ಕುದೂರು ಗ್ರಾಮದಲ್ಲಿ ಸ್ವಚ್ಛತೆಗೆ ಗ್ರಾಮಸ್ಥರಿಂದಲೇ ಅಸಹಕಾರ

KannadaprabhaNewsNetwork | Published : Aug 23, 2024 1:07 AM

ಸಾರಾಂಶ

ಮಾಗಡಿ ತಾಲೂಕು ಕುದೂರು ಗ್ರಾಮ ನಾಲ್ಕೂ ದಿಕ್ಕಿನಲ್ಲಿ ವಿಸ್ತಾರವಾಗಿ ಬೆಳೆಯುತ್ತಿದೆ. ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಹೆಚ್ಚಾಗುತ್ತಿದೆ. ಇದರ ಜೊತೆಗೆ ಸಮಸ್ಯೆಗಳು ಕೂಡಾ ಮಂಡಿಯೂರಿ ಕುಳಿತುಕೊಂಡಿವೆ. ಅದರಲ್ಲಿ ಮುಖ್ಯವಾದದ್ದು ಕಸ ವಿಲೇವಾರಿ.

ಕನ್ನಡಪ್ರಭ ವಾರ್ತೆ ಕುದೂರು

ಗ್ರಾಮ ಪಂಚಾಯಿತಿಯವರು ಗ್ರಾಮಗಳಲ್ಲಿ ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ ಎನ್ನುವುದು ಸಾಮಾನ್ಯವಾದ ದೂರು. ಆದರೆ, ಕುದೂರು ಗ್ರಾಮದಲ್ಲಿ ಗ್ರಾಮಸ್ಥರೇ ಪಂಚಾಯ್ತಿಯವರೊಂದಿಗೆ ಸಹಕಾರ ನೀಡದೆ ಗ್ರಾಮದ ಸ್ವಚ್ಛತೆ ಕಾಪಾಡುವುದರಲ್ಲಿ ಅಸಹಕಾರವನ್ನು ತೋರುತ್ತಿರುವುದು ಪಂಚಾಯತಿ ನೌಕರರಿಗೆ ತಲೆನೋವಾಗಿ ಪರಿಣಮಿಸಿದೆ.

ಮಾಗಡಿ ತಾಲೂಕು ಕುದೂರು ಗ್ರಾಮ ನಾಲ್ಕೂ ದಿಕ್ಕಿನಲ್ಲಿ ವಿಸ್ತಾರವಾಗಿ ಬೆಳೆಯುತ್ತಿದೆ. ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಹೆಚ್ಚಾಗುತ್ತಿದೆ. ಇದರ ಜೊತೆಗೆ ಸಮಸ್ಯೆಗಳು ಕೂಡಾ ಮಂಡಿಯೂರಿ ಕುಳಿತುಕೊಂಡಿವೆ. ಅದರಲ್ಲಿ ಮುಖ್ಯವಾದದ್ದು ಕಸ ವಿಲೇವಾರಿ.

