ದಾಖಲಾದ ದೂರುಗಳನ್ನು 24 ಗಂಟೆಯೊಳಗೆ ಪರಿಹರಿಸಲು ಆದೇಶ
ಕನ್ನಡಪ್ರಭ ವಾರ್ತೆ ಚಾಮರಾಜನಗರಕುಡಿಯುವ ನೀರಿನ ಸಮಸ್ಯೆಗೆ ಶೀಘ್ರವಾಗಿ ಸ್ಪಂದಿಸುವ ಸಲುವಾಗಿ ಸಾರ್ವಜನಿಕರಿಂದ ದಾಖಲಾದ ದೂರುಗಳನ್ನು 24 ಗಂಟೆಯೊಳಗೆ ಪರಿಹರಿಸಲು ಮುಂದಾಗುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಸೂಚನೆ ನೀಡಿದರು.ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿಗೃಹ ಸಭಾಂಗಣದಲ್ಲಿ ತಾಲೂಕಿನಲ್ಲಿ ಬರ ನಿರ್ವಹಣೆ ಸಂಬಂಧ ಕೈಗೊಂಡಿರುವ ಕ್ರಮಗಳ ಕುರಿತು ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತೀವ್ರ ಬರಪೀಡಿತ ಜಿಲ್ಲೆಗಳಲ್ಲಿ ಚಾಮರಾಜನಗರವು ಒಂದಾಗಿದೆ. ತಾಲೂಕಿಗೆ ಸಂಬಂಧಿಸಿದಂತೆ ಗ್ರಾಮಗಳಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗಬಾರದು. ಸಮಸ್ಯೆ ಕಂಡುಬಂದ ತಕ್ಷಣವೇ ಶೀಘ್ರ ಪರಿಹಾರಕ್ಕೆ ಅಗತ್ಯ ಕ್ರಮ ವಹಿಸಬೇಕು. ಜನ-ಜಾನುವಾರುಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಪ್ರಸ್ತುತ ಅಂತರ್ಜಲ ಕುಸಿದಿರುವುದರಿಂದ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಬೇಕು. ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಸಂಬಂಧ ದೂರುಗಳು ಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಶಿಸ್ತು ಕ್ರಮ ವಹಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ತೀವ್ರ ಬರಗಾಲವಿದ್ದು, ನಿಗದಿತ ಅವಧಿಯಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಎಲ್ಲೆಡೆ ನೀರಿನ ಸಮಸ್ಯೆ ಎದುರಾಗಿದೆ. ಕುಡಿಯುವ ನೀರಿನ ಅಭಾವ ಉಂಟಾಗಿರುವ ಗ್ರಾಮಗಳಲ್ಲಿ ಬೋರ್‌ವೆಲ್ ಸೇರಿದಂತೆ ಇತರೆ ಯಾವುದೇ ಮೂಲಗಳಿಂದ ನೀರನ್ನು ಒದಗಿಸಬೇಕು. ಅವಶ್ಯವಿದ್ದರೆ ಹೆಚ್ಚುವರಿ ಬೋರ್‌ವೆಲ್ ಕೊರೆಯಿಸಬೇಕು. ಅಲ್ಲದೆ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ನೀರನ್ನು ಲ್ಯಾಬ್‌ಗೆ ಕಳುಹಿಸಿ ನೀರಿನ ಗುಣಮಟ್ಟವನ್ನು ಪರೀಕ್ಷಿಸಬೇಕು. ಮುಂದಿನ ದಿನಗಳಲ್ಲಿ ಮಳೆಯಾಗುವ ಸಂಭವವಿದ್ದು, ಜನ, ಜಾನುವಾರುಗಳಿಗೆ ನೀರು, ಮೇವಿನ ಸಮಸ್ಯೆ ಆಗದಂತೆ ಹೆಚ್ಚಿನ ನಿಗಾವಹಿಸಿ ಎಂದು ನಿರ್ದೇಶನ ನೀಡಿದರು.