ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯ ಮಹರ್ಷಿ ವಾಲ್ಮೀಕಿ ನಿಗಮದ ಬಹುಕೋಟಿ ಹಣ ವರ್ಗಾವಣೆ ಪ್ರಕರಣ ಸಂಬಂಧ ಮಾಜಿ ಸಚಿವ ಬಿ.ನಾಗೇಂದ್ರ ಹಾಗೂ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಅವರಿಗೆ ವಿಶೇಷ ತನಿಖಾ ದಳ (ಎಸ್‌ಐಟಿ) ಮಂಗಳವಾರ ತೀವ್ರ ವಿಚಾರಣೆ ನಡೆಸಿದ್ದು, ಈ ಇಬ್ಬರನ್ನು ಬುಧವಾರ ಸಹ ಎಸ್‌ಐಟಿ ವಿಚಾರಣೆ ನಡೆಸಲಿದೆ ಎಂದು ತಿಳಿದು ಬಂದಿದೆ.ನೋಟಿಸ್ ಹಿನ್ನಲೆಯಲ್ಲಿ ನಗರದ ಅರಮನೆ ರಸ್ತೆಯಲ್ಲಿರುವ ಸಿಐಡಿ ಕೇಂದ್ರ ಕಚೇರಿಯಲ್ಲಿ ಎಸ್ಐಟಿ ಅಧಿಕಾರಿಗಳ ಮುಂದೆ ನಾಗೇಂದ್ರ ಹಾಗೂ ಬಸನಗೌಡ ದದ್ದಲ್ ಹಾಜರಾಗಿದ್ದರು. ಈ ವೇಳೆ ಸುದೀರ್ಘವಾಗಿ ವಿಚಾರಣೆ ನಡೆಸಿ ಹೇಳಿಕೆ ಪಡೆದ ಅಧಿಕಾರಿಗಳು, ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಇಬ್ಬರಿಗೂ ನೋಟಿಸ್ ನೀಡಿ ಕಳುಹಿಸಿದ್ದಾರೆ ಎನ್ನಲಾಗಿದೆ.
ಇನ್ನು ವಿಚಾರಣೆ ವೇಳೆ ತಾವು ತಪ್ಪು ಮಾಡಿಲ್ಲ ಎನ್ನುವಂತೆ ಇಬ್ಬರೂ ಸಮರ್ಥಿಸಿಕೊಂಡಿದ್ದಾರೆ. ಆದರೂ ಸಹ ಅಧಿಕಾರಿಗಳಿಗೆ ನಂಬಿಕೆ ಬಂದಿಲ್ಲ. ಈ ಹಿನ್ನಲೆಯಲ್ಲಿ ಮತ್ತೆ ಮಾಜಿ ಸಚಿವ ನಾಗೇಂದ್ರ ಹಾಗೂ ಬಸನಗೌಡ ದದ್ದಲ್ ಅವರಿಗೆ ದಾಖಲೆ ಸಮೇತ ಹಾಜರಾಗುವಂತೆ ಸೂಚಿಸಿದ್ದಾರೆ.8 ತಾಸು ನಾಗೇಂದ್ರ, 4 ತಾಸು ದದ್ದಲ್ ಗ್ರಿಲ್:
ವಿಚಾರಣೆಗೆ ಬೆಳಗ್ಗೆ 11 ಗಂಟೆಗೆ ಮಾಜಿ ಸಚಿವ ನಾಗೇಂದ್ರ ಹಾಗೂ ಮಧ್ಯಾಹ್ನ 3 ಗಂಟೆಗೆ ಬಸನಗೌಡ ದದ್ದಲ್ ಹಾಜರಾಗಿದ್ದರು. ರಾತ್ರಿ 7 ಗಂಟೆಗೆ ಸುಮಾರಿಗೆ ವಿಚಾರಣೆಗೆ ಮುಗಿಸಿ ಸಿಐಡಿ ಕಚೇರಿಯಿಂದ ಇಬ್ಬರು ಹೊರ ಬಂದರು. ಅಂತೆಯೇ ನಾಗೇಂದ್ರ ರವರು 8 ತಾಸುಗಳು ಹಾಗೂ ದದ್ದಲ್ ಅವರು 4 ತಾಸುಗಳು ತನಿಖಾಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಎಂದು ಗೊತ್ತಾಗಿದೆ.ವಾಲ್ಮೀಕಿ ನಿಗಮದ ಅಕ್ರಮ ನಡೆದ ಸಂದರ್ಭದಲ್ಲಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ನಾಗೇಂದ್ರರವರು ರಾಜ್ಯ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆಯ ಸಚಿವರಾಗಿದ್ದರು. ಇದೇ ಪ್ರಕರಣದಲ್ಲಿ ಅವರ ಸೋದರ ಸಂಬಂಧಿ ಬಳ್ಳಾರಿ ಜಿಲ್ಲೆ ನೆಕ್ಕುಂಟಿ ನಾಗರಾಜ್ ಹಾಗೂ ನಾಗೇಶ್ವರ್ ರಾವ್ ಬಂಧಿತರಾಗಿದ್ದಾರೆ. ಈ ಆಪ್ತರ ಹೇಳಿಕೆ ಆಧರಿಸಿ ಮಾಜಿ ಸಚಿವರಿಗೆ ಸಂಕಷ್ಟ ಎದುರಾಗಿದೆ. ಅಲ್ಲದೆ ಹಣ ವರ್ಗಾವಣೆಯಲ್ಲಿ ಮಾಜಿ ಸಚಿವರು ಪ್ರಭಾವ ಬೀರಿದ್ದರು ಎಂದು ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ್ ಹಾಗೂ ಲೆಕ್ಕಪರಿಶೋಧಕ ಪರಶುರಾಮ್ ಹೇಳಿಕೆ ಕೊಟ್ಟಿದ್ದಾರೆ ಎನ್ನಲಾಗಿದೆ.
ಇನ್ನು ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ರಾಯಚೂರು ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಕಾರ್ಯನಿರ್ವಹಿಸುತ್ತಿದ್ದು, ದದ್ದಲ್ ಅವರು ನಿಗಮದ ಕಾರ್ಯಭಾರ ವಹಿಸಿಕೊಂಡ ಎರಡ್ಮೂರು ತಿಂಗಳಲ್ಲೇ ಈ ಅಕ್ರಮ ನಡೆದಿದೆ. ಹೀಗಾಗಿ ಅವರಿಗೂ ಎಸ್‌ಐಟಿ ತನಿಖೆ ಬಿಸಿ ತಟ್ಟಿದೆ ಎಂದು ತಿಳಿದು ಬಂದಿದೆ.