ಗಜೇಂದ್ರಗಡ:ದೈಹಿಕವಾಗಿ ನ್ಯೂನತೆ ಹೊಂದಿರುವವರಿಗೆ ಸಮಾಜದಲ್ಲಿ ಕರೆದು ಕೆಲಸ ಕೊಡುವುದಕ್ಕಿಂತ ಅವರಿಂದ ಏನು ಕೆಲಸ ಮಾಡಲು ಸಾಧ್ಯ ಎಂಬ ಪ್ರಶ್ನೆಗಳನ್ನು ಕೇಳುವವರಿಗೆ ಸವಾಲು ಹಾಕುವಂತೆ ಹಿರೇಅಳಗುಂಡಿ ಗ್ರಾಮದ 24 ವರ್ಷದ ಸುಮ್ಮವ್ವ ಬಾಲನ್ನವರ ಮತ್ತು 22 ವರ್ಷದ ಬಸವ್ವ ಬಾಲನ್ನವರ ಮಾದರಿಯಾಗಿದ್ದಾರೆ. ತಾಲೂಕಿನ ಗ್ರಾಮ ಪಂಚಾಯತಿಗಳಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಇದ್ದೂರಲ್ಲೇ ಕೆಲಸ ದೊರೆಯಲಿ ಅಂತ ನರೇಗಾ ಸಮುದಾಯ ಕಾಮಗಾರಿಗಳಲ್ಲಿ ಕೆಲಸ ಆರಂಭವಾಗಿದೆ. ಗಂಡು-ಹೆಣ್ಣಿಗೆ ಸರಿಸಮಾನವಾಗಿ ಕೂಲಿಮೊತ್ತ ನೀಡುವ ನರೇಗಾ ಯೋಜನೆಯು ವಿಶೇಷ ಚೇತನರಿಗೆ ಮತ್ತು ಅಂಗವಿಕಲರಿಗೆ ಕೆಲಸದ ಪ್ರಮಾಣದಲ್ಲಿ ರಿಯಾಯತಿ ನೀಡುವುದರ ಮೂಲಕ ಅವರ ಸ್ವಾವಲಂಬನೆ ಜೀವನಕ್ಕೆ ಮುತುವರ್ಜಿವಹಿಸಿದೆ. ತಾಲೂಕಿನ ಗುಳಗುಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಿರೇಅಳಗುಂಡಿ ಗ್ರಾಮದ 24 ವರ್ಷದ ಸುಮ್ಮವ್ವ ಬಾಲನ್ನವರ ಮತ್ತು 22 ವರ್ಷದ ಬಸವ್ವ ಬಾಲನ್ನವರ ಎಂಬ ಬುದ್ಧಿಮಾಂದ್ಯ ಸಹೋದರಿಯರಿಬ್ಬರಿಗೆ ನರೇಗಾ ಸಮುದಾಯ ಕೆಲಸ ಜೀವನ ಕಟ್ಟಿಕೊಟ್ಟಿದೆ. ಸರಿಯಾಗಿ ಮಾತು ಬರದ ಮತ್ತು ದೈಹಿಕವಾಗಿ ನ್ಯೂನತೆ ಹೊಂದಿರುವ ಈ ಇಬ್ಬರು ಬುದ್ಧಿಮಾಂದ್ಯ ಸಹೋದರಿಯರು ಪಾಲಕರ ನೆರವಿನಿಂದ ಕೆಲಸ ಮಾಡುತ್ತಿರುವುದು ವಿಶೇಷವಾಗಿದೆ. ತಂದೆ ರಂಗಪ್ಪ ಬಾಲನ್ನವರ ಯೋಜನೆಯಡಿ ಬದು ನಿರ್ಮಾಣ ಕೆಲಸದಲ್ಲಿ ಅಗೆಯುವ ಮಣ್ಣನ್ನು ಬುದ್ಧಿಮಾಂಧ್ಯ ಸಹೋದರಿಯರು ಪರಸ್ಪರ ಸಹಕಾರದಿಂದ ಮಣ್ಣನ್ನು ಬುಟ್ಟಿಗೆ ತುಂಬಿ ಹೊಲದ ಬದುವಿಗೆ ಒಡ್ಡು ಹಾಕುವ ಕೆಲಸ ಮಾಡುತ್ತಾರೆ. ಬಾಲ್ಯದಿಂದಲೇ ಬುದ್ದಿಮಾಂದ್ಯತೆ ಹೊಂದಿರುವ ಈ ಇಬ್ಬರು ಸಹೋದರಿಯರಿಗೆ ಗ್ರಾಮದಲ್ಲಿ ಖಾಸಗಿಯಾಗಿ ಯಾರು ಕೆಲಸ ಕೊಟ್ಟಿಲ್ಲ. ತಾಯಿ ಲಲಿತವ್ವ ಬಾಲನ್ನವರು ಮನೆಕೆಲಸ ಮಾಡಿಕೊಂಡು ಇಬ್ಬರು ಮಕ್ಕಳನ್ನು ಸಾಕುತ್ತಿದ್ದಾಳೆ.
ಬಡ ಕುಟುಂಬದಲ್ಲಿರುವ ಬಾಲನ್ನವರ ದಂಪತಿಗೆ ನರೇಗಾ ಕೆಲಸವೇ ಜೀವನಕ್ಕೆ ಆಧಾರ. ಬೇಸಿಗೆ ಅವಧಿಯಲ್ಲಿ ತಮ್ಮಿಬ್ಬರ ಮಕ್ಕಳನ್ನು ಕರೆದುಕೊಂಡು ನರೇಗಾ ಕೆಲಸದಲ್ಲಿ ದುಡಿಮೆ ಮಾಡುತ್ತಾರೆ. ನರೇಗಾದಿಂದ ಬರುವ ಕೂಲಿಮೊತ್ತವನ್ನು ಜೀವನ ಸಾಗಿಸಲು ಮತ್ತು ಮಕ್ಕಳಿಬ್ಬರ ಆರೋಗ್ಯ ತಪಾಸಣೆಗೆ ಬಳಸಿಕೊಳ್ಳುತ್ತೇವೆ ಅಂತ ಬುದ್ಧಿಮಾಂದ್ಯ ಸಹೋದರಿಯರ ತಂದೆ ರಂಗಪ್ಪ ತಿಳಿಸಿದರು. ಸರಿಯಾಗಿ ಮಾತನಾಡಲು ಬಾರದ ಸುಮ್ಮವ್ವ ಮತ್ತು ಬಸವ್ವ ಇಬ್ಬರನ್ನು ವಿಚಾರಿಸಿದಾಗ ತೊದಲಿಸುತ್ತಾ ಮಾತನಾಡಿದ ಇಬ್ಬರು ಬುದ್ಧಿಮಾಂದ್ಯ ಸಹೋದರಿಯರು ನರೇಗಾ ಯೋಜನೆಯಡಿ ಕೆಲಸ ಕೊಡುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಈ ಬಗ್ಗೆ ಮಾತನಾಡಿದ ಸುಮ್ಮವ್ವ ಅವರು ನಮಗೆ ಊರಿನಲ್ಲಿ ಯಾರು ಕೆಲಸ ಕೊಡಲ್ಲ. ತಂದೆ-ತಾಯಿಯ ಜೊತೆ ಒಡ್ಡಿನ ಕೆಲಸಕ್ಕೆ ಬರುತ್ತೇವೆ. ಅಪ್ಪ ಕಡಿಯುವ ಮಣ್ಣನ್ನು ಹೊತ್ತು ಹಾಕುತ್ತೇವೆ. ನಮಗೆ ದಿನಾನು ಕೆಲಸ ಕೊಡಿ ಅಂತ ಕಣ್ಣೀರು ತೆಗೆದರು. ಅಲ್ಲದೆ ನರೇಗಾದಿಂದ ಬಂದ ಕೂಲಿಮೊತ್ತವನ್ನು ಏನು ಮಾಡುತ್ತೀರಿ ಅಂತ ಪ್ರಶ್ನಿಸಿದಾಗ ಬ್ಯಾಂಕ್‌ನಲ್ಲಿಟ್ಟು ದವಾಖಾನೆಗೆ ತೋರಿಸಿಕೊಳ್ಳುತ್ತೇವೆ ಅಂತ ವಿವರಿಸಿದರು.