ಹೊನ್ನಾಳಿ: ಗ್ರಾಮಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾಗುತ್ತದೆ ಎಂಬ ಮಹಾತ್ಮಾ ಗಾಂಧೀಜಿ ಆಶಯದಂತೆ ಎನ್ನೆಸ್ಸೆಸ್ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಪ್ರಾಂಶುಪಾಲ ಬಿ.ಜಿ.ಧನಂಜಯ ಹೇಳಿದರು.
ಗ್ರಾಮೀಣ ಭಾಗದ ಸಮಸ್ಯೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಮತ್ತು ಸರ್ಕಾರ 52 ವಿವಿಧ ಯೋಜನೆಗಳನ್ನು ಸಾರ್ವಜನಿಕರಿಗೆ ನೀಡಿದ್ದು, ಅವುಗಳ ಮಾಹಿತಿಯನ್ನು ಗ್ರಾಮದವರಿಗೆ ತಲುಪಿಸುವ ಕೆಲಸವನ್ನು ಶಿಬಿರಾರ್ಥಿಗಳು ಮಾಡಲಿದ್ದಾರೆ ಎಂದು ತಿಳಿಸಿದರು.
ಸೂಜಿ ತಯಾರು ಮಾಡುವವನೂ ಕೂಡ ತನ್ನ ವಸ್ತುವಿಗೆ ದರ ನಿಗದಿ ಮಾಡುತ್ತಾನೆ ಆದರೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ರೈತನು ತಾನು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆಯನ್ನು ನಿಗದಿ ಮಾಡಲಾಗಿಲ್ಲ ರೈತರಿಗೆ ಅನ್ಯಾವಾಗುತ್ತಿದ್ದು, ಈ ಮೂಲಕ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಈ ಬಗ್ಗೆ ತೀವ್ರ ಸ್ವರೂಪದ ಹೋರಾಟವಾಗಬೇಕಿದೆ ಎಂದು ರೈತ ಸಮುದಾಯವನ್ನು ಎಚ್ಚರಿಸಿದರು.ಇಂದಿನ ಯುವ ಜನತೆ ತಪ್ಪು ದಾರಿ ತುಳಿಯುತ್ತಿದ್ದು, ಇದು ದೇಶದ ಅಭಿವೃದ್ಧಿಗೆ ಮಾರಕವಾಗುತ್ತಿದೆ. ಯುವ ಜನತೆ ಅನಗತ್ಯ ವಿಷಯಗಳ ಕಡೆಗೆ ಗಮನಹರಿಸದೇ ರಚನಾತ್ಮಕ ಕೆಲಸಗಳತ್ತ ಗಮನ ಹರಿಸಬೇಕು ಎಂದು ಕಿವಿ ಮಾತು ಹೇಳಿದರು.
ಹಿರಿಯ ಸಹಾಯಕ ಪ್ರಾಧ್ಯಾಪಕರಾದ ಡಿ.ಸಿ.ಪಾಟೀಲ್ ಮಾತನಾಡಿ, ನಮ್ಮ ದೇಶವು ಕೃಷಿ ಪ್ರಧಾನ ದೇಶ. ಆದರೆ ಇಂದು ಕೃಷಿಯು ಯಾರಿಗೂ ಬೇಡವಾಗಿದೆ. ಇದು ಗಂಭೀರ ವಿಚಾರವಾಗಿದ್ದು, ಮುಂದೆ ನಮ್ಮೆಲ್ಲರ ಮೇಲೆ ದುಷ್ಪರಿಣಾಮ ಬೀರುವ ಕಾಲ ದೂರವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ನಮ್ಮ ಕಾಲೇಜಿನ ವಿದ್ಯಾರ್ಥಿಗಳನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿ ಕಾಲೇಜನ್ನು ದೇವತಾ ಸ್ವರೂಪಿಯಾಗಿ ಭಾವಿಸಿ ಪೂಜ್ಯತಾ ಭಾವದಿಂದ ಊರಿನ ಮಹಿಳೆಯರು, ಗ್ರಾಮಸ್ಥರು ಧನ್ಯತಾಭಾವ ತೋರಿದ್ದು ಇದು ನಮ್ಮ ಜವಾಬ್ದಾರಿಯನ್ನು ಇನ್ನೂ ಹೆಚ್ಚಿಸಿದ್ದು, ಈ 7 ದಿನಗಳ ಶಿಬಿರದಲ್ಲಿ ಗ್ರಾಮಸ್ಥರಿಗೆ ನಾವು ಎಷ್ಟರ ಮಟ್ಟಿಗೆ ಅರ್ಹರು ಎಂದು ಶಿಬಿರಾರ್ಥಿಗಳು ನಿಸ್ವಾರ್ಥತೆಯಿಂದ ಶಿಸ್ತು ಸಂಯಮದಿಂದ ಗ್ರಾಮದಲ್ಲಿ ಕೆಲಸ ಮಾಡಿ ತೋರಿಸಬೇಕಿದೆ ಎಂದು ಹೇಳಿದರು.