ಜೆಸಿ ಆಸ್ಪತ್ರೆಯ ಆರು ಮಂದಿ ವೈದ್ಯರ ವರ್ಗಾವಣೆ ಬೇಡ: ಶಾಸಕ ಆರಗ

KannadaprabhaNewsNetwork |  
Published : Jul 11, 2025, 01:49 AM IST
ಫೋಟೋ 10 ಟಿಟಿಎಚ್ 01: ಜೆಸಿ ಆಸ್ಪತ್ರೆಯ ವೈದ್ಯರುಗಳ ವರ್ಗಾವಣೆಯನ್ನು ವಿರೋದಿಸಿ ನಡೆದ ಪ್ರತಿಭಟನೆಯಲ್ಲಿ ಶಾಸಕ ಜ್ಞಾನೇಂದ್ರ ಮಾತನಾಡಿದರು. | Kannada Prabha

ಸಾರಾಂಶ

ಬಡ ರೋಗಿಗಳಿಗೆ ಚಿಕಿತ್ಸೆಗಿಂತ ಸಾವೇ ಲೇಸು ಎಂಬಂತ ಸ್ಥಿತಿ ಇದ್ದು, ಈ ಭಾಗದ ಬಡವರಿಗೆ ವರದಾನದಂತಿರುವ ಇಲ್ಲಿನ ಜೆಸಿ ಆಸ್ಪತ್ರೆಯಿಂದ ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಆರು ಮಂದಿ ತಜ್ಞ ವೈದ್ಯರನ್ನು ವರ್ಗಾವಣೆ ಮಾಡಬಾರದು ಎಂದು ಶಾಸಕ ಆರಗ ಜ್ಞಾನೇಂದ್ರ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ಬಡ ರೋಗಿಗಳಿಗೆ ಚಿಕಿತ್ಸೆಗಿಂತ ಸಾವೇ ಲೇಸು ಎಂಬಂತ ಸ್ಥಿತಿ ಇದ್ದು, ಈ ಭಾಗದ ಬಡವರಿಗೆ ವರದಾನದಂತಿರುವ ಇಲ್ಲಿನ ಜೆಸಿ ಆಸ್ಪತ್ರೆಯಿಂದ ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಆರು ಮಂದಿ ತಜ್ಞ ವೈದ್ಯರನ್ನು ವರ್ಗಾವಣೆ ಮಾಡಬಾರದು ಎಂದು ಶಾಸಕ ಆರಗ ಜ್ಞಾನೇಂದ್ರ ಆಗ್ರಹಿಸಿದರು.

ತೀರ್ಥಹಳ್ಳಿ ಪಟ್ಟಣದಲ್ಲಿರುವ ಜೆಸಿ ಆಸ್ಪತ್ರೆಯಿಂದ ಆರು ಮಂದಿ ವೈದ್ಯರುಗಳ ವರ್ಗಾವಣೆಯ ಸರ್ಕಾರದ ಆದೇಶವನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಪಪಂ ಸದಸ್ಯ ಸೊಪ್ಪುಗುಡ್ಡೆ ರಾಘವೇಂದ್ರ ನೇತೃತ್ವದ ನಾಗರಿಕ ವೇದಿಕೆಯ ವತಿಯಿಂದ ಗುರುವಾರ ಜೆಸಿ ಆಸ್ಪತ್ರೆಯ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಜೆಸಿ ಆಸ್ಪತ್ರೆಯ ಸಿಬ್ಬಂದಿಗಳ ವರ್ಗಾವಣೆ ಆದೇಶಕ್ಕೆ ಸಂಬಂಧಿಸಿ ಆರೋಗ್ಯ ಇಲಾಖೆಯ ಮೇಲಾಧಿಕಾರಿಗಳೊಂದಿಗೆ ನಾನು ನಿರಂತರ ಸಂಪರ್ಕದಲ್ಲಿದ್ದೇನೆ. ಇಲಾಖೆ ಪರ್ಯಾಯ ವ್ಯವಸ್ಥೆ ಮಾಡುವವರೆಗೂ ಈಗಿರುವ ಸಿಬ್ಬಂದಿಗಳ ವರ್ಗಾವಣೆಗೆ ಅವಕಾಶ ನೀಡುವುದಿಲ್ಲ. ಹೀಗಾಗಿ ಬದಲಿ ವೈದ್ಯರುಗಳು ಬರುವವರೆಗೂ ಹಾಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರುಗಳನ್ನು ರಿಲೀವ್ ಮಾಡಬಾರದು ಎಂದು ಜಿಲ್ಲಾ ವೈಧ್ಯಾದಿಕಾರಿಗಳಿಗೆ ತಾಕೀತು ಮಾಡಿದರು.

