ಕನ್ನಡಪ್ರಭ ವಾರ್ತೆ ಮೈಸೂರು
ಈಗ ವಿಮರ್ಶೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಬದಲಿಗೆ ಕವಿಗೆ ಮುಖ್ಯವಾಗಿ ಓದುಗಬೇಕು ಎಂದು ಹಿರಿಯ ಕವಿ ಎಚ್.ಎಸ್. ಶಿವಪ್ರಸಾದ್ ಹೇಳಿದರು.ನಗರದಲ್ಲಿ ಭಾನುವಾರ ನಡೆದ ಮೈಸೂರು ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಆನ್ ಲೈನ್ ಸಂಬಂಧಗಳ ಸಮಾಜದಲ್ಲಿ ಕವನಗಳ ಪ್ರಸ್ತುತತೆ ಕುರಿತು ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಈಗ ಬರವಣಿಗೆ ಬಹಳ ಸುಲಭದ ಕೆಲಸ. ಅದನ್ನು ಜನರಿಗೆ ಮುಟ್ಟಿಸುವುದು ಇನ್ನೂ ಸುಲಭ. ನಾವು ಬರೆದ ಕವನಗಳನ್ನು ಕವಿಗಳು ಸಿಕ್ಕಾಗ ಅವರ ಹಿಂದೆ ಬಿದ್ದು ಓದಿಸುತ್ತಿದ್ದೆವು. ಆದರೆ ಈಗ ಅಂತರ್ಜಾಲದಲ್ಲಿ ಕ್ಷಣಾರ್ಧದಲ್ಲಿ ಎಲ್ಲರಿಗೂ ಹಂಚಬಹುದು ಎಂದರು.ಜಗತ್ತಿನ ವಿವಿಧೆಡೆ ಇರುವ ಓದುಗರನ್ನು ತಲುಪಬಹುದು. ಆದರೆ ಗುಣಮಟ್ಟ ಇರಬೇಕು. ಕನ್ನಡದಲ್ಲಿ ವಿಮರ್ಶೆ ಪದವಿದೆ. ಆದರೆ ಅದರ ಪ್ರಕ್ರಿಯೆ ಕಾಣಿಸುತ್ತಿಲ್ಲ. ಬರೆಯುವುದು ಓದುಗರಿಗಾಗಿ, ವಿಮರ್ಶಕರು ಒಪ್ಪಲಿ, ಬಿಡಲಿ ಕವಿಗೆ ಮುಖ್ಯವಾಗಿ ಓದುಗಬೇಕು ಎಂದು ಅವರು ಹೇಳಿದರು.
ಈ ಹಿಂದೆ ಒಳ್ಳೆಯ ವಿಮರ್ಶೆಗಳು ಬಂದಿದೆ. ಆದರೆ ಈಗ ವಿಮರ್ಶೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಓದುಗರನ್ನು ಮುಟ್ಟುವ ಸರಳ ಹಾಗೂ ವೇಗದ ಮಾರ್ಗ ಸಾಮಾಜಿಕ ಜಾಲತಾಣ. ನಾನು ಈಗ ಸಾಮಾಜಿಕ ಜಾಲತಾನಗಳಲ್ಲಿ ಅನುವಾದ ಕಾವ್ಯಗಳನ್ನು ಪೋಸ್ಟ್ ಮಾಡುತ್ತೇನೆ. ಫೇಸ್ ಬುಕ್ ನಲ್ಲಿ ಹಾಕುವುದರಿಂದ ಪುಸ್ತಕದ ರೂಪದ ಪ್ರಕಟಣೆಗೆ ಅಡ್ಡಿಯಾಗಿಲ್ಲ. ಓದುಗರ ಮುಟ್ಟುವುದು ನಮ್ಮ ಕೆಲಸ. ಕವಿತೆ ಭವಿಷ್ಯವನ್ನು ನಾವು ತೀರ್ಮಾನಿಸಲಾಗುವುದಿಲ್ಲ ಎಂದರು.ಜನರನ್ನು ತಲುಪಲು ಯಾವ ಪ್ರಕಾರವೂ ಕಳಪೆಯಲ್ಲ. ಮೊದಲು ಶಿಲೆ, ನಂತರ ತಾಳೆಗರಿಯಲ್ಲಿ ಬರೆದರು. ಅದೇ ವೇಳೆ ಮೌಖಿಕ ಸಾಹಿತ್ಯ ಇತ್ತು. ಎಷ್ಟು ವಚನಗಳು ಗುಪ್ತವಾಗಿದ್ದಾವೆ ಗೊತ್ತಿಲ್ಲ. ಈಗ ಸಾಮಾಜಿಕ ಮಾಧ್ಯಮ ಪರಿಣಾಮಕಾರಿಯಾಗಿದೆ. ಈಗ ತಿದ್ದಿ- ತೀಡುವುದು ತುಂಬಾ ಸುಲಭ. ಕಾವ್ಯಗಳಲ್ಲಿ ಸೃಜನಾತ್ಮಕತೆ ಇರಬೇಕು. ಕಲ್ಲಿನಲ್ಲಿ, ತಾಳೆಗರಿಯಲ್ಲಿ, ಕಾಗದದಲ್ಲಿ ಬರೆದರೆ ಮಾತ್ರ ಕಾವ್ಯ ಎನ್ನಲಾಗದು. ಅಂತರ್ಜಾಲದ ಹಾಳೆಯಾದರು ಕಾವ್ಯ ಮೂಡಬಹುದು ಎಂದು ಅವರು ಹೇಳಿದರು.
ಯುವ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತೆ ಡಾ.ಬಿ.ಆರ್. ಶ್ರುತಿ ಮಾತನಾಡಿ, ಸಾಮಾಜಿಕ ಮಾಧ್ಯಮ ಬರಹಗಳ ಗುಣಮಟ್ಟ ಕಡಿಮೆಯಾಗುತ್ತಿದೆ ಎಂಬುದನ್ನು ಒಪ್ಪಲಾಗದು. ಸಾಮಾಜಿಕ ಜಾಲತಾಣಗಳಿಂದ ಪ್ರಕಟಣೆಗೆ ಕಾಯುವ ಅಗತ್ಯವಿಲ್ಲ. ಮುದ್ರಣ ಮಾಧ್ಯಮದ ಅವಲಂಬನೆ ಇಲ್ಲ. ಕೂಡಲೇ ಸಾಮಾಜಿಕ ಮಾಧ್ಯಮದಲ್ಲಿ ತಲುಪಿಸಬಹುದು. ಇದಕ್ಕೆ ಕೂಡಲೇ ಪ್ರತಿಕ್ರಿಯೆಯೂ ಬರುತ್ತದೆ. ಆರೋಗ್ಯಕರ ಚರ್ಚೆಯೂ ಆಗುತ್ತದೆ. ಚೆನ್ನಾಗಿ ಬಳಸಿಕೊಂಡರೆ ಸಾಮಾಜಿಕ ಜಾಲತಾಣ ಒಂದು ವರದಾನ ಎಂದರು. ಬಳಿಕ ಅಂತರ ಹಾಗೂ ಅವಳು ಕವಿತೆ ವಾಚಿಸಿದರು.ಯುವ ಲೇಖಕ ರಾಜೇಂದ್ರ ಪ್ರಸಾದ್ ಮಾತನಾಡಿ, ಕಳೆದ ಒಂದೂವರೆ ದಶಕದಿಂದ ಸಾಹಿತ್ಯ ಕ್ಷೇತ್ರದಲ್ಲಿ ಆನ್ ಲೈನ್- ಆಫ್ ಲೈನ್ ಬರಹಗಳ ಚರ್ಚೆ ನಡೆಯುತ್ತಿದೆ. ಮೊದಲು ನಮ್ಮ ಕವನ- ಕಥೆಗಳು, ಇತರೆ ಲೇಖನಗಳು ಪತ್ರಿಕೆ, ಸಾಪ್ತಾಹಿಕಗಳಲ್ಲೇ ಪ್ರಕಟವಾಗಬೇಕಿತ್ತು. ಇದಕ್ಕೆ ಅದರ ಸಂಪಾದಕರು, ಬರಹಗಾರರ ಕೃಪೆ ಇರಬೇಕಿತ್ತು. ಬ್ಲಾಗ್ ಗಳು ಶುರುವಾದ ನಂತರ ಯಾರ ನಿಯಂತ್ರಣವೂ ಇಲ್ಲದಂತಾಗಿದೆ. ಹೀಗಾಗಿ ಬರಗಾರರಿಗೆ ಹೆಚ್ಚಿನ ಅವಕಾಶ ದೊರೆತು, ಬರವಣಿಗೆಯ ತುಡಿತವನ್ನು ನಿವಾರಿಸಿವೆ ಎಂದರು.
ಬ್ಲಾಗ್ ಗಳು ಶುರುವಾದ ನಂತರ ಬರವಣಿಗೆ ತುಡಿತವಿದ್ದವರಿಗೆ ಅವಕಾಶ ಹೆಚ್ಚು ದೊರೆಯುವಂತಾಗಿದೆ. ಬ್ಲಾಗ್ ಹೆಚ್ಚು ಬಳಕೆಯ ನಂತರ ಕವಿತೆ ಬರೆದು ಹಿರಿಯರಿಗೆ ತೋರಿಸಿ ಲಯಾ- ಪ್ರಾಸ ಬದ್ಧವಾಗಿದೀಯಾ, ಭಾಷೆ, ನಿರೂಪಣೆ ಸರಿಯಾ ಎಂಬ ಸಲಹೆ ಪಡೆಯುವ ಅಗತ್ಯವಿಲ್ಲದಂತಾಯಿತು. ಬಹುಶಃ ಆ ಕಾರಣದಿಂದ ಹಿರಿಯಕರಿಗೆ ಬ್ಲಾಗ್ ಗಳಲ್ಲಿ ಬರೆಯುವ ಅಸಮಾಧಾನ, ಅಸೂಹೆ ಶುರುವಾಯಿತು ಎಂದರು.ಆನ್ ಲೈನ್ ನಲ್ಲಿ ಬರೆಯೋಕೆ ಶುರುವಾದ್ದರಿಂದ ಹೊಸ ಬರಹಗಾರರ ಸಂಖ್ಯೆ ಹೆಚ್ಚಾಗಿದೆ. ಎಲ್ಲರೂ ಬರೆಯುವುದು ಸರಿ. ಆದರೆ ಓದುವವರು ಯಾರು ಎನ್ನುವುದು ಬಹಳ ಮುಖ್ಯ. ಬರಹಗಳನ್ನು ಸಾಮಾಜಿಕ ತಾಣಗಳಲ್ಲಿ ಪ್ರಕಟಿಸುವ ಮುನ್ನ ಸ್ವ ವಿಮರ್ಶೆಗೆ ಒಳಪಡಿಸಿಕೊಂಡು ನಮ್ಮ ಬರಹಗಳನ್ನು ಪ್ರಕಟಿಸಬೇಕು. ಮೊದಲೆಲ್ಲಾ ವರ್ಷಕ್ಕೆ 2- 3 ಸಾವಿರ ಕಾವ್ಯ ಸಂಕಲನ ಪ್ರಕಟವಾದರೇ. ಈಗ 6- 7 ಸಾವಿರ ಸಂಕಲನಗಳು ಪ್ರಕಟವಾಗುತ್ತಿವೆ ಎಂದರು.
ಅಂಕಣಗಾರ್ತಿ ಮಧುರಾಣಿ ಮಾತನಾಡಿ, ಸೋಷಿಯಲ್ ಮೀಡಿಯಾ ಐದಾರು ವರ್ಷಗಳಿಂದ ನೋಡುತ್ತಿದ್ದೇನೆ. ಮುಕ್ತ ವೇದಿಕೆ ಎಲ್ಲರಿಗೂ ಒದಗಿಸಿದೆ. ಯಾವ ವೇದಿಕೆ ಆದರೂ ಬರವಣಿಗೆ ಸೊಗಡು, ಮೂಲತತ್ವ ಕಾಪಾಡಿಕೊಳ್ಳುವುದು ಬರಹಗಾರನ ಕೈಯಲ್ಲಿದೆ. ಅಭಿವ್ಯಕ್ತಿಯ ಪ್ರಕಾರಗಳಲ್ಲಿ ತನ್ನತನ ಇರಬೇಕು. ಹೊಸ ಹೊಸ ವೇದಿಕೆಗಳಲ್ಲಿ ಯುವಕರು ಬರೆಯುವಾಗ ತಾಳ್ಮೆ ಇರಬೇಕು. ತಪ್ಪು- ಸರಿ ಹೇಳುವಾಗ ಯೋಚಿಸಿ ಉತ್ತರಿಸಿದರೆ ಒಳ್ಳೆಯದು ಎಂದರು.ಅಂದುಕೊಂಡಿದ್ದೇ ನಿಜ ಎನ್ನುವುದಲ್ಲ. ಮೂಲತತ್ವ ಉಳಿಸಿಕೊಳ್ಳಬೇಕು. ಇಲ್ಲವಾದರೆ ಅದರ ಅಸ್ಮಿತೆ ಕಳೆದುಹೋಗಲಿದೆ ಎಂದರು.
ವಿಜ್ಞಾನದ ಅನ್ವೇಷಣೆ ಬಳಕೆ ನಮ್ಮ ವಿವೇಕಕ್ಕೆ ಬಿಟ್ಟಿದ್ದು. ಆದರೆ, ಗಂಭೀರ ಕವಿಗಳು ಆನ್ ಲೈನ್ ಜಾಲಕ್ಕೆ ಬಂದಿಲ್ಲ. ಹದಿಹರಯದ ಮನೋಭಾವಗಳನ್ನು ಹೇಳಲಿಕ್ಕಷ್ಟೇ ಸಾಮಾಜಿಕ ಜಾಲತಾಣ ಬಳಕೆಯಾಗುತ್ತಿದೆ. ಕವಿಗಳಿಗೆ ಯಾರೂ ಶಿಕ್ಷಕರು ಇರುವುದಿಲ್ಲ. ಕಾವ್ಯ ಕುದಿಯುವ ಪಾಕದಂತಿರಬೇಕು. ಅಂತರಂಗದಲ್ಲಿ ಹುಟ್ಟಬೇಕು. ಹೊಸತನವಿರಬೇಕು.- ಪ್ರೊ.ಎಂ.ಎಸ್. ಶೇಖರ್, ವಿಶ್ರಾಂತ ಕುಲಸಚಿವ