ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಮಹಿಳಾ ಸರ್ಕಾರಿ ಕಾಲೇಜಿನ ಇತಿಹಾಸ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗದಿಂದ ಹಮ್ಮಿಕೊಂಡಿದ್ದ ಒಂದು ದಿನದ ಐತಿಹಾಸಿಕ ದಾಖಲೆಗಳು, ಭಿತ್ತಿ ಪತ್ರ ಹಾಗೂ ನಾಣ್ಯಗಳ ಪ್ರದರ್ಶನ ಎಲ್ಲರ ಗಮನಸೆಳೆಯಿತು.ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಗುರುರಾಜ ಪ್ರಭು ಮತ್ತು ನಾಣ್ಯ ಸಂಗ್ರಹಕಾರ ಮಧುಕರ್ ಅವರು ಹಳೆಯ ಕಾಲದ ಚಿನ್ನದ ನಾಣ್ಯಗಳನ್ನು ಪ್ರದರ್ಶನ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು.
ನಂತರ ಮಾತನಾಡಿದ ಮಧುಕರ್, ವಿದ್ಯಾರ್ಥಿಗಳು ಇಂತಹ ಆರೋಗ್ಯಕರ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದರ ಮೂಲಕ ಇತಿಹಾಸದ ಬಗ್ಗೆ ಕುತೂಹಲ ಹೆಚ್ಚಿಸಿಕೊಂಡು ಅಧ್ಯಯನ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.ನಾಣ್ಯಗಳು ಆಯಾ ಕಾಲದ ಆರ್ಥಿಕ ಸ್ಥಿತಿಗಳು, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತವೆ. ಇತಿಹಾಸವನ್ನು ಕಟ್ಟಲು ನಾಣ್ಯಗಳು ಪ್ರಾಥಮಿಕ ಆಕರಗಳಾಗುತ್ತವೆ. ಆದ್ದರಿಂದ ವಿದ್ಯಾರ್ಥಿಗಳಾದ ತಾವು ಇಂತಹ ವಿಶೇಷ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದರ ಮೂಲಕ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ವಿವರಿಸಿದರು .
ಸ್ನಾತಕ ವಿಭಾಗದ ಮುಖ್ಯಸ್ಥ ಪ್ರೊ.ಕೃಷ್ಣೇಗೌಡ ಮಾತನಾಡಿ, ಇತಿಹಾಸ ಒಂದು ವಿಜ್ಞಾನ ಹೆಚ್ಚು ಅಲ್ಲ ಕಡಿಮೆಯೂ ಅಲ್ಲ ಎನ್ನುವ ಹೇಳಿಕೆಯನ್ನು ನೀಡುವುದರ ಮೂಲಕ ವೈಜ್ಞಾನಿಕ ತಳಹದಿಯ ಮೇಲೆ ಇತಿಹಾಸ ನಿಂತಿದೆ. ಆಧಾರಗಳು ಇಲ್ಲದೆ ಇತಿಹಾಸವನ್ನು ರಚಿಸಲು ಸಾಧ್ಯವಿಲ್ಲ. ಆದ್ದರಿಂದ ಹಳೆಯ ತಾಳೆಗರಿಗಳು, ಸ್ಮಾರಕಗಳು, ನಾಣ್ಯಗಳು ಮೊದಲಾದವುಗಳನ್ನು ಸಂರಕ್ಷಿಸಬೇಕಾಗಿದ್ದು ಇತಿಹಾಸ ವಿದ್ಯಾರ್ಥಿಗಳ ಪ್ರಮುಖ ಕರ್ತವ್ಯ ಎಂದು ಸಲಹೆ ನೀಡಿದರು.ಪ್ರಾಂಶುಪಾಲ ಡಾ.ಕೆ.