ಆರೋಗ್ಯ, ಶಿಕ್ಷಣ ಮುಂತಾದ ತಮ್ಮ ಸಮಸ್ಯೆಗಳ ಬಗ್ಗೆ ಜನರು ಪ್ರತಿಭಟನೆಯ ಮೂಲಕವೇ ಸರ್ಕಾರದ ಗಮನ ಸೆಳೆಯಬೇಕಾಗಿರೋದು ವಿಷಾದನೀಯ. ಸರ್ಕಾರ ಜನರ ಆರೋಗ್ಯ ಮತ್ತು ಶಿಕ್ಷಣದ ಬಗೆಗೆ ಉದಾಸೀನತೆ ಮಾಡಬಾರದು. ಹೊಸದಾಗಿ ವೈದ್ಯರುಗಳನ್ನು ನೇಮಕ ಮಾಡದ ಸರ್ಕಾರ, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಹಾಗೂ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಿ ವ್ಯವಸ್ಥಿತವಾಗಿ ನಡೆಯುತ್ತಿರುವ ಆಸ್ಪತ್ರೆಗಳಲ್ಲಿ ಗೊಂದಲ ಸೃಷ್ಟಿಸಿದೆ ಎಂದು ಆರೋಪಿಸಿದರು.

ಚಿಕಿತ್ಸೆ ದುಬಾರಿಯಾಗಿರುವ ಈ ದಿನಗಳಲ್ಲಿ ಆರ್ಥಿಕವಾಗಿ ಸಬಲರಾದವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಇಲ್ಲಿರುವ ಸಿಬ್ಬಂದಿ ಉತ್ತಮ ಚಿಕಿತ್ಸೆ ನೀಡುತ್ತಿರುವುದು ಶಾಸಕನಾದ ನನಗೆ ಸಮಾಧಾನಕರವಾಗಿದೆ ಎಂದು ಹೇಳಿದರು.

ಪ್ರತಿಭಟನೆಕಾರರ ಒತ್ತಾಯದ ಮೇಲೆ ಸ್ಥಳಕ್ಕಾಗಮಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಟರಾಜ್ ಮಾತನಾಡಿ, ನಿಯಮದಂತೆ ರಾಜ್ಯ ಮಟ್ಟದಲ್ಲಿ ನಡೆದಿರುವ ವರ್ಗಾವಣೆಯಾಗಿದ್ದು, ಇದರಲ್ಲಿ ಯಾವುದೇ ರೀತಿಯ ಬದಲಾವಣೆ ಅಸಾಧ್ಯವಾಗಿದೆ. ಜೆಸಿ ಆಸ್ಪತ್ರೆಯಿಂದ ವರ್ಗವಾಗಿರುವ ಆರು ವೈದ್ಯರುಗಳಲ್ಲಿ ನಾಲ್ಕು ಮಂದಿ ವೈದ್ಯರ ನೇಮಕವಾಗಿದೆ. ಉಳಿದ ಎರಡು ಹುದ್ದೆಗಳಿಗೂ ತಜ್ಞ ವೈದ್ಯರುಗಳನ್ನು ನೇಮಕ ಮಾಡಲಾಗುವುದು ಎಂದರು. ಜಿಲ್ಲಾ ಲೆಪ್ರೆಸಿ ಆಫಿಸರ್ ಡಾ.ಕಿರಣ್ ಇದ್ದರು.

ಪ್ರತಿಭಟನೆಯ ಆರಂಭದಲ್ಲಿ ಮಾತನಾಡಿದ ಪಪಂ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಸೊಪ್ಪುಗುಡ್ಡೆ ರಾಘವೇಂದ್ರ, ಪತ್ರಕರ್ತ ಡಾನ್ ರಾಮಣ್ಣ, ವರ್ತಕರ ಸಂಘದ ಅಧ್ಯಕ್ಷ ಚೈತನ್ಯ ಜವಳಿ, ದಲಿತ ಸಂಘರ್ಷ ಸಮಿತಿ ಮುಖಂಡ ಕೆ.ನಾಗರಾಜ್, ನಾರಾಯಣಗುರು ವಿಚಾರ ವೇದಿಕೆ ಸಮಿತಿಯ ವಿಶಾಲ್‍ಕುಮಾರ್, ಪಪಂ ಸದಸ್ಯೆ ಸುಶೀಲಾ ಶೆಟ್ಟಿ ಮುಂತಾದವರು ವೈದ್ಯರುಗಳ ವರ್ಗಾವಣೆಯ ಬಗ್ಗೆ ವಿರೋದ ವ್ಯಕ್ತಪಡಿಸಿದರು.

PREV