ಜಾನುವಾರುಗಳಿಗೆ ಮೇವು ಒದಗಿಸುವ ನಿಟ್ಟಿನಲ್ಲಿ ತಾಲೂಕಿನಲ್ಲಿ ತೆರೆಯಲಾಗಿರುವ 16 ಗೋಶಾಲೆಗಳನ್ನು ಮುಂದುವರೆಸಬೇಕು. ಗೋಶಾಲೆಗಳಲ್ಲಿ ಮೇವು ಲಭ್ಯತೆಯನ್ನು ಅಗತ್ಯಕ್ಕೆ ಅನುಗುಣವಾಗಿ ಕಾಪಾಡಿಕೊಳ್ಳಬೇಕು. ಈ ಸಂಬಂಧ ಪಶುಪಾಲನೆ ಇಲಾಖೆ ಅಧಿಕಾರಿಗಳು ತಾಲೂಕಿನಾದ್ಯಂತ ಗೋಶಾಲೆಗಳ ಸಮೀಕ್ಷೆ ಕೈಗೊಂಡು ಅಗತ್ಯವಿರುವೆಡೆ ಮೇವಿನ ಬ್ಯಾಂಕ್‌ಗಳನ್ನು ತೆರೆಯಬೇಕು. ಅವಶ್ಯವಿರುವವರಿಗೆ ಆದ್ಯತೆ ಮೇರೆಗೆ ಮೇವು ಪೂರೈಸಬೇಕು. ಹಸಿ, ಒಣಹುಲ್ಲೇ ಆಗಲಿ, ಸಾಧ್ಯವಾದಷ್ಟು ಸ್ಥಳೀಯವಾಗಿ ಮೇವು ಖರೀದಿಸಿ ಗೋಶಾಲೆಗಳಿಗೆ ಉಚಿತವಾಗಿ ಒದಗಿಸಬೇಕು. ಗೋಶಾಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ನೀರು ಕೊರತೆ ಕಂಡುಬಂದರೆ ಟ್ಯಾಂಕರ್‌ಗಳ ಮೂಲಕ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮಹದೇಶ್ವರ ಬೆಟ್ಟದ ಕಾಡಂಚಿನ ಗ್ರಾಮಗಳಾದ ಇಂಡಿಗನತ್ತ, ಪಡಸಲನತ್ತ, ಮೆಂದಾರೆ, ಕೊಕ್ಕೆಬೋರೆ ಸೇರಿದಂತೆ ಇತರೆ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಉದ್ಭವಿಸದಂತೆ ನೋಡಿಕೊಳ್ಳಬೇಕು. ಬೋರ್‌ವೆಲ್ ಗಳಲ್ಲಿ ನೀರಿನ ಸೆಲೆ ಬತ್ತಿಹೋಗಿದ್ದರೆ ಟ್ಯಾಂಕರ್‌ಗಳ ಮೂಲಕ ನೀರನ್ನು ಸಮರ್ಪಕವಾಗಿ ಸರಬರಾಜು ಮಾಡಬೇಕು. ಜನರಿಂದ ಯಾವುದೇ ದೂರುಗಳು ಬರದಂತೆ ನೋಡಿಕೊಳ್ಳಬೇಕು. ಕುಡಿಯುವ ನೀರು ಎಲ್ಲಿಯೂ ಪೋಲಾಗದಂತೆ ಎಚ್ಚರ ವಹಿಸಬೇಕು. ಮಾನ್ಸೂನ್ ಆರಂಭವಾಗುವವರೆಗೂ ಅವಶ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು ಎಂದು ತಿಳಿಸಿದರು.ಗರಿಷ್ಠ ಉಷ್ಣಾಂಶ:
ಜಿಲ್ಲೆಯಲ್ಲಿ ಈ ಬಾರಿ ಹಿಂದೆಂದಿಗಿಂತ ಗರಿಷ್ಠ ಪ್ರಮಾಣದ ಉಷ್ಣಾಂಶ ಏರಿಕೆಯಿಂದ ಬಿಸಲಿನ ತಾಪ ಹೆಚ್ಚಾಗಿದೆ. ಇದರಿಂದ ಜನರಿಗೆ ಸನ್ ಸ್ಟ್ರೋಕ್ (ಬಿಸಿಲಾಘಾತ) ಆಗುವ ಸಂಭವವಿರುವುದರಿಂದ ಜನರು ಸುರಕ್ಷಿತ ಮಾರ್ಗಗಳನ್ನು ಅನುಸರಿಸಲು ಅನುಕೂಲವಾಗುವಂತೆ ಅಗತ್ಯ ಮುಂಜಾಗ್ರತೆ ಕ್ರಮಗಳ ಬಗ್ಗೆ ಅರಿವು ಮೂಡಿಸಬೇಕು. ಜಾನುವಾರುಗಳಿಗೂ ಬಿಸಿಲಾಘಾತ ಉಂಟಾಗದಂತೆ ಗಮನ ಹರಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೆಶನ ನೀಡಿದರು.ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಗುರುಪ್ರಸಾದ್, ತಾಪಂ ಇಒ ಉಮೇಶ್, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ಹನುಮೇಗೌಡ, ಸಹಾಯಕ ನಿರ್ದೇಶಕ ಡಾ.ಸಿದ್ದರಾಜು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಮಧುಸೂಧನ್, ಹನೂರು ಪಪಂ ಮುಖ್ಯಾಧಿಕಾರಿ ಶ್ರೀಧರ್, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತದ್ದರು.