ಹಸಿ ಕಸ ಮತ್ತು ಒಣ ಕಸ ಎರಡನ್ನು ಬೇರ್ಪಡಿಸಿ ಅದನ್ನು ಗೊಬ್ಬರವನ್ನಾಗಿಸಿ ರೈತರಿಗೆ ಮಾರಾಟ ಮಾಡಿದರೆ ಪಂಚಾಯ್ತಿಗೆ ಒಂದಿಷ್ಟು ಆದಾಯವೂ ಆಗುತ್ತದೆ. ಮತ್ತು ಪರಿಸರ ಮಾಲಿನ್ಯವೂ ತಪ್ಪುತ್ತದೆ ಎಂದು ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಎರಡೆರೆಡು ಬಕೆಟ್ ಗಳನ್ನು ಉಚಿತವಾಗಿ ಕೊಟ್ಟರು. ಒಂದು ಬಕೆಟ್ ನಲ್ಲಿ ಒಣಕಸ, ಮತ್ತೊಂದು ಬಕೆಟ್ ನಲ್ಲಿ ಹಸಿ ಕಸ ಹಾಕಿ ಎಂದು ಹೇಳಿ ಕೊಟ್ಟಿದ್ದರು. ಆದರೆ ಒಂದೇ ಬಕೆಟ್ ನಲ್ಲಿ ಹಸಿ, ಒಣಕಸ ಎರಡನ್ನೂ ಒಟ್ಟಿಗೆ ಹಾಕಿ ಕೊಡಲಾರಂಭಿಸಿದರು. ಹೀಗೆ ಕಸ ವಿಂಗಡಿಸದೆ ಕಸ ತೆಗೆದುಕೊಂಡು ಹೋಗುವುದಿಲ್ಲ ಎಂದು ಪಂಚಾಯ್ತಿ ನೌಕರರು ಹೇಳಿದರೆ, ಅವರ ಮೇಲೆಯೇ ಜನರು ಗಲಾಟೆ ಮಾಡಿ ತೆಗೆದುಕೊಂಡು ಹೋಗುವಂತೆ ಮಾಡಿದರು ಮತ್ತು ಜವಾಬ್ದಾರಿ ಇಲ್ಲದ ಕೇವಲ ಮತಗಳ ಆಸೆಯಿರುವ ಸದಸ್ಯರ ಬೆಂಬಲ ಪಡೆದು ಪಂಚಾಯ್ತಿ ನೌಕರರಿಗೆ ಗದರಿಕೊಂಡು ಜನ ಹೇಗೆ ಕಸ ಕೊಡ್ತಾರೋ ಹಾಗೆ ತೆಗೆದುಕೊಂಡು ಹೋಗಿ ಎಂದು ಹೇಳಿದರು. ಇದರಿಂದಾಗಿ ಹಸಿಕಸ ಮತ್ತು ಒಣಕಸದ ಸಂಗ್ರಹದ ಕೆಲಸಕ್ಕೆ ಕಲ್ಲುಬಿತ್ತು.

ವಾಹನವಿದ್ದೂ ರಸ್ತೆಯಲ್ಲಿ ಕಸ:

ಕಸವನ್ನು ಎಲ್ಲೆಂದರಲ್ಲಿ ಎಸೆಯಬೇಡಿ ಎಂದು ಗ್ರಾಮದ ಪ್ರತಿ ಬೀದಿಗೂ ಕಸ ಸಂಗ್ರಹ ಮಾಡುವ ವಾಹನವನ್ನು ಮತ್ತು ಅದರಲ್ಲಿ ಹಸಿ ಕಸ, ಒಣ ಕಸ ವಿಂಗಡಿಸಿ, ರಸ್ತೆಯಲ್ಲಿ ಎಲ್ಲೆಂದರಲ್ಲಿ ಎಸೆಯಬೇಡಿ ಎಂದು ಮೈಕಿನಲ್ಲಿ ಧ್ವನಿಮುದ್ರಿತ ಮನವಿಯನ್ನು ಕೇಳಿಸುತ್ತಿರುತ್ತಾರೆ. ಇಷ್ಟಾದರೂ ಜನರು ರಸ್ತೆಯ ಬದಿಯಲ್ಲಿ ಕಸ ಎಸೆಯುವುದನ್ನು ನಿಲ್ಲಿಸಿಲ್ಲ. ಹಾಗೆ ಕಸ ಎಸೆದು ಹೋಗಿ ಅದು ರಾಶಿಯಾಗಿ ಬಿದ್ದ ನಂತರ ಅದರ ಫೋಟೋ, ವಿಡಿಯೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಕಸದ ರಾಶಿ ಬಿದ್ದಿರುವುದನ್ನು ನೋಡಿ ಎಂದು ಅದೇ ಜನರು ಹಾಕುತ್ತಾರೆ. ಇದರಿಂದಾಗಿ ಹೇಗೆ ಕೆಲಸ ನಿರ್ವಹಿಸಬೇಕೆಂಬುದೇ ಗೊತ್ತಾಗದೆ ಪಂಚಾಯ್ತಿ ಅಧಿಕಾರಿಗಳು, ನೌಕರರು ಮತ್ತು ಒಂದಿಷ್ಟು ಪ್ರಜ್ಞಾವಂತ ಸದಸ್ಯರು ಕಂಗಾಲಾಗಿದ್ದಾರೆ.

