ಬಿಳಿಜೋಳ ಮಾರಲು ಉತ್ತರ ಕರ್ನಾಟಕ ರೈತರ ನಿರಾಸಕ್ತಿ!

KannadaprabhaNewsNetwork | Published : May 9, 2025 12:31 AM
Follow Us

ಸಾರಾಂಶ

ಧಾರವಾಡ ಜಿಲ್ಲೆಯಲ್ಲಿ ಧಾರವಾಡ, ಹುಬ್ಬಳ್ಳಿ, ಕಲಘಟಗಿ, ಕುಂದಗೋಳ, ನವಲಗುಂದದಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ಇಲ್ಲಿವರೆಗೆ ಕುಂದಗೋಳ ಮತ್ತು ಧಾರವಾಡದ 50 ರೈತರು ಮಾತ್ರ ಜಿಪಿಎಸ್‌ ನೋಂದಣಿ ಮಾಡಿಸಿದ್ದಾರೆ.

ಶಿವಾನಂದ ಅಂಗಡಿ

ಹುಬ್ಬಳ್ಳಿ: ಬೆಂಬಲ ಬೆಲೆ ಯೋಜನೆಯಡಿ ಉತ್ತರ ಕರ್ನಾಟಕದ ಪ್ರಮುಖ ಆಹಾರ ಬೆಳೆ ಬಿಳಿಜೋಳ ಖರೀದಿಗೆ ನೋಂದಣಿ ಆರಂಭಿಸಿದ್ದರೂ ಧಾರವಾಡ ಜಿಲ್ಲೆಯಲ್ಲಿ ನೋಂದಣಿ ಮಾಡಿಸಲು ಹೆಚ್ಚಿನ ರೈತರು ಮುಂದೆ ಬರದೇ ನಿರಾಸಕ್ತಿ ತೋರಿದ್ದಾರೆ.

ಸರ್ಕಾರ ಬಿಳಿಜೋಳ ಕ್ವಿಂಟಲ್‌ಗೆ ₹ 3421, ಹೈಬ್ರಿಡ್‌ ಜೋಳ- ₹3371 ಬೆಂಬಲ ಬೆಲೆ ಘೋಷಿಸಲಾಗಿದೆ.

ಗದಗ, ಹುಬ್ಬಳ್ಳಿ ಸೇರಿದಂತೆ ಎಪಿಎಂಸಿಗಳಲ್ಲಿ ಸದ್ಯ ಬಿಳಿಜೋಳಕ್ಕೆ ಕ್ವಿಂಟಲ್‌ಗೆ ₹1800 ರಿಂದ ₹3100 ವರೆಗೆ ಧಾರಣೆ ಇದೆ. ಹೀಗಾಗಿ ಮಾರುಕಟ್ಟೆಗಿಂತಲೂ ಬೆಂಬಲ ಬೆಲೆ ₹300 ಅಧಿಕವಿದೆ. ಆದರೆ ರೈತರೇ ನಿರಾಸಕ್ತಿ ತೋರಿಸುತ್ತಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ ಧಾರವಾಡ, ಹುಬ್ಬಳ್ಳಿ, ಕಲಘಟಗಿ, ಕುಂದಗೋಳ, ನವಲಗುಂದದಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ಇಲ್ಲಿವರೆಗೆ ಕುಂದಗೋಳ ಮತ್ತು ಧಾರವಾಡದ 50 ರೈತರು ಮಾತ್ರ ಜಿಪಿಎಸ್‌ ನೋಂದಣಿ ಮಾಡಿಸಿದ್ದಾರೆ. ಮೇ 30ರ ವರೆಗೂ ಖರೀದಿ ನಡೆಯಲಿದ್ದು, ಇನ್ನೆರಡ್ಮೂರು ದಿನಗಳಲ್ಲಿ ಖರೀದಿ ಪ್ರಕ್ರಿಯೆ ಆರಂಭವಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.