ಇಬ್ಬರು ಬುದ್ಧಿಮಾಂದ್ಯ ಸಹೋದರಿಯರು ನರೇಗಾ ಯೋಜನೆಯನ್ನು ಹೀಗೆ ಸದುಪಯೋಗಪಡಿಸಿಕೊಂಡರೆ, ತಾಲೂಕಿನ ಗೋಗೇರಿ ಗ್ರಾಮ ಪಂಚಾಯಿತಿಯ ೪೫ ವರ್ಷದ ಬಸಮ್ಮ ಕೆರಿ ಬುದ್ಧಿಮಾಂದ್ಯಳಾಗಿದ್ದರೆ, ೩೮ ವರ್ಷದ ಅಂದಪ್ಪ ಕೆರಿ ಕಾಲನ್ನು ಕಳೆದುಕೊಂಡಿದ್ದಾನೆ. ಇಬ್ಬರು ಬೇಸಿಗೆ ಅವಧಿಯಲ್ಲಿ ಕೆಲಸಕ್ಕಾಗಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಬೇಡಿಕೆ ಸಲ್ಲಿಸುತ್ತಾರೆ. ಬೇಸಿಗೆ ಅವಧಿಯಲ್ಲಿ ಕನಿಷ್ಠ 60 ದಿನಗಳ ಕಾಲ ದುಡಿದರೆ 22 ಸಾವಿರ ಕೂಲಿ ಮೊತ್ತ ಬರುವ ಕಾರಣದಿಂದ ದೈಹಿಕ ನ್ಯೂನತೆ ಹೊಂದಿದ್ದರೂ ನರೇಗಾದ ಸಮುದಾಯ ಕೆಲಸದಲ್ಲಿ ದುಡಿದು ಸ್ವಾವಲಂಬನೆಯಾಗಿ ಬದುಕು ಕಟ್ಟಿಕೊಂಡಿದ್ದಾರೆ. ನರೇಗಾ ಯೋಜನೆಯಡಿ ವಿಶೇಷಚೇತನರು ಹಾಗೂ ಹಿರಿಯ ನಾಗರಿಕರಿಗೆ ಸಾಮರ್ಥ್ಯದ ಆಧಾರದ ಮೇಲೆ ಕೆಲಸ ನೀಡಿ ದಿನವೊಂದಕ್ಕೆ 370 ರು. ಕೂಲಿಮೊತ್ತ ನೀಡುತ್ತೇವೆ. ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ವಿಶೇಷ ಚೇತನರಿಗೆ ಇರುವ ಕೆಲಸದ ರಿಯಾಯಿತಿ ಬಗ್ಗೆ ಐಇಸಿ ಚಟುವಟಿಕೆ ಮೂಲಕ ಪ್ರಚಾರ ಮಾಡಲಾಗಿದೆ ಗಜೇಂದ್ರಗಡ ತಾಪಂ ಇಒ ಮಂಜುಳಾ ಹಕಾರಿ ಹೇಳಿದರು.ದೈಹಿಕ ನ್ಯೂನತೆ ಹೊಂದಿದ್ದರೂ ಯೋಜನೆಯಡಿ ಕೆಲಸ ಮಾಡುವ ಆಸಕ್ತಿ ಈ ನಾಲ್ವರಿಗೆ ಬಂದಿರುವುದು ಒಳ್ಳೆಯದು. ಇವರಷ್ಟೇ ಅಲ್ಲದೆ ಬೇರೆ ಯಾರಾದರೂ ವಿಶೇಷ ಚೇತನರು ತಾಲೂಕಿನ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿದ್ದರೆ ಅವರು ಕೂಡಾ ನರೇಗಾ ಕೆಲಸಕ್ಕೆ ಬರಬಹುದು. ಯೋಜನೆಯಡಿ ನೀಡುವ ಕೂಲಿಮೊತ್ತದಲ್ಲಿ ಯಾವುದೇ ತಾರತಮ್ಯವಿಲ್ಲ. ಗಂಡಿಗೆ-ಹೆಣ್ಣಿಗೆ ಮತ್ತು ವಿಶೇಷ ಚೇತನರಿಗೆ ಹಾಗೂ ಹಿರಿಯ ನಾಗರೀಕರಿಗೂ ಒಂದೇ ಕೂಲಿಮೊತ್ತ ದಿನಕ್ಕೆ 370 ರುಪಾಯಿ ನೀಡಲಾಗುತ್ತಿದೆ ತಾಪಂ ಸಹಾಯಕ ನಿರ್ದೇಶಕ ಬಸವರಾಜ ಬಡಿಗೇರ ಹೇಳಿದರು.