ಸಾರ್ವಜನಿಕ ನಲ್ಲಿಯ ಸುತ್ತ ಬೆಳೆದಿರುವ ಹುಲ್ಲನ್ನು ಕಿತ್ತು ನೀರು ಹಿಡಿದುಕೊಳ್ಳುವ ಸಾಮಾಜಿಕ ಕಳಕಳಿಯನ್ನೇ ಕಳೆದುಕೊಂಡಿದ್ದಾರೆ. ಈ ಹಿಂದೆ ಪಂಚಾಯ್ತಿ ವತಿಯಿಂದ ಪ್ರತಿ ನಲ್ಲಿಗೆ ಹತ್ತು ರು. ನಂತೆ ಸಂಗ್ರಹ ಮಾಡುತ್ತಿದ್ದರು. ಆದರೆ ಈಗ ಜನರಿಗೆ ತೊಂದರೆ ಆಗಬಾರದು ಎಂದು ಸಂಗ್ರಹ ಕಾರ್ಯ ನಿಲ್ಲಿಸಿದ್ದಾರೆ. ಇಷ್ಟಾದರೂ ನಲ್ಲಿ ನೀರನ್ನು ವಿನಾಕಾರಣ ಚರಂಡಿಗೆ ಹರಿಸುವವರ ಸಂಖ್ಯೆ ಹೆಚ್ಚಾಗಿದೆ.

ಬೀದಿ ದೀಪಗಳು ಹಗಲು ವೇಳೆ ಉರಿಯುತ್ತಿರುತ್ತವೆ. ಅದನ್ನು ಆರಿಸುವ ಮತ್ತು ರಾತ್ರಿ ವೇಳೆ ಹಾಕುವ ಸ್ವಿಚ್ಚನ್ನು ಅದೇ ಕಂಬದಲ್ಲಿ ಅಳವಡಿಸುತ್ತಾರೆ. ಹಗಲು ಹನ್ನೆರೆಡಾದರೂ ಜನರು ಅದನ್ನು ನೋಡಿಕೊಂಡೇ ಹೋಗುತ್ತಾರೆಯೇ ಹೊರತು ಆರಿಸುವ ಕೆಲಸ ಮಾಡುವುದಿಲ್ಲ, ಇದು ನಮ್ಮ ಕೆಲಸವಲ್ಲ ಇದು ಪಂಚಾಯ್ತಿ ಕೆಲಸ ಎಂಬ ಉಡಾಫೆತನ ತೋರಿಸುತ್ತಾರೆ. ಆದರೆ ಜನರು ಬೀದಿ ದೀಪಗಳಿಗೆ ಪ್ರತಿ ವರ್ಷ ಲಕ್ಷಾಂತರ ರು. ಹಣವನ್ನು ಬೆಸ್ಕಾಂಗೆ ಕಟ್ಟುತ್ತಿರುವ ಹಣ ನಮ್ಮ ತೆರಿಗೆಯದ್ದು ಎಂಬುದನ್ನು ಮರೆತಂತಿದೆ.

ಊರಿನ ರಸ್ತೆ, ವಿದ್ಯುತ್ ಕಂಬ ದೀಪ, ನಲ್ಲಿ, ಚರಂಡಿ, ಕಟ್ಟಡಗಳು ಇವೆಲ್ಲವೂ ನಮ್ಮ ಮನೆಯ ಆಸ್ತಿ ಎಂಬಂತೆ ಭಾವಿಸಿ ನೋಡಿಕೊಂಡಾಗ ಗ್ರಾಮಗಳು ಸ್ವಚ್ಛತೆಯ ಕಡೆಗೆ ಮುಖ ಮಾಡುತ್ತದೆ. ಇಲ್ಲದೇ ಹೋದರೆ ಸ್ವಚ್ಛ ಗ್ರಾಮ ಎಂಬ ಪ್ರಶಸ್ತಿ ಪಡೆದ ಕುದೂರು ಗ್ರಾಮಪಂಚಾಯ್ತಿ ನಗೆಪಾಟಲಿಗೆ ಒಳಗಾಗಬೇಕಾಗುತ್ತದೆ.

Share this article