ಹಿಂಗಾರಿ ಹಂಗಾಮಿನಲ್ಲಿ ಜೋಳ ಬೆಳೆಯಲಾಗುತ್ತಿದ್ದು, ರೈತರು ವಾಣಿಜ್ಯ ಬೆಳೆಗಳಾದ ಕಡಲೆ, ಮೆಣಸಿನಕಾಯಿ ಬಿತ್ತನೆ ಆರಂಭಿಸಿದ ಮೇಲೆ ಜೋಳ ಬಿತ್ತನೆಗೆ ತೀವ್ರ ಹೊಡೆತ ಬಿದ್ದಿದೆ. ಈ ವರ್ಷ ಮುಂಗಾರಿ ಬಿತ್ತನೆ ಕ್ಷೇತ್ರದ ಶೇ. 60ರಷ್ಟು ರೈತರು ಹೆಸರುಕಾಳು ಬಿತ್ತನೆ ಮಾಡಿದ್ದರು. ಕಲಘಟಗಿಯಂತ ತಾಲೂಕಿನಲ್ಲಿ ಮಾತ್ರ ಸೋಯಾಬಿನ್‌ ಬಿತ್ತನೆ ಮಾಡಲಾಗಿತ್ತು. ಹೆಸರು ಕಾಳು ಪಡೆದ ಮೇಲೆ ಅದೇ ಹೊಲದಲ್ಲಿ ರೈತರು ಕಡಲೆ ಬಿತ್ತನೆ ಮಾಡಿದ್ದಾರೆ. ಮನೆಗೆ ಸಾಕಾಗುವಷ್ಟು ಲೆಕ್ಕದಲ್ಲಿ ಮಾತ್ರ ರೈತರು ಜೋಳ, ಗೋದಿ ಬಿತ್ತನೆ ಮಾಡಿದ್ದಾರೆ. ಹಳೆ ಜೋಳವನ್ನು ಈಗ ಮಾರಾಟ ಮಾಡುತ್ತಿದ್ದು, ಹೊಸ ಜೋಳ ಮನೆಯಲ್ಲಿ ಸಂಗ್ರಹಣೆ ಮಾಡಿಕೊಂಡಿದ್ದಾರೆ. ಹೀಗಾಗಿ ಹೊಸ ಜೋಳ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿಲ್ಲ ಎನ್ನುತ್ತಾರೆ ಎಪಿಎಂಸಿ ದಲಾಲಿ ಅಂಗಡಿಯವರು.

ವಾಣಿಜ್ಯ ಬೆಳೆಗಳಂತೆ ಬೆಲೆ ಬರುತ್ತಿಲ್ಲ: ದೇಶ ವಿದೇಶಗಳಲ್ಲಿ ಈಗೀಗ ಜೋಳದ ರೊಟ್ಟಿ ಊಟ ಹೆಸರು ವಾಸಿಯಾಗುತ್ತಿದ್ದರೂ ಬಿಳಿ ಜೋಳಕ್ಕೆ ಎಪಿಎಂಸಿಗಳಲ್ಲಿ ಹೆಚ್ಚಿನ ಬೆಲೆ ಇರುವುದಿಲ್ಲ. ಹೆಸರು ಕಾಳು, ಕಡಲೆಯಂತೆ ಜೋಳಕ್ಕೆ ₹5ರಿಂದ ₹6 ಸಾವಿರ ವರೆಗೆ ದರ ಇರುವುದಿಲ್ಲ. ಪ್ರತಿ ವರ್ಷ ಜೋಳದ ಬೆಲೆ ₹3 ಸಾವಿರ ದಾಟುವುದಿಲ್ಲ. ಕೃಷಿ ವೆಚ್ಚ ಹೆಚ್ಚಾದ ಮೇಲೆ ಜೋಳ ಬಿತ್ತನೆಗೆ ರೈತರು ನಿರಾಸಕ್ತಿ ತೋರಿಸುತ್ತಿದ್ದಾರೆ. ಮೇಲಾಗಿ ಕೃಷಿಯಲ್ಲಿ ಟ್ರ್ಯಾಕ್ಟರ್‌ಗಳ ಬಳಕೆ ಹೆಚ್ಚಾದ ಮೇಲೆ ಜಾನುವಾರುಗಳು ಸಹ ಕಡಿಮೆಯಾಗಿದ್ದು, ಈ ಹಿಂದೆ ಈ ಜಾನುವಾರುಗಳ ಹೊಟ್ಟು ಮೇವಿನ ಸಂಬಂಧ ಜೋಳ, ಗೋದಿ ಬೆಳೆಯುತ್ತಿದ್ದರು. ಹೀಗಾಗಿ ಜೋಳದ ಕೃಷಿ ಕಡಿಮೆಯಾಗಿದ್ದು, ಮನೆಗೆ ವರ್ಷಕ್ಕೆ ಆಗುವಷ್ಟು ಮಾತ್ರ ಜೋಳ ಬೆಳೆಯುತ್ತೇವೆ ಎನ್ನುತ್ತಾರೆ ಕೃಷಿಕರು.

ಇಂಥ ಹಂಗಾಮಿನಲ್ಲೇ ಹುಬ್ಬಳ್ಳಿ, ಗದಗ ಎಪಿಎಂಸಿಯಲ್ಲಿ ಪ್ರತಿದಿನ ಜೋಳದ ಆವಕ 200 ಕ್ವಿಂಟಲ್‌ ದಾಟುತ್ತಿಲ್ಲ. ಇದರಲ್ಲೂ ಹಳೆ ಜೋಳವನ್ನೇ ರೈತರು ಹೆಚ್ಚಿನ ಪ್ರಮಾಣದಲ್ಲಿ ಎಪಿಎಂಸಿಗೆ ತರುತ್ತಿದ್ದಾರೆ. ಕಡಲೆ ಮಾತ್ರ ಈಗಲೂ ಸಾವಿರ ಕ್ವಿಂಟಲ್‌ ಲೆಕ್ಕದಲ್ಲಿ ಮಾರುಕಟ್ಟೆಗೆ ಆವಕ ಆಗುತ್ತಿದೆ.

ಆಹಾರ ಭದ್ರತೆಯತ್ತ ರೈತರ ಚಿತ್ತ: 2000ರಲ್ಲಿ ಕೊರೋನಾ ಬಂದ ಮೇಲೆ ರೈತ ಕುಟುಂಬಗಳು ಆಹಾರ ಭದ್ರತೆಯತ್ತ ಹೆಚ್ಚಿನ ಗಮನಹರಿಸುತ್ತಿವೆ. ಮುಂದಿನ ವರ್ಷಗಳಲ್ಲಿ ಇನ್ನೆಂಥ ಮಾರಿ ವಕ್ಕರಿಸುವದೋ ಎಂಬ ಆತಂಕ ಗ್ರಾಮೀಣ ಪ್ರದೇಶದವರನ್ನು ಕೊರೋನಾ ಅವಧಿಯಲ್ಲಿ ಕಾಡಿತ್ತು. ಹೀಗಾಗಿ ಕಳೆದ ನಾಲ್ಕೈದು ವರ್ಷಗಳಿಂದ ಜೋಳ, ಗೋದಿ ಬಂದ ತಕ್ಷಣ ಯಾರೂ ಮಾರಾಟ ಮಾಡುತ್ತಿಲ್ಲ. ಮನೆಯಲ್ಲೇ ಸಂಗ್ರಹಣೆ ಮಾಡಿಕೊಳ್ಳುತ್ತಿದ್ದು, ಹಳೆ ಜೋಳ, ಗೋದಿ ಇದ್ದರೆ ಮಾತ್ರ ಮಾರಾಟ ಮಾಡುತ್ತಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ 5 ಖರೀದಿ ಕೇಂದ್ರಗಳಿದ್ದರೂ ಧಾರವಾಡ ಮತ್ತು ಕುಂದಗೋಳದಲ್ಲಿ ಮಾತ್ರ 50 ರೈತರು ಜೋಳ ಮಾರಾಟಕ್ಕೆ ನೋಂದಣಿ ಮಾಡಿಸಿದ್ದಾರೆ. ಒಂದು ಎಕರೆಗೆ 20 ಕ್ವಿಂಟಲ್‌ ವರೆಗೆ ಜೋಳ ಖರೀದಿಸುತ್ತಿದ್ದು, ಎರಡ್ಮೂರು ದಿನಗಳಲ್ಲಿ ಖರೀದಿ ಆರಂಭಿಸಲಾಗುವುದು ಎಂದು ರಾಜ್ಯ ಸಹಕಾರ ಮಾರಾಟ ಮಂಡಳ ಹುಬ್ಬಳ್ಳಿ ಶಾಖೆಯ ವ್ಯವಸ್ಥಾಪಕ ವಿನಯ ಪಾಟೀಲ ಹೇಳಿದರು.

ಪ್ರತಿ ವರ್ಷ ನಾವು ಜೋಳ ಹಾಗೂ ಗೋದಿಯನ್ನು ಮಾರಾಟ ಮಾಡುವುದಿಲ್ಲ. ಹೊಸ ಜೋಳ ಬಂದ ಮೇಲೆ ಹಳೆ ಜೋಳವನ್ನು ಮಾತ್ರ ಮಾರುತ್ತೇವೆ. ಹಣದ ಆಸೆಗೆ ಎಲ್ಲ ಜೋಳ ಮಾರಿ ವರ್ಷದುದ್ದಕ್ಕೂ ಆಹಾರಕ್ಕಾಗಿ ಪರಿತಪಿಸಬೇಕಾಗುತ್ತದೆ. ಹೀಗಾಗಿ ಹಣಕ್ಕಿಂತ ಆಹಾರ ಭದ್ರತೆಯತ್ತ ಗಮನ ಹರಿಸಿದ್ದೇವೆ ಎಂದು ರೈತ ಬಸವಣ್ಣೆಪ್ಪ ಅಣ್ಣಿಗೇರಿ ಹೇಳಿದರು.