ಕನ್ನಡಪ್ರಭ ವಾರ್ತೆ ಚಾಮರಾಜನಗರ
ಚಾಮರಾಜನಗರ ನಗರಸಭೆಯ ಪೌರಾಯುಕ್ತ ರಾಮದಾಸ್ ಮತ್ತು ನಗರ ಯೋಜನಾ ಇಲಾಖೆ ಸಹಾಯಕ ನಿರ್ದೇಶಕ ರೇಣುಕಾದೇವಿ ಅವರನ್ನು ವರ್ಗಾವಣೆ ಮಾಡಿ, ಚಾಮರಾಜನಗರ ನಗರ ಸಭೆಯ ಎಇಇ ನಟರಾಜು ಅವರನ್ನು ಅಮಾನತು ಮಾಡುವಂತೆ ನಗರಾಭಿವೃದ್ಧಿ ಇಲಾಖೆ ಸಚಿವ ಬಿ.ಎಸ್.ಸುರೇಶ್ ಸೂಚನೆ ನೀಡಿದರು.ಜಿಲ್ಲಾಡಳಿತ ಭವನದ ಜಿಪಂ ಕೆಡಿಪಿ ಸಭಾಂಗಣದಲ್ಲಿ ಶುಕ್ರವಾರ ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ ನಗರ ಅಭಿವೃದ್ಧಿ ಪ್ರಾಧಿಕಾರ ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ, ಕೆಯುಐಡಿಎಫ್‌ಸಿ ಹಾಗೂ ಕರ್ನಾಟಕ ನಗರ ನೀರು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳು ಹಾಗೂ ಸ್ಥಳಿಯ ಸಂಸ್ಥೆಗಳ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೆಲ ಅನುದಾನ ವಾಪಸ್ ಹೋಗಿರುವ ಸಂಬಂಧ ಚಾಮರಾಜನಗರ ನಗರಸಭೆ ಪೌರಾಯುಕ್ತ ರಾಮದಾಸ್ ಮಾಹಿತಿ ನೀಡುತ್ತಿದ್ದ ವೇಳೆ ಸಚಿವ ಬಿ.ಎಸ್.ಸುರೇಶ್ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರನ್ನು ಪೌರಾಯುಕ್ತರು ಹೇಗೆ ಕೆಲಸ ಮಾಡುತ್ತಾರೆ ಎಂದು ಪ್ರಶ್ನಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಸಿ.ಪುಟ್ಟರಂಗಶೆಟ್ಟಿ, ನಗರಸಭೆಯಲ್ಲಿ ಯಾವ ಕೆಲಸವು ಸರಿಯಾಗಿ ಕೆಲಸ ನಡೆಯುತ್ತಿಲ್ಲ. ಅಲ್ಲದೇ ಈ ಸಭೆಗೆ ಎಇಇ ಕೂಡ ಬಂದಿಲ್ಲ ಎಂದರು. ಇದಕ್ಕೆ ಗರಂ ಆದ ಸಚಿವ ಬಿ.ಎಸ್.ಸುರೇಶ್, ಸಭೆಗೆ ಬಾರದ ನಗರಸಭೆಯ ಎಇಇ ನಟರಾಜು ಅವರನ್ನು ಅಮಾನತ್ತು ಮಾಡುವಂತೆ ಹಾಗೂ ಸರಿಯಾಗಿ ಕೆಲಸ ಮಾಡದ ಪೌರಾಯುಕ್ತರನ್ನು ವರ್ಗಾವಣೆ ಮಾಡುವಂತೆ, ಹಾಗೂ ನಗರ ಯೋಜನಾ ಇಲಾಖೆ ಸಹಾಯಕ ನಿರ್ದೇಶಕಿ ರೇಣುಕಾದೇವಿ ರಸ್ತೆ ನಡುವೆ ಕಟ್ಟಿರುವ ಕಟ್ಟಡದ ತೆರವು ವಿಷಯದಲ್ಲಿ ಸ್ಥಳೀಯ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರ ಸಲಹೆ ಸ್ವೀಕರಿಸದೆ ತಮ್ಮದೇ ಆದ ದಾರಿಯಲ್ಲಿ ಹೋದ ವಿಚಾರವಾಗಿ ಇವರನ್ನು ಸಹ ವರ್ಗಾವಣೆ ಮಾಡುವಂತೆ ಇಲಾಖೆಯ ಕಾರ್ಯದರ್ಶಿ ದೀಪ ಚೋಳನ್ ಅವರಿಗೆ ಸೂಚನೆ ನೀಡಿದರು.ಮುಡಾದಲ್ಲಿ ಹಗರಣವೆ ಆಗಿಲ್ಲ:ಹಗರಣವೇ ಆಗಿಲ್ಲ, ಇನ್ನು ಆಚೆಗೆ ಹೇಗೆ ಬರಲಿದೆ ಎಂದು ಕೇಂದ್ರ ಭಾರಿ ಕೈಗಾರಿಕೆ, ಉಕ್ಕು ಸಚಿವ ಎಚ್.ಡಿ ಕುಮಾರಸ್ವಾಮಿ ಹೇಳಿಕೆಗೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ತಿರುಗೇಟು ನೀಡಿದರು.
ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಮುಡಾದಲ್ಲಿ ಯಾವುದೇ ಹಗರಣವಾಗಿಲ್ಲ, ಇನ್ನು ಆಚೆಗೆ ಹೇಗೆ ಬರಲಿದೆ, ಇದಕ್ಕೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೂ ಸಂಬಂಧವಿಲ್ಲ, ಘಟನೆ ಈಗ ತನಿಖೆ ಹಂತದಲ್ಲಿದೆ ಎಂದರು. ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂಬ ಬಿಜೆಪಿ ಒತ್ತಾಯಕ್ಕೆ ಪ್ರತಿಕ್ರಿಯಿಸಿ, ಹಗರಣ ಎಂದೇ ಸಾಬೀತಾಗಿಲ್ಲ, ಇನ್ನು ಸಿಬಿಐಗೆ ಏಕೆ ಕೊಡಬೇಕು? ನಮ್ಮ ರಾಜ್ಯದಲ್ಲಿ ಪೊಲೀಸರು ಇಲ್ವಾ, ಬಿಜೆಪಿಯವರು ಸಿಬಿಐಗೆ ಕೊಟ್ಟು ಏನು ಮಹಾ ಮಾಡಿದ್ದಾರೆ, ಅವರು ಎಷ್ಟು ಕೇಸ್ ಸಿಬಿಐಗೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು. ಇಬ್ಬರು ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ರೈತರಿಗೆ ಕೊಟ್ಟಿದ್ದಾರಾ ಇಲ್ವಾ ಎಂಬುದು ಪ್ರಶ್ನೆಯಾಗಿದೆ, ಇನ್ನು 4 ವಾರಗಳ ಸಮಯವಿದೆ. ಬಿಜೆಪಿ- ಜೆಡಿಎಸ್ ಹೇಳಿದಂಗೆ ಕೇಳಲಾಗಲ್ಲ ಎಂದರು.ರಾಮನಗರವನ್ನು ಬೆಂಗಳೂರಿಗೆ ಸೇರ್ಪಡೆ ಎಂಬ ವಿಚಾರಕ್ಕೆ ಮಾತನಾಡಿ, ಡಿ.ಕೆ.ಶಿವಕಮಾರ್ ಬೆಂಗಳೂರು ನಗರಾಭಿವೃದ್ಧಿ ಸಚಿವರಿದ್ದಾರೆ, ಅವರು ನಿರ್ಧಾರ ತೆಗೆದುಕೊಂಡ ಬಳಿಕ ಚರ್ಚೆ ನಡೆಸುತ್ತೇವೆ ಎಂದರು. ಇದೇ ವೇಳೆ, ಕಾಂಗ್ರೆಸ್‌ನಲ್ಲಿ ಯಾವುದೇ ಬಣ ರಾಜಕೀಯ ಇಲ್ಲಾ, ಇರುವುದು ಒಂದೇ ಬಣ ಅದು ಕಾಂಗ್ರೆಸ್ ಬಣ ಎಂದರು.