲ್ಲದಂತಾಗಿದೆ. ಇದಕ್ಕೆ ಕಡಿವಾಣ ಯಾವಾಗ ಎಂಬ ಪ್ರಶ್ನೆ ಜನರಿಂದ ಕೇಳಿಬರುತ್ತಿದೆ.

ಕೋಟೆಕಲ್ ಬಸ್ ನಿಲ್ದಾಣದವರೆಗೂ ಯಾವುದೇ ರೋಡ್ ಬ್ರೇಕರ್‌ ಇಲ್ಲ. ಇದರಿಂದ ಬಾಗಲಕೋಟೆ, ಬಾದಾಮಿಯಿಂದ ಬರುವ ವಾಹನಗಳು ವೇಗವಾಗಿ ಸಂಚರಿಸುತ್ತಿರುವುದರಿಂದ ಹಲವಾರು ಬಾರಿ ವಾಹನಗಳು ಪರಸ್ಪರ ಡಿಕ್ಕಿ ಹೊಡೆದು ಅಪಘಾತಗಳಾಗಿವೆ. ಕೋಟೆಕಲ್ ಗ್ರಾಮದ ಗಂಗಾನಗರದ ನಿವಾಸಿಗಳಲ್ಲಿ ಹಲವು ಜನರು ರಸ್ತೆ ಅಪಘಾತದಲ್ಲಿ ಕೈಕಾಲು ಮುರಿದುಕೊಂಡ ಹಾಗೂ ಗಾಯ ಮಾಡಿಕೊಂಡ ಅನೇಕ ಉದಾಹರಣೆಗಳಿವೆ. ಈ ರಸ್ತೆಯಲ್ಲಿ ಸ್ಪೀಡ್ ಬ್ರೇಕರ್ ಇಲ್ಲದಿರುವುದರಿಂದ ಜನರು ಬೇಕಾಬಿಟ್ಟಿಯಾಗಿ ವಾಹನ ಚಲಾಯಿಸುತ್ತಿದ್ದಾರೆ. ಇದರಿಂದ ಅಪಘಾತಗಳು ಹೆಚ್ಚಿವೆ. ವಾರದಲ್ಲಿ 2-3 ಅಪಘಾತಗಳಾದರೂ ನಡೆಯುತ್ತವೆ. ಕೂಡಲೇ ರಸ್ತೆಗೆ ಸ್ಪೀಡ್ ಬ್ರೇಕರ್ ಹಾಕಬೇಕು. ಇಲ್ಲದಿದ್ದರೆ ಅಪಘಾತಗಳು ಹೆಚ್ಚುತ್ತವೆ.

-ಸಿದ್ದು ಆಲೂರ, ಗುಂಡಪ್ಪ ಕೋಟಿ , ಕೋಟೆಕಲ್ ಗ್ರಾಮಸ್ಥರು. ನಿರ್ಲಕ್ಷ್ಯತನದಲ್ಲಿ ವಾಹನ ಚಾಲನೆ ಮಾಡುವವರ ವಿರುದ್ಧ ಕೇಸ್ ದಾಖಲಾಗುವುದು. ಅತಿವೇಗದಲ್ಲಿ ಚಲಾಯಿಸುತ್ತಿದ್ದ 4-5 ಬೈಕ್ ಸವಾರರಿಗೆ ಈಗಾಗಲೇ ಕೇಸ್ ಹಾಕಿದ್ದೇವೆ. ಇದೇ ರೀತಿ ಮುಂದುವರಿದರೆ ಕೇಸ್ ದಾಖಲಿಸಲಾಗುವುದು.

-ಲಕ್ಷ್ಮಣ ಆರಿ ಪಿಎಸ್ಐ ಗುಳೇದಗುಡ್ಡಕೋಟೆಕಲ್ ಗ್ರಾಮದಲ್ಲಿ ಸದ್ಯ 2 ಕಡೆಗಳಲ್ಲಿ ಸ್ಪೀಡ್‌ ಬ್ರೇಕರ್ ಇದ್ದು, ಇನ್ನೊಂದು ಕಡೆ ನಿರ್ಮಾಣದ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರುತ್ತೇನೆ.

-ಎ.ಕೆ.ಮಕಾಂದಾರ, ಜೆ.ಇ, ಪಿಡಬ್ಲುಡಿ ಇಲಾಖೆ ಬಾದಾಮಿ

Share this article