ಶಿವಮೊಗ್ಗ : ನೈಋತ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಡಾ.ಧನಂಜಯ ಸರ್ಜಿ ಮೇ 16ರಂದು ಮೈಸೂರಿನಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಡಾ.ಧನಂಜಯ ಸರ್ಜಿ ಸಾಮಾಜಿಕ ಕ್ಷೇತ್ರದಲ್ಲಿ ಹೆಸರು ಮಾಡಿದವರು. ಉತ್ತಮ ವೈದ್ಯರೂ ಆಗಿರುವ ಅವರು ಆರ್‌ಎಸ್‌ಎಸ್‌ನಲ್ಲಿದ್ದವರು. ಬಿಜೆಪಿಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡು ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ವರಿಷ್ಠರು ಇವರಿಗೆ ಟಿಕೆಟ್ ನೀಡಿರುವುದು ಸ್ವಾಗತಾರ್ಹ ಎಂದರು.
ಮೇ 16ರಂದು ಮೈಸೂರಿನ ಪ್ರಾದೇಶಿಕ ಕಚೇರಿಯಲ್ಲಿ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಅವರ ಜೊತೆಗೆ ಪಕ್ಷದ ಹಿರಿಯರು, ಗಣ್ಯರು ಇರಲಿದ್ದಾರೆ. ಬಿಜೆಪಿಯ ಎಲ್ಲಾ ಮುಖಂಡರು ಅವರ ಗೆಲುವಿಗಾಗಿ ಪ್ರಚಾರ ಕೈಗೊಳ್ಳಲಿದ್ದಾರೆ. ಇನ್ನೂ ಕೇವಲ 18 ದಿನಗಳಲ್ಲಿ ಪ್ರಚಾರ ಮಾಡಬೇಕಾಗಿರುವುದರಿಂದ ಹಲವು ಸಭೆಗಳ ಮೂಲಕ ಮತದಾರರನ್ನು ಒಂದು ಕಡೆ ಸೇರಿಸಿ ಪ್ರಚಾರ ಮಾಡಲಿದ್ದೇವೆ ಎಂದು ಹೇಳಿದರು.ಪಕ್ಷ ಮುಖ್ಯವೇ ಹೊರತು ವ್ಯಕ್ತಿಯಲ್ಲ:
1988ರಿಂದಲೂ ನೈಋತ್ಯ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಿಜೆಪಿಯಲ್ಲಿ ಸಂಚಲನವೇ ಮೂಡಿದೆ. ಒಮ್ಮೆ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಗೆದ್ದಿದ್ದು ಬಿಟ್ಟರೆ ಉಳಿದೆಲ್ಲ ಸಂದರ್ಭಗಳಲ್ಲಿ ಬಿಜೆಪಿಯೇ ಇಲ್ಲಿ ಕ್ಷೇತ್ರವನ್ನು ಉಳಿಸಿಕೊಳ್ಳುತ್ತ ಬಂದಿದೆ. ಈ ಹಿಂದೆಯೂ ಬಿಜೆಪಿಯವರೇ ಆಗಿದ್ದ ಆಯನೂರು ಮಂಜುನಾಥ್ ಗೆದಿದ್ದರು. ಬಿಜೆಪಿಯಲ್ಲಿ ಪಕ್ಷ ಮುಖ್ಯವೇ ಹೊರತು ವ್ಯಕ್ತಿ ಮುಖ್ಯವಲ್ಲ. ಪಕ್ಷ ಯಾರಿಗೇ ಟಿಕೆಟ್ ಕೊಡುತ್ತೆ ಅವರನ್ನು ಗೆಲ್ಲಿಸುತ್ತೇವೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಸ್.ಎನ್. ಚನ್ನಬಸಪ್ಪ, ರುದ್ರೇಗೌಡರು, ಶಿವರಾಜು, ಮೋಹನ್‍ರೆಡ್ಡಿ, ನಾಗರಾಜ್, ದೀನದಯಾಳ್, ಮಂಜುನಾಥ್, ಚಂದ್ರಶೇಖರ್, ಅಣ್ಣಪ್ಪ ಇದ್ದರು.
ಬಿಜೆಪಿ- ಜೆಡಿಎಸ್ ಮೈತ್ರಿಯಿಂದ ಅನುಕೂಲ
ನೈಋತ್ಯ ವಿಧಾನಪರಿಷತ್ ಕ್ಷೇತ್ರವು ಸುಮಾರು 30 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯನ್ನು ಹೊಂದಿದೆ. ಈ ಬಾರಿ ಮತದಾರರ ಸಂಖ್ಯೆಯು ಹೆಚ್ಚಿದೆ. ಸುಮಾರು 15 ಬಿಜೆಪಿ-ಜೆಡಿಎಸ್ ಶಾಸಕರು ಈ ಬಾರಿ ಇದ್ದಾರೆ. ಬಿಜೆಪಿಯೇ ಹೆಚ್ಚು ನೋಂದಣಿಯನ್ನು ಈ ಬಾರಿ ಮಾಡಿದೆ. ಸುಮಾರು 81,750 ಮತಗಳಿವೆ. ಅದರಲ್ಲಿ ಶಿವಮೊಗ್ಗದಲ್ಲಿಯೇ ಹೆಚ್ಚಾಗಿದೆ. ಎಲ್ಲಾ ಕಡೆ ಪಕ್ಷದ ಸಂಘಟನೆ ಇರುವುದರಿಂದ ಧನಂಜಯ ಸರ್ಜಿ ಮತ್ತು ಜೆಡಿಎಸ್‍ನ ಬೋಜೇಗೌಡ ಮೊದಲ ಪ್ರಾಶಸ್ತ್ಯದ ಮತಗಳ ಪಡೆದು ಗೆಲ್ಲಲಿದ್ದಾರೆ. ವಿಧಾನಪರಿಷತ್ ಚುನಾವಣೆಯಲ್ಲೂ ಜೆಡಿಎಸ್, ಬಿಜೆಪಿ ಮೈತ್ರಿ ಮುಂದುವರಿಯುವುದರಿಂದ ನಮಗೆ ಅನುಕೂಲವಾಗಲಿದೆ ಎಂದು ಡಿ.ಎಸ್.ಅರುಣ್ ತಿಳಿಸಿದರು.