ಕನ್ನಡಪ್ರಭ ವಾರ್ತೆ ಹೊನ್ನಾಳಿ
ಬೆಳಗಾವಿಯ ಸುವರ್ಣಸೌಧ ಬಳಿ ಪಂಚಮಸಾಲಿ ಸಮುದಾಯ ಹೋರಾಟಗಾರರ ಮೇಲೆ ನಡೆದ ಪೊಲೀಸರ ಲಾಠಿ ಪ್ರಹಾರವನ್ನು ಖಂಡಿಸಿ, ತಾಲೂಕು ವೀರಶೈವ ಪಂಚಮಸಾಲಿ ಯುವ ಘಟಕ ನೇತೃತ್ವದಲ್ಲಿ ಬುಧವಾರ ತಾಲೂಕು ಕಚೇರಿ ಮುಂಭಾಗ ಸರ್ಕಾರದ ವಿರುದ್ಧ ಮೌನ ಧರಣಿ ನಡೆಸಿ, ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.ತಾಲೂಕು ವೀರಶೈವ ಪಂಚಮಸಾಲಿ ಯುವ ಘಟಕ ತಾಲೂಕು ಅಧ್ಯಕ್ಷ ಗಿರೀಶ್ ಮಾತನಾಡಿ, ಶಾಂತಿಯುತ ಹೋರಾಟವನ್ನು ಹತ್ತಿಕುವ ಪ್ರಯತ್ನ ಮಾಡಿದ್ದಾರೆ. ಎಷ್ಟೇ ಲಾಠಿ ಚಾರ್ಜ್ ಮಾಡಿದ್ದರೂ ಬಗ್ಗುವುದಿಲ್ಲ. ನಮಗೆ 2ಎ ಮೀಸಲಾತಿ ಬೇಕೇಬೇಕು. ಇದಕ್ಕಾಗಿ ಯಾವ ಹೋರಾಟಕ್ಕೂ ಸಿದ್ಧ. ಲಾಠಿ ಚಾರ್ಜ್ ಮಾಡಿ ಸಮಾಜಕ್ಕೆ ಅವಮಾನಿಸಿದ್ದಾರೆ. ಕೂಡಲೇ ಸ್ವಾಮೀಜಿ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಉಪಾಧ್ಯಕ್ಷ ಪ್ರಶಾಂತ್ ಮಾತನಾಡಿ, ಬೆಳಗಾವಿಯಲ್ಲಿ ಲಾಠಿಚಾರ್ಜ್ ಹಾಗೂ ಹಲ್ಲೆ ಪೂರ್ವನಿಯೋಜಿತ ಕೃತ್ಯವಾಗಿದೆ. ಸರ್ಕಾರದ ಆದೇಶ ಇಲ್ಲದಿದ್ದರೂ ಲಾಠಿ ಚಾರ್ಜ್ ಮಾಡಿದ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತಿನಲ್ಲಿಟ್ಟು, ಅವರ ವಿರುದ್ಧ ತನಿಖೆ ನಡೆಸಿ, ಸಮಾಜಕ್ಕೆ ಸೂಕ್ತ ನ್ಯಾಯ ನೀಡಬೇಕು ಎಂದರು.ಪ್ರಮುಖರಾದ ರಾಜು ಪಲ್ಲವಿ, ವೀರರಾಜು, ಸಾಯಿ ಹಾಲೇಶ್, ರೈತ ಸಂಘದ ಮುಖಂಡ ಹಿರೇಕಲ್ಮಠದ ಬಸವರಾಜಪ್ಪ, ಎಚ್.ಬಿ. ಬಸವರಾಜು, ಉಮೇಶ್, ಶಿವಣ್ಣ, ಪ್ರಸನ್ನ, ರುದ್ರಣ್ಣ, ಶಂಭು, ರಮೇಶ್ ಕರ್ಜಗಿ, ಕಾಶಿನಾಥ್, ಕೊಟ್ರೇಶ್, ಮಹಾಂತೇಶ್, ಶಿವಕುಮಾರ್ ಇತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.
- - - -18ಎಚ್.ಎಲ್.ಐ3.:ಬೆಳಗಾವಿಯ ಸುವರ್ಣಸೌಧದ ಸಮೀಪ ಪಂಚಮಸಾಲಿ ಸಮಾಜದ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಖಂಡಿಸಿ ಹೊನ್ನಾಳಿ ತಾಲೂಕು ವೀರಶೈವ ಪಂಚಮಸಾಲಿ ಸಮಾಜದ ಯುವ ಘಟಕದ ನೇತೃತ್ವದಲ್ಲಿ ಮೌನ ಧರಣಿ ನಡೆಸಲಾಯಿತು.