ಗುರುರಾಜ ಪ್ರಭು ಅಧ್ಯಕ್ಷತೆ ವಹಿಸಿ ಇತಿಹಾಸವನ್ನು ಪುನರ್ ನಿರ್ಮಿಸುವಲ್ಲಿ ಮತ್ತು ಇತಿಹಾಸವನ್ನು ಮುಂದಿನ ಜನಾಂಗಕ್ಕೆ ಕೊಂಡೊಯ್ಯುವಲ್ಲಿ ವಿದ್ಯಾರ್ಥಿ ಯುವಕರ ಪಾತ್ರವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಚೋಳರ ಕಾಲದ ನಾಣ್ಯಗಳಿಂದ ಹಿಡಿದು ಇಂದಿನವರೆಗೆ ನಾಣ್ಯಗಳು ಬೆಳೆದು ಬಂದ ಬಗೆ, ವಿವಿಧ ಮಾದರಿಯ ಭಾರತೀಯ ನೋಟುಗಳು, ವಿದೇಶಿ ನೋಟುಗಳು, ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳು ಮೊದಲಾದವುಗಳನ್ನು ಪ್ರದರ್ಶಿಸಲಾಯಿತು. ವಿದ್ಯಾರ್ಥಿಗಳು ಅತ್ಯಂತ ಕುತೂಹಲದಿಂದ ಪ್ರದರ್ಶನದಲ್ಲಿ ಭಾಗವಹಿಸಿದರು.ಈ ಪ್ರದರ್ಶನದಲ್ಲಿ 1940 ರಿಂದ ಪ್ರಸ್ತುತದವರೆಗೂ ಹಳೆಯ ವಾರ ಪತ್ರಿಕೆಗಳು ದಿನಪತ್ರಿಕೆಗಳನ್ನು ಪ್ರದರ್ಶಿಸಲಾಯಿತು. 1947ರ ಸ್ವಾತಂತ್ರ್ಯ ದಿನಾಚರಣೆಯ ದಿನದ ಪತ್ರಿಕೆ, ಗಣರಾಜ್ಯ ದಿನದ ಪತ್ರಿಕೆ, ಕರ್ನಾಟಕ ಏಕೀಕರಣದ ಪತ್ರಿಕೆ, ಮೊದಲಾದ ಮಹತ್ವದ ದಿನದ ಪತ್ರಿಕೆಯ ಮುಖ ಪುಟಗಳನ್ನು ವಿದ್ಯಾರ್ಥಿಗಳು ಕುತೂಹಲದಿಂದ ನೋಡಿದರು.
ಈ ಸಂದರ್ಭದಲ್ಲಿ ಪ್ರಜಾಮತ, ಸಂಜೆಯ ಕರ್ನಾಟಕ, ನಂದ ಗೋಕುಲ, ನವಜೀವನ, ಯುಗವಾಣಿ, ಸಂಯುಕ್ತ ಕರ್ನಾಟಕ, ತಾಯಿನುಡಿ, ನವಯುಗ, ಪ್ರಜಾವಾಣಿ ಮೊದಲಾದ ಹಳೆಯ ಪತ್ರಿಕೆಗಳನ್ನು ಪ್ರದರ್ಶನ ಮಾಡಲಾಯಿತು.ಐತಿಹಾಸಿಕ ದಾಖಲೆಗಳಾದ ತಾಳೆಗರಿ ಹಾಗೂ ಕೋರ ಬಟ್ಟೆಯಿಂದ ನಿರ್ಮಿತವಾದ ಹಳೆಯ ದಾಖಲೆಯನ್ನು ಪ್ರದರ್ಶಿಸಲಾಯಿತು.
ವಿದ್ಯಾರ್ಥಿನಿಯರಿಂದ ಭಾರತದ ಇತಿಹಾಸದ ವಿವಿಧ ಮಾದರಿಗಳನ್ನು ಪೋಸ್ಟರ್‌ಗಳನ್ನು ರಚಿಸಿ ಅದರ ಮಹತ್ವವನ್ನು ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು ಹಾಗೂ ಕ್ರೆಡಿಟ್ ಆಫ್ ವಾರ್ ಎನ್ನುವ ಗೋಡೆ ಬರಹದ ಮೂಲಕ ಹಲವು ಮಹನೀಯರ ಶಾಂತಿ ಸಾರುವ ಹೇಳಿಕೆಗಳು ಮತ್ತು ಯುದ್ಧದ ಭೀಬತ್ಸ ಚಿತ್ರಗಳನ್ನು ಪ್ರದರ್ಶಿಸಿ ಜಗತ್ತಿಗೆ ಶಾಂತಿಯ ಮಹತ್ವವನ್ನು ಸಾರಿದರು.ಕಾಲೇಜಿನ ಹಿರಿಯ ಪ್ರಾಧ್ಯಾಪಕ ಡಾ.ಶಿವರಾಮು ಎಸ್.ರವರು ಇತಿಹಾಸವನ್ನು ಕಟ್ಟುವಲ್ಲಿ ದಾಖಲೆಗಳ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಇತಿಹಾಸ ವಿಭಾಗದ ಡಾ.ಕವಿತಾ, ಟಿ.ಎನ್.ಶಾಂತರಾಜು, ಹಿರಿಯ ಪ್ರಾಧ್ಯಾಪಕರಾದ ಭರತ್ ರಾಜ್, ಕೆ.ಎ.ಪದ್ಮನಾಭ್, ಆಂಗ್ಲಭಾಷಾ ವಿಭಾಗದ ಕೆ.ಎಂ.ಪ್ರಸನ್ನಕುಮಾರ್ ಹಾಜರಿದ